Saturday, April 4, 2026

ಅಂಬಿಗ ನಾ ನಿನ್ನ ನಂಬಿದೆ

ಭೀಷ್ಮ ಪಿತಾಮಹರು ಧರ್ಮರಾಜನಿಗೆ ಭೋಧನೆಮಾಡಿದ ಶ್ರೀಮನ್ನಾರಾಯಣನ ಸಹಸ್ರಾರು ಗುಣಗಳ ಗಾನ 

ಶ್ರೀ ವಿಷ್ಣುಸಹಸ್ರನಾಮ. ‘ಅಶೋಕಸ್ತಾರಣಸ್ತಾರಃ

ಶೂರಃ ಶೌರಿರ್ಜನೇಶ್ವರಃ’

ಎನ್ನುವುದು ವಿಷ್ಣುಸಹಸ್ರನಾಮ ಸ್ತೋತ್ರದ ಒಂದು

ಸಾಲು. ಅದನ್ನು ಪದ ವಿಭಾಗ ಮಾಡಿದರೆ  ಅಶೋಕಃ

ತಾರಣಃ ತಾರಃ ಶೂರಃ ಶೌರಿಃ ಜನೇಶ್ವರಃ ಎಂಬ ಆರು

ನಾಮಗಳಾಗುತ್ತವೆ. ಅದರಲ್ಲಿ ತಾರಣಃ ಎಂದರೆ

ದಾಟಿಸುವವನು ಎಂದು ಅರ್ಥ. ಏನನ್ನು ದಾಟಿಸುವುದು?

ಭವಸಾಗರ ಅಥವಾ ಸಂಸಾರವೆಂಬ ಸಾಗರವನ್ನು

ದಾಟಿಸುವವನು ಎಂಬ ಅರ್ಥದಲ್ಲಿ ಭೀಷ್ಮರು, ವಿಷ್ಣುವನ್ನು

‘ತಾರಣಃ’ ಎಂದು ಕರೆದರು. ಅದೇ ‘ತಾರಣ’ನನ್ನು ನಮ್ಮ

ದಾಸರು ಸ್ವಚ್ಛ ಕನ್ನಡದಲ್ಲಿ ‘ಅಂಬಿಗ’ ಎಂದು ಕರೆದು 

‘ಅಂಬಿಗ ನಾ ನಿನ್ನ ನಂಬಿದೆ’ ಎಂದು ಹಾಡಿದರು.

ಗಾಯನವನ್ನು ಮೊದಲು ಕೇಳೋಣ, ಮುಂದಿನ

ವಿವರಣೆ ಮುಂದಕ್ಕಿರಲಿ. 




ದೋಣಿ, ತೆಪ್ಪ, ಹರಿಗೋಲು ಮುಂತಾದುವೆಲ್ಲ ನೀರಿನ

ಹರಿವನ್ನು ದಾಟಲು ಉಪಯೋಗಿಸುವ ಸಾಧನಗಳು.

‘ತುಂಬಿದ ಹರಿಗೋಲಂಬಿಗ’  ಎಂದರು ದಾಸರು.

ವೃತ್ತಾಕಾರದ ದೊಡ್ಡ ತಟ್ಟೆಯಂಥ ಬಿದಿರಿನ ಹಂದರಕ್ಕೆ

ಚರ್ಮವನ್ನು ಹೊದಿಸಿ ಮಾಡಿರುವುದು ಹರಿಗೋಲು.

ಮೂಳೆ ಮಾಂಸಗಳ ಹಂದರಕ್ಕೆ ಚರ್ಮದ ಹೊದಿಕೆ

ಹೊದಿಸಿ ಆಗಿರುವುದು ಮಾನವ ದೇಹ. ಆದ್ದರಿಂದಲೇ

ಈ ದೇಹವನ್ನು ದೋಣಿ ಅಥವಾ ತೆಪ್ಪ ಎನ್ನದೆ, ದಾಸರು

ಹರಿಗೋಲೆಂದರು. ಬರಿಯ ಹರಿಗೋಲಲ್ಲ. ತುಂಬಿದ

ಹರಿಗೋಲು. ಏನು ತುಂಬಿದೆ ಅದರಲ್ಲಿ ? ‘ತುಂಬಿದೆ

ಒಳಗೆ ಕಾಮಾದಿ ಬಯಕೆ - ಮಾನವಾ ಮೂಳೆ

ಮಾಂಸದ ತಡಿಕೆ’ ಭಕ್ತ ಕುಂಬಾರ ಹಾಡಿದ್ದು

ನೆನಪಿದೆಯೇ ? ಪುರಂದರದಾಸರು ಹೇಳಿದ್ದನ್ನೇ

ಅವನೂ ಅಂದದ್ದು !  ತುಂಬಿದ ಹರಿಗೋಲಂಬಿಗ

ಅದಕೊಂಭತ್ತು  ಛಿದ್ರವು ಅಂಬಿಗ. ಹರಿಗೋಲಿನ

ಒಂಭತ್ತು ಛಿದ್ರಗಳು - ನಮ್ಮ ಕಣ್ಣು, ಕಿವಿ ಮುಂತಾದ

ನವರಂಧ್ರಗಳು. 


ಹರಿಗೋಲಾಯಿತಲ್ಲ, ಇನ್ನು ಹೊಳೆಯನ್ನು ನೋಡೋಣ.

ಮಾಯೆ, ಮೋಹ ತುಂಬಿದ ಜಗತ್ತು ಅಥವಾ ಈ

ಸಂಸಾರವೆಂಬ ಹೊಳೆ  ಬಹಳ ಭರದಿಂದ ಹರಿಯುತ್ತದೆ. 

ಎಲ್ಲವನ್ನೂ ಸೆಳೆದೊಯ್ಯುತ್ತದೆ. ಅದರ ಸುಳಿಯೊಳಗೆ - 

ಅಂದರೆ ಮತ್ತೆ ಮತ್ತೆ ಜನನ ಮತ್ತೆ ಮತ್ತೆ ಮರಣ

ಎಂಬ ಸುಳಿಯೊಳಿಗೆ - ಸಿಕ್ಕಿಬಿದ್ದಿದೆ ಹರಿಗೋಲು.

ಅದರಿಂದ ಎಳೆದು ಹೊರಗೆ ಹಾಕೆಂದು ಅಂಬಿಗನನ್ನು

ಕೇಳಿಕೊಳ್ಳುತ್ತಾರೆ ದಾಸರು. 


ಆ ಸುಳಿ, ಸೆಳವು ಸಾಲದೆಂಬಂತೆ ಕಾಮ, ಕ್ರೋಧ,

ಲೋಭ, ಮೋಹ, ಮದ, ಮಾತ್ಸರ್ಯ ಎಂಬ  ಆರು

ತೆರೆಗಳು -  ಅರಿಷಡ್ವರ್ಗಗಳೆಂದು ಕರೆಯುತ್ತೇವಲ್ಲಾ

ಅವು  - ಮತ್ತೆ ಮತ್ತೆ ಹರಿಗೋಲಿನ ಮೇಲೇರಿ ಬರುತ್ತಿವೆ.

ಅವುಗಳನ್ನು ನಿವಾರಿಸಿ ನನ್ನನ್ನು ಉಳಿಸುವ ಕಾರ್ಯ

ನಿನ್ನಿಂದ ಮಾತ್ರ ಸಾಧ್ಯ ಎನ್ನುತ್ತಾರೆ  ದಾಸರು. 


ಇದೆಲ್ಲಾ ಆಗುವಷ್ಟರಲ್ಲಿ ಕಾಲ ಕಳೆದುಹೋಗುತ್ತಿದೆ. 

‘ಹೊತ್ತು ಹೋಯಿತು ನೋಡಂಬಿಗ’ -  ನನ್ನ ಸಾಧನೆ

ಏನಿದ್ದರೂ ಈ ಜನ್ಮದಲ್ಲಿಯೇ ಆಗಬೇಕು. ಮುಂದಿನ

ಜನ್ಮ ಏನಾಗಿ ಬರುತ್ತದೋ ಕಂಡವರಾರು. ಆದ್ದರಿಂದ

ಹೆಚ್ಚು ಸಮಯವಿಲ್ಲ.  ಹಾಗಾಗಿ ಅಲ್ಲಿರುವ

‘ಮತ್ತೈವರೀರ್ವರನ್ನು ಒತ್ತಿಹಿಡಿದು ನಡೆಸು’ ಎನ್ನುತ್ತಾರೆ.

ಐವರು ಇರ್ವರು, ಐವರು ಅಂದರೆ ಐದು. ಐವರು -

ಇರ್ವರು ಎಂದರೆ  ಐದರ ಎರಡು ಗುಂಪು. ಮೇಲೆ

ಹೇಳಿದ ಅರಿಷಡ್ವರ್ಗವನ್ನು ಪ್ರಚೋದಿಸುವ ಕಣ್ಣು, ಕಿವಿ,

ಚರ್ಮ ಇತ್ಯಾದಿ ಐದು ಜ್ಞಾನೇಂದ್ರಿಯಗಳು, ಮತ್ತು ಆ

ಪ್ರಚೋದನೆಗೆ  ಪ್ರತಿಕ್ರಿಯಿಸುವ ಕೈ, ಕಾಲು, ನಾಲಿಗೆ

ಇತ್ಯಾದಿ  ಐದು ಕರ್ಮೇಂದ್ರಿಯಗಳು. ಇವೆಲ್ಲವನ್ನೂ ‘

ಒತ್ತಿ ನಡೆಸು’ ಅಂದರೆ ಹದ್ದುಬಸ್ತಿನಲ್ಲಿಟ್ಟು ನನ್ನನ್ನು

‘ಸತ್ಯ ಲೋಕಕೆ ಒಯ್ಯಿ’ ಎಂದು ಪ್ರಾರ್ಥಿಸುತ್ತಾರೆ ದಾಸರು. 


ಯಾವುದದು ಸತ್ಯಲೋಕ?  ‘ಸತ್ಯ’ ಎನ್ನುವುದೂ

ಸಹ ವಿಷ್ಣುಸಹಸ್ರನಾಮದಲ್ಲಿ ಒಂದು ನಾಮ. ಅದನ್ನು

ಬಿಡಿಸಿದರೆ ಸತ್ +ತ್ +ಯ ಎಂದಾಗುತ್ತದೆ. ಹಾಗೆಂದರೆ 

ಆನಂದ ನೀಡುವ ಸುಜ್ಞಾನ. ಹಾಗಾಗಿ ನನ್ನನ್ನು ಸಂಸಾರ

ಮೋಹದಿಂದ ಹೊರಗೆ ಸೆಳೆದು ಜ್ಞಾನಿಯನ್ನಾಗಿ ಮಾಡು,

ಆ ಜ್ಞಾನ ನನ್ನ ಮುಕ್ತಿಗೆ ದಾರಿಯಾಗಲಿ ಎನ್ನುವುದು

ಪುರಂದರದಾಸರ  ‘ಅಂಬಿಗ ನಾ ನಿನ್ನ ನಂಬಿದೆ’ ಗೀತೆಯ

ತಿರುಳು. ಇಷ್ಟು ತಿಳಿಸಿ, ಇಂದಿನ ವಿವರಣೆ ಮುಗಿಸುತ್ತೇನೆ.

ಸರ್ವರಿಗೂ ಶುಭವಾಗಲಿ. ನಮಸ್ಕಾರ. 



No comments: