Saturday, September 19, 2026

ತುರುಕರು ಕರೆದರೆ ಉಣಬಹುದಣ್ಣ

 ತುರುಕರು ಕರೆದರೆ ಉಣಬಹುದಣ್ಣ 

ತುರುಕರು ಕರೆದರೆ ಉಣಬಹುದು 

ಕರೆ ಕರೆ ಪಿರಿ ಪಿರಿ ಮಾಡದಿರಣ್ಣ 

ತುರುಕರು ಕರೆದರೆ ಉಣಬಹುದು 


ತುರುಕರುವಿಂದ ಮುಟ್ಟು ಮಡಿ ಬಿಟ್ಟುಹೋಹುದು 

ತುರುಕರುವಿಂದ ಹೋಹುದು ಎಂಜಲವು 

ತುರುಕರುವಿಂದ ಸ್ವರ್ಗ ಸ್ವಾಧನವಾಗೋದು 

ತುರುಕರುವಿಂದ ನರಕ ದೂರಪ್ಪುದು 


ತುರು ಕರು ಕಂಡರೆ ಸರಕ್ಕನೆ ಏಳಬೇಕು 

ತುರು ಕರುವ ಪೂಜಿಸೆ ಹರಿಯೊಲಿವ 

ತುರುಕರು ಕೂದಲ ತುರುಬಿಗೆ ಸುತ್ತಿದರೆ 

ಗರತಿಯರೆಲ್ಲ ಮುತ್ತೈದೆಯರಣ್ಣ 


ತುರುಕರುವಿನ ನೀರ ಎರಕೊಂಡ ನಮ್ಮದೇವ 

ಉರವಕೊಂಡ ಸನಕಾದಿಗಳಿಗೆಲ್ಲ 

ಬೆರಕೆಯಮಾಡಿದ ಹರಿದಾಸರಿಗೆಲ್ಲ 

ಎರವಾಗಿದ ನಮ್ಮ ಪುರಂದರವಿಠಲ 




‘ತುರುಕರುಗಳಿಲ್ಲದ ಊರು ನರಕಕ್ಕೆ ಸಮವಯ್ಯ ಸರ್ವಜ್ಞ’ ಎಂಬ ಒಂದು ಸಾಲನ್ನು ನನ್ನ ಬಾಲ್ಯದಲ್ಲಿ ನಾವು ಹೇಳುತ್ತಿದ್ದೆವು.  ಅದನ್ನು ಸರ್ವಜ್ಞ ಹೇಳಿದನೋ ಬಿಟ್ಟನೋ ತಿಳಿಯದು. ನಾವಂತೂ ಹೇಳುತ್ತಿದೆವು. ತುರುಕರು ಎಂದರೆ ನಮ್ಮ ಆಡುಭಾಷೆಯಲ್ಲಿ ಮುಸಲ್ಮಾನರು ಎಂದು ಅರ್ಥ. ಆದರೆ ತುರುಕರು ಎಂದರೆ ದನ ಕರುಗಳು ಎಂದೂ ಅರ್ಥವಾಗುತ್ತದೆ.  ಹೀಗೆ  ಕೌತುಕವನ್ನುಂಟು ಮಾಡುವ ಪದಗಳನ್ನು ಉಪಯೋಗಿಸಿ, ಪ್ರತ್ಯೇಕವಾದ ಭಾವ ಒಂದನ್ನು ವಿವರಿಸುವಂಥ ಪುರಂದರ ದಾಸರ  ಒಂದು ಚಮತ್ಕಾರಿಕ ರಚನೆಯನ್ನು ಇಂದು ಪ್ರಸ್ತುತಪಡಿಸುತ್ತಿದ್ದೇವೆ.



ಈ ಗೀತೆಯ ರಾಗ ಮಾಯಾಮಾಳವಗೌಳ, ಮಿಶ್ರಛಾಪು ತಾಳ. ಕೇರಿ ಕೇರಿ ತಿರುಗುತ್ತಾ, ಹರಿ ಸಂಕೀರ್ತನೆ ಮಾಡುತ್ತಾ, ಭಿಕ್ಷೆ ಸ್ವೀಕರಿಸುತ್ತಾ ಮುನ್ನಡೆಯುತ್ತಿದ್ದ ದಾಸರು ಯಾವಾಗಲಾದರೂ ಒಬ್ಬ ಮುಸಲ್ಮಾನರ ಮನೆಯಲ್ಲಿಯೂ  ಭಿಕ್ಷೆ ಪಡೆದು ನಡೆದಿರಬಹುದು. ಅದನ್ನು ತಿಳಿದವರು ಯಾರೋ ಆ ಬಗ್ಗೆ ಏನಾದರೂ ಕೊಂಕು ನುಡಿದಿರಲೂಬಹುದು. ಅದಕ್ಕೆ ಉತ್ತರವಾಗಿ ಬಂದದ್ದು ದಾಸರ ಪದ ‘ತುರುಕರು ಕರೆದರೆ ಉಣಬಹುದಣ್ಣ’. ಎರಡನೇ  ಸಾಲಿನಲ್ಲಿ  ಬರುವ  ‘ಕರೆ ಕರೆ ಪಿರಿ ಪಿರಿ ಮಾಡದಿರಣ್ಣ’ ಎಂಬ ಮಾತು ಈ ನನ್ನ ಊಹೆಗೆ ಒತ್ತು  ನೀಡುತ್ತದೆ. ಈ ಪಲ್ಲವಿಯಲ್ಲಿ ತುರುಕರು ಎಂಬುದನ್ನು ದನಕರುಗಳೆಂದು ಭಾವಿಸಿದರೆ ಅದೂ ಅರ್ಥಪೂರ್ಣವೇ. ದನಕರುಗಳು ಹಾಲುಕರೆದರೆ ಆ ಹಾಲನ್ನು ಮಾರಿಕೊಂಡು ಹಾಲು ಕರೆದವರು ಉಣುವುದಲ್ಲವೇ!  


ಮುಂದಿನ ಚರಣಗಳ ಸಾಲುಗಳಲ್ಲಿ  ಸಹ ತುರುಕರು ಎಂದು ಹೆಸರಿಸಿ, ದನಕರುಗಳನ್ನು ಉದ್ದೇಶಿಸಿದ್ದಾಗಿದೆ. ಮನೆಯಲ್ಲಿ ಮುಟ್ಟು ಚಿಟ್ಟು, ಸೂತಕ ಇತ್ಯಾದಿ ಯಾವುದೇ ಮೈಲಿಗೆ ಕಳೆದನಂತರ, ಹಾಲು, ಮೊಸರು, ತುಪ್ಪ, ಗೋಮಯ, ಗಂಜಲಗಳನ್ನು ಸೇರಿಸಿ ಮಾಡಿದ ಪಂಚಗವ್ಯವನ್ನು ಸೇವಿಸುವುದರಿಂದ ಶುದ್ಧಿ ಯಾಗುವುದೆಂಬ ನಂಬಿಕೆ ಇದೆ.  ಅದರಿಂದಾಗಿ ‘ತುರುಕರುವಿನಿಂದ ಮುಟ್ಟು, ಮಡಿ  ಬಿಟ್ಟು ಹೋಹುದು’ ಎಂಬ ಸಾಲು. ‘ತುರುಕರುವಿನಿಂದ ಹೋಹುದು ಎಂಜಲವು’ ಎಂಬ ಸಾಲಿಗೆ ಪ್ರತಿನಿತ್ಯ ಊಟ ಆದನಂತರ, ಎಲೆ ಹಾಕಿದ್ದ ಸ್ಥಳವನ್ನು, ಗೋಮಯದಿಂದ ಸಾರಿಸಿ ಶುದ್ಧಿ ಮಾಡುತ್ತಿದ್ದ ಪದ್ಧತಿಯೇ  ಮೂಲವಾಗಿದೆ. ಈ ಪದ್ಧತಿ ಇತ್ತು, ದಾಸರು ಪದ್ಯ ಬರೆದಾಗ, ಮನೆಯ ನೆಲ, ಸಗಣಿಸಾರಿಸಿದ ನೆಲವಾಗಿದ್ದಾಗ.  


ಮತ್ತೆ ಸ್ವರ್ಗ ಸಾಧನವೂ ತುರುಕರುವಿನಂದಲೇ! ಸ್ವರ್ಗದ ಹಾದಿಯಲ್ಲಿ ಸಿಗುವ ವೈತರಣೀ ನದಿಯನ್ನು ದಾಟಲು ಹಸುವಿನ ಸಹಾಯ ಬೇಕಾಗುತ್ತದಂತೆ. ಹಸುವಿನ ಬಾಲ ಹಿಡಿದು ಅದರ ಬಲದಿಂದ ಮುಳುಗದೆಯೇ ನದಿಯನ್ನು ದಾಟಿ ಸ್ವರ್ಗ ಸೇರುವುದೆಂದು ನಮ್ಮ ಪುರಾಣಗಳು ತಿಳಿಸುತ್ತವೆ.    


‘ತುರುಕರುವ ಕಂಡರೆ ಸರಕ್ಕನೆ ಏಳಬೇಕು’ - ಏಳದಿದ್ದರೆ ಅವು ನಿಮ್ಮನ್ನು ಕೊಂಬಿನಿಂದ ಹಾಯ್ದು ಹೋಗುತ್ತವಷ್ಟೆ.  ‘ತುರುಕರುವ ಪೂಜಿಸೆ ಹರಿಯೊಲಿವ’  ಕೃಷ್ಣಾವತಾರದ ಹರಿಗೆ ಅತ್ಯಂತ ಪ್ರೀತಿಪಾತ್ರವಾದ ತುರುಕರುಗಳನ್ನು ಪೂಜಿಸಿದರೆ ಅವನು ಒಲಿಯುವುದೇನು ಆಶ್ಚರ್ಯ ? ಕೃಷ್ಣ ಕರುಗಳಿಗೆ ತೋರುತ್ತಿದ್ದ ಪ್ರೀತಿಯನ್ನು ವಿಜಯದಾಸರು ಬಲು ಸುಂದರವಾಗಿ ವರ್ಣಿಸಿದ್ದಾರೆ.  “ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ಕರುಗಳನ್ನು ನಿಲಿಸಿ, ಕೊಳಲು ತನ್ನ ಕೈಲಿ ಪಿಡಿದು ಮುರಳಿಗಾನ ಮಾಡುತಾ  ತನ್ನ ಸೆರಗು ತೆಗೆದು ಕೃಷ್ಣ, ಕರುಗಳ ಬೆನ್ನೊರಿಸಿ, ತಿನ್ನು ತಿನ್ನು ಹುಲ್ಲು ಎನುತ ಘನ್ನ  ಕರಗಳೊತ್ತುತ್ತ -  ಅಜಗಳಂಥ ಕರುಗಳು ಗಜಗಳಂತೆ ಆದವು ! ಮೇಕೆಗಳಂತೆ ಇದ್ದ ಕರುಗಳು ಆನೆಗಳಂತೆ ಬೆಳೆದವಂತೆ ! ಅದಿರಲಿ, ನಾನು ಮತ್ತೆಲ್ಲಿಗೋ ಹೋದೆ. 


‘ತುರುಕರು ಕೂದಲ ತುರುಬಿಗೆ ಸುತ್ತಿದರೆ, ಗರತಿಯರೆಲ್ಲಾ ಮುತ್ತೈದೆಯರಣ್ಣ’ ಹಸುವಿನಬಾಲದ ಕೂದಲನ್ನು ತುರುಬಿಗೆ ಸುತ್ತಿದರೆ ಮತ್ತೈದೆತನ ವರ್ಧಿಸುತ್ತದೆಂದು ಮತ್ತೊಂದು ನಂಬಿಕೆ. ಅದರಿಂದ ಬಂದದ್ದು ಈ ಮಾತು.  


ಕೊನೆಯ ಚರಣದಲ್ಲಿರುವ ತುರುಕರುವಿನ ನೀರೆಂದರೆ, ಹಾಲು. ಅದನ್ನು ಎರಕೊಂಡವ  ಉರವಕೊಂಡ. ಉರವ ಎಂದರೆ ಉರಗ  ಶಬ್ದದ ಅಪಭ್ರಂಶ. ಕೊಂಡ ಎಂದರೆ ಬೆಟ್ಟ. ಉರಗದ ಬೆಟ್ಟವೆಂದರೆ ಶೇಷಾಚಲ ಅಥವಾ ತಿರುಪತಿ. ಹಾಗಾಗಿ ಉರವಕೊಂಡ ನೆನ್ನುವನು ತಿರುಪತಿಯ ಶ್ರೀನಿವಾಸ. ಅವನು ಹಾಲಿನ ಅಭಿಷೇಕ ಮಾಡಿಸಿಕೊಂಡ. ಅಭಿಷೇಕದ ತೀರ್ಥ ಸೇವಿಸಿದ ಸನಕಾದಿಗಳು - ‘ತುರುಕರುವಿನ ನೀರಿಗೆ’ ತಾವೂ ಬೆರಕೆಯಾದರು. ಕೊನೆಯ ಸಾಲು ‘ಹರಿದಾಸರಿಗೆಲ್ಲ ಎರವಾಗಿದ’ ಎನ್ನುವುದು. ಎರವಾದನು  ಎನ್ನುವುದಕ್ಕೆ ಬೇಕಾದವನು  ಎಂಬ ಅರ್ಥವಿದೆ. ಆದ್ದರಿಂದ ಉರವಕೊಂಡ ಹರಿದಾಸರಿಗೆ ಬೇಕಾದವನಾದ, ಪ್ರಿಯನಾದ  ಎಂಬ ಅರ್ಥ ಬರುತ್ತದೆ. ಇದಿಷ್ಟು ಗೀತೆಯ ಪದದ, ಸಾಲುಗಳ ವಿವರಣೆಯಾಯಿತು. 


ಆದರೆ ಗೀತೆಯ ಮೂಲಕ ದಾಸರು ಹೇಳಬೇಕೆಂದದ್ದು ಬಹುಶಃ ಇದು.  ‘ವಿದ್ಯಾ ವಿನಯ ಸಂಪನ್ನೇ, ಬ್ರಾಹ್ಮಣೇ ಗವಿ ಹಸ್ತಿನಿ, ಶುನಿ ಚೈವ ಶ್ವಪಾಕೇಚ, ಪಂಡಿತಃ ಸಮದರ್ಶಿನಃ’ ಎಂಬುದು ಗೀತೆಯಲ್ಲಿ ಶ್ರೀ ಕೃಷ್ಣನ ಮಾತು. ಅದರ ಅರ್ಥ ಏನೆಂದರೆ ಉಚ್ಚ ನೀಚ ಎಂಬ ಬೇಧವಿಲ್ಲದೆ, ಶ್ಲೋಕದಲ್ಲಿ  ಹೇಳಿರುವಂತೆ, ಉಚ್ಚ ಜೀವಿಗಳಾದ ವಿದ್ಯೆ ಮತ್ತು ವಿನಯವಂತ, ಬ್ರಹ್ಮಜ್ಞಾನಿ, ಆಕಳು, ಆನೆ, ಮುಂತಾದವುಗಳಲ್ಲಿ  ಮತ್ತು ನೀಚ ಜೀವಿಗಳಾದ ನಾಯಿ, ಶ್ವಪಚ ಅಥವಾ ಚಂಡಾಲ ಇವುಗಳಲ್ಲಿಯೂ, ಒಂದೇ ರೀತಿಯ ಪರಮಾತ್ಮ ಸ್ವರೂಪವನ್ನು  ಜ್ಞಾನಿಯಾದವನು ಕಾಣುತ್ತಾನೆ ಎನ್ನುವುದು. ಇಲ್ಲಿ ಕೊಂಚ ಎಚ್ಚರ ಬೇಕು. ಈ ವಾಕ್ಯದ ಅರ್ಥ ಅದರಲ್ಲಿ ಸೂಚಿಸಿರುವ ಜೀವರೆಲ್ಲಾ ಒಂದೇ ಎಂದಲ್ಲ, ಆ ಎಲ್ಲದರೊಳು ಇರುವ ಪರವಸ್ತು ಒಂದೇ ಎಂದು. ಹಾಗೆ ಜಾತಿಬೇಧವಿಲ್ಲದೆ, ವರ್ಣಬೇಧವಿಲ್ಲದೆ ಎಲ್ಲರಲ್ಲೂ, ಎಲ್ಲದರಲ್ಲೂ ಶ್ರೀ ಹರಿಯನ್ನು ಕಂಡ ಹರಿದಾಸರಿಗೆ ತುರುಕರೂ ಒಂದೇ, ತುರುಕರುಗಳೂ ಒಂದೇ ಆಗಿ ಅವರಿಂದ ನಮ್ಮ ಇಂದಿನ ಗೀತೆಯ ರಚನೆಯಾಯಿತೆಂದು ತಿಳಿಸುತ್ತಾ, ಇಂದಿನ ನಾಲ್ಕುಮಾತು ಕೃಷ್ಣಾರ್ಪಣಗೊಳಿಸುತ್ತೇನೆ.


Friday, September 11, 2026

ನಮ್ಮಮ್ಮ ಶಾರದೆ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ನಿಮ್ಮೊಳಗಿಹನಾರಮ್ಮಾ

ಕಮ್ಮ ಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ

ಮೋರೆಗಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯವನಾರಮ್ಮಾ
ಮೂರು ಕಣ್ಣನ್ನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೆ 

ಉಟ್ಟದಟ್ಟಿಯ ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮಾ
ಪಟ್ಟದ ರಾಣಿ ಪಾರ್ವತಿಯ ಕುಮಾರನೆ ಹೊಟ್ಟೆಯ ಗಣನಾಥನೆ 

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮಾ
ಲೇಸಾಗಿ ಸುಜನರ ಸಲಹುವ ನೆಲೆಯಾದಿಕೇಶವ ದಾಸ ಕಣೆ 


ಗಣಪತಿಯ ಹೆಗ್ಗಳಿಕೆಯನ್ನು ಹೇಳುತ್ತಾ  ಸ್ತುತಿಸುವ ಜತೆಗೆ,

ವಿದ್ಯಾಭಿಮಾನಿಯಾಗಿ ಅವನಿಗಿಂತ ಉತ್ತಮ ಸ್ಥಾನದಲ್ಲಿರುವ

ಶಾರದೆ ಅಥವಾ ಸರಸ್ವತಿಯನ್ನೂ, ಗಣಪನ ತಾಯಿ

ಪಾರ್ವತಿಯನ್ನೂ, ನೆನಸಿಕೊಂಡು ಕೊನೆಗೆ ಸರ್ವೋತ್ತಮನಾದ

ಶ್ರೀಹರಿಯ ಹಿರಿಮೆಯನ್ನು ತಿಳಿಸುವ ಗೀತೆ, ಇಂದಿನ ನಮ್ಮ

‘ದಾಸ ಸಾಹಿತ್ಯ ಸಿರಿ’ಯ ಕೊಡುಗೆ.  ಶ್ರೀ ಕನಕದಾಸರ ಸುಂದರ,

ಜನಪ್ರಿಯ ರಚನೆ  ‘ನಮ್ಮಮ್ಮ  ಶಾರದೆ’. 


ಗೀತೆಯ ಪಲ್ಲವಿ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

ನಿಮ್ಮೊಳಗಿಹನಾರಮ್ಮಾ ಎಂದು ಪ್ರಾರಂಭವಾಗುತ್ತದೆ.

ಗಣಪತಿ, ಸರಸ್ವತಿ ಇಬ್ಬರೂ ವಿದ್ಯೆಯ ಅಭಿಮಾನಿ

ದೇವತೆಗಳು. ತಾರತಮ್ಯ ಪದ್ಧತಿಯಲ್ಲಿ ಸರಸ್ವತಿ ಅಥವಾ

ಶಾರದೆಯ ಸ್ಥಾನ ಗಣಪತಿಗಿಂತ ಬಹಳ ಮೇಲಿನದು.

ವಿದ್ಯಾಭಿಮಾನಿ ದೇವತೆಯಾದ ಅವಳ ಕೃಪೆಯಿಂದ ವಿದ್ಯೆ

ಬುದ್ಧಿಗೆ ಹೆಸರಾಗಿ ‘ವಿದ್ಯಾಗಣಪತಿ’ ಎನಿಸಿಕೊಂಡವನು ಗಣಪ. 

ಇಲ್ಲಿ ‘ನಿಮ್ಮೊಳಗಿಹನು’ ಎಂಬ ಪದವನ್ನು ನಿಮ್ಮ ‘ಪ್ರಭಾವ’

ಅಥವಾ ‘ಕೃಪೆಯೊಳಗಿಹನು’  ಎಂಬ ಅರ್ಥದಲ್ಲಿ

ಉಪಯೋಗಿಸಲಾಗಿದೆ. ಅಲ್ಲದೆ, ಕನ್ನಡದಲ್ಲಿ ‘ಒಲಗು’ ಎಂಬ

ಪದಕ್ಕೆ ಕೃಪಾಪಾತ್ರ ಅಥವಾ ಪ್ರೀತಿಪಾತ್ರ ಎಂಬ ಅರ್ಥವಿದೆ. 

ಇನ್ನು ಉಮಾ ಮಹೇಶ್ವರಿಯಂತೂ ಗಣಪತಿಯ ತಾಯಿ.

ಹಾಗಾಗಿ ನಮ್ಮಮ್ಮ ಶಾರದೆ, ಉಮಾ ಮಹೇಶ್ವರಿ,

ನಿಮ್ಮೊಳಗಿಹನಾರಮ್ಮಾ ಎಂಬ ಪಲ್ಲವಿಯನ್ನು ಕನಕದಾಸರು

ರಚಿಸಿದ್ದಾರೆ. 


ಮುಂದಿನ ಚರಣದಿಂದ ಗಣಪತಿಯ ವರ್ಣನೆ. ಮೊದಲಿಗೆ,

‘ಕಮ್ಮಗೋಲನ ವೈರಿ ಸುತ’. ಕಮ್ಮಗೋಲ ಎಂದರೆ ಪುಷ್ಪಬಾಣ.

ಅದು ಮನ್ಮಥನ ಚಿಹ್ನೆ. ಕಮ್ಮಗೋಲನವೈರಿ, ಮನ್ಮಥನನ್ನು 

ಸುಟ್ಟ ಶಿವ. ‘ಕಮ್ಮಗೋಲನ ವೈರಿಸುತ’ ಎಂದರೆ  ಶಿವನ

ಸುತನಾದ ಮತ್ತು   ಸೊಂಡಿಲು ಹಾಗೂ ಹಿರಿದಾದ ದೇಹ

ಹೊಂದಿದವ, ಗಣಪತಿ. 


ಮುಂದಿನ ಚರಣದ ಮೊದಲಪದ  ‘ಮೋರೆಗಪ್ಪಿನ ಭಾವ’,

ಕಪ್ಪುಬಣ್ಣವನ್ನು ಸೂಚಿಸುತ್ತದೆ. ನಂತರ ‘ಮೊರದಗಲದ ಕಿವಿ’.

ಈ ಕಿವಿಗೆ ಸ್ವಲ್ಪ ವಿವರಣೆ ಉಂಟು. ಗಣಪತಿಗೆ ಆನೆಯ ತಲೆ.

ಆನೆಗೆ ದೃಷ್ಟಿಮಂದ. ಹೊರನೋಟಕ್ಕೂ ಕಣ್ಣುಗಳು ಬಲು ಸಣ್ಣ.

ಆದರೆ ಕಿವಿ ಬಹಳ ಚುರುಕು ಮತ್ತು ಮೊರದಗಲ.

ಈ ಮೊರದಗಲದ ಕಿವಿ, ಅಂದರೆ ಬಹಳ ದೊಡ್ಡದಾದ ಕಿವಿ,

ಕೇಳುವ, ಕೇಳಿದ್ದನ್ನು ಗ್ರಹಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ.

ಸರಿಯಾಗಿ ಕೇಳು ಎನ್ನುವುದಕ್ಕೆ ಕಿವಿ ತೆರೆದು ಕೇಳು, ಕಿವಿ

ಅಗಲಮಾಡಿಕೊಂಡು  ಕೇಳು ಎನ್ನುವ ಪದಗಳ ಬಳಕೆ

ಉಂಟಲ್ಲವೇ ? ಹಾಗೆ, ಅಗಲವಾದ  ಕಿವಿಗಳು ಗಣಪತಿಯ

ಗ್ರಹಣಾ ಸಾಮರ್ಥ್ಯದ, ಸಂಕೇತ. ಆ ರೀತಿಯ

ಗ್ರಹಣಾಸಾಮರ್ಥ್ಯ ಇರುವುದರಿಂದಲೇ ಅವನಿಗೆ ಅಷ್ಟು

ಹಿರಿದಾದ ತಿಳುವಳಿಕೆ ಮತ್ತು ಜ್ಞಾನ. 


ಮುಂದೆ, ಮೂರು ಕಣ್ಣನ ಸುತ, ‘ಮುರಿದಿಟ್ಟ ಚಂದ್ರನ’ ಎಂಬ

ವಿಶೇಷಣಗಳು ಬಂದಿವೆ. ಚಂದ್ರ, ಮನಸ್ಸಿನ ಅಭಿಮಾನಿ ದೇವತೆ.

ವಿರಾಟ್ ಪುರುಷನ ಅಂದರೆ ಸೃಷ್ಟಿಪುರುಷನ ಮನಸ್ಸಿನಿಂದ

ಜನಿಸಿದವನು. ‘ಚಂದ್ರಮೋ ಮನಸೋ ಜಾತಃ, ಚಕ್ಷೋ

ಸೂರ್ಯೋ ಅಜಾಯತಃ’ ಎನ್ನುತ್ತದೆ ಪುರುಷ ಸೂಕ್ತ.

ಮನವನ್ನು ಚಂಚಲಗೊಳಿಸುವವನೂ ಚಂದ್ರನೇ ಎಂಬುದು

ನಮ್ಮ ನಂಬಿಕೆ. ಈ ರೀತಿ ಚಿತ್ತಚಾಂಚಲ್ಯವನ್ನು ಉಂಟುಮಾಡುವ

ಚಂದ್ರನನ್ನು ತನ್ನ ಕೋರೆದಾಡೆಯಿಂದ ಬಡಿದು ಬದಿಗಿರಿಸಿದವ

ಗಣಪತಿ. ಅಂದರೆ ಚಿತ್ತ ಚಾಂಚಲ್ಯವನ್ನು ಸಮರ್ಥವಾಗಿ

ನಿಗ್ರಹಿಸಿದವನು ಎಂಬ ಅರ್ಥ.  ಮುಂದೆ ಬರುವ ಉಟ್ಟ ದಟ್ಟಿಯ,

ಬಿಗಿದುಟ್ಟ ಚಲ್ಲಣದ, ಪಟ್ಟದ ರಾಣಿಯ ಪುತ್ರನಾದ 

ಎಲ್ಲ ವಿಶೇಷಣಗಳೂ ಸುಲಭ. 


ಕೊನೆಯ ಚರಣದಲ್ಲಿ ದಾಸರು ಹೇಳಿರುವುದು, ರಾಶಿ ವಿದ್ಯೆಯ

ಬಲ್ಲ, ರಮಣಿ ಹಂಬಲನೊಲ್ಲ - ಅಂದರೆ ಹೆಣ್ಣಿಗೆ ಮರುಳಾಗದ, ‘ಭಾಷಿಗ’ನಿವನ್ಯಾರಮ್ಮ. ಗಣಪತಿಯನ್ನು ಭಾಷಿಗ ಎಂದರು

ಕನಕದಾಸರು. ಭಾಷಿಗ ಎಂದರೆ ಭಾಷೆಯನ್ನು ಬಹಳ ಚೆನ್ನಾಗಿ

ಬಲ್ಲವನು. ಅದರ ಹರಿವು, ಒಳ ಹೊರಗು, ತಿಳಿದವನು.

ಬರಿ ಭಾಷೆ ತಿಳಿದವರೆಲ್ಲಾ ಭಾಷಿಗರಾದರೆ ನಾವು, ನೀವು

ಎಲ್ಲರೂ ಭಾಷಿಗರೇ. ಆದರೆ ಅದು ಹಾಗಲ್ಲ. ಭಾರತ

ಬರೆಯಬೇಕೆಂದು ವ್ಯಾಸರು ಗಣಪತಿಯನ್ನು ಕೇಳಿದಾಗ

ಗಣಪತಿ ಅವರಿಗೊಂದು ಷರತ್ತು ಹಾಕಿದನಂತೆ. ಅವರು

ಹೇಳುವುದನ್ನು ಮಧ್ಯೆ ನಿಲ್ಲಿಸಲಾಗದು. ತಾನು ಬರೆಯುವ

ವೇಗದಲ್ಲಿ ಅವರು ಕಥೆಯನ್ನು ಹೇಳತಕ್ಕದ್ದು. ಅವರು

ಮುಂದೇನೆಂದು ಯೋಚಿಸಲೆಂದು ಹೇಳುವುದನ್ನು

ನಿಲ್ಲಿಸಿದರೆ ತಾನು ಬರೆಯುವುದನ್ನು ಅಲ್ಲಿಗೇ ನಿಲ್ಲಿಸುತ್ತೇನೆಂದ.

ವ್ಯಾಸರು ಒಪ್ಪಿದರು. ಆದರೆ ಅವರೂ ಒಂದು ಷರತ್ತು

ಹಾಕಿದರು. ಎಷ್ಟಾದರೂ ವ್ಯಾಸರು ಗಣಪತಿಯ ಮುತ್ತಾತ

ಅಲ್ಲವೇ ! ತಾವು ಹೇಳಿದ ಶ್ಲೋಕಗಳನ್ನು ಸಂಪೂರ್ಣವಾಗಿ 

ಅರ್ಥ ಮಾಡಿಕೊಂಡು ಗಣಪತಿ ಬರೆಯತಕ್ಕದ್ದು. ಯಾವುದೊ

ಪದ, ವಾಕ್ಯ ತಟ್ಟನೆ ತಿಳಿಯದಿದ್ದರೆ ಅವನು ‘ಮಕ್ಕಿ ಕಾ ಮಕ್ಕಿ’

ಬರೆಯುವುದಲ್ಲ!  ಗಣಪತಿ ಒಪ್ಪಿದ. ವ್ಯಾಸರ ವಾಚನವನ್ನು

ಪೂರ್ತಿ ಅರ್ಥ ಮಾಡಿಕೊಂಡು ಬರೆದ. ಅದರಿಂದಲೇ

ಕನಕದಾಸರೆಂದರು ‘ಭಾಷಿಗನಿವನ್ಯಾರಮ್ಮ’.  


ಕೊನೆಯ ಚರಣದಲ್ಲಿ  ಲೇಸಾಗಿ ಸುಜನರ ಸಲಹುವ

ನೆಲೆಯಾದಿ  ‘ಕೇಶವದಾಸ’ ನೆಂದು ಗಣಪತಿಯನ್ನು ಹೆಸರಿಸಿ,

ಗಣಪತಿಯ ವಿಷ್ಣು ಭಕ್ತಿಯನ್ನು ಸೂಚಿಸಿದರು ದಾಸರು.

ಇದಕ್ಕೂ ಕೊಂಚ ವಿವರಣೆ ಇದೆ. ಪಾರ್ವತಿ ತನ್ನ ಬೆವರು,

ಮಣ್ಣಿನಿಂದ ತಯಾರಿಸಿದ್ದ ಗಣಪತಿಯ ತಲೆಕಡಿದ ಶಿವ,

ಆನೆಯ ತಲೆ ತರಿಸಿ ಜೋಡಿಸಿದ್ದು ಸಾಮಾನ್ಯವಾಗಿ ಎಲ್ಲರೂ

ತಿಳಿದಿರುವ ಕಥೆ. ಆದರೆ ಮಧ್ವ ಸಿದ್ಧಾಂತ ಗಣಪತಿಯ ಆನೆಯ

ತಲೆಗೆ  ಬೇರೆಯೇ ವಿವರಣೆ  ನೀಡುತ್ತದೆ. ವಿಷ್ಣುವಿನ

ಅಸಂಖ್ಯಾತ  ರೂಪಗಳಲ್ಲಿ ಒಂದು ‘ವಿಶ್ವಂಭರ’ ಎಂದು

ಹೆಸರಾದ ರೂಪ. ಈ ರೂಪದಲ್ಲಿ ವಿಷ್ಣುವಿಗೆ ಹತ್ತೊಂಭತ್ತು

ತಲೆಗಳು. ಅದರಲ್ಲಿ ಮಧ್ಯದ ತಲೆ ಆನೆಯ ರೂಪದ್ದು.

ಮಹಾ ವಿಷ್ಣುಭಕ್ತನಾದ, ಸಾಮಾನ್ಯ ರೂಪದ  ಗಣಪತಿ,

ತನ್ನ ಮನಸ್ಸಿನಲ್ಲಿ ಆ ವಿಶ್ವಂಭರ ರೂಪವನ್ನು ಧ್ಯಾನಿಸುತ್ತಾ,

ಧ್ಯಾನಿಸುತ್ತಾ, ತನ್ನ ತನು ಮನ ದೊಳಗೆಲ್ಲಾ  ವಿಶ್ವಂಭರನನ್ನು

ತುಂಬಿಕೊಂಡಿದ್ದಷ್ಟೇ ಅಲ್ಲದೆ ಹೊರಗಿನ ಆಕಾರದಲ್ಲೂ ಗಜಮುಖನಾಗಿಬಿಟ್ಟನಂತೆ.

ಅಂಥ ವಿಷ್ಣುಭಕ್ತನಾದ

ಗಣಪತಿಯನ್ನು  ‘ಕೇಶವದಾಸ’ನೆಂದು ಹೆಸರಿಸಿ ಅವನ

ಸ್ತುತಿಯನ್ನು ಕನಕದಾಸರು ಮುಗಿಸಿದರೆಂದು ತಿಳಿಸುತ್ತಾ

ಕೃಷ್ಣಾರ್ಪಣ ಮಾಡುತ್ತೇನೆ. 


Saturday, September 5, 2026

ಪಾಲಿಸೆ ಪದುಮಾಲಯೇ

ಪಾಲಿಸೆ ಪದುಮಾಲಯೇ 

ಇಂದಿರೆ ತಾಯೆ, ನೀನೆ ಗತಿ 


ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದಗೋಕುಲ 

ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿದ ಬಾಲಕನ ಪ್ರಿಯೆ 


ಅನ್ಯರ ನೆನೆಯಲೊಲ್ಲೆ, ನಿನ್ನಯ ಪಾದವನ್ನೇ ನಂಬಿದೆ ನೀ ಬಲ್ಲೆ 

ತಡ ಮಾಡದೆಲೆ 

ಚಿನ್ನ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ ಗುಣ ಸಂ-

ಪನ್ನ ರಕ್ಕಸರನ್ನು ಸೀಳಿದ ಪನ್ನಗಾದ್ರಿ ನಿವಾಸ ಹರಿಪ್ರಿಯೆ 


ಅಜ ಮನಸಿಜ ಜನನಿ ಅಂಬುಜಾ ಪಾಣಿ 

ಭುಜಗ ಸನ್ನಿಭ ವೇಣಿ ನಿತ್ಯ ಕಲ್ಯಾಣಿ 

ಕುಜನ ಮರ್ದನ ವಿಜಯ ವಿಠಲನ ಭಜಿಸಿ ಪಾಡುವ ಭಕ್ತ ಕೂಟವ 

ನಿಜದಿ ಸಲಹುವನೆಂಬ ಬಿರುದುಳ್ಳ ವಿಜಯ ಸಾರಥಿ ವಿಶ್ವಮ್ಬರ ಪ್ರಿಯೆ


ತಮ್ಮ ಸಪ್ನದಲ್ಲಿ ಶ್ರೀ ಪುರಂದರದಾಸರನ್ನು ಕಂಡು ಅವರಿಂದ ಪ್ರೇರೇಪಿತರಾಗಿ  ದಾಸಪಂಥವನ್ನು ಹಿಡಿದು ಹರಿದಾಸರಾದರೆಂದು ಹೇಳಲಾಗುವ, ಮತ್ತು ಆ ಕಾರಣದಿಂದಲೇ ಪುರಂದರ ದಾಸರ ಆಧ್ಯಾತ್ಮಿಕ ಶಿಷ್ಯರೆಂದೆನಿಸಿಕೊಂಡ ವಿಜಯದಾಸರ ರಚನೆಗಳು ಸಾವಿರಾರು ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಮಹಾಲಕ್ಷ್ಮಿಯ ಕೃಪೆಗಾಗಿ ಪ್ರಾರ್ಥಿಸುವ ರಚನೆಗಳು ಅನೇಕ ಇವೆ. ಆ ರೀತಿಯ ಒಂದು ಜನಪ್ರಿಯ ರಚನೆ ನಮ್ಮ ದಾಸ ಸಾಹಿತ್ಯ ಸಿರಿಯ ಇಂದಿನ ಕೊಡುಗೆ, ‘ಪಾಲಿಸೆ ಪದುಮಾಲಯೇ’. 


ಪಾಲಿಸೆ ಪದುಮಾಲಯೇ, ನೀನೇ ಗತಿಯೇ ಎಂಬ ಪಲ್ಲವಿಯಿಂದ ಗೀತೆಯನ್ನು ಪ್ರಾರಂಭಿಸಿದ್ದಾರೆ ವಿಜಯದಾಸರು. ಪದುಮಾಲಯೇ ಎಂದರೆ ಪದ್ಮವನ್ನು, ಕಮಲ ಪುಷ್ಪವನ್ನು  ಆಲಯವಾಗಿ ಅಂದರೆ ನಿವಾಸವಾಗಿ ಉಳ್ಳವಳು.   ಕಾಂಸೋಸ್ಥಿತಾ, ಹಿರಣ್ಯಪ್ರಾಕಾರಾಮಾರ್ದ್ರಂ, ಜ್ವಲಂತೀಮ್ ತೃಪ್ತಾಮ್    ತರ್ಪಯಂತೀಮ್ ಪದ್ಮೇಸ್ಥಿತಾಮ್  ಪದ್ಮವರ್ಣಾಮ್  ಮುಂತಾಗಿ ಶ್ರೀ ಸೂಕ್ತ ಲಕ್ಷ್ಮೀದೇವಿಯನ್ನು ವರ್ಣಿಸುತ್ತದೆ. ಪದ್ಮವರ್ಣದವಳು, ಪದ್ಮದಲ್ಲಿ ಉಪಸ್ಥಿತಳಾದವಳು ಎಂದು ಅರ್ಥ.  ಚತುರ್ಭುಜ ನಾರಾಯಣನ ಒಂದು ಕೈಯಲ್ಲಿ ಇರುವುದು ಮುಕ್ತಿಸಂಕೇತವಾದ ಪದ್ಮ. ಆ ಪದ್ಮದಲ್ಲಿ  ವಾಸವಿರುವವಳು, ಲಕ್ಷ್ಮೀದೇವಿ. ಅಲ್ಲಿ ಉಪಸ್ಥಿತಳೆಂದರೆ ಆ ಜಾಗ ಅವಳ ಹಿಡಿತದಲ್ಲಿ ಎಂದಾಯಿತಲ್ಲವೇ ? ಅಂದರೆ ನಮಗೆ ಬೇಕಾದ ಮುಕ್ತಿ ಮಹಾಲಕ್ಷ್ಮಿಯ ಹಿಡಿತದಲ್ಲಿದೆ. ಆ ಮುಕ್ತಿಯ ಸ್ಥಾನ ನಮಗೆ ಬೇಕಾದರೆ ಅದರ ಒಡತಿ ನಮಗೆ ಒಲಿಯಬೇಕು.  ಇದು ಪಾಲಿಸೆ ಪದುಮಾಲಯೇ, ನೀನೆ ಗತಿಯೇ, ಎಂಬ ಸಾಲಿನಲ್ಲಿ ಅಡಗಿರುವ ವಿಜಯದಾಸರ ಚಿಂತನೆ. 


ಮುಂದಿನ ಚರಣಗಳೆಲ್ಲ ಬಹಳವೇ ಸರಳ.  ಒಂದು,

ಗೋಪಿಯರೊಡನೆ ಕ್ರೀಡಿಸಿ, ಅಸುರರನ್ನು ಸಂಹರಿಸಿದ 

ಕೃಷ್ಣಾವತಾರದ ವರ್ಣನೆ - ‘ಅಸುರರ ಕಾಲನೆನಿಸಿದ

ಬಾಲಕನ ಪ್ರಿಯೆ’ ಎಂದಿದ್ದಾರೆ ದಾಸರು.  ಮತ್ತೊಂದು

ನರಸಿಂಹಾವತಾರದ ವರ್ಣನೆ. ಚಿನ್ನ ಅಥವಾ ಚಿಣ್ಣ

ಎಂದರೆ ಬಾಲಕ, ಪ್ರಹ್ಲಾದ. ಅವನು ಕರೆದಾಗ ಬಂದು

ರಕ್ಕಸನನ್ನು - ಹಿರಣ್ಯಕಶಿಪುವನ್ನು ಸೀಳಿದ, ಪನ್ನಗಾದ್ರಿ

ನಿವಾಸ ಎಂದರೆ ತಿರುಪತಿಯ ಶ್ರೀನಿವಾಸ. ಪನ್ನಗ

ಎಂದರೆ ಸರ್ಪ, ಶೇಷ. ಆದ್ರಿ ಎಂದರೆ ಪರ್ವತ. ಪನ್ನಗಾದ್ರಿ

ಎನ್ನುವುದು  ಶೇಷಾಚಲ ಅಂದರೆ ತಿರುಪತಿ. ಇಲ್ಲಿ,

ಶೇಷಾಚಲ ವಾಸನಾದ  ಶ್ರೀಹರಿಯ ಪ್ರಿಯೆ ಎಂದು

ಲಕ್ಷ್ಮಿಯನ್ನು ಸಂಭೋದಿಸುತ್ತಿದ್ದಾರೆ ದಾಸರು. 


ಇನ್ನು ಮುಂದೆ ಅಜ ಮನಸಿಜ ಜನನೀ. ಅಜ ಮನಸಿಜ

ಎಂದರೆ ಅಜನ  ಮನಸ್ಸಿನಿಂದ ಜನಿಸಿದವ ಅಂದರೆ

ವಿಷ್ಣುವಿನ ಪುತ್ರ ಮನ್ಮಥ. ಅವನಿಗೆ ಜನನಿ ಲಕ್ಷ್ಮೀದೇವಿ.

ನಂತರ ಭುಜಗ ಸನ್ನಿಭ ವೇಣಿ. ಭುಜಗ ಸನ್ನಿಭ ಎಂದರೆ

ಸರ್ಪದಂತೆ  ಇರುವ, ‘ವೇಣಿ’ ಎಂದರೆ ಜಡೆಯುಳ್ಳವಳು

ಎಂದರ್ಥ.  ಮುಂದಿನ ಪದಗಳೆಲ್ಲಾ ಶ್ರೀಹರಿಯ

ವಿಶೇಷಣಗಳು. ವಿಜಯ ಸಾರಥಿ ಅಂದರೆ ಅರ್ಜುನನ

ಸಾರಥಿಯಾದ,  ಕುಜನ ಮರ್ದನ - ದುಷ್ಟ ಶಿಕ್ಷಕ ನಾದ, 

ತನ್ನನ್ನು ಭಜಿಸುವ ಭಕ್ತರನ್ನು  ಸಲಹುವ, ವಿಶ್ವಂಭರನ 

ಪ್ರಿಯೆ, ವಿಶ್ವವನ್ನು ಭರಿಸಿರುವವ ವಿಶ್ವಂಭರ, ಆತನ

ಪ್ರಿಯೆ, ನೀ ಪಾಲಿಸೆ ಪದುಮಾಲಯೇ ಎನ್ನುತ್ತಾ

ವಿಜಯದಾಸರು ತಮ್ಮ ಲಕ್ಷ್ಮಿಯ  ಸ್ತುತಿಯನ್ನು

ಮುಗಿಸುತ್ತಿದ್ದಾರೆಂದು ತಿಳಿಸುತ್ತಾ ಕೃಷ್ಣಾರ್ಪಣ ಎನ್ನುತ್ತೇನೆ. 

Friday, August 28, 2026

ಆದದ್ದೆಲ್ಲ ಒಳಿತೇ ಆಯಿತು

ಆದದ್ದೆಲ್ಲ ಒಳಿತೇ ಆಯಿತು ನಮ್ಮ

ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು 


ದಂಡಿಗೆ ಬೆತ್ತ ಹಿಡಿಯುವುದಕ್ಕೆ

ಮಂಡೆ ಮಾಚಿ ನಾಚುತಲಿದ್ದೆ

ಹೆಂಡತಿ ಸಂತತಿ ಸಾವಿರ ವಾಗಲಿ

ದಂಡಿಗೆ ಬೆತ್ತ ಹಿಡಿಸಿದಳಯ್ಯ                 


ಗೋಪಾಳ ಬುಟ್ಟಿ ಹಿಡಿಯುವುದಕ್ಕೆ

ಭೂಪತಿ ಎಂದು ಗರ್ವಿಸುತ್ತಿದ್ದೆ

ಆ ಪತ್ನೀಕುಲ ಸಾವಿರವಾಗಲಿ 

ಗೋಪಾಳ ಬುಟ್ಟಿ ಹಿಡಿಸಿದಳಯ್ಯ            


ತುಳಸೀ ಮಾಲೆ ಹಾಕುವುದಕ್ಕೆ

ಅರಸನೆಂದು ತಿರುಗುತಲಿದ್ದೆ

ಸರಸಿಜಾಕ್ಷ ಶ್ರೀ ಪುರಂದರ ವಿಠಲನು

ತುಳಸಿಮಾಲೆ ಹಾಕಿದನಯ್ಯ           


ನವಕೋಟಿ ನಾರಾಯಣ ಶ್ರೀನಿವಾಸ ನಾಯಕರು ಸರ್ವಸ್ವವನ್ನೂ ತ್ಯಜಿಸಿ, ಹರಿದಾಸಪಂಥವನ್ನು ಹಿಡಿದು ಪುರಂದರದಾಸರಾದ ಸಂಗತಿ ಮತ್ತು ಅದರ ಹಿನ್ನೆಲೆ, ನಮ್ಮ ಸಮಕಾಲೀನರೆಲ್ಲರಿಗೂ  ತಿಳಿದಿರುವುದೇ.  ನಾಯಕರು ದಾಸರಾಗುವಲ್ಲಿ ಅವರ ಪತ್ನಿಯ ಹಿರಿದಾದ ಪಾತ್ರ ಇದ್ದಿರಬೇಕೆಂಬುದು ತಿಳಿದವರ ಅಭಿಪ್ರಾಯ. ಆ ಅಭಿಪ್ರಾಯಕ್ಕೆ ಪುಷ್ಟಿ ಕೊಡುವ ಪುರಂದರದಾಸರ ರಚನೆ ‘ಆದದ್ದೆಲ್ಲಾ ಒಳಿತೇ ಆಯಿತು.’


‘ನವಕೋಟಿ ನಾರಾಯಣ’ ಎನಿಸಿಕೊಂಡಿದ್ದ, ಆದರೆ ಪರಮ ಲೋಭಿಯಾಗಿದ್ದ ಶ್ರೀನಿವಾಸನಾಯಕರ ಮನೆಗೆ ಬ್ರಾಹ್ಮಣನೊಬ್ಬ ಭಿಕ್ಷೆಗೆ ಬಂದಾಗ ಅವನಿಗೆ ಕೊಡಲು ನಾಯಕರ ಪತ್ನಿಯಬಳಿ ಏನೂ ಇಲ್ಲದೆ ಆಕೆ ತನ್ನ ಮೂಗುಬಟ್ಟನ್ನು ಬಿಚ್ಚಿ ಕೊಟ್ಟದ್ದು, ಅದನ್ನು ಬ್ರಾಹ್ಮಣ, ನಾಯಕರ ಬಳಿಯೇ  ಅಡವು ಇಡಲು ಒಯ್ದದ್ದು, ನಾಯಕರಿಗೆ ಅನುಮಾನಬಂದು   ಅವರು ಮನೆಗೆ ಬಂದು ಪತ್ನಿಯನ್ನು ದಬಾಯಿಸಿಕೇಳಿದ್ದು, ಉತ್ತರ ಕೊಡಲಾಗದ ಪತ್ನಿ ವಿಷಪ್ರಾಶನ ಮಾಡಲೆಂದು ವಿಷದ ಬಟ್ಟಲ್ಲನ್ನೆತ್ತಿಕೊಂಡಾಗ ಆ ಬಟ್ಟಲೊಳಗೆ ಮೂಗುಬಟ್ಟು ಬಿದ್ದದ್ದು, ಆ ಮೂಲಕ ದಾಸರಿಗೆ ಪರಮಾತ್ಮನ ಹಿರಿಮೆಯ ಅರಿವಾಗಿ ಅವರು ಎಲ್ಲವನ್ನೂ  ತ್ಯಜಿಸಿ ದಾಸರಾದದ್ದು,  ಇದೆಲ್ಲ ನಾವು ಚಿಕ್ಕಂದಿನಲ್ಲಿ ಕೇಳಿ ಕೇಳಿ ಬಾಯಿಪಾಠವಾಗಿದ್ದ  ಕಥೆ. ಉಡುಪಿ ಕೃಷ್ಣ ಕನಕದಾಸರಿಗೆ ದರ್ಶನಕೊಡಲು ತಿರುಗಿ, ಗೋಡೆ ಬಿರಿಯಿತೆಂದು ಹೇಳುತ್ತೇವಲ್ಲವೇ, ಹಾಗೆ. 


ಆದರೆ ಕರ್ನಾಟಕ ಸಂಗೀತ ಪಿತಾಮಹರೆಂದು ಹೆಸರಾಗಿರುವ ಪುರಂದರ ದಾಸರ ಬಗ್ಗೆ ನಮಗೆ ಖಚಿತವಾಗಿ ತಿಳಿದಿರುವ ಸಂಗತಿಗಳು ಬಹು ಸ್ವಲ್ಪ. ಅಥವಾ ಇಲ್ಲವೇ ಇಲ್ಲ ಎಂದರೂ ಆದೀತು. ದಾಸರು ಇದ್ದರು ಎಂಬುದಕ್ಕೆ ಇರುವ ಪುರಾವೆಯೇ ಅತ್ಯಲ್ಪ.  ವಿಜಯನಗರದ ಅರಸರು ಶ್ರೀ ವ್ಯಾಸತೀರ್ಥರಿಗೆ ಬಳುವಳಿಯಾಗಿ ಕೊಟ್ಟ ಕೆಲವು ಗ್ರಾಮಗಳನ್ನು ಅವರು ತಮ್ಮ ಅನೇಕ ಶಿಷ್ಯರಿಗೆ ಹಂಚಿಕೊಟ್ಟರಂತೆ. ಅದರಲ್ಲಿ ಒಂದೆರಡು ಪಾಲು ಪುರಂದರದಾಸ ‘’ ಎಂದು ಕರೆಸಿಕೊಂಡಿದ್ದ, ಎಂದರೆ ಪುರಂದರದಾಸರೆನ್ನುವವರ ಮಕ್ಕಳು ಎನಿಸಿಕೊಂಡಿದ್ದ  ಲಕ್ಷ್ಮಣದಾಸ, ಹೇಬಣದಾಸ ಮುಂತಾದವರಿಗೆ ಸೇರಿತೆನ್ನುವುದು ಒಂದು ಶಾಸನದಲ್ಲಿ ಸೂಚಿತವಾಗಿದೆಯಂತೆ. ಪುರಂದರದಾಸರ ಮಕ್ಕಳು ಎನಿಸಿಕೊಂಡವರು ಇದ್ದುದ್ದರಿಂದ, ದಾಸರು ಕೂಡ ಇದ್ದರೆಂದು ನಾವು ಹೇಳಬಹುದು ಎಂದು   ಪ್ರೊ ಎಸ್  ಕೆ ರಾಮಚಂದ್ರರಾಯರು ತಮ್ಮ ‘ಪುರಂದರ ಸಾಹಿತ್ಯ ದರ್ಶನ’ ಪುಸ್ತಕದಲ್ಲಿ ಬರೆದಿದ್ದಾರೆ. 


ನಾನು ಮೊದಲು ಹೇಳಿದ ಕಥೆ ನಡೆಯಿತೋ ಬಿಟ್ಟಿತೋ, ಏನೇ ಇರಲಿ, ತಾವು ಹರಿದಾಸರಾಗಿ ಪರಿವರ್ತಿತರಾಗಲು ತಮ್ಮ ಪತ್ನಿ ಕಾರಣಭೂತರೆಂದು  ದಾಸರೇ ಹೇಳಿಕೊಂಡು, ಆದದ್ದೆಲ್ಲಾ ಒಳಿತೇ ಆಯಿತು, ಶ್ರೀಧರನ ಸೇವೆಗೆ ಬಳಸಲು ದೊಡ್ಡ ಸಂಪತ್ತಾಯಿತು ಎಂದು ಹಾಡಿದ್ದಾರೆ. ದಾಸರಾಗುವ ಮುಂಚಿನ ತಮ್ಮ ಮನಸ್ಥಿತಿಯನ್ನು ತೋಡಿಕೊಂಡು ತಮ್ಮ ಪತ್ನಿಯ ಪ್ರೇರಣೆಯಿಂದ ದಾಸನಾಗಿ ಉದ್ಧಾರನಾದೆನೆಂಬ ಅರ್ಥಬರುವ ಸಾಲುಗಳನ್ನು ರಚಿಸಿದ್ದಾರೆ. ದಂಡಿಗೆ ಬೆತ್ತವೆಂದರೆ, ಹಾಡಿಕೆಗೆ ಪೂರಕವಾಗಿ ಬಳಸುವ, ಒಂದೇ ತಂತಿಯ, ಬಿದಿರು, ಸೋರೆ ಬುರುಡೆಯ ವಾದ್ಯ. ಗೋಪಾಳಬುಟ್ಟಿ ಎಂದರೆ, ಭಿಕ್ಷೆ ಹಾಕಿಸಿಕೊಳ್ಳಲು ಉಪಯೋಗವಾಗುವ, ಹೆಗಲಿಗೆ ನೇತುಹಾಕಿಕೊಳ್ಳುವ ಜೋಳಿಗೆ. 


ಕೋಟ್ಯಾಧೀಶನಾಗಿ ಅಹಂಕಾರಿಯಾಗಿದ್ದ ನಾನು ನನ್ನ ಆಡಂಬರವನ್ನು ಬಿಟ್ಟು ಹರಿದಾಸನಾಗಿ,  ಭಿಕಾರಿ ವೇಷ ಧರಿಸುವುದು ಸಾಧ್ಯವಿತ್ತೇ ? ನಾನು ಅದನ್ನು ಧರಿಸುವಂತೆ ಮಾಡಿದ, ಅಂದರೆ ವೈರಾಗ್ಯದೆಡೆಗೆ ನನ್ನ ಮನ ತಿರುಗಲು ಎಡೆಮಾಡಿಕೊಟ್ಟ ಅಥವಾ ಕಾರಣವಾದ ನನ್ನ ಪತ್ನಿಯಂಥವರು ಸಾವಿರ ಸಾವಿರವಾಗಲಿ ಎಂದು ಆಕೆಯನ್ನು ಹೊಗಳಿ ಹಾಡಿರುವ ಗೀತೆ ಇದು. 


ಒಳಿತು ಎನ್ನುವ ಕಾರ್ಯಗಳೆಲ್ಲಾ ತಮ್ಮ ಪತ್ನಿಯ ಮೂಲಕ ನಡೆದದ್ದಾದರೂ ಅದು ಪುರಂದರ ವಿಠಲನಚಿತ್ತದಂತೆ ಆದದ್ದು ಎಂಬ ತತ್ವ ವನ್ನು “ಸರಸಿಜಾಕ್ಷ ಶ್ರೀ ಪುರಂದರ ವಿಠಲನು ತುಳಸೀಮಾಲೆ ಹಾಕಿದನಯ್ಯ” ಎಂಬ ಕೊನೆಯ ಸಾಲಿನಲ್ಲಿ ದಾಸರು ಸೂಚಿಸಿದ್ದಾರೆಂದು ತಿಳಿಸುತ್ತಾ ಇಂದಿನ ಮಾತನ್ನು ಕೃಷ್ಣಾರ್ಪಣ ಮಾಡುತ್ತೇನೆ.


Friday, August 21, 2026

ಹರಿನಾಮ ಜಿಹ್ವೆಯೊಳಿರಬೇಕು

 ಹರಿನಾಮ ಜಿಹ್ವೆಯೊಳಿರಬೇಕು ನರನಾದಮೇಲೆ 


ಭೂತದಯಾಪರನಾಗಿರಬೇಕು 

ಪಾತಕವೆಲ್ಲವ ಕಳೆಯಲಿಬೇಕು 

ಮಾತು ಮಾತಿಗೆ ಹರಿ ಎನಬೇಕು -ನರನಾದಮೇಲೆ 


ಶಾಂತಿ ಶಮ ದಮ ಹಿಡಿಯಲಿ ಬೇಕು 

ಧ್ವಾಂತಿ ಅವಗುಣವ ಕಳೆಯಲಿ ಬೇಕು 

ಸಂತತ ಸನ್ಮಾರ್ಗದಲ್ಲಿರಬೇಕು -ನರನಾದಮೇಲೆ 


ಕಾಮಕ್ರೋಧವ ಸಾರಿಡಬೇಕು 

ಮನಕೆ ಅಹಂಕಾರವ ನೀಗಲಿ ಬೇಕು 

ಸೌಮ್ಯರ ಸಂಗಡದೊಳು ಇರಬೇಕು-ನರನಾದಮೇಲೆ 


ವೇದಶಾಸ್ತ್ರವನು ಓದಲಿ ಬೇಕು 

ಭೋದ ತತ್ವವನು ತಿಳಿಯಲಿಬೇಕು 

ಮಾಧವನ ಸ್ಮರಣೆ ಮಾಡಲಿ ಬೇಕು -ನರನಾದಮೇಲೆ 


ತಂದೆ ಕೃಷ್ಣನ ದಯೆಪಡೆಯಬೇಕು 

ಬಂದದ್ದುಂಡು  ಸುಖಪಡಬೇಕು 

ಚಂದಾಗಿ ಜಗದೊಳಗಿರಬೇಕು-ನರನಾದಮೇಲೆ





ಹರಿನಾಮ ಜಿಹ್ವೆಯೊಳಿರಬೇಕು ನರನಾದ ಮೇಲೆ.  ಒಮ್ಮೆ ‘ನರ’ ಎಂದೆನಿಸಿಕೊಳ್ಳುವ ಮೊದಲು   ಅದೆಷ್ಟು ಜನ್ಮಗಳನ್ನು ಯಾವಯಾವ ಕ್ರಿಮಿ, ಕೀಟ, ಪ್ರಾಣಿಯಾಗಿ  ಕಳೆಯಬೇಕಾಯಿತೋ ಗೊತ್ತಿಲ್ಲ. ಆ ಎಲ್ಲ ಜನ್ಮಗಳಲ್ಲೂ ದೇಹವೆಂಬುದು ಇತ್ತು.  ಆ ದೇಹಗಳಲ್ಲಿ  ನೋಡುವ, ಕೇಳುವ, ಉಣ್ಣುವ, ಮುಂತಾದ  ಏನೇನೋ ವ್ಯವಸ್ಥೆಗಳಿದ್ದರೂ ಗೋವಿಂದ, ನಾರಾಯಣ, ಶ್ರೀಹರಿ ಎಂದು ಹೇಳುವ ವ್ಯವಸ್ಥೆ ಇರಲಿಲ್ಲ. ಅದು ಬಂದದ್ದು ನರಜನ್ಮದಲ್ಲಿ ಮಾತ್ರ. ಅದರಿಂದಲೇ ವ್ಯಾಸತೀರ್ಥರೆಂದರು ಅವಕಾಶಸಿಕ್ಕಾಗ ಹರಿನಾಮ ನಾಲಿಗೆಯಲ್ಲಿರಲಿ. ಈ ಜನ್ಮ ಕಳೆದರೆ ಮತ್ತೆ ಏನು ಜನ್ಮವೋ ಯಾರಿಗೆ ಗೊತ್ತು ! 


ಮತ್ತೊಂದು ವಿಷಯವೆಂದರೆ ನಾಲಿಗೆಗೆ ಬಂದದ್ದು, ನಂತರ ಸ್ಮರಣೆಯಲ್ಲಿ ಉಳಿದೀತು ಎನ್ನುವುದು. ಬಾಲ್ಯದಲ್ಲಿ ನಮಗೆ ಶಾಲೆಯಲ್ಲಿ ಮಗ್ಗಿ ಹೇಳಿಸುತ್ತಿದ್ದರು. ಪ್ರತಿನಿತ್ಯ ಅದನ್ನೇ ಹೇಳುತ್ತಾ ಹೇಳುತ್ತಾ ಬೇಡವೆಂದರೂ ಅದು ಸ್ಮರಣೆಯಲ್ಲಿ ಉಳಿಯುತ್ತಿತ್ತು. ನವ ವಿಧ ಭಕ್ತಿಯಲ್ಲಿ ಎರಡನೇ ಮಜಲು ಕೀರ್ತನೆ, ಮೂರನೆಯದು ಸ್ಮರಣೆ. ನಾಲಿಗೆಯಿಂದ ಮಿದುಳಿಗೆ ಬಂದದ್ದು ಅಲ್ಲಿಂದ ಮುಂದೆ ಹೃದಯವನ್ನು ತಲುಪಬಹುದೇನೋ. ಆದ್ದರಿಂದ ಮೊದಲಾಗಿ  ಹರಿನಾಮ ಜಿಹ್ವೆಯಲ್ಲಿರಲಿ. 


ಅದು ಸರಿ. ಆದರೆ ಹರಿನಾಮ ನಿರಂತರವಾಗಿ ನಾಲಿಗೆಯಲ್ಲಿರಬೇಕಾದರೆ ಉಳಿದ ನಡವಳಿಕೆಗಳೆಲ್ಲಾ ಅದಕ್ಕೆ ಅನುಗುಣವಾಗಿ ಇರಬೇಕಲ್ಲವೇ ? ಅದರಿಂದಲೇ ಉಳಿದ ಚಟುವಟಿಕೆಗಳು ಹೇಗಿರಬೇಕೆಂಬುದನ್ನೂ ಮುಂದಿನ ಚರಣಗಳಲ್ಲಿ ವಿಶದ ಪಡಿಸಿದರು ವ್ಯಾಸರಾಜರು. ಪಾತಕವ ಕಳೆಯಬೇಕು, ಅಹಂಕಾರವ ನೀಗಬೇಕು, ಸನ್ಮಾರ್ಗದಲ್ಲಿರಬೇಕು,  ಕೃಷ್ಣನ ದಯೆ ಪಡೆಯಬೇಕು, ಇತ್ಯಾದಿ, ಇತ್ಯಾದಿ. ಬಹಳ ಸರಳವಾದ ಸಾಲುಗಳು. ಕೆಲವೇ ಪದಗಳಿಗೆ ಕೊಂಚ ವಿವರಣೆ ಅಗತ್ಯವೆನಿಸುತ್ತದೆ. 


ಭೂತ ದಯಾಪರನಾಗಿರಬೇಕು - ಇಲ್ಲಿ  ಭೂತ ಎಂದರೆ ಸಕಲ ಜೀವಗಳು. ಅವೆಲ್ಲದರ ಮೇಲೂ ದಯೆಯಿರಲಿ.  ಶಮ, ದಮ ಹಿಡಿಯಲಿಬೇಕು - ಶಮ ಎಂದರೆ ಮನೋ ನಿಗ್ರಹ, ದಮವೆಂದರೆ ಇಂದ್ರಿಯ ನಿಗ್ರಹ. ಮನುಷ್ಯನಿಗೆ ಎರಡೂ ಬೇಕು.  ಧ್ವಾಂತಿ, ಅವಗುಣ ಕಳೆ ಯಲಿಬೇಕು - ಧ್ವಾಂತ ವೆಂದರೆ ಕತ್ತಲು, ಅಜ್ಞಾನ. ಅದನ್ನು ಕಳೆದುಕೊಳ್ಳಬೇಕು.  ಕಾಮ ಕ್ರೋಧವ ಸಾರಿಡಬೇಕು -  ಎಂದರೆ ದೂರವಿಡಬೇಕು.  ಮತ್ತೆ, ಭೋದತತ್ವವ ತಿಳಿಯಲಿಬೇಕು - ಭೋದತತ್ವ ವೆಂದರೆ ಮಧ್ವ ತತ್ವ ಅಥವಾ ಸಿದ್ಧಾಂತ. ಭೋಧ ಎಂದರೆ ಸಂಶಯವಿಲ್ಲದ ಸಂಪೂರ್ಣ ಜ್ಞಾನ. ಅಂಥ ಜ್ಞಾನ ಹೊಂದಿದ್ದ ಆಚಾರ್ಯ ಮಧ್ವರಿಗೆ ಪೂರ್ಣಬೋಧರೆಂದು ಹೆಸರು. ಅವರ ತತ್ವಕ್ಕೆ ಬೋಧತತ್ವವೆಂದು ಹೆಸರು. ತಮ್ಮ ಗುರುಗಳ ತತ್ವಬೋಧನೆಯನ್ನು ಅರ್ಥ ಮಾಡಿಕೊಂಡು ಅನುಸರಿಸಿ ಎಂದರು ವ್ಯಾಸ ತೀರ್ಥರು. 


ಗೀತೆಯ ಕೊನೆಯ ಚರಣದಲ್ಲಿರುವ  ಎರಡು ಪದಗಳು ಬಹಳ ಮಹತ್ವಉಳ್ಳದ್ದು. ಅವು, ಬಂದದ್ದುಂಡು  ಸುಖಪಡಬೇಕು - ನಮಗೆ ಅದುಬೇಕು, ಇದುಬೇಕು, ಎಲ್ಲವೂ ಬೇಕು. ಸರಿ. ಬೇಕೆನಿಸುವ  ಎಲ್ಲಕ್ಕೂ ಪ್ರಯತ್ನಪಡಬೇಕು. ಹೌದು. ಆದರೆ ಬೇಕೆಂದದ್ದು ಸಿಕ್ಕದಿದ್ದರೆ  ಸಿಕ್ಕಿದ್ದನ್ನು ಉಣ್ಣಬೇಕು. ಹೇಗೆ ? ಹಣೆಬರಹವನ್ನು ಬೈಯುತ್ತಾ, ಕೊಟ್ಟವನನ್ನು  ಶಪಿಸುತ್ತಾ ಉಣವುದಲ್ಲ. ಪಾಲಿಗೆ ಬಂದದ್ದು ಪಂಚಾಮೃತ. ಹರಿಪ್ರಸಾದ ವೆಂದು ಸ್ವೀಕರಿಸಿ, ಸುಖಪಡಬೇಕು ಅಂದರೆ ತೃಪ್ತಿಯಿಂದ ಇರಬೇಕು. ಇದನ್ನೇ ಕೃಷ್ಣ ಗೀತೆಯಲ್ಲಿ ಹೇಳಿದ್ದು. ಸುಖೇ ದುಃಖೇ ಸಮೇ ಕೃತ್ವಾ, ಲಾಭಾ ಲಾಭೌ, ಜಯಾ ಜಯೌ ಎಂದ ಕೃಷ್ಣ. ಅವನಿಗೆ ಹೇಳಲು ಸುಲಭ. ಸುಖ ದುಃಖ ಲಾಭ ನಷ್ಟ ಏನೂ ತಗುಲದವನು  ಅವನು.  ಅನುಭವಿಸುವ ನಮಗೆ ಗೊತ್ತು ಆವನ ಬೋಧನೆಯನ್ನು ಅನುಷ್ಠಾನಕ್ಕೆ ತರುವ ತಾಪತ್ರಯ. ಅಲ್ಲವೇ ?  ಇರಲಿಬಿಡಿ. ನಮ್ಮ ಒಳಿತಿಗೆಂದು ಆವನು ಹೇಳಿದ್ದು. ತಮ್ಮ ಅರಾಧ್ಯದೈವ ಹೇಳಿದ್ದನ್ನೇ ವ್ಯಾಸತೀರ್ಥರು ನಮಗೆ ಮತ್ತೆ ಹೇಳುತ್ತಿದ್ದಾರೆ. ತನ್ನ ಬೋಧನೆಯಂತೆ ನಡೆದುಕೊಳ್ಳಲು ಬೇಕಾದ  ಮನಸ್ಥಿರತೆಯನ್ನೂ, ಮನಸ್ಥಿತಿಯನ್ನೂ ಕೃಷ್ಣ ಪರಮಾತ್ಮ ನಮಗೆ ದಯಪಾಲಿಸಲೆಂದು ಕೋರುತ್ತಾ  ಇಂದಿನ ಮಾತು ಕೃಷ್ಣಾರ್ಪಣ ಎನ್ನುತ್ತೇನೆ. 

Friday, August 14, 2026

ಬುತ್ತಿಯ ಕಟ್ಟೋ, ಮನುಜ

 ಬುತ್ತಿಯ ಕಟ್ಟೋ, ಮನುಜ ,

ಬುತ್ತಿಯ ಕಟ್ಟೋ

ಬುತ್ತಿಯನು ಕಟ್ಟಿದರೆ

ಎತ್ತಲಾದರುಣ್ಣಬಹುದು  


ಧರ್ಮವೆಂಬ ಮಡಿಕೆಯಲ್ಲಿ

ನಿರ್ಮಲಮನಗಂಗೆ ತುಂಬಿ

ಸುಮ್ಮಾನದುರಿಯ ಹಚ್ಚಿ

ಒಮ್ಮನಕ್ಕಿ ಅನ್ನ ಬಾಗಿ


ಅರಿವು ಎಂಬ ಅರಿವೆ ಹಾಸಿ

ಹರಿವಿಹಾರ ಮೊಸರ ತಳಿದು

ಪರಮವೈರಾಗ್ಯದಿಂದ

ಸಿರಿಹರಿಗೆ ಅರ್ಪಿತವೆಂದು ||


ಕರ್ತೃ ಪುರಂದರವಿಠಲನ

ತತ್ವವೆಂಬ ಬುತ್ತಿಯನ್ನು

ಹತ್ತಿರ ತಂದಿಟ್ಟುಕೊಂಡು

ನಿತ್ಯ ಉಂಡು ತೃಪ್ತಿಪಡಿರೋ ||





ಬುತ್ತಿ ಎಂದರೆ ಪ್ರಯಾಣಕಾಲದ ಉಪಯೋಗಕ್ಕಾಗಿ ಕಟ್ಟಿದ ಆಹಾರದ ಗಂಟು ಮತ್ತು ಬಹಳಕಾಲದ ಸಂಗ್ರಹ ಎಂಬ ಎರಡೂ ಅರ್ಥಗಳುಂಟು. ಇದರಲ್ಲೊಂದನ್ನು ಮತ್ತೊಂದಕ್ಕೆ ರೂಪಕವಾಗಿಸಿ ಆಕರ್ಷಕವಾದ ಒಂದು ತತ್ವಬೋಧಕ ರಚನೆಯಾಗಿಸಿದ್ದಾರೆ ಶ್ರೀ ಪುರಂದರದಾಸರು. ನಮ್ಮ ಇಂದಿನ ಕೊಡುಗೆ, ಬುತ್ತಿಯ ಕಟ್ಟೋ, ಮನುಜ , ಬುತ್ತಿಯ ಕಟ್ಟೋ. 


ಗೀತೆಯ ಪಲ್ಲವಿ ಹೇಳುತ್ತದೆ, ‘ಬುತ್ತಿಯ ಕಟ್ಟೋ ಮನುಜಾ, ಬುತ್ತಿಯನ್ನು ಕಟ್ಟಿದರೆ ಎತ್ತಲಾದಾರುಣ್ಣಬಹುದು’  - ಪ್ರಯಾಣಕಾಲದಲ್ಲಿ ಆಹಾರದ ಗಂಟೊಂದು ಜತೆಯಲ್ಲಿದ್ದರೆ ಎಲ್ಲಿ ಯಾವಾಗ ಹಸಿವಾದರೂ ಅಲ್ಲಿ ಅದು ಉಪಯೋಗಕ್ಕೆ ಬಂದೀತು. ಅತ್ತಿತ್ತ ಅಂಗಡಿ, ಹೋಟಲು ಹುಡುಕಬೇಕಿಲ್ಲ. ಹಾಗೆಯೇ ತಾವು  ಸೂಚಿಸುತ್ತಿರುವ ಬುತ್ತಿ ಕಟ್ಟಿಟ್ಟಿದ್ದರೆ  - ಒಂದು ಜನ್ಮದಲ್ಲಿನ  ಜನನ ಮರಣಗಳ ನಡುವಿನ ಪ್ರಯಾಣದಲ್ಲಿ  ಅಷ್ಟೇ ಅಲ್ಲದೆ, ನಾವೆಲ್ಲರೂ ನಿರಂತರವಾಗಿ ನಡೆಸುತ್ತಿರುವ ಜೀವಚಕ್ರದ ಅಸಂಖ್ಯಾತ  ಜನ್ಮಗಳ ಪ್ರಯಾಣದಲ್ಲಿ ಕೂಡ ಎಲ್ಲಿಯಾದರೂ ಉಪಯೋಗಕ್ಕೆ ಬಂದೇ ಬರುತ್ತದೆಂದು ತಿಳಿಸುತ್ತಿದ್ದಾರೆ ದಾಸರು. ಆ ಬುತ್ತಿ ಏನು, ಹೇಗೆ ಎಂಬುದನ್ನು ಮುಂದಿನ ಚರಣಗಳಲ್ಲಿ ವಿಶದಪಡಿಸುತ್ತಾರೆ. 


ಧರ್ಮವೆಂಬ ಮಡಿಕೆಯಲ್ಲಿ, ನಿರ್ಮಲಮನಗಂಗೆ ತುಂಬಿ, ಸುಮ್ಮಾನದುರಿಯ ಹಚ್ಚಿ, ಒಮ್ಮನಕ್ಕಿ ಅನ್ನ ಬಾಗಿ, ಅರಿವು ಎಂಬ ಅರಿವೆ ಹಾಸಿ, ಹರಿವಿಹಾರ ಮೊಸರ ತಳಿದು

ಪರಮವೈರಾಗ್ಯದಿಂದ, ಸಿರಿಹರಿಗೆ ಅರ್ಪಿತವೆಂದು - ಬುತ್ತಿಯಕಟ್ಟೋ ಮನುಜ.  ಮಡಿಕೆ ಎನ್ನುವುದು ಈ ದೇಹ, ದಾಸರು ಹೇಳಿದ್ದು ಧರ್ಮವೆಂಬ ಮಡಿಕೆ. ಅಂದರೆ ಧರ್ಮಕ್ಕೆ ಅನುಸಾರವಾಗಿ ನಡೆದುಕೊಳ್ಳುವ ದೇಹದಲ್ಲಿ, ನಿರ್ಮಲವಾದ, ಕಶ್ಮಲವಿಲ್ಲದ ಮನಸ್ಸು ಎಂಬ ಗಂಗೆ, ಅಂದರೆ ನೀರನ್ನು ತುಂಬಿ, ಸುಮ್ಮಾನದ ಉರಿಯ ಹಚ್ಚಿ, -  ಮಾನ ಎಂದರೆ ಅಹಂಕಾರ. ಆ  ಸುಮ್ಮಾನವೆಂಬ ಅಹಂಕಾರವನ್ನು ಉರುವಲಾಗಿ ಉರಿಸಿ ಭಸ್ಮಮಾಡಿ,  ಒಮ್ಮನವೆಂಬ ಅಕ್ಕಿ, ಎಂದರೆ ಸ್ಥಿರಗೊಂಡಿರುವ, ಅತ್ತಿತ್ತ ಅಲುಗದ,  ಒಂದೇ ಮನವೆಂಬ ಅಕ್ಕಿಯನ್ನು ಬೇಯಿಸಿ. ಆಯಿತೇ ? ಈಗ ಅಡಿಗೆ ಹೇಳಿಕೊಡುವ ವಿಡಿಯೋಗಳಲ್ಲಿ ಹೇಳುತ್ತಾರಲ್ಲಾ ಹಾಗೆ ಈ ಪಕ್ವವಾದ  ಮನವೆಂಬ ಅನ್ನವನ್ನು ಒಂದು ಪಕ್ಕಕ್ಕಿಡಿ. 


ಇದೀಗ ತಿಳಿಸಿದ, ಅನ್ನ ಬೇಯಿಸುವ ಸಮಯದಲ್ಲಿ ಗಳಿಸಿದ ಅರಿವು ಅಥವಾ ಜ್ಞಾನವೇನಿದೆ ಆ ಜ್ಞಾನವೆಂಬ  ಅರಿವೆಯನ್ನು ಹಾಸಿ,  ಪಕ್ಕಕ್ಕಿಟ್ಟಿದ್ದ ಪಕ್ವವಾದ  ಮನವೆಂಬ ಆನ್ನವನ್ನು ಈಗ  ‘ಹರಿವಿಹಾರ’ ಎಂದರೆ ಹರಿಚಿಂತನೆ ಎಂಬ ಮೊಸರಿನೊಡನೆ ಸೇರಿಸಿ ಕಲಸಿ ಕಟ್ಟಿ.  ಈಗ ಈ ಬುತ್ತಿಯನ್ನು ಇದು ಯಾವುದೂ  ನಾನು ಮಾಡಿದ್ದಲ್ಲ, ನನ್ನಿಂದ ಮಾಡಿಸಿದವ ನೀನು ಎಂಬ ವೈರಾಗ್ಯಭಾವದಿಂದ ಶ್ರೀ  ಹರಿಗೆ ಅರ್ಪಣೆ ಮಾಡಿ, ಆ ಹರಿತತ್ವ ವೆಂಬ ಪ್ರಸಾದದ ಬುತ್ತಿಯನ್ನು   ಹತ್ತಿರವಿಟ್ಟುಕೊಂಡು, ನಿತ್ಯ ಉಂಡು, ತೃಪ್ತಿಪಡೆಯಿರೋ ಎಂದರು ದಾಸರು. 


ಈ ಹರಿತತ್ವ ವೆಂಬ ಬುತ್ತಿ ಇದೆಯಲ್ಲಾ ಅದು , ಈ ಜನ್ಮಕ್ಕಷ್ಟೇ ಅಲ್ಲ, ಮುಂದೆಬರುವ ಜನ್ಮ ಜನ್ಮಗಳಲ್ಲೂ ಉಪಯೋಗವಾಗಬಹುದು.    ಗೀತೋಪದೇಶದ ಸಮಯದಲ್ಲಿ ಅರ್ಜುನನಿಗೆ ಒಂದು ಅನುಮಾನಬಂತು ಅವನು ಕೃಷ್ಣನನ್ನು ಕೇಳಿದ, ನಿನ್ನನ್ನು ತಿಳಿಯಲು ಪ್ರಯತ್ನಪಡುತ್ತಿರುವನೊಬ್ಬ ಯಾವುದೇ ಕಾರಣದಿಂದ ಅರ್ಧದಲ್ಲಿ ಅದನ್ನು ಕೈಬಿಟ್ಟರೆ ಅವನು ಅದುವರೆಗೆ  ಮಾಡಿದ್ದೆಲ್ಲಾ ವ್ಯರ್ಥವಲ್ಲವೇ ? ಅದಕ್ಕೆ ಕೃಷ್ಣನ ಉತ್ತರ ಆರನೇ ಅಧ್ಯಾಯದ ೪೦ ರಿಂದ ೪೫ ರ ವರೆಗಿನ ಶ್ಲೋಕಗಳು. ಅಂಥ ಯೋಗಿಗೆ, ಅವನು ಗಳಿಸಿದ ಜ್ಞಾನಕ್ಕೆ, ನಾಶವಿಲ್ಲ. ಒಂದು ಜನ್ಮದಲ್ಲಿ  ಜ್ಞಾನದ ಗಳಿಕೆ ಎಲ್ಲಿಗೆ ಕೊನೆಯಾಗಿತ್ತೋ ಅಲ್ಲಿಂದ ಮುಂದಕ್ಕೆ ಮುಂದಿನ ಜನ್ಮಗಳಲ್ಲಿ  ಜ್ಞಾನ ಸಂಪಾದನೆ ಪ್ರಾರಂಭ.  ಆದ್ದರಿದಲೇ ದಾಸರೆಂದರು ‘ಕರ್ತೃ ಪುರಂದರ ವಿಠಲನ ತತ್ವ’ ವೆಂಬ ಬುತ್ತಿಯ ಕಟ್ಟೋ ಮನುಜ, ಒಂದುವೇಳೆ ಯಾವುದೇ ಕಾರಣದಿಂದ ಸಧ್ಯದ ಜನ್ಮದಲ್ಲಿ ಅದರ ಉಪಯೋಗ ಆಗದಿದ್ದರೂ ಮುಂದೆ  ‘ಎತ್ತಲಾದರೂ ಉಣ್ಣಬಹುದು’. ಯಾವ ಜನ್ಮದಲ್ಲಾದರೂ ಉಪಯೋಗಕ್ಕೆ ಬಂದೀತು. 


ಪದಸಂಯೋಜನೆಯಲ್ಲಿ ಸರಳವಾದ, ಆದರೆ ಬಹಳ ಗಹನವಾದ ರಚನೆ.  ಒಮ್ಮೆಗೇ ಗ್ರಹಿಸಲು ಕೊಂಚ ಕಷ್ಟವಾಗಬಹುದು.  ಆದರೆ ದಾಸರ ಸಲಹೆಯಂತೆ ಈ ಬುತ್ತಿಯನ್ನು ಪಕ್ಕದಲ್ಲಿಟ್ಟುಕೊಂಡು ಆಗಾಗ ಮೆಲುಕುಹಾಕುತ್ತಿದ್ದರೆ ಸಾರ ಮನಸ್ಸಿಗೆ ತಟ್ಟುತ್ತದೆಂದು  ತಿಳಿಸುತ್ತಾ ಇಂದಿನ ಮಾತು ಕೃಷ್ಣಾರ್ಪಣ ಮಾಡುತ್ತೇನೆ.


Saturday, August 8, 2026

ಬೂಚಿ ಬಂದಿದೆ

 ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ

ಚಾಚಿ ಕುಡಿದು ಸುಮ್ಮ ನೆ ನೀ ಪಾಚಿಕೊಳ್ಳೊ ಕೃಷ್ಣ ಯ್ಯ  


ನಾಕುಮುಖದ ಬೂಚಿಯೊಂದು ಗೋಕುಲಕ್ಕೆ ಓಡಿ ಬಂದು

ತೋಕರನ್ನು ಎಳೆದುಕೊಂಡು  ಕಾಕು ಮಾಡಿ ಒಯ್ಯುವುದಕೆ 

ಮೂರು ಕಣ್ಣ  ಬೂಚಿಯೊಂದು ಊರು ಊರು ಸುತ್ತಿ ಬಂದು 

ದ್ವಾರದಲ್ಲಿ ನಿಂತಿದೆ ನೋಡೊ ಪೋರರನ್ನು  ಒಯ್ಯು ವುದಕೆ  


ಅಂಗವೆಲ್ಲ ಕಂಗಳುಳ್ಳ ಶೃಂಗಾರ ಮುಖದ ಬೂಚಿ 

ಬಂಗಾರದಂಥ ಮಕ್ಕಳನ್ನ ಕಂಗೆಡಿಸಿ ಒಯ್ಯುವುದಕೆ  

ಮರದ ಮೇಲೆ ಇರುವುದೊಂದು ಕರಿ ಕರಾಳ ಮುಖದ ಬೂಚಿ 

ತರಳರನ್ನು ಎಳೆದುಕೊೊಂಡು ಪುರಂದರ ವಿಠಲಗೊಪ್ಪಿಸಲಿಕೆ



ಸಕಲಲೋಕಗಳ  ಸ್ವಾಮಿಯ ಸಾವಿರನಾಮಗಳಲ್ಲಿ ಎರಡು,  ಭಯಕೃತ್ ಮತ್ತು ಭಯನಾಶನ. ಭಯವನ್ನುಂಟು ಮಾಡುವವನು, ಭಯವನ್ನು ನಾಶಮಾಡುವವನು ಎಂಬ ವಿರುದ್ಧಾರ್ಥದ ನಾಮಗಳು. ತನ್ನ ವೈರಿಗಳಲ್ಲಿ, ದುರುಳರಲ್ಲಿ ಭಯವನ್ನುಂಟುಮಾಡುವವನು ಹಾಗೂ ತನ್ನ ಭಕ್ತರು ಮತ್ತು ಸಜ್ಜನರ ಸಂಸಾರಭಯವನ್ನು ನಾಶಮಾಡುವವನು ಎಂದು ಈ ನಾಮಗಳ ಅರ್ಥ. ಆ ರೀತಿ ಭಯಹುಟ್ಟಿಸುವ, ಭಯನಿವಾರಕನಾದ ಭಗವಂತನನ್ನೇ, ‘ಬೂಚಿ’ ಬಂದು ನಿನ್ನನ್ನು ಕೊಂಡೊಯ್ಯುತ್ತದೆಂದು ಹೆದರಿಸಿ ಮಲಗಿಸಲು ಪ್ರಯತ್ನಪಡುತ್ತಾಳೆ ತಾಯಿ ಯೆಶೋದೆ.


ಶಿಶುಗೀತೆ ಅಥವಾ ಜೋಗುಳ ಎನ್ನಬಹುದಾದ   ಈ ‘ಬೂಚಿಬಂದಿದೆ’ ಗೀತೆ, ಸುಂದರವಾದ  ಕಲ್ಪನೆ ಮತ್ತು ತತ್ವಗಳನ್ನು ಒಳಗೊಂಡಿರುವ ಪದ. ಬೂಚಿ ಬಂದಿದೆ ರಂಗ, ಚಾಚಿ ಕುಡಿದು, ಪಾಚಿಕೊಳ್ಳೊ ಎನ್ನುತ್ತದೆ ಪಲ್ಲವಿ. ಬೂಚಿ, ಚಾಚಿ, ಪಾಚಿ ಎಲ್ಲವೂ ಬಾಲಭಾಷೆಯ ಪದಗಳು. ಬೂಚಿ ಎಂದರೆ  ಕಚ್ಚಿ, ಚುಚ್ಚಿ ತೊಂದರೆ ಮಾಡುವ ಒಂದು ಕೀಟ ಅಥವಾ ಸಣ್ಣ ಕಾಲ್ಪನಿಕ ಪ್ರಾಣಿ. ಚಾಚಿ ಎಂದರೆ ಮೊಲೆಹಾಲು, ಪಾಚಿ ಎನ್ನುವುದು ನಿದ್ದೆ. ರಗಳೆ ಮಾಡುತ್ತಿದ್ದ ಕೃಷ್ಣನನ್ನು ‘ಬೂಚಿಬಂದು ನಿನ್ನನ್ನು ಕೊಂಡೊಯ್ಯುತ್ತದೆ’ ಎಂದು ಹೆದರಿಸಿ ಹಾಲು ಕುಡಿಸಿ ಮಲಗಿಸುವ ಪ್ರಯತ್ನ ಮಾಡುತ್ತಿದ್ದಾಳೆ ತಾಯಿ. 


ಆದರೆ ಕೃಷ್ಣನನ್ನು ಹೊತ್ತೊಯ್ಯಲು ಬಂದಿರುವ ಬೂಚಿಗಳು ಯಾರು? ಮೊದಲ ಎರಡು ಚರಣಗಳಲ್ಲಿ, ‘ತೋಕರನ್ನು’ ಎಂದರೆ ಸಣ್ಣ ಮಾಕ್ಕಳನ್ನು ‘ಕಾಕುಮಾಡಿ’ ಎಂದರೆ ಮೋಸಮಾಡಿ   ಒಯ್ಯಲು ಗೋಕುಲಕ್ಕೆ ಬಂದಿರುವ ನಾಕುಮುಖದಬೂಚಿ, ಚತುರ್ಮುಖ ಬ್ರಹ್ಮ. ಮತ್ತು ಪೋರರನ್ನು ಒಯ್ಯಲೆಂದು ದ್ವಾರದಲ್ಲಿ ಬಂದು ನಿಂತಿರುವ ಮೂರುಕಣ್ಣಿನ ಬೂಚಿ, ಮುಕ್ಕಣ್ಣ ಶಿವ. 


ಮುಂದಿನ ಎರಡು ಚರಣಗಳಲ್ಲಿರುವ  ‘ಅಂಗವೆಲ್ಲ ಕಂಗಳುಳ್ಳ’ ಬೂಚಿ ದೇವೇಂದ್ರ. ಅಹಲ್ಯೆಯ ಶೀಲಾಪಹರಣ ಮಾಡಿದ ಇಂದ್ರನಿಗೆ ದೇಹದಲ್ಲಿ ಸಾವಿರ ಯೋನಿಗಳಾಗಲಿ ಎಂದು ಗೌತಮ ಮುನಿ ಶಾಪವಿತ್ತನಂತೆ.  ಇಂದ್ರ ಕ್ಷಮೆಯಾಚಿಸಿ, ಪಶ್ಚಾತ್ತಾಪ ಪಟ್ಟನಂತರ ಸಾವಿರ ಯೋನಿಗಳು ಸಾವಿರ ಕಣ್ಣುಗಳಾದವಂತೆ. ಅದ್ದರಿಂದ ಇಂದ್ರನನ್ನು  ‘ಅಂಗವೆಲ್ಲ ಕಂಗಳುಳ್ಳ ಶೃಂಗಾರ ಮುಖದ ಬೂಚಿ’ ಎಂದರು ದಾಸರು. ಇನ್ನು ಮರದ ಮೇಲೆ ಕುಳಿತಿರುವ ಕರಿ ಕರಾಳಮುಖದ ಬೂಚಿ ಹನುಮಂತನೆಂದು ಬೇರೆ ಹೇಳಬೇಕೇ ?  


ಈ ಪದದ ಹಿಂದಿರುವ ದಾಸರ ಕಲ್ಪನೆ  ಏನೆಂದರೆ, ತಮ್ಮ ಸ್ವಾಮಿ, ಶ್ರೀ ಹರಿ ನಾರಾಯಣ, ಕೃಷ್ಣನ ಅವತಾರತಳೆದು ಭೂಲೋಕಕ್ಕೆ ಹೋದನೆಂದು ಅವನ ಪರಿವಾರ ದೇವತೆಗಳಾದ ಬ್ರಹ್ಮ, ಶಿವ, ರುದ್ರ, ಇಂದ್ರರಿಗೆ ಬಹಳ ಕಳವಳವಾಯಿತಂತೆ. ಆದ್ದರಿಂದ ಅವರೆಲ್ಲಾ ಅವನನ್ನು ಮತ್ತೆ ಕರೆದೊಯ್ಯಲು ಗೋಕುಲಕ್ಕೆ ಬಂದರಂತೆ. ಅವರು ಬಂದದ್ದನ್ನು ಯೆಶೋದೆ ಕೃಷ್ಣನಿಗೆ ಜೋಗುಳದ ರೂಪದಲ್ಲಿ ತಿಳಿಸುತ್ತಿದ್ದಾಳೆ ! 


ಆದರೆ ಕೊನೆಯಲ್ಲಿ ಕಾಣುವ ಮರದ ಮೇಲಿನ  ‘ಕರಿ ಕರಾಳಮುಖದ ಬೂಚಿ’, ಬಂದದ್ದು ತರಳರನ್ನು ಎಳೆದುಕೊಂಡು ಹೋಗಿ ಪುರಂದರ ವಿಠಲನಿಗೆ ಒಪ್ಪಿಸಲಿಕ್ಕೆ. ನಮ್ಮ ತತ್ವದ ಪ್ರಕಾರ, ಯಾರಿಗೇ ಆಗಲಿ ನೇರವಾಗಿ ಪುರಂದರ ವಿಠಲನನ್ನು ಕಾಣುವ ಅವಕಾಶವಿಲ್ಲ. ಪ್ರಾಣದೇವರು ಅಥವಾ ಹನುಮಂತ ಅವರನ್ನು ತನ್ನ ಜತೆಯಲ್ಲಿ ಕರೆದೊಯ್ದರೆ ಮಾತ್ರ ಪರಮಾತ್ಮನ ಭೇಟಿ ಸಾಧ್ಯ!  ಗೀತೆಯ ಕೊನೆಯಲ್ಲಿ ಅದನ್ನು ಸೂಚ್ಯವಾಗಿ ಹೇಳಿ, ತರಳರೆಲ್ಲರು, ಅಂದರೆ ಮಕ್ಕಳೆಲ್ಲರೂ, ಮಕ್ಕಳು ಎನ್ನುವಾಗ ಇಲ್ಲಿ ಸಮಸ್ತ ಜೀವರು ಭಗವಂತನ ಮಕ್ಕಳೆಂಬ ಭಾವ.  ಆದ್ದರಿಂದ ಆ ತರಳರೆಲ್ಲರೂ ಅಂದರೆ ಸಮಸ್ತ ಜೀವರು  ಕರಾಳಮುಖದ ಬೂಚಿ ಮುಖ್ಯಪ್ರಾಣ ಬಂದು ತಮ್ಮನ್ನು ಭಗವಂತನ ಬಳಿಗೆ ಕರೆದೊಯ್ಯುವಂಥ ಯೋಗ್ಯಜೀವನ ನಡೆಸಬೇಕೆಂಬ ಬುದ್ಧಿಮಾತಿನೊಂದಿಗೆ ಪದ್ಯವನ್ನು ದಾಸರು ಕೊನೆಗಾಣಿಸಿದ್ದಾರೆಂದು ತಿಳಿಸುತ್ತಾ ಇಂದಿನ ನಾಲ್ಕು ಮಾತನ್ನು ಕೃಷ್ಣಾರ್ಪಣ ಮಾಡುತ್ತೇನೆ.