Saturday, July 25, 2026

ಬ್ರಹ್ಮಾನಂದದ ಸಭೆಯೊಳಗಲ್ಲಿ

 ಬ್ರಹ್ಮಾನಂದದ ಸಭೆಯೊಳಗಲ್ಲಿ  

ಸುಮ್ಮನೆ ಇರುತಿಹುದೇನಯ್ಯಾ  


ಮೂಡದು ಉಣ್ಣದು ಕೂಡದು ಮಾಣದು 

ಕಾಡದು ಬೇಡದು ಕಂಗೆಡದು 

ನಾಡ ಮಾತುಗಳ ಬಲ್ಲುದು ಆಡದು 

ರೂಢಿಯೊಳಿರುತಿಹದೇನಯ್ಯಾ 


ಪೊಡವಿಗೆ ಅಧಿಕವೆಂಬುವರಿಗೆ ಬಲ್ಲುದು 

ಕಡೆಮೊದಲಿಲ್ಲದ ಒಡಲಿಹುದು 

ಬೆಡಗನ್ ಅರಿವೆನೆಂಬವರಿಗಗೋಚರ  

ಪೊಡವಿಯ ಒಳಗಣ ಭಕ್ತರ ಬಲ್ಲುದು 


ನಿಲ್ಲುದು ನಿಲುಕದು ಎಲ್ಲಿಗೆ ಪೋಗದು 

ಬಲ್ಲೆನೆಂಬವರಿಗಅಳವಡದು 

ಬಲ್ಲಿದ ನಮ್ಮ ಪುರಂದರವಿಠಲ 

ಗಲ್ಲದೆ ತಿಳಿಯದು ಜಗದೊಳಗೆ 


ನಮ್ಮ ಜೀವನ, ರೀತಿ ನೀತಿಗಳು, ಸಂಸಾರ ತಾಪತ್ರಯಗಳು ,ನಂಬಿಕೆಗಳು, ವ್ಯಾಪಾರ, ವ್ಯವಹಾರ  ಎಲ್ಲವೂ ದಾಸರ ರಚನೆಗಳಿಗೆ ವಸ್ತುಗಳೇ. ಜನರ ಮನಸ್ಸಿಗೆ ತಗಲುವ ವಿಷಯಗಳ ಮೂಲಕ ತಲೆಗೆ ಸುಲಭವಾಗಿ ಎಟುಕದ ತತ್ವ ಗಳನ್ನು  ಬೋಧಿಸುವುದು ದಾಸರ ತಂತ್ರ. ಅದೇಕೋ ದಾಸರ ಚಿತ್ತ ಒಮ್ಮೆ ಸಂಸಾರಿಗಳನ್ನು ದಾಟಿ ಮೋಕ್ಷಪಡೆದವರತ್ತ ತಿರುಗಿತು. ಭವಸಾಗರದಲ್ಲಿ ಮುಳುಗೇಳುತ್ತಿರುವವರಿಗೆ ಭಗವಂತ ಬೇಕು. ಆದರೆ ಬ್ರಹ್ಮಾನಂದ ಪಡೆದವರೊಡನೆ ಅವನ ವ್ಯವಹಾರ ಹೇಗೆ ? ಇದು ದಾಸರ ಚಿಂತನೆ. ಕೇಳಿ, ಗೀತೆ ‘ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯ’   


ನೀವು ಕೇಳಿದ ಗೀತೆಯ ರಾಗ ಕೇದಾರ, ಆದಿತಾಳ. ಬ್ರಹ್ಮಾನಂದ, ಸಾಕ್ಷಾತ್ಕಾರ, ಮುಕ್ತಿ, ಮೋಕ್ಷ ಮೊದಲಾದ ಶಬ್ದಗಳೆಲ್ಲ ಸೂಚಿಸುವುದು ಒಂದೆ ಸ್ಥಿತಿಯನ್ನು. ಬ್ರಹ್ಮಾನಂದದ ಸಭೆ ಎಂದರೆ ಮೋಕ್ಷಪಡೆದ ಜೀವರ ಸಭೆ. ನಾವು ನೀವು ಒಂದರ ಹಿಂದೆ ಒಂದು ಬರುತ್ತಿರುವ ನಮ್ಮ ಜನ್ಮಗಳಲ್ಲಿ, ಅಂದರೆ  ಪುನರಪಿ ಜನನಂ ಪುನರಪಿ ಮರಣಂ -  ಚಕ್ರದಲ್ಲಿ,  ಪುರುಷಾರ್ಥಗಳಾದ ಧರ್ಮ ಅರ್ಥ ಕಾಮ ಮೋಕ್ಷಗಳನ್ನು ಗಳಿಸಲು ನಿರಂತರವಾಗಿ  ಪರದಾಡುತ್ತಿರುವವರು. ನಮ್ಮ ಈ ಕೆಲಸಕ್ಕೆ  ಅನುವುಮಾಡಿಕೊಡುವುದು ಪರಮಾತ್ಮನ ಕೆಲಸ. ಹಾಗಾಗಿ ನಾವು ಸುಮ್ಮನೆ ಇರುವಂತಿಲ್ಲ, ಜತೆಗೆ ಅವನೂ ಸುಮ್ಮನೆ ಇರುವಂತಿಲ್ಲ. ಆದರೆ ಮುಕ್ತಿ ಜೀವರು ಪುರುಷಾರ್ಥಗಳಲ್ಲಿ ಕೊನೆಯದಾದ ಮೋಕ್ಷವನ್ನೂ ಗಳಿಸಿ ಕುಳಿತಿರುವವರು. ಅವರಿಗೆ ಮತ್ತೇನೂ ಕೆಲಸವಿಲ್ಲ ಮತ್ತೆ ಜನ್ಮವೂ ಇಲ್ಲ. ಅಂಥವರೊಡನೆ  ಇರುವಾಗ ಪರಮಾತ್ಮನಿಗೂ ಏನೂ ಕೆಲಸವಿಲ್ಲ. ಎಲ್ಲರಿಗೂ ವಿಶ್ರಾಂತಿ ! ಆದ್ದರಿಂದಲೇ ‘ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ ಇರುತಿಹುದೇನಯ್ಯಾ?’ ಎಂದು ಇಬ್ಬರನ್ನೂ ಉದ್ದೇಶಿಸಿ  ಗೀತೆ ಪ್ರಾರಂಭಿಸಿದರು ಪುರಂದರ ದಾಸರು. 


ಮುಂದಿನ ಚರಣ ಈ ಬ್ರಹ್ಮಾನಂದದ ಸಭೆಯಲ್ಲಿನ ಆಗು ಹೋಗುಗಳನ್ನು ಬಣ್ಣಿಸುತ್ತದೆ. ಮೂಡದು ಉಣ್ಣದು ಕೂಡದು ಮಾಣದು ಕಾಡದು ಬೇಡದು ಕಂಗೆಡದು 

ನಾಡ ಮಾತುಗಳ ಬಲ್ಲುದು ಆಡದು ರೂಢಿಯೊಳಿರುತಿಹದೇನಯ್ಯಾ. ಈ ಸಾಲುಗಳು  ಭಗವಂತನಿಗೂ ಅನ್ವಯಿಸುತ್ತವೆ, ಮುಕ್ತಿಪಡೆದವರಿಗೂ ಅನ್ವಯಿಸುತ್ತವೆ. ಇಬ್ಬರಿಗೂ ಏನೂ ಕೆಲಸವಿಲ್ಲ ಅಂದೆನಲ್ಲಾ  ಅಷ್ಟೇ ಅಲ್ಲ ಊಟವೂ ಇಲ್ಲ. ‘ಉಣ್ಣದು’ ಎನ್ನುತ್ತಾರೆ ದಾಸರು. ತತೋ ವಿಶ್ವಙ ವ್ಯಕ್ರಾಮತ್ಸಾಶನಾನಶನೇ ಅಭಿ ಎನ್ನುತ್ತದೆ ಪುರುಷಸೂಕ್ತ. ವಿಶ್ವದ ಎಲ್ಲರಿಗೂ ಅವನು ಸ್ವಾಮೀ. ಆಶನ ಎಂದರೆ ಉಣ್ಣುವವರು, ಅನಾಶನ ಎಂದರೆ  ಉಣ್ಣದಿರುವವರು, ಇಬ್ಬರಿಗೂ. ಉಣ್ಣುವವರು ನಾವು, ಉಣ್ಣದಿರುವವರು ಮೋಕ್ಷಜೀವಿಗಳು. ನಾವು ತಿನ್ನಬೇಕು. ಆದ್ದರಿಂದ ಭಗವಂತನಿಗೆ  ನೈವೇದ್ಯಮಾಡಿ ತಿನ್ನುತ್ತೇವೆ. ಮೋಕ್ಷಪಡೆದವರು ತಾವು ತಿನ್ನುವುದಿಲ್ಲ, ಭಗವಂತನಿಗೂ ನೈವೇದ್ಯವಿಲ್ಲ. ಯಾರೋ ರಾಜಕಾರಣಿಗಳು ‘ನ ಖಾವುಂಗ ನ ಖಾನೆ ದುಂಗಾ’ ಎಂದರಲ್ಲವೇ ? ಹಾಗೆ.  ಜತೆಗೆ ‘ನಾಡಮಾತುಗಳ ಬಲ್ಲುದು ಆಡದು’. ನಾಡಮಾತುಗಳೆಂದರೆ ವೃಥಾ ಕಾಲಹರಣಕ್ಕೋಸ್ಕರ ಹರಟೆ. ಎಲ್ಲ ಸಭೆಗಳಲ್ಲೂ ಅದು ಸಾಮಾನ್ಯ ಆದರೆ ಈ ಬ್ರಹ್ಮಾನಂದದ ಸಭೆಯಲ್ಲಿ ಅದೂ ಇಲ್ಲ. ಸದಾ ಭಗವಂತನ  ಗುಣಗಾನವನ್ನು ಮಾಡುತ್ತಿರುವುದು ಮೋಕ್ಷಪಡೆದವರ ಕೆಲಸ, ಅದನ್ನು ಕೇಳುತ್ತಾ ತನ್ನ ಕಂಠದಿಂದ ಸದಾ ವೇದವಾಕ್ಯಗಳನ್ನು  ಹೊರಹಾಕುತ್ತಿರುವುದು ಭಗವಂತನ ಕೆಲಸ. ಇಲ್ಲಿ ಬೇರೆ  ಹರಟೆಗೆ ಅವಕಾಶವಿಲ್ಲ  ! 


ಎರಡನೇ ಚರಣದಲ್ಲಿ ಬರುವ ‘ಪೊಡವಿಗೆ ಅಧಿಕವೆಂಬವರಿಗೆ ಬಲ್ಲುದು’ ಎಂದರೆ -  ಆ ಪರವಸ್ತು ಈ ಭೂಮಿಯ ರೀತಿ ನೀತಿ ಕ್ರಮ ನಿಯಮಗಳನ್ನು ಮೀರಿದ್ದು - ಪೊಡವಿಗೆ ಅಧಿಕ - ಎಂದು ಅರಿತವರಿಗೆ ಅದು ತನ್ನನ್ನು ತಾನು ಕೊಂಚ ತಿಳಿಸಿಕೊಡುತ್ತದೆ. ಆದರೆ  ಅದರ ಆಟ ತಿಳಿದಿದ್ದೇವೆ ಎನ್ನುವರಿಗೆ ಅದು ಎಂದೂ ಕಾಣಿಸಿಕೊಳ್ಳುವುದಲ್ಲ. ‘ಬೆಡಗನರಿವೆ ವೆಂಬವರಿ ಗಗೋಚರ’.  ಮತ್ತೆ ಆ ಪರವಸ್ತು, ಪ್ರಳಯಕಾಲದಲ್ಲಿ ಇಡೀ ಜಗತ್ತನ್ನೇ ನುಂಗುವುದು.  ಆದ್ದರಿಂದ  ‘ಕೊನೆ ಮೊದಲಿಲ್ಲದ ಒಡಲಿಹುದು’ ಅಂದರೆ ಇತಿ ಮಿತಿಯಿಲ್ಲದ ಹೊಟ್ಟೆ ಯನ್ನು ಹೊಂದಿರುವುದು. ಕೊನೆಗೆ  ‘ಪೊಡವಿಯೊಳಗಣ ಭಕ್ತರ ಬಲ್ಲುದು’.  ಈ ಭೂಮಿಯಲ್ಲಿ ತನ್ನ ಭಕ್ತರನ್ನು ಗುರುತಿಸಿ ಅವರ ಸಾಧನೆಗೆ ಅನುವುಮಾಡಿಕೊಡುವುದು.  


ಕೊನೆಯ ಚರಣ ‘ನಿಲ್ಲದು, ನಿಲುಕದು, ಎಲ್ಲಿಗು ಪೋಗದು, ಬಲ್ಲೆನೆಂಬವರಿಗಳವಡದು’. ಸರ್ವವ್ಯಾಪಿಯಾದ್ದರಿಂದ ಎಲ್ಲಿಗಾದರೂ  ಹೋಗಬೇಕಾದ  ಅವಶ್ಯಕತೆಯೇ ಅದಕ್ಕಿಲ್ಲ. ಅದು ಅಲುಗಾಡುವುದೇ ಇಲ್ಲವಾದ್ದರಿಂದ ಅದು  ನಿಲ್ಲಬೇಕಾದ್ದೂ ಇಲ್ಲ! ಇದು ಪರಸ್ಪರ ವಿರುದ್ಧಾರ್ಥದ ಪದಗಳಿಂದ ಪರಮಾತ್ಮನನ್ನು ವರ್ಣಿಸುವ ಒಂದು ರೀತಿ. ಅಲ್ಲಿಂದ ಮುಂದೆ  ‘ಬಲ್ಲೆನೆಂಬವರಿಗೆ ಅಳವಡದು’  ಅಂದರೆ, ಆ ಪರಮಾತ್ಮ ಅಥವಾ ಪರವಸ್ತುವಿನ ಬಗ್ಗೆ  ‘ಸ್ವಲ್ಪ ತಿಳಿಯಿತು ’  ಎಂದುಕೊಂಡವರ  ಕೈಗೆ  ಅದು ಎಟುಕದು. ಅದರ ಬಗ್ಗೆ ತಿಳಿದುಕೊಂಡಷ್ಟೂ ಮುಂದೆ ಕಾಣುವುದು ಮತ್ತಷ್ಟು ಪ್ರಶ್ನೆಗಳೇ  ಹೊರತು, ಸ್ಪಷ್ಟ ಚಿತ್ರವಲ್ಲ.  ಆದ್ದರಿಂದ ಬಲ್ಲೆನೆಂಬವರಿಗಳವಡದು.  ಕೊನೆಗೆ ಬಲ್ಲಿದ ನಮ್ಮಯ ಪುರಂದರ ವಿಠಲ ಗಲ್ಲದೆ ತಿಳಿಯದು ಜಗದೊಳಗೆ’ ಎಂದು ತಮ್ಮ ರಚನೆಯನ್ನು ಮುಗಿಸುತ್ತಾರೆ ದಾಸರು. ಅಂದರೆ, ಈ ಜಗತ್ತಿನಲ್ಲಿ ಅದನ್ನು ಬಲ್ಲೆನೆಂಬುವರಿದ್ದರೆ ಅದು ಆ ಪುರಂದರ  ವಿಠಲ ಮಾತ್ರ.  ಸರ್ವ ಎನ್ನುವುದು ಭಗವಂತನ ಒಂದು ನಾಮ. ಸರ್ವಜ್ಞ, ಎಂದರೆ - ಸರ್ವವನ್ನು ತಿಳಿದವನು - ಇದೂ ಅವನ ನಾಮ. ಒಟ್ಟಿನಲ್ಲಿ ಅವನನ್ನು ಪೂರ್ಣ ತಿಳಿದವನು ಅವನೊಬ್ಬನೇ ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದರು ಎಂಬಲ್ಲಿಗೆ  ಕೃಷ್ಣಾರ್ಪಣ.


Saturday, July 18, 2026

ಏನುಮಾಡಿದರೇನು ಹಿಂದಿನ ಕರ್ಮಫಲ

ಶ್ರವಣ, ಕೀರ್ತನ, ಸ್ಮರಣ ಮೊದಲಾಗಿ ಪ್ರಾರಂಭವಾಗುವ  ನವವಿಧ

ಭಕ್ತಿಯಲ್ಲಿ ಕೊನೆಯ ಮೆಟ್ಟಲು ಆತ್ಮ ನಿವೇದನ. ತನ್ನನ್ನು ತಾನು

ಪರಮಾತ್ಮನಿಗೆ ಸಮರ್ಪಿಸುವುದು.  ಅದಕ್ಕೆ ಮುಂಚಿನ ಮೆಟ್ಟಲು 

‘ಸಖ್ಯ’. ಭಗವಂತನನ್ನು ಸಖನಾಗಿ ಕಾಣುವುದು. ಇದು ಅರ್ಜುನ -

ಶ್ರೀಕೃಷ್ಣರ ಸಂಬಂಧದಂತೆ. ಈ ಸ್ಥಿತಿಯಲ್ಲಿ ಭಗವಂತನ ಬಗ್ಗೆ

ತಿಳುವಳಿಕೆಯುಂಟು, ಗೌರವ, ಭಕ್ತಿಯುಂಟು ಆದರೆ ಅದರೊಂದಿಗೆ,

ಗೆಳೆಯನಂತೆ ಸಲಿಗೆಯೂ ಉಂಟು. ಇಂದು ನಾವು ಪ್ರಸ್ತುತಪಡಿಸುತ್ತಿರುವ

ಕೃತಿಯಲ್ಲಿ ಭಗವಂತನೊಡನೆ ಸಖ್ಯನಂತೆ ಸಂಭಾಷಣೆ ನಡೆಸಿದ್ದಾರೆ

ಶ್ರೀ ಪುರಂದರ ದಾಸರು.


‘ಏನುಮಾಡಿದರೇನು ಹಿಂದಿನ ಕರ್ಮಫಲ, ತಾನು ಮಾಡಿದ ಕರ್ಮ

ತನಗಲ್ಲದೆ’ ಎಂದು ದಾಸರು ಕೀರ್ತನೆಯನ್ನು ಪ್ರಾರಂಭಿಸಿದ್ದಾರೆ. 

ನೀವು ಯಾವ ಯಾವ ಪ್ರಾರ್ಥನೆ, ಪೂಜೆ, ವ್ರತ, ಜಪ, ತಪಗಳನ್ನೆಲ್ಲಾ

ಮಾಡಿ ಪುಣ್ಯ ಸಂಪಾದನೆ ಮಾಡಿಕೊಂಡರೂ ಹಿಂದಿನ

ಕರ್ಮಫಲವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಕರ್ಮವನ್ನು

ನೀವು ಅನುಭವಿಸಿಯೇ ಸಿದ್ಧ ಎಂದು ನಮಗೆ ಅರ್ಥಮಾಡಿಸುವ

ಪ್ರಯತ್ನದಲ್ಲಿ ದಾಸರು ಕರ್ಮಫಲ ಸಂಚಯನೆಯೇ  ಇಲ್ಲದ

ಪರಮಾತ್ಮನನ್ನೂ ಎಳೆದು ತಂದಿದ್ದಾರೆ. ಒಬ್ಬ ಸ್ನೇಹಿತನೊಡನೆ

ಲಘುಹಾಸ್ಯದಿಂದ ಮಾತನಾಡುವ ರೀತಿಯಲ್ಲಿ ನಿನ್ನ ಅವತಾರಗಳೆಲ್ಲಾ

ನಿನ್ನ ಕರ್ಮಫಲವಯ್ಯಾ ಎಂದು ಭಗವಂತನಿಗೆ ಹೇಳುತ್ತಿದ್ದಾರೆ. 


ಮೊದಲ ಚರಣದ ಒಂದೊಂದು ಸಾಲಿನಲ್ಲಿ ಮತ್ಸ್ಯ , ಕೂರ್ಮ,

ವರಾಹ, ನರಸಿಂಹ ರೂಪಗಳನ್ನು ಸ್ಮರಿಸಿರುವ ದಾಸರು  ಸಾಮಾನ್ಯವಾಗಿ

ಚಾಲ್ತಿಯಲ್ಲಿರುವ ನರಸಿಂಹನ ಕೋರೆಹಲ್ಲಿನ ಉಗ್ರರೂಪದವನ್ನು 

‘ಪರರಿಗೆ ಬಾಯ್ದೆರೆದು  ಪಲ್ಕಿರಿದರಿಲ್ಲ’ ಎಂದು ಬಣ್ಣಿಸಿ ಇತರರಿಗೆ

ಹಲ್ಲು ಕಾಣಿಸುವಂತೆ  ಬಾಯಿಬಿಟ್ಟು ಹಲ್ಲುಕಿರಿದರೂ ಕರ್ಮ

ಕಳೆಯಲಿಲ್ಲ ಎಂದು ಹಾಸ್ಯಮಾಡಿದ್ದಾರೆ. 


ಮುಂದಿನ ಚರಣ ವಾಮನ, ಪರಶುರಾಮ, ರಾಮ, ಕೃಷ್ಣಾವತಾರಗಳನ್ನು

ಸೂಚಿಸುತ್ತದೆ. ದೇಹವನ್ನು ಹ್ರಸ್ವಮಾಡಿ ಎಂದರೆ ದೇಹವನ್ನು ಕುಗ್ಗಿಸಿ

ಎಂದು. ಇದು ವಾಮನಾವತಾರದ ಯಾಚಕ ರೂಪದ ವರ್ಣನೆ. ಮುಂದೆ

ಪರಶುರಾಮನನ್ನು ದಾಸರು ಕುಲಗೇಡಿ ಎಂದಿದ್ದಾರೆ. ಇಂಥ ರಚನೆ

ಅಥವಾ ವರ್ಣನೆಗೆ ನಿಂದನಾ ಸ್ತುತಿ ಎಂದು ಹೆಸರು. ಇದು

ಭಗವಂತನ ಅವತಾರಗಳ ಭಕ್ತಿಪೂರ್ವಕ ಸ್ಮರಣೆ.  ಆದರೆ ಅವನನ್ನು 

ನಿಂದಿಸುವಂಥ ಸಂಬೋಧನೆ. ಪರಶುರಾಮ ಬ್ರಾಹ್ಮಣನಾಗಿ ಜನಿಸಿ,

ತನ್ನ ವರ್ಣಕ್ಕೆ ವಿರುದ್ಧವಾಗಿ ಕ್ಷತ್ರಿಯರೊಡನೆ ಯುದ್ಧದಲ್ಲಿ ತೊಡಗಿದನಲ್ಲ, 

ಅದರಿಂದ ಅವನನ್ನು  ‘ಕುಲಗೇಡಿ’ ಎಂದರು ದಾಸರು. ಇದ್ದದ್ದನ್ನು

ಇದ್ದಂತೆ ನೇರವಾಗಿ ಹೇಳಿಬಿಡುವ ದಾಸರಿಗೆ ಯಾರ ಮುಲಾಜೂ ಇಲ್ಲ. 


ಕೊನೆಯ ಚರಣದಲ್ಲಿರುವ ‘ಧೀರತನವನು ಬಿಟ್ಟು ದಿಗಂಬರನಾದರೂ ಇಲ್ಲ’

ಎಂಬ ಸಾಲು ಬುದ್ಧಾವತಾರಕ್ಕೆ ಸಂಭಂದ ಪಟ್ಟದ್ದು.  ಬುದ್ಧಾವತಾರ,

ಕೊಂಚ ವಿವಾದಾತ್ಮಕವಾದದ್ದು. ಅದು ವಿಷ್ಣುವಿನ ಅವತಾರವೇ

ಅಲ್ಲವೆಂದು ವಾದಿಸುವ  ಕೆಲವರು  ಅವತಾರಗಳ ಪಟ್ಟಿಯಿಂದ

ಬುದ್ಧಾವತಾರವನ್ನು ಕೈಬಿಟ್ಟಿರುವುದೂ ಉಂಟು. ಆದರೆ ಶ್ರೀ

ವಾದಿರಾಜಸ್ವಾಮಿಗಳು ತಮ್ಮ ದಶಾವತಾರ ಸ್ತುತಿಯಲ್ಲಿ ಬುದ್ಧನನ್ನು

ಸೇರಿಸಿಯೇ ಸ್ತುತಿಸಿರುವುದರಿಂದ ಅದರ ಬಗ್ಗೆ ವಿವಾದಕ್ಕೆ ಎಡೆಯೇ 

ಇಲ್ಲ. ವಿವಾದಕ್ಕೆ ಎಡೆಯಿಲ್ಲವಾದರೂ, ವಿವರಣೆಗೆ ಎಡೆಯುಂಟು,

ಆದರೆ ಇಲ್ಲಿ ಅದು ಪ್ರಸ್ತುತವಲ್ಲವಾದ್ದರಿಂದ ಅದನ್ನು  ಮುಂದೆಲ್ಲಾದರೂ

ಅವಕಾಶಬಂದಾಗ ನೋಡೋಣ. 


ಯಾರುಬಲ್ಲರಯ್ಯಾ ವಿಧಿಯಾಟವನ್ನು ?  ಎನ್ನುತ್ತಾ  ‘ನಿನ್ನನ್ನೂ 

ಆ ವಿಧಿ ಸುಮ್ಮನೆ ಬಿಡಲಿಲ್ಲವಲ್ಲಾ’ ಎಂದು ವಿಧಿನಿಯಾಮಕನಾದ

ಪುರಂದರ ವಿಠಲನಿಗೇ ಹಾಸ್ಯಪೂರ್ವಕವಾದ ಪ್ರಶ್ನೆಹಾಕಿ, 

ಧಾರುಣಿಯಲ್ಲಿ ಅಪ್ರತಿಮನೆಂದು ಅವನನ್ನು ಸ್ತುತಿಸುತ್ತಾ ತಮ್ಮ

ರಚನೆಯನ್ನು ದಾಸರು ಕೊನೆಗಾಣಿಸಿದರೆಂದು ತಿಳಿಸಿ  ನನ್ನ

ವಿವರಣೆಯನ್ನು ಕೃಷ್ಣಾರ್ಪಣ ಎನ್ನುತ್ತೇನೆ. 

Saturday, July 11, 2026

ಕರ್ಮ ಬಂಧನ ಛೇದನ

 ನಮ್ಮ ದಾಸಸಾಹಿತ್ಯ ಸಿರಿ ಮಾಲಿಕೆಯ ಹತ್ತೊಂಭತ್ತನಯ  ಗೀತೆ, ಭಗವಂತನ ಉಪಾಸನೆಯನ್ನು ಅತ್ಯಂತ ಸುಲಭವಾಗಿಸುವ ಶ್ರೀ ಪುರಂದರದಾಸರ ರಚನೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ, ‘ಭಕ್ತಿಯಿಂದ ನೀನೇನು ಕೊಟ್ಟರೂ ಸ್ವೀಕರಿಸಿ ಸಂತೃಪ್ತನಾಗುತ್ತೇನೆ’. ಇಲ್ಲಿ ದಾಸರು  ಹೇಳುತ್ತಾರೆ ‘ಭಕ್ತಿಯಿಂದ ಅವನನ್ನು ನೆನೆದರೆ ಸಾಕು ಅವನು ಸಂತೃಪ್ತನಾಗುತ್ತಾನೆ’.


ಕರ್ಮ ಬಂಧನ ಛೇದನ ರಘು 

ರಾಮನ ನಾಮ ನೀ ನೆನೆ ಮನವೇ 


ಮಂತ್ರವನರಿಯೆನು ತಂತ್ರವನರಿಯೆ ಜಗ 

ದಂತ್ರವನರಿಯೆನೆಂದೆನಬೇಡ 

ತಂತ್ರ ಸ್ವತಂತ್ರನ ಪರಮ ಪವಿತ್ರನ 

ಅಂತರಂಗದಿ ನೀ ನೆನೆಮನವೇ 


ಕಲಿಯುಗದೊಳು ಹರಿನಾಮವ ನೆನೆದರೆ 

ಕುಲಕೋಟಿಗಳು ಉದ್ಧರಿಸುವುವು 

ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ 

ಜಲಜನಾಭನ ನೀ ನೆನೆ ಮನವೇ 


ವದನದಿ ನಾರಾಯಣನೆಂಬ ನಾಮವು 

ಮುದದಿಂದಲಿ ನೆನೆ  ಬಿಡಬೇಡ 

ಪದುಮನಾಭ ಶ್ರೀ ಪುರಂದರ ವಿಠಲನ 

ಸದಾಕಾಲದಿ ನೀ ನೆನೆ ಮನವೇ


‘ಕರ್ಮ ಬಂಧನ ಛೇದನ’ ಎಂದು ತಮ್ಮ ರಚನೆಯನ್ನು ದಾಸರು ಪ್ರಾರಂಭಿಸಿದ್ದಾರೆ. ಈ ಕರ್ಮಬಂಧನವನ್ನು  ಛೇದ ಮಾಡುವುದು  ಭಗವಂತನ ಗುರುತರವಾದ ಕಾರ್ಯಗಳಲ್ಲಿ ಒಂದು. ಒಂದು ಜೀವ ಏನೆಲ್ಲಾ ಪುಣ್ಯಕಾರ್ಯಗಳನ್ನು ಮಾಡಿ, ಉತ್ತಮ ಜನ್ಮಗಳನ್ನು ಪಡೆದು, ಮುಕ್ತಿಯೋಗ್ಯವಾಗಿ ಮೋಕ್ಷದ  ಹೊಸ್ತಿಲಲ್ಲಿ ಬಂದು ನಿಂತರೂ ಅದಕ್ಕೆ ಮೋಕ್ಷ ಖಚಿತವಲ್ಲ. ನಮ್ಮ ತತ್ವದ ಪ್ರಕಾರ  ಮುಕ್ತಿಯೋಗ್ಯವಾದ ಕಾರ್ಯ ಮಾಡಿದೆನೆಂದು ಹಕ್ಕಿನಿಂದ ಮೋಕ್ಷವನ್ನು ಪಡೆಯಲಾಗದು. ಅದು ಭಗವಂತನ ವಿವೇಚನೆಗೆ ಬಿಟ್ಟದ್ದು, ಅವನ ಕೃಪೆ. ಅವನಿಗೆ ಒಪ್ಪಿಗೆಯಾದರೆ ಅವನು ಕರ್ಮಾ ಬಂಧನವನ್ನು ಛೇದಿಸಿ ಮೋಕ್ಷ  ಪ್ರಧಾನಮಾಡುತ್ತಾನೆ. ಆದ್ದರಿಂದಲೇ ದಾಸರು ಇಲ್ಲಿ ರಾಮನನ್ನು  ‘ಕರ್ಮ ಬಂಧನ ಛೇದನ’ ಎಂದರು. 

ಮುಂದಿನ ಚರಣಗಳೆಲ್ಲಾ ಬಹಳವೇ ಸರಳ. ಮೊದಲ ಚರಣದಲ್ಲಿ ಬರುವ ‘ಜಗದಂತ್ರ’ ಎಂದರೆ ಜಗತ್ತಿನ ಅಂತರಂಗ.  ಮುಂದೆ ಬರುವ ‘ತಂತ್ರ ಸ್ವತಂತ್ರ’ ಎಂದರೆ ಭಗವಂತ ಯಾವುದೇ ತಂತ್ರ ಅಥವಾ ಯುಕ್ತಿಗೆ ಬಲಿಯಾಗುವವನಲ್ಲ ಎಂದು. ಅವನು ಸಿಕ್ಕಬೇಕಾದರೆ ಅದು ಅಂತರಂಗದ ಆರಾಧನೆಯಿಂದ ಮಾತ್ರ.  ಎನ್ನುತ್ತಾರೆ ದಾಸರು. 


ಕಲಿಯುಗ, ಭಗವದಾರಾಧನೆಯನ್ನು ಅತ್ಯಂತ ಸುಲಭವಾಗಿಸಿದೆ. ಹಿಂದಿನ ಯುಗಗಳಲ್ಲಿ ಪರಮಾತ್ಮನನ್ನು ಒಲಿಸಿಕೊಳ್ಳಲು ತಪಸ್ಸು, ಯಜ್ಞ, ಯಾಗಗಳ ಮೂಲಕ ಅವನನ್ನು ಆರಾಧಿಸಬೇಕಿತ್ತು.  ಆದರೆ ನಿಷ್ಠೆ, ನಂಬಿಕೆಗಳು ಇಳಿಮುಖವಾಗಿರುವ ಕಲಿಯುಗದಲ್ಲಿ ಅವನು ಅದು ಯಾವುದನ್ನೂ ಆಶಿಸುವುದಿಲ್ಲ. ಈಗ ಅವನು ‘ಸುಲಲಿತ ಭಕ್ತಿಗೆ ಸುಲಭ’. ಅವನ ನಾಮಸ್ಮರಣೆಯಷ್ಟೇ ಸಾಕು. 


ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ ಎಂದರಲ್ಲವೇ ದಾಸರು. ಅದನ್ನೇ ಈಗ ಅವರು ಮತ್ತೆ ಹೇಳುತ್ತಿರುವುದು. ‘ವದನದಿ ನಾರಾಯಣನೆಂಬ ನಾಮವಿರಲಿ, ಪದುಮನಾಭನ ನೆನಪು ಸದಾ ಇರಲಿ’ ಅಷ್ಟುಸಾಕು  ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದ್ದಾರೆ ಎಂದು ತಿಳಿಸಿ ಇಂದಿನ ಕೊಡುಗೆಯನ್ನು ಕೃಷ್ಣಾರ್ಪಣಗೊಳಿಸುತ್ತೇನೆ. 


Saturday, July 4, 2026

ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ

 ತಾವು ಸಂಪೂರ್ಣವಾಗಿ ನಂಬಿರುವ, ನಿರಂತರವಾಗಿ ಆರಾಧಿಸುವ,  ಪರಮಾತ್ಮ ಎಂಬ ಪರವಸ್ತುವಿನ ಬಗ್ಗೆ ಸತತ ಚಿಂತನೆ ಮತ್ತು ಅದನ್ನು ಮತ್ತಷ್ಟು ಅರಿತುಕೊಳ್ಳುವ ಪ್ರಯತ್ನ,  - ಇದು - ನಾವು ಜ್ಞಾನಿಗಳೆಂದು ಕರೆಯುವ ಎಲ್ಲರ ಅನೂಚಾನವಾದ ಕಾರ್ಯ.  ಆ ಪರವಸ್ತುವಿನ ಬಗ್ಗೆ ಹೆಚ್ಚು ಚಿಂತಿಸಿದಷ್ಟೂ ಅದು ಮತ್ತಷ್ಟು ಚಿಂತನೆಗೆ ಎಡೆಮಾಡುತ್ತದೆ. ಕೊನೆಯಾಗದ ಚಿಂತನೆ. ಪ್ರಶ್ನೆಗಳ ಸರಪಳಿ. ಅಂಥ ಸಂಧರ್ಭಗಳಲ್ಲಿ ಮನಸ್ಸಿನಲ್ಲಿ ಮೂಡುವುದು  ‘ನಾ ನಿನ್ನ ಅರಿಯಲಾರೆ ಸ್ವಾಮಿ’ ಎಂಬ ಶರಣಾಗತಿಯ ಭಾವ. ಆ ಭಾವನೆಯನ್ನು ಬಿಂಬಿಸುವ ಕನಕದಾಸರ ಕೃತಿಯೊಂದನ್ನು ಇಂದು ಪ್ರಸ್ತುತ ಪಡಿಸುತ್ತಿದ್ದೇವೆ. ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’. 

ತತ್ವಶಾಸ್ತ್ರದಲ್ಲಿ ಮಾಯೆ ಎಂಬ ಪದಕ್ಕೆ  ಜಗತ್ತು, ಪ್ರಕೃತಿ, ಸಂಸಾರ, ಪ್ರಕೃತಿಗೆ ಅಭಿಮಾನಿಯಾದ ಲಕ್ಷ್ಮೀದೇವಿ, ಅಜ್ಞಾನ ಮುಂತಾದ  ಅನೇಕ ಅರ್ಥಗಳಿವೆ. ಮಾಯೆ ಈ ಜಗತ್ತಿನ ಸೃಷ್ಟಿಗೆ ಪರಮಾತ್ಮ ಉಪಯೋಗಿಸಿರುವ ಮೂಲ ವಸ್ತು.  ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ತಾನು ಅಣುವಾಗಿ ಜಗತ್ತಿನ ಕಣಕಣದಲ್ಲಿ ತೂರಿರುವವನೂ ಹೌದು, ಬೃಹತ್ತಾಗಿ ಇಡೀ ಜಗತ್ತನ್ನು ಆವರಿಸಿರುವವನೂ ಹೌದು. ಹಾಗಾಗಿ ಕನಕದಾಸರ ಗೀತೆಯ ಪಲ್ಲವಿ ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’ ಎನ್ನುವುದು ಒಂದು ಪ್ರಶ್ನೆಯಂತೆ ಕಂಡರೂ ಅದು ಪ್ರಶ್ನೆಯಲ್ಲ, ಅದೊಂದು ಹೇಳಿಕೆ. ನಂತರದ ಸಾಲುಗಳು  ಕೂಡ ಹಾಗೆಯೇ. ಪರಮಾತ್ಮ ದೇಹವನ್ನು ಒಳಗಿನಿಂದ ಧರಿಸಿ, ಹೊರಗಿನಿಂದ ಆವರಿಸಿದ್ದಾನೆ. ಆದ್ದರಿಂದಲೇ ದಾಸರು ಮುಂದೆ  ‘ನೀ ದೇಹದೊಳಗೋ ನಿನ್ನೊಳು ದೇಹವೋ’ ಎಂದಿದ್ದಾರೆ. 


ಇದೇ ಭಾವನೆಯನ್ನು ಮುಂದುವರಿಸುತ್ತ ಮುಂದಿನ ಚರಣಗಳಲ್ಲಿ, ನಾವು ನೋಡಿ, ಕೇಳಿ, ಅನುಭವಿಸಿರುವ ರೂಪಕಗಳ  ಮೂಲಕ ದಾಸರು ನಮಗೆ ತಮ್ಮ ಚಿಂತನೆಯನ್ನು ವಿಶದಪಡಿಸುತ್ತಾರೆ.  ‘ಬಯಲು ಆಲಯದೊಳಗೋ ಆಲಯವು ಬಯಲೊಳಗೋ’ ಸಾಲನ್ನು ನೋಡಿ. ಬಯಲು ಎನ್ನುವ ಶಬ್ದಕ್ಕೆ, ಭೂಮಿ ಮತ್ತು ಆಕಾಶ ಎಂಬ ಎರಡೂ ಅರ್ಥವಿದೆ. ಆಲಯ ಬಯಲೊಳಗೆ ಎಂದರೆ ಮನಸ್ಸಿನಲ್ಲಿ ಒಂದು  ಸ್ಪಷ್ಟ ಚಿತ್ರ ತಕ್ಷಣ ಮೂಡುತ್ತದೆ. ಬಯಲು ಆಲಯದೊಳಗೆ ಎಂದರೆ ?  ಈಗ ಬಯಲು ಎಂದರೆ ಆಕಾಶ ಅಥವಾ ಇಂಗ್ಲಿಷ್ ನಲ್ಲಿ ನಾವು ಕರೆಯುವ ಸ್ಪೇಸ್ ಎಂದು ಚಿಂತಿಸೋಣ. ಆ ಬಯಲು ಅಥವಾ ಸ್ಪೇಸ್  ಎನ್ನುವುದು ಆಲಯವನ್ನು ಆವರಿಸಿಕೊಂಡಿದೆ. ಅಷ್ಟೇ ಅಲ್ಲ,  ಆಲಯದ ಒಳಗೆ ನಾವು ಖಾಲಿಜಾಗವೆಂದು ಕರೆಯುತ್ತೇವಲ್ಲ ಅಲ್ಲಿಯೂ ತುಂಬಿಕೊಂಡಿದೆ ಅಲ್ಲವೇ ? ಆದ್ದರಿಂದ ಬಯಲು ಆಲಯದೊಳಗೂ ಹೌದು, ಆಲಯ ಬಯಲೊಳಗೂ ಹೌದು.  ಈ ಒಳಗೆ, ಹೊರಗೆ, ಆಲಯ, ಬಯಲು ಎಲ್ಲವೂ ಅವನ್ನು ಕಾಣುವ ಕಣ್ಣು ಎಂಬ ಇಂದ್ರಿಯ ಇದ್ದು ಆ ಇಂದ್ರಿಯಕ್ಕೆ ಅನುಭವಿಸುವ ಶಕ್ತಿ ಇದ್ದರೆ ತಾನೇ ? ಆದ್ದರಿಂದ ನಂತರದಲ್ಲಿ  ದಾಸರು  ‘ಬಯಲು ಆಲಯವೆರಡು ನಯನದೊಳಗೋ’ ? ಎಂದರು. ಮುಂದೆ  ಮತ್ತಷ್ಟು ಗೊಂದಲ. ‘ನಯನ ಬುದ್ಧಿಯೊಳಗೋ, ಬುದ್ಧಿ ನಯನದೊಳಗೋ?’  ಬುದ್ಧಿ ನೋಡೆಂದುದನ್ನು ಕಣ್ಣು ನೋಡಿತೋ ?  ಅಥವಾ ನಾವು ನೋಡುವ ರೀತಿಯಿಂದ, ನೋಡಿದ ವಸ್ತುವಿನಿಂದ, ಬುದ್ಧಿ ಪ್ರಚೋದಿತವಾಯಿತೋ ?  ಏನೇ ಇರಲಿ, ಒಟ್ಟಿನಲ್ಲಿ  ಬಯಲು, ಆಲಯ ಎರಡರಲ್ಲೂ ಇರುವವ ನೀನು,  ಕಣ್ಣು ಎಂಬ ಇಂದ್ರಿಯ ಕೊಟ್ಟವನು ನೀನು, ಆ ಇಂದ್ರಿಯಕ್ಕೆ ಏನನ್ನಾದರೂ ಕಂಡು ಅನುಭವಿಸುವ ಶಕ್ತಿ ಕೊಟ್ಟವ ನೀನು, ಆ ಅನುಭವವನ್ನು ಆಸ್ವಾದಿಸುವ ಬುದ್ಧಿ ಕೊಟ್ಟವ ನೀನು. ಸ್ವಾಮೀ, ಎಲ್ಲವೂ ನಿನ್ನೊಳಗೆ ಎಂದು  ‘ನಯನ ಬುದ್ಧಿಗಳೆರಡೂ ನಿನ್ನೊಳಗೋ’  ಎಂದುಬಿಟ್ಟರು ಕನಕದಾಸರು. 


ಹೀಗೆಯೇ ಉಳಿದ ಚರಣಗಳ ವಿವರಣೆ ಸಹ. ಸವಿ ಸಕ್ಕರೆಯೊಳಗೋ ಸಕ್ಕರೆ ಸವಿಯೊಳಗೋ? ಎರಡೂ ನಾಲಗೆಯೊಳಗೋ ? ಕುಸುಮ ಗಂಧದೊಳಗೋ, ಗಂಧ ಕುಸುಮದೊಳಗೋ ಎರಡೂ ನಮಗಿರುವ ಘ್ರಾಣದ ಅಂದರೆ ವಾಸನೆಯನ್ನು ಅನುಭವಿಸುವ ಶಕ್ತಿಯೊಳಗೋ? ಇತ್ಯಾದಿ ಇತ್ಯಾದಿ ತಮ್ಮ ಚಿಂತನೆಯನ್ನು ಪ್ರಶ್ನೆಯ ರೂಪದಲ್ಲಿ ಪದ್ಯವಾಗಿ  ರಚಿಸಿ ಕೇಳಿದವರನ್ನು ಸಹ  ಚಿಂತನೆಗೆ ಹಚ್ಚಿದರು. ಸವಿ ಸಕ್ಕರೆಯೊಳಗೆ ಸರಿ. ಆದರೆ ಸಕ್ಕರೆ ಸವಿಯೊಳಗೆ ಎಂದರೆ ? ನಾವು ಏನೆಲ್ಲವನ್ನು ಸವಿ ಎಂದು ಸೂಚಿಸುತ್ತೇವೋ ಅದರಲ್ಲಿ ಸಕ್ಕರೆಯೂ ಒಂದಲ್ಲವೇ ? ಹಾಗಾಗಿ ಸಕ್ಕರೆ ಸವಿಯೊಳಗೂ ಹೌದು. ಮತ್ತೆ, ಸವಿ, ಸಕ್ಕರೆ ಎರಡೂ ನಾಲಗೆಯೊಳಗೆ. ಹೀಗೆಯೇ ಮೊದಲ ಚರಣದ ಭಾವನೆಯನ್ನೇ ಬಿಂಬಿಸುವ ಮುಂದಿನಸಾಲುಗಳನ್ನು ತಮ್ಮ ಚಿಂತನೆಗೆ ಬಿಟ್ಟು ನಾನು ಮುಂದೆ ಸಾಗುತ್ತೇನೆ. 


‘ವಿಜಾನತಾ ಅವಿಜ್ಞಾತಂ ಅವಿಜ್ಞಾತಾ  ವಿಜಾನತಾಂ’ ಎನ್ನುವುದು ಸಂಸ್ಕೃತದ ಒಂದು ಉಕ್ತಿ.  ಪರಮಾತ್ಮ ಅಥವಾ ಪರವಸ್ತುವಿನ ಬಗ್ಗೆ ತಿಳಿದಿದ್ದೇನೆ ಎನ್ನುವವನಿಗೆ ಏನೂ ತಿಳಿದಿಲ್ಲ, ತಾನು ತಿಳಿದಿಲ್ಲ ಎನ್ನುವವನು ತಿಳಿದಿದ್ದಾನೆ - ಎಂದು ಇದರ ಅರ್ಥ. ಇದನ್ನು ನಮಗೆ ವಿವರಿಸುವಂತೆ,  ಕೊನೆಯಲ್ಲಿ  ನಮ್ರವಾಗಿ ‘ಅಸಮಭವ ಕಾಗಿನೆಲೆಯಾದಿ  ಕೇಶವರಾಯ,  ಉಸುರಲೆನ್ನಳವಲ್ಲ ನಿನ್ನೊಳಗೋ ’ -  ಎಂದರೆ - ‘ನಿನಗೆ ಸಮವೆಂಬುದು  ಮತ್ತೊಂದಿಲ್ಲದ  ಕಾಗಿನೆಲೆಯ ಕೇಶವರಾಯನೇ, ನಿನ್ನನ್ನು ವಿವರಿಸುವುದು ಅಥವಾ ತಿಳಿಸಿಕೊಡುವುದು - ಎನ್ನಳವಲ್ಲ - ಎಂದರೆ  ನನ್ನ ಕೈಗೆಟಕುವ  ಕಾರ್ಯವಲ್ಲ ಸ್ವಾಮೀ ನಿನ್ನನ್ನು ತಿಳಿಸಿಕೊಡುವ ಸಾಮರ್ಥ್ಯವಿರುವವನು ನೀನೊಬ್ಬನೇ ’. ಎನ್ನುತ್ತಾ  ತಮ್ಮ ರಚನೆಯನ್ನು ಕೊನೆಯಾಗಿಸಿದರು ಕನಕದಾಸರು. ಜ್ಞಾನಿಗಳು ಅವರು. ತಮಗೆ ತಿಳಿದಿಲ್ಲವೆಂದು ಹೇಳಿ ಎಲ್ಲ ಅವನಿಗೆ ಬಿಟ್ಟು ಸುಮ್ಮನಾದರು. ಅಜ್ಞಾನಿ  ನಾನು ಅವರ ಪ್ರಶ್ನೆಗಳಿಗೆ  ವಿವರಣೆಕೊಡಲು ಪ್ರಯತ್ನಪಡುತ್ತಿದ್ದೇನೆ. ವಿಪರ್ಯಾಸವಲ್ಲವೇ ? ಇಷ್ಟುಸಾಕೆಂದು ಹೇಳುತ್ತಾ ನನ್ನ ದಡ್ಡತನವನ್ನು ಕೃಷ್ಣಾರ್ಪಣ ಎನ್ನುತ್ತೇನೆ.


Friday, June 26, 2026

ಎರಡು ಒಂದಾಗದು ರಂಗ

 ಶ್ರೀ ಪುರಂದರದಾಸರ ಆಧ್ಯಾತ್ಮಿಕ ಚಿಂತನೆಯ ಮೇಲೆ ಅವರ  ಗುರುಗಳಾದ ವ್ಯಾಸತೀರ್ಥರ ಪ್ರಭಾವವನ್ನು, ಅಂದರೆ ಮಧ್ವ ಸಂಪ್ರದಾಯದ ಪ್ರಭಾವವನ್ನು, ಎತ್ತಿತೋರಿಸುವಂಥ ಗೀತೆಯೊಂದನ್ನು ಇಂದು ಪ್ರಚುರಪಡಿಸುತ್ತಿದ್ದೇವೆ. ಗೂಢಾರ್ಥದ ಕೃತಿಯಾದರೂ ಕೆಲವೇ ಸಾಲುಗಳಲ್ಲಿ ಆತ್ಮ, ಪರಮಾತ್ಮ, ಜನ್ಮ, ಪುನರ್ಜನ್ಮ, ಸಂಸಾರ, ಮುಕ್ತಿಗಳ ಬಗ್ಗೆ ಚೊಕ್ಕವಾಗಿ ತಿಳಿಸಿಕೊಡುವ ಸಾಹಿತ್ಯ. 


‘ಎರಡು ಒಂದಾಗದು ರಂಗ, ಎರಡೂ ಒಂದಾಗದು ಎಂದೆಂದಿಗೂ’. ಏನು ಇವೆರಡು ? ಒಂದಾಗದಿರುವುದು? ಎಂದೆಂದಿಗೂ ಎಂಬ ಒತ್ತು ಏಕೆ ?  ಒಂದಾಗದಿರುವ ಎರಡು ಯಾವುವೆಂದರೆ ಜೀವಾತ್ಮ ಮತ್ತು ಪರಮಾತ್ಮ.  ಜೀವಾತ್ಮವು ತನ್ನ ಮಾಯೆಯ ಆವರಣವನ್ನು  ಕಳಚಿಕೊಂಡು ಮುಕ್ತಿಪಡೆದಮೇಲೆ ಪರಮಾತ್ಮದೊಂದಿಗೆ ಒಂದಾಗುತ್ತದೆ  ಎನ್ನುವುದು ಅದ್ವೈತ ತತ್ವ.  ಆದರೆ, ಜೀವಾತ್ಮ ಎನ್ನುವುದು ಎಂದಿಗೂ, ಯಾವ ಪರಿಸ್ಥಿತಿಯಲ್ಲೂ  ಪರಮಾತ್ಮನೊಡನೆ ಒಂದಾಗದು  ಎನ್ನುವುದು ದ್ವೈತ ಅಥವಾ ಮಧ್ವ ಸಿದ್ಧಾಂತದ ಪ್ರತಿಪಾದನೆ. ಅದರಿಂದಲೇ ಇಲ್ಲಿ ‘ಒಂದಾಗದು ಎಂದೆಂದಿಗೂ’ ಎಂಬ ಪದಪ್ರಯೋಗ. ಸಾಮಾನ್ಯವಾಗಿ ದಾಸರು ಇಂಥ ತತ್ವಗಳ ಸಂಧಿಗ್ದದಲ್ಲಿ ಸಿಕ್ಕಿಕೊಳ್ಳುವರಲ್ಲ. ಅವರದು ಭಕ್ತಿಪಂಥ. ವೇದ, ಶಾಸ್ತ್ರ, ತತ್ವಗಳ ಗೊಂದಲ ಅವರಿಗೆ ಬೇಡ. ಆದರೆ ಅವರ ಕೆಲವು ಕೃತಿಗಳಲ್ಲಿ ತತ್ವಪ್ರತಿಪಾದನೆ ಕಾಣಬರುತ್ತದೆ. ಇದು ಅವುಗಳಲ್ಲಿ ಒಂದು. 


ಮುಂದಿನ ಚರಣದ ಮೊದಲ ಸಾಲು ‘ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು ಒಂದೇ ಗೂಡಿನಲ್ಲಿ ಇರುತಿಹವು’.  ಈ ಜಗತ್ತು ಅಥವಾ ಸಂಸಾರವನ್ನು ದಾಸರು ‘ವೃಕ್ಷ’ ಎಂದು  ಕರೆದರು. ಈ ಜಗತ್ತೆಂಬ ವೃಕ್ಷದಲ್ಲಿ ಒಂದು ಗೂಡು, ಅದು, ನಮ್ಮ ಶರೀರವೆಂಬ ಗೂಡು. ಒಂದೇ ಗೂಡಿನಲ್ಲಿರುವ, ಎಂದರೆ, ಆ ಶರೀರದಲ್ಲಿರುವ ಎರಡು ಪಕ್ಷಿಗಳು, ಜೀವಾತ್ಮ ಮತ್ತು  ಪರಮಾತ್ಮ.  ಶ್ರೀ  ಕೃಷ್ಣಪರಮಾತ್ಮ ಸಹ ಜಗತ್ತನ್ನು ‘ವೃಕ್ಷ’ ಎಂದಿದ್ದಾನೆ. ಭಗವದ್ಗೀತೆಯ ಹದಿನೈದನೇ ಅಧ್ಯಾಯದ ಮೊದಲ ಶ್ಲೋಕ,  ‘ಊರ್ಧ್ವಮೂಲಮಧಃಶಾಖಮಶ್ವತ್ಥಮ್ ಪ್ರಾಹುರವ್ಯಯಮ್/ ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್’ ಎನ್ನುತ್ತದೆ. ಇಲ್ಲಿ ಈ ಜಗತ್ತು ಅಥವಾ ಸಂಸಾರವನ್ನು ಕೃಷ್ಣ ಅಶ್ವತ್ಥ ವೃಕ್ಷಕ್ಕೆ ಹೋಲಿಸಿದ್ದಾನೆ. ವೃಕ್ಷ  ಹೌದು, ಆದರೆ ಅದು ತಲೆಕೆಳಗಾಗಿರುವ ವೃಕ್ಷ. ಅದರ  ಬೇರು ಮೇಲೆ  - ಬೀಳಲು, ಎಲೆ, ರೆಂಬೆ, ಕೊಂಬೆಗಳು ಕೆಳಗೆ. ಇದು ಕೊಂಚ ನೆನಪಿನಲ್ಲಿರಲಿ.   ಗೀತೆಯ ಮುಂದಿನ ಸಾಲು ‘ಒಂದು ಪಕ್ಷಿ ಫಲಂಗಳನುಂಬುದು ಒಂದು ಫಲಂಗಳನುಣ್ಣದು ರಂಗ’ ಎನ್ನುತ್ತದೆ. ಶರೀರವೆಂಬ ಗೂಡಿನಲ್ಲಿರುವ ಜೀವಾತ್ಮವೆನ್ನುವ ಪಕ್ಷಿ ಕರ್ಮಮಾಡಿ ತನ್ನ  ಕರ್ಮಗಳ ಫಲವನ್ನು ತಾನು ಉಣ್ಣುವುದು. ಅದೇ ಗೂಡಿನಲ್ಲಿರುವ ಪರಮಾತ್ಮನೆನ್ನುವ ಪಕ್ಷಿಗೆ ಕರ್ಮಉಂಟು, ಫಲದ ಜಂಜಾಟವಿಲ್ಲ. ಆದ್ದರಿಂದ ಒಂದು ಫಲಂಗಳನುಣ್ಣದು


ಅಲ್ಲಿಂದ  ಮುಂದೆ,  ‘ಹಲವು ಕೊಂಬೆಗಳಿಗೆ ಒಂದು ಹಾರಿತು / ಒಂದು ಹಲವು ಕೊಂಬೆಗಳಿಗೆ  ಹಾರಲರಿಯದು’. ತಲೆಕೆಳಗಾದ ಸಂಸಾರ ವೃಕ್ಷವೆಂದೆವಲ್ಲಾ ಅದರ ಬೀಳಲು, ರೆಂಬೆ, ಕೊಂಬೆಗಳೇ ನಮ್ಮ ಸಂಸಾರ ಬಂಧನಗಳು. ಜನ್ಮ, ಪುನರ್ಜನ್ಮಗಳು. ಜೀವಾತ್ಮ ಹಲವು ಕೊಂಬೆಗಳಿಗೆ  ಅಂದರೆ ಒಂದು ಜನ್ಮದಿಂದ ಮತ್ತೊಂದಕ್ಕೆ ಜಿಗಿಯುತ್ತಲೇ ಇರುತ್ತಾನೆ.  ಪರಮಾತ್ಮನಿಗೆ ಹೀಗೆ ಹಾರಾಡುವ  ಕಾಟವಿಲ್ಲ. ಅದು ಹಾರುವ ಅವಶ್ಯಕತೆಯಿಲ್ಲದ್ದು. ಅದರಿಂದಲೇ  ಅದು ಹಾರಲರಿಯದು.  ಮುಂದೆ ದಾಸರೆನ್ನುತ್ತಾರೆ ‘ಹಲವನೆಲ್ಲವನು ಒಂದು ಬಲ್ಲುದು / ಒಂದು ಹಲವನೆಲ್ಲವ ಅರಿಯದು ರಂಗ’. ಪರಮಾತ್ಮ ಜ್ಞಾನ ಸ್ವರೂಪ. ಅವನು ಎಲ್ಲವನ್ನೂ ಬಲ್ಲವನು. ಜೀವಾತ್ಮನೆಂಬ ಪಕ್ಷಿಗೆ ಅಲ್ಪಜ್ಞಾನ ಅಥವಾ ಜ್ಞಾನವಿಲ್ಲ. 


ಮುಂದಿನ ಚರಣ ‘ನೂರೆಂಟು ಕೊಂಬೆಗಳಿಗೆ ಹಾರಿತು / ಅದು ಹಾರಿ ಹಾರಿ ಮೇಲಕ್ಕೇರಿ ಮೀರಿತು.’  ಒಂದುವೇಳೆ ಆ ಜೀವಾತ್ಮನೆಂಬ ಪಕ್ಷಿ ತನ್ನ ಸಾಧನಾ ಶರೀರವನ್ನು ಸದುಪಯೋಗಪಡಿಸಿಕೊಂಡು ಸತ್ಕರ್ಮಗಳಲ್ಲಿ, ಸಾಧನೆಯಲ್ಲಿ ತೊಡಗಿದ್ದರೆ,  ಅದು ಕೆಳಗಿನ ಕೊಂಬೆಗಳಿಂದ ಪ್ರಾರಂಭಿಸಿ ಹಾರುತ್ತಾ ಹಾರುತ್ತಾ ಮೇಲಿನ ಕೊಂಬೆಗಳನ್ನು ಅಂದರೆ ಉತ್ತಮ ಜನ್ಮಗಳನ್ನು ಪಡೆಯುತ್ತಾ ಸಾಗುತ್ತದೆ. ಹಾಗೆಯೇ ಹಾರಿ ಹಾರಿ ಕೊಂಬೆಗಳನ್ನು ಮೀರಿ, ಅಂದರೆ ಜನ್ಮ ಪುನರ್ಜನ್ಮಗಳನ್ನು ನಿವಾರಿಸಿಕೊಂಡು, ಮೇಲಿರುವ ಬೇರನ್ನು ಅಂದರೆ ಜಗತ್ತಿಗೆ ಆಧಾರವೆನಿಸಿದ ಪರಮಾತ್ಮನನ್ನು  ತಲುಪುತ್ತದೆ. 


ಈ  ರೀತಿಯಲ್ಲಿ  ಜೀವಾತ್ಮನೆಂಬ ಪಕ್ಷಿ, ಕೊಂಬೆಗಳನ್ನೆಲ್ಲ ಮೀರಿ, ಮೇಲಕ್ಕೆ ಹಾರಿ ‘ನಿಮ್ಮನ್ನು ಸೇರಿ ಸುಖಿಯಾಗಿ  ನಿಂತಿತು ರಂಗ’ ಎನ್ನುತ್ತಾರೆ ದಾಸರು. ಹಾರಾಟವನ್ನು ಮೀರಿ ಬೇರನ್ನು ಸೇರಿ  ಬಿಡುಗಡೆ ಪಡೆಯಿತಲ್ಲಾ ಪಕ್ಷಿ, ಅದನ್ನೇ ಮುಕ್ತಿ ಅಥವಾ ಮೋಕ್ಷ ಎನ್ನುವುದು. ಅಲ್ಲಿಂದ ಮುಂದಕ್ಕೆ ಹಾರಾಟವೂ ಇಲ್ಲ, ಓಡಾಟವೂ  ಇಲ್ಲ. ಆದ್ದರಿಂದಲೇ ದಾಸರು  ‘ನಿಮ್ಮನ್ನು ಸೇರಿ ಸುಖಿಯಾಗಿ ನಿಂತಿತು ರಂಗ ಎಂದು ತಮ್ಮ ಗೀತೆಯನ್ನು ಮುಗಿಸಿದರು  ಎನ್ನುವುದನ್ನು  ತಿಳಿಸಿ ಇಂದಿನ ವಿವರಣೆಯನ್ನು ಕೃಷ್ಣಾರ್ಪಣ ಎನ್ನುತ್ತೇನೆ. 


Saturday, June 20, 2026

ಏನು ಸುಖವೊ ರಂಗ

 ಆಚಾರ್ಯ ಮಧ್ವರು ಸಂಸ್ಕೃತದಲ್ಲಿ ರಚಿಸಿದ  ‘ದ್ವಾದಶ ಸ್ತೋತ್ರಗಳು’ ಎನ್ನುವ ಹನ್ನೆರಡು ಸ್ತೋತ್ರಗಳು ಹರಿದಾಸ ಸಾಹಿತ್ಯ ಸೃಷ್ಟಿಗೆ ನಾಂದಿಹಾಡಿದವು ಎನ್ನುವುದು ಒಂದು ಅಭಿಪ್ರಾಯ. ಅನೇಕ ತಲೆಮಾರುಗಳ ನಂತರ ಅದೇ ಪೀಳಿಗೆಯಲ್ಲಿ  ಪೀಠಾಧಿಪತಿಗಳಾದ ಶ್ರೀ ವ್ಯಾಸತೀರ್ಥರು ಆ ಚಟುವಟಿಕೆಯನ್ನು ಮುಂದುವರೆಸಿ, ಕನ್ನಡದಲ್ಲಿ ಅನೇಕ ಗೀತೆಗಳನ್ನು ರಚಿಸಿ, ಹರಿದಾಸ ಸಾಹಿತ್ಯಕ್ಕೆ ಬುನಾದಿ ಹಾಕಿದರು. ಹರಿದಾಸ ಶ್ರೇಷ್ಠರಾದ  ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರಿಗೆ ಗುರುಗಳೂ ಆಗಿದ್ದ ಶ್ರೀ ವ್ಯಾಸತೀರ್ಥರ  ಒಂದು ಲಯಬದ್ಧವಾದ  ಸುಂದರ ರಚನೆಯನ್ನು ಇಂದು ಪ್ರಸ್ತುತಪಡಿಸುತ್ತಿದ್ದೇವೆ. ಕೇಳಿ, ಗೀತೆ, ‘ಏನು ಸುಖವೊ ರಂಗ ಎಂಥ ಸುಖವೊ’

ಈಗ ನೀವು ಕೇಳಿದ ‘ಏನು ಸುಖವೊ ರಂಗ’ ಗೀತೆಯ ರಾಗ ಭೀಮ್ ಪಲಾಸ್, ಆದಿತಾಳ.     ‘ನಿನ್ನ ಧ್ಯಾನವಮಾಳ್ಪ ಸಜ್ಜನರ ಸಂಗ ಏನುಸುಖವೋ ರಂಗ’ ಎನ್ನುತ್ತದೆ  ಗೀತೆಯ ಪಲ್ಲವಿ.  ಹರಿಸೇವೆಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಎಂದು ಎರಡುವಿಧ. ಏಕಾಂತ ಆರಾಧನೆ ಎನ್ನುವುದು ವ್ಯಷ್ಟಿಸೇವೆ. ಇತರರ ಜತೆಗೂಡಿ ಮಾಡುವ ಸೇವೆ ಸಮಷ್ಟಿಸೇವೆ. ತಾನು ಇತರರನ್ನು ಉತ್ತೇಜಿಸಿ, ಮತ್ತು ಇತರರಿಂದ ತಾನು ಉತ್ತೇಜನಗೊಂಡು ಹರಿಸೇವೆಯಲ್ಲಿ ತೊಡಗುವುದು - ಉತ್ತಮ ದರ್ಜೆಯ ಸೇವೆ ಎನ್ನುವುದು ಒಂದು ಭಾವನೆ. ಆ ಭಾವನೆಗೆ ಒತ್ತುಕೊಡುವ  ಗೀತೆ ಇದು. 


ಕೇಳಿದ ಗೀತೆ,  ಶೃತಿ ಮತ್ತು ಲಯಬದ್ಧ ವಾಗಿದ್ದರೆ ಕಿವಿಗೆ ಇಂಪಾಗಿದ್ದು ಮನಸ್ಸಿನ ಮೇಲೆ ಅದರ  ಪರಿಣಾಮ ಇಮ್ಮಡಿಯಾಗುತ್ತದೆ. ಅದರಿಂದಲೇ  ತಾಳ ತಂಬೂರಿಗಳು ಹರಿದಾಸರ ಚಿಹ್ನೆಗಳಾದವು. ‘ತಂಬೂರಿ ಮೀಟಿ ಹಾಡುತ್ತಾ ಭಕ್ತಿಪರವಶರಾಗಿ ಕಣ್ಣಿನಿಂದ ಆನಂದಬಾಷ್ಪ ಸುರಿಸುತ್ತಾ ಕುಣಿದಾಡುವರ ಸಂಗ’ ಅದೆಂಥ ಸುಖ ಎಂದು ಉದ್ಗರಿಸುತ್ತದೆ ಮೊದಲ ಚರಣ. ಅಂಬಕ ದ್ವಯ ಎಂದರೆ ಎರಡು ಕಣ್ಣುಗಳು.  


ಹರಿದಾಸರ ಕೀರ್ತನೆಗಳು ಎಲ್ಲರ ನಾಲಗೆಯಿಂದಲೂ ಹೊರಹೊಮ್ಮಬೇಕು, ಭಕ್ತಿ ಭಾವನೆ ಹರಡಿ ಹೃದ್ಗತವಾಗಬೇಕು. ಆದ್ದರಿಂದಲೇ ಯಾರು ಏನೆಂದುಕೊಂಡಾರು ಎಂಬ ಚಿಂತೆ ಬಿಟ್ಟು, ಅರ್ಥಾತ್, ಲಜ್ಜೆ ಬಿಟ್ಟು, ದಾಸರು ಕಾಲಿಗೆ ಗೆಜ್ಜೆ ಕಟ್ಟಿ ಬೀದಿ ಬೀದಿಯಲ್ಲಿ ಹಾಡುತ್ತಾ, ಕುಣಿಯುತ್ತಾ  ನಡೆದರು. ಅವರನ್ನು ಕಂಡು ‘ಗೆಜ್ಜೆ ಕಾಲಿಗೆ ಕಟ್ಟಿ ಲಜ್ಜೆ ಬಿಟ್ಟು ಹರಿನಾಮ ಭಜನೆ ಮಾಡುತ ಅಘವರ್ಜಿತ ರಾಗಿಹರ ಸಂಗ ಏನುಸುಖವೋ’ ಎಂದರು ವ್ಯಾಸತೀರ್ಥರು. ಅಘ ಎಂದರೆ ಪಾಪ. ‘ಅಘ ವರ್ಜಿತ’ ರೆಂದರೆ ತಮ್ಮ ಪಾಪಗಳನ್ನು ನಾಮ ಸಂಕೀರ್ತನೆಯ ಮೂಲಕ ದೂರಗೊಳಿಸಿದವರು.  


ನಂತರದ ಚರಣದಲ್ಲಿನ  ‘ತುಚ್ಛವಿಷಯವ ತೊರೆದು ನಿಶ್ಚಲ ಭಕುತಿಯಿಂದ’ - ಅಚ್ಯುತ ಅನಂತನ ಪಾದವ ಮೆಚ್ಚಿಸುವುದು - ಇದು  ಹರಿಭಕ್ತರೆಲ್ಲರ ಅಪೇಕ್ಷೆ. ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಸುಲಭಸಾಧ್ಯವಲ್ಲವೆಂಬುದು ಪ್ರಯತ್ನಿಸಿದವರೆಲ್ಲರೂ ತಿಳಿದಿರುವ ಸಂಗತಿ. ಹಾಗೆ ನಿಶ್ಚಲ ಭಕುತಿಯನ್ನು ಅನುಷ್ಠಾನಕ್ಕೆ ತಂದವರ ಸಂಗ ಸಿಕ್ಕಿದರೆ ? ಏನು ಸುಖವೋ ರಂಗ ಅಲ್ಲವೇ ! 

ಪೀಠಾಧಿಪತಿಗಳೆಂದರೆ ಒಂದು ಧರ್ಮದ ಅನುಯಾಯಿಗಳ ಶ್ರೇಣಿಬದ್ಧವಾದ ವ್ಯವಸ್ಥೆಯಲ್ಲಿ ಅತ್ಯುನ್ನತ  ಸ್ಥಾನ ಹೊಂದಿರುವವರು. ಅಂಥ ವ್ಯಕ್ತಿಯೊಬ್ಬರು ತಮಗಿಂತ ಕೆಳಗಿನ ಸ್ಥರದಲ್ಲಿರುವ ‘ಹರಿದಾಸರ ಸಂಗಕ್ಕೆ ಹಾತೊರೆಯುವೆ’ ಎಂದು ಸಾರುವ ಇಂಥ ಗೀತೆಯನ್ನು ರಚಿಸಿದ್ದಾರೆಂದರೆ ವ್ಯಾಸತೀರ್ಥರ ವಿಶಾಲ ಹೃದಯ ಮತ್ತು ಅವರಿಗೆ ದಾಸಪಂಥದಮೇಲಿರುವ ಅಭಿಮಾನ  ಎಷ್ಟೆಂದು ತಿಳಿದುಬರುತ್ತದೆ. 


ಜೀವನದಲ್ಲಿ ಶಿಷ್ಟರಾಗಿದ್ದುಕೊಂಡು, ಹರಿ ಸಂಕೀರ್ತನೆಯಮೂಲಕ  ಶ್ರೀ ಕೃಷ್ಣನಿಗೆ ಪ್ರಿಯರಾಗಿರುವವರ ಸಂಗವನ್ನಾಶಿಸುವ ವ್ಯಾಸರಾಯರ ಈ  ಗೀತೆಯ ಭಾವ ಎಲ್ಲರ ಮನದೊಳಗೆ ಹೊಗಲಿ, ನಾಲಗೆಗಳಲ್ಲಿ ಹರಿನಾಮ ಹರಿದಾಡುತ್ತಾ, ಆ ಮೂಲಕ  ಶ್ರೀ ಕೃಷ್ಣನಿಗೆ ಇಷ್ಟರಾಗುವ ಭಾಗ್ಯ ಎಲ್ಲರಿಗೂ ಲಭ್ಯವಾಗಲೆಂದು ಹಾರೈಸುತ್ತಾ, ಕೃಷ್ಣಾರ್ಪಣ ಎನ್ನುತ್ತೇನೆ. 


Saturday, June 13, 2026

ಮುತ್ತು ಕೊಳ್ಳಿರೋ

 ಒತ್ತಿಹೇರುವುದಲ್ಲ, ಹೊತ್ತು ಮಾರುವುದಲ್ಲ, ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ  ಎಂದು ಬಣ್ಣಿಸುತ್ತಾ ಕೃಷ್ಣನಾಮವೆಂಬ ಕಲ್ಲುಸಕ್ಕರೆ ಕೊಳ್ಳಿರೋ ಎಂದು ಹಾಡಿದರು ಪುರಂದರದಾಸರು.  ತಮ್ಮ ರಸ್ತೆಬದಿಯ ಶ್ರೋತೃಗಳನ್ನು ಆಕರ್ಷಿಸಲು ಬೇರೊಂದು ಸಾಮಗ್ರಿ ಬೇಕೆನಿಸಿದಾಗ ಅದೇ ಕೃಷ್ಣನಾಮವನ್ನು ಮುತ್ತೆಂದು ಕರೆದು ಅದರ ಗುಣಗಳನ್ನು ಬಣ್ಣಿಸಿದರು. ಮುತ್ತಾಗಲೀ, ಕಲ್ಲುಸಕ್ಕರೆಯಾಗಲೀ ಅದು ಸೂಚಿಸುವ ಪರಮಾತ್ಮನೂ ಅದರಲ್ಲಿರುವ ಪರಮಾತ್ಮನೂ ಅವನೇ ಅಲ್ಲವೇ?  ಇಂದು  ಅವನು ಮುತ್ತೇ ಆಗಿರಲಿ !  ಗೀತೆ, ‘ಮುತ್ತು ಕೊಳ್ಳಿರೋ  ಜನರು ಮುತ್ತು ಕೊಳ್ಳಿರೋ’.     

ಕಲ್ಲುಸಕ್ಕರೆಯೋ, ಪಾಯಸವೋ,  ಮುತ್ತೋ, ರತ್ನವೋ, ದಾಸರು ಸಾಮಾನ್ಯರಿಗೆ ತಿಳಿದಿರುವ  ವಸ್ತುಗಳನ್ನು ಬಣ್ಣಿಸುವ  ಮೂಲಕ ಅಸಾಮಾನ್ಯವಾದ ಒಂದು ವಸ್ತುವಿನೆಡೆಗೆ ಅವರನ್ನು ಸೆಳೆಯುವ  ಪ್ರಯತ್ನ ಮಾಡುತ್ತಾರೆ. ಮುತ್ತುಕೊಳ್ಳಿರೋ ಗೀತೆಯ ಪಲ್ಲವಿಯಲ್ಲಿ  ಸಚ್ಚಿದಾನಂದ ಸ್ವರೂಪವಾದ, ಎಂದರೆ ಸತ್ಯವಾದ, ಜ್ನಾನ - ಆನಂದ  ಸ್ವರೂಪವಾದ  ಭಗವಂತನನ್ನು, ಶ್ರೇಷ್ಠವಾದ ಮುತ್ತಿಗೆ ಹೋಲಿಸಿ, ಅದನ್ನು ಪಡೆದುಕೊಳ್ಳಿ ಎಂದು ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. 


ಮುಷ್ಟಿಯಲ್ಲಿ ಹಿಡಿಯಹೋದರೆ ಜಾರಿ ಚಲ್ಲಾಪಿಲ್ಲಿಯಾಗುವ ಮುತ್ತುಗಳನ್ನು ಪೋಣಿಸಿ ನಮ್ಮ ಹಿಡಿತಕ್ಕೆ  ತರಬೇಕಾದರೆ  ಒಂದು ದಾರದ ಅವಶ್ಯಕತೆ  ಇದೆ ಅಲ್ಲವೇ?  ಹಾಗೆಯೇ ನಮ್ಮ ಹಿಡಿತಕ್ಕೆ ಬಾರದ  ಭಗವಂತನನ್ನು ಕೊಂಚಮಟ್ಟಿಗಾದರೂ ಹಿಡಿಯುವ  ಪ್ರಯತ್ನಮಾಡಬೇಕಾದರೆ ನಮಗೆ ಜ್ಞಾನವೆಂಬ ದಾರದ ಅವಶ್ಯಕತೆಯಿದೆ. ಅದರಿಂದಲೇ ಆ ಭಗವಂತನೆಂಬ ಮುತ್ತನ್ನು ‘ಜ್ಞಾನವೆಂಬ ದಾರದಲ್ಲಿ ಪೋಣಿಸಿರುವ ದಿವ್ಯ ಮುತ್ತು’ ಎಂದರು ದಾಸರು. ಸರಿ. ಆದರೆ ಅದನ್ನು ಕೊಳ್ಳುವವರಿಗೆ ಮತ್ತೊಂದು ಅರ್ಹತೆ ಬೇಕು. ಅದನ್ನು ಮುಂದಿನ ಸಾಲಿನಲ್ಲಿ  ‘ದೀನರಾದ ಭಕ್ತಜನರು ಜ್ಞಾನದಿಂದ ಕೊಂಬುದಿದನು’ ಎಂದು ಸೂಚಿಸಿದ್ದಾರೆ ದಾಸರು. ಪರಮಾತ್ಮನನ್ನು ತಿಳಿದುಕೊಳ್ಳಲು ಬೇಕಾದ ಮುಖ್ಯ ಅರ್ಹತೆ ದೀನತೆ. ಸಂಪೂರ್ಣ ಶರಣಾಗತಿ.  ಗರ್ವಿಗಳಕೈಗೆ ಅವನು ಸಿಕ್ಕುವುದಿಲ್ಲವಂತೆ. ಒಬ್ಬನ ಗರ್ವ ಎಷ್ಟು ಹೆಚ್ಚೋ ಅಷ್ಟು ಅವನಿಂದ ದೂರ ಭಗವಂತ. 


ಮತ್ತೆ ಮುಂದಿನ ಚರಣದಲ್ಲಿ ದಾಸರೆನ್ನುತ್ತಾರೆ, ‘ಭ್ರಷ್ಟಜನಕೆ ಕಾಣಿಸದಂತ ಕೃಷ್ಣನೆಂಬೋ ಅಣಿಮುತ್ತು’. ಕಂಸ ಚಾಣೂರರ  ಎದುರಿಗೇ ಇದ್ದ ಕೃಷ್ಣ. ಅವರು ಕಂಡದ್ದು ತಮ್ಮ ಎದುರಾಳಿಯಾದ ಸೋದರಳಿಯನನ್ನು ಮಾತ್ರ. ಅಕ್ರೂರ, ವಿದುರ, ಸುಧಾಮ ಮೊದಲಾದ ಸಜ್ಜನರು ಕಂಡರು ಶ್ರೀ ಕೃಷ್ಣನೆಂಬ ಮಾನವರೂಪದಲ್ಲಿದ್ದ ಪರಮಾತ್ಮನನ್ನು. 


ಕೊನೆಯ ಚರಣದಲ್ಲಿ ದಾಸರೆನ್ನುತ್ತಾರೆ ‘ಹಿಡಿಯಲಿಕ್ಕೆ ನಿಲುಕದದು, ಕಡೆಕಾಣದೆಂದು ಬೆಲೆಯು’. ಹಿಡಿಯಹೋದರೆ ಕೈಗೆ ಸಿಗದೆ ಹಾವಿನಂತೆ ನುಣುಚಿಕೊಂಡು ಹೋಗುವ ವಸ್ತು ಪರಮಾತ್ಮ. ಅದಕ್ಕೆಂದೇ ಅವನ ಸಾವಿರ ನಾಮಗಳಲ್ಲಿ  ‘ವ್ಯಾಲ’ ಎನ್ನುವುದು ಒಂದು ನಾಮ.  ವ್ಯಾಲ ಎಂದರೆ ಸರ್ಪ.  ಮತ್ತೆ ಕೊನೆಯಲ್ಲಿ ಹೇಳಿದರು  ‘ಕಡೆಕಾಣದೆಂದು ಬೆಲೆಯು’. ಅವನಿಗೆ ಒಂದು ಬೆಲೆ ಕಟ್ಟುವುದು ಉಂಟೇ ? ‘ಅಮೇಯ’ ಎನ್ನುವುದು ಅವನ ಮತ್ತೊಂದು ನಾಮ. ಅಮೇಯ ಎಂದರೆ ಎಣಿಕೆಗೆ ಸಿಗದವನು ಎಂದು. 


ಆದರೆ ಹೀಗೆ ನುಣುಚಿಕೊಂಡು ಓಡುವ, ಬೆಲೆಕಟ್ಟಲಾಗದ ‘ಪೊಡವಿಗೊಡೆಯನೆಂಬ ದಿವ್ಯ ಮುತ್ತು’ ಭಕ್ತಿಯಿಂದ ಕೈನೀಡಿದರೆ ತಾನೆ ಬಂದು ಕೈಗೆ ಬೀಳುತ್ತದಂತೆ.  ಹಾಗಾಗಿ, ಕೈನೀಡಿ ನೋಡಿ, ಸಿಕ್ಕರೆ ಹಿಡಿದು ಕೊಳ್ಳಿರಪ್ಪಾ  ಎಂದು ಸಾರುತ್ತಾ ಮುಂದೆ ನಡೆದರು ಪುರಂದರ ದಾಸರು ಎನ್ನುವಲ್ಲಿಗೆ ಇಂದಿನ ವಿವರಣೆ ಕೃಷ್ಣಾರ್ಪಣ. 


Sunday, June 7, 2026

ಅನುಭವದಡುಗೆಯ ಮಾಡಿ

 ಅನುಭವದಡುಗೆಯ ಮಾಡಿ, ಅದ 

ಕ್ಕನುಭವಿಗಳು ಬಂದು ನೀವೆಲ್ಲ  ಕೂಡಿ 


ತನುವೆಂಬ ಭಾಂಡವ ತೊಳೆದು, ಕೆಟ್ಟ 

ಮನದ ಚಂಚಲವೆಂಬ ಮುಸುರೆಯ ಕಳೆದು 

ಘನವಾಗಿ ಮನೆಯನ್ನು ಬಳಿದು, ಅಲ್ಲಿ 

ಮಿನುಗುವ ತ್ರಿಗುಣದ ಒಲೆಗುಂಡನೆಡೆದು 


ವಿರಕ್ತಿಎಂಬುವ ಮಡಿಯುಟ್ಟು, ಪೂರ್ಣ 

ಹರಿಭಕ್ತಿ ಎಂಬ ನೀರನ್ನೆಸರಿಟ್ಟು 

ಅರಿವೆಂಬ ಬೆಂಕಿಯ ಕೊಟ್ಟು, ಮಾಯಾ 

ಮರೆವೆಂಬ ಕಾಷ್ಠವ ಮುದದಿಂದ ಸುಟ್ಟು 


ಶರಣೆಂಬೋ ಸಾಮಗ್ರಿ ಹೂಡಿ, ಮೋಕ್ಷ 

ಪರಿಕರವಾದಂಥ ಪಾಕವ ಮಾಡಿ 

ಗುರು ಶರಣರು ಸವಿದಾಡಿ ನಮ್ಮ ಪುರಂ 

ದರ ವಿಠಲನ ಬಿಡದೆ ಕೊಂಡಾಡಿ


ನಮ್ಮ ದಾಸ ಸಾಹಿತ್ಯಸಿರಿ ಸಂಚಿಕೆಗಳೊಂದರಲ್ಲಿ ಕೆಲವು ಸಮಯದ  ಹಿಂದೆ ನಾವು ಪುರಂದರ ದಾಸರ ‘ಉದರವೈರಾಗ್ಯವಿದು’ ಗೀತೆಯನ್ನು ನೋಡಿದೆವು. ಭಕ್ತಿವಿಹೀನವಾದ ಡಂಭಾಚಾರದ ಆಚರಣೆಯನ್ನು  ಅಲ್ಲಿ ಎತ್ತಿ ತೋರಿಸಿದ ದಾಸರು ತಮ್ಮ ಮತ್ತೊಂದು ಗೀತೆಯಲ್ಲಿ ನಿಜವಾದ ಆರಾಧನೆ ಎಂತಿರಬೇಕು ಎನ್ನುವುದನ್ನು ತಿಳಿಸಿದ್ದಾರೆ.

   

‘ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ’ ಎಂಬ ಒಂದೇ ಸಾಲಿನಲ್ಲಿ ಪರಮಾತ್ಮನೆಂಬ ವಸ್ತುವಿನ ಅಸ್ತಿತ್ವದ ಪರಿಯನ್ನು ವಿವರಿಸಿದ್ದಾರೆ  ನಿಜಗುಣ ಶಿವಯೋಗಿಗಳು. ಯಾರ ಮನದಲ್ಲಿ ಪರಮಾತ್ಮನೆಂದರೆ ಯಾವರೀತಿಯ ಭಕ್ತಿ, ಭಾವನೆ, ಕಲ್ಪನೆಗಳು ಇರುತ್ತವೆಯೋ ಅದೇರೀತಿಯಲ್ಲಿ ಪರಮಾತ್ಮ ಅವರಿಗೆ ಕಾಣಿಸಿಕೊಳ್ಳುತ್ತಾನಂತೆ. ಹಾಗೆ ತಮ್ಮ ಕಲ್ಪನೆಗೆ ತಕ್ಕಂತೆ ಕಂಡ ಭಗವಂತನನ್ನು ನಂಬಿದವರು ತಮ ತಮಗೆ ಉಚಿತವೆನಿಸಿದ ರೀತಿಯಲ್ಲಿ ಆರಾಧಿಸಿದರು. ಆದರೆ ಪೂಜೆಯೋ, ವ್ರತವೋ, ಯಜ್ಞವೋ, ಯಾಗವೋ  ಏನೇಮಾಡಿದರೂ ಕೊನೆಗೆ ತಮ್ಮ ತಮ್ಮ ಅಂತರಂಗದ ಆರಾಧನೆಯಿಂದ ಮಾತ್ರ, ಅಂದರೆ, ಸ್ವಚಿಂತನೆ ಮತ್ತು ಸ್ವಾನುಭವದಿಂದ ಮಾತ್ರವೇ ಭಗವಂತನ ಸಾಕ್ಷಾತ್ಕಾರ ಸಾಧ್ಯವೆಂದು ಜ್ಞಾನಿಗಳು ಹೇಳಿರುತ್ತಾರೆ.  ಆ ಭಾವನೆಯನ್ನು ಶ್ರೀ ಪುರಂದರ ದಾಸರು ತಮ್ಮ ‘ಅನುಭವದಡುಗೆಯ ಮಾಡಿ’ ಗೀತೆಯಲ್ಲಿ ಸುಂದರವಾಗಿ ಮೂಡಿಸಿದ್ದಾರೆ. ಇಲ್ಲಿ ಅಡುಗೆ ಎಂದರೆ ಪರಮಾತ್ಮನ ಆರಾಧನೆ. ಆ ಪರಮಾತ್ಮ ಎಂಬ ವಸ್ತುವಿನಬಗ್ಗೆ  ನಿಮಗಿರುವ  ಅನುಭವವೇ ಆರಾಧನೆಯಾಗಲಿ ಎಂಬುದು ಒಂದು ಅರ್ಥವಾದರೆ, ಮಾಡಿದ ಅಡುಗೆ ಎಂದರೆ - ಪರಮಾತ್ಮನ ಪೂಜೆ ಎನ್ನುವುದು ಬರಿಯ   ಅಲಂಕಾರ, ಮಂಗಳಾರತಿ, ನೈವೇದ್ಯಗಳಾಗಿ ಉಳಿಯದೆ ಅದರ ಹಿಂದಿನ ತತ್ವ ನಿಮ್ಮ ಅನುಭವಕ್ಕೆ ಬರಲಿ ಎಂಬುದು ಮತ್ತೊಂದು ಅರ್ಥ. 


ತನುವೆಂಬ ಭಾಂಡವ ತೊಳೆದು, ಮನದ ಚಂಚಲವೆಂಬ ಮುಸುರೆಯ ಕಳೆದು ಎಂಬ ಸಾಲುಗಳು ಅಂತರಂಗ ಬಹಿರಂಗ ಶುದ್ಧಿಯಾಗಿ, ಮನಸ್ಸು ಸ್ಥಿರವಾಗಲಿ ಎನ್ನುವುದನ್ನು  ಸೂಚಿಸುತ್ತವೆ.  ತ್ರಿಗುಣದ  ಒಲೆಗುಂಡನೆಡೆದು ಎನ್ನುವ ಸಾಲು  ನಿಮ್ಮಲ್ಲಿರುವ ಗುಣಗಳು ಭಕ್ತಿಗೆ ಆಧಾರವಾಗಲಿ ಎನ್ನುತ್ತದೆ. ‘ವಿರಕ್ತಿಯೆಂಬ  ಮಡಿಯುಟ್ಟು’ ಎಂದರೆ  ವೈರಾಗ್ಯದ ಆವರಣ ನಮ್ಮನ್ನು ಸುತ್ತುವರೆದು, ‘ಹರಿಭಕ್ತಿ ಎಂಬನೀರನ್ನೆಸರಿಟ್ಟು’ ಎಂದರೆ ಭಕ್ತಿಯೇ ಪೂಜೆಯ ಪ್ರಮುಖ ಸಾಧನವಾಗಿ, ಜ್ಞಾನ ಪ್ರಜ್ವಲಿಸಿ, ಅಜ್ಞಾನ ಸುಟ್ಟು ಬೂದಿಯಾಗಿ, ಆತ್ಮ ಸಮರ್ಪಣೆ ಎಂಬ ಪರಿಪಕ್ವವಾದ ನೈವೇದ್ಯ ಸಿದ್ಧವಾಗಲಿ ಎಂಬುದು ಗೀತೆಯ ಒಟ್ಟು ಭಾವ. 


ಎರಡನೇ ಚರಣದಲ್ಲಿರುವ ಮಾಯಾಮರೆವೆಂದರೆ ಅಜ್ಞಾನ. ‘ಅವನಾಡಿಸಿದಂತೆ ನಾನಾಡುವವನು’ ಎಂಬ ತಿಳುವಳಿಕೆ ಇಲ್ಲದಿರುವುದು. ಮತ್ತು ಕೊನೆಯಲ್ಲಿ ಮೋಕ್ಷ ಪರಿಕರವಾದ ಪಾಕ ಎಂದರೆ ಜೀವನನ್ನು ಮೋಕ್ಷದ ದಾರಿಯಲ್ಲಿ ಕರೆದೊಯ್ಯುವಂಥ ಪಾಕ ಅಂದರೆ ಭಗವತ್ ಸಾಕ್ಷಾತ್ಕಾರ. ಅದಕ್ಕಾಗಿ  ಹಾತೊರೆಯುವ ಸಜ್ಜನರ ಸಂಗದಲ್ಲಿ ನಿಮ್ಮ ಅಡುಗೆಯನ್ನು ಸವಿಯುವುದಾಗಲಿ ಎಂದು ದಾಸರು ಬೋಧಿಸಿದ್ದಾರೆ ಎಂದು  ತಿಳಿಸುತ್ತಾ ಇಂದಿನ ಚಿಂತನೆ  ಕೃಷ್ಣಾರ್ಪಣವಾಗಲಿ ಎನ್ನುತ್ತೇನೆ. 







Saturday, May 30, 2026

My hearing aid

 



ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ, ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ, ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ. 


The lines above are from a Vachana (spiritual prose/poetry) of Sri BasavaNa, which mean ‘Make me lame so that I don't wander away (from you), make me blind so that I don't see anything (other than you), Make me deaf so that I don't hear anything (other than your praise) - which he wrote nearly nine hundred years ago. I have no idea if god acceded to his request and made him blind or deaf. But he made me deaf even though I did  not request any such favour ! And he made a clumsy job of it. Instead of making  me totally deaf, he only made me deaf in one ear and kept the other ear partly open. 


Because of his half hearted attempt, I was hearing some things and not hearing some. And it was not my choice. He decided what I heard and what I missed, but I got the blame for what I missed.  My wife complained that I heard everything except what she spoke. I wanted to say that it was the best part of being partly deaf but better sense prevailed and I kept my mouth shut. 


It was in this situation that my cousin made an appearance. These days no one visits others casually. This fellow happened to be near my house on some errand and he decided to see me. We were talking. My wife said something. He heard it and I did not. My wife made a big fuss which was good because my cousin took leave almost immediately. But before leaving he took out his hearing aid which was his latest acquisition, exhibited it proudly,  spoke highly of its virtues and left after suggesting that I get one too. 


So, that is how I ended up sitting in front of an audiologist like a sheep, my eyes closed, a headphone on my head, nodding whenever he tapped the table with his pen. He made a chart and handed it over with an estimate for the hearing aid. It was three times my monthly pension.  I wasn’t  prepared to spend so much for the inconvenience of wearing a hearing aid. I sat over it for more than six months. But ultimately I had to succumb because my wife was determined to make me hear her words again, expenses be damned. 


So now, I am the proud owner of a hearing equipment an inch long with a slender wire dangling from one end. It looked  like it was going to disintegrate if I sneezed and I mentioned that. But the audiologist said it comes with a two year warranty and taped my mouth. Now, I have to balance the body behind my ear and push the wire inside my ear. I have managed to do that and am waiting to see if my wife’s words register in my brain. 


But I am in a difficult situation. You see, I have paid an astronomical sum for the hearing aid and I want it to work. At the same time I feel I was better off being part deaf and would have liked to remain so, following BasavaNNa. Another trouble is, now that I have the aid in my ear,  my wife thinks that her words are  appearing crystal clear in my brain.  If I don't get what she said, it is not because of anything being wrong with my hearing aid but  because I have no intention to listen to her. It is  a lose, lose situation !




ಸುಳ್ಳು ನಮ್ಮಲ್ಲಿಲ್ಲವಯ್ಯಾ

 

ಸುಳ್ಳು ನಮ್ಮಲ್ಲಿಲ್ಲವಯ್ಯಾ , ಸುಳ್ಳೇ ನಮ್ಮನಿ ದೇವರು 

ಇಲಿಯು ಒಲೆಯ ಹಚ್ಚೋದ ಕಂಡೆ , ಬೆಕ್ಕು ಭಕ್ಕರಿ ಮಾಡೋದ ಕಂಡೆ 

ಮೆಕ್ಕೆಕಾಯಿ ಕಂಡೆನಪ್ಪಾ ತೆಕ್ಕೆ ಗಡತರ 

ಕಪ್ಪೆ ಪಾತರ ಕುಣಿಯೋದ ಕಂಡೆ, ಏಡಿ ಮದ್ದಳೆ ಬಾರ್ಸೊದ ಕಂಡೆ 


ಮೆಣಸಿನಕಾಯಿ ಕಂಡೆನಪ್ಪಾ ಒನಕೆ ಗಡತರ 


ಅರಿಶಿಣವನು ಬಿತ್ತುದ ಕಂಡೆ, ಗಸಗಸೆಯನು ಎಣಿಸೋದ ಕಂಡೆ 


ಪುರಂದವಿಠಲನ ಪಾದವ ಕಂಡೆ, ಪರ್ವತ ಗಡತರ 


ಪ್ರತಿದಿನವೂ ಹರಿನಾಮ ಸಂಕೀರ್ತನೆ ಮಾಡುತ್ತಾ  ಶ್ರೀ ಹರಿಯ ಹಿರಿಮೆಯನ್ನು  ಬಣ್ಣಿಸುತ್ತಾ, ನೀತಿ ಪಾಠ ಹೇಳುತ್ತಾ ಊರು ಸುತ್ತುತ್ತಿದ್ದ ಪುರಂದರದಾಸರಿಗೆ, ಜನರ ಗಮನವನ್ನು ತಮ್ಮ ಕಡೆ ಸೆಳೆದಿಡುವ ಸಲುವಾಗಿ ಹೊಸ ಹೊಸ ರೀತಿಯ ಉಪಾಯಗಳನ್ನು ಹೊಂಚುವ ಅಗತ್ಯವಿತ್ತು. ತಮ್ಮ ಗೀತೆಗಳ ಧಾಟಿ, ಪದಗಳ ಬಳಕೆಗಳಲ್ಲಿ ಬದಲಾವಣೆ ಗಳನ್ನು ಮಾಡುತ್ತಾ ಅವರು ಕೇಳುವವರ ಗಮನವನ್ನು ಆಕರ್ಷಿಸಿದರು. ಆ ನಿಟ್ಟಿನಲ್ಲಿ, ಮೊದಲನೋಟಕ್ಕೆ ಅಸಂಭದ್ದವೆನಿಸಿದರೂ, ಒಳಗಿನ ಅರ್ಥಕಂಡಾಗ ‘ಹೌದಲ್ಲವೇ’ ಎನಿಸುವಂಥ ರಚನೆಗಳ ಬಳಕೆ ಅವರ ಒಂದು ಪ್ರಯತ್ನ.


ಗೀತೆಯ  ಪಲ್ಲವಿ ನೋಡಿ. “ಸುಳ್ಳು ನಮ್ಮಲಿಲ್ಲವಯ್ಯಾ ಸುಳ್ಳೆನಮ್ಮನಿದೇವರು”. ನಾವು ಸುಳ್ಳರಲ್ಲ, ಸುಳ್ಳನ್ನು ದೇವರೆಂದು ಪೂಜಿಸುವವರು. ಇದು ಮೇಲ್ನೋಟದ ಅರ್ಥ. ಇಂಥ ಪದಜೋಡಣೆಯೇ ದಾಸರ ತಂತ್ರ. ಜನರು ತಮ್ಮ ಮುಂದಿನ ಮಾತಿಗೆ ಆಸಕ್ತಿಯಿಂದ ಕಿವಿಗೊಡುವಂತೆ ಮಾಡುವ ಯತ್ನ.  ‘ಸುಳ್ಳು ನಮ್ಮಲಿಲ್ಲವಯ್ಯಾ’ ಎಂಬ ವಾಕ್ಯಕ್ಕೆ  ‘ಜಗತ್ ಸತ್ಯ’  ಅಥವಾ ‘ಪರಮಾತ್ಮನ ಸೃಷ್ಟಿ ಸುಳ್ಳಲ್ಲ’ ಎಂಬ ಮಧ್ವಮತಪರವಾದ ಅರ್ಥವನ್ನು ತಿಳಿದವರು ಕೊಟ್ಟಿದ್ದಾರೆ. ಮುಂದೆ ‘ಸುಳ್ಳೇ ನಮ್ಮನಿ ದೇವರು’.  ಇದರ ಅರ್ಥ, ಹೇಳುವ ರೀತಿಯನ್ನು ಅನುಸರಿಸುತ್ತದೆ.  ಪರಮಾತ್ಮನ ಇರುವಿಕೆಯ ಅರಿವು ನಮಗೆ ಆಗುವ ವರೆಗೂ ನಮ್ಮ ಪಾಲಿಗೆ ಅವನಿಲ್ಲ.  ಸುಳ್ಳೆ. ನಮ್ಮನಿ ದೇವರು.  ಆದರೆ ಜ್ಞಾನಪ್ರಾಪ್ತಿಯಾಗಿ ಅವನ ಇರುವಿನ ಅರಿವು ನಮಗಾದರೆ ಅವನು ಸದಾ ನಮ್ಮೊಡನೆಯೇ ಇರುವವ.  ಸುಳ್ಳೇ ? ನಮ್ಮನಿ ದೇವರು? ಎಲ್ಲಾದರೂ ಉಂಟೇ ಎನ್ನುವ ಧಾಟಿ.  ಆದ್ದರಿಂದ ಅವನು ಇರುವುದೂ ಹೌದು, ಇಲ್ಲವೂ ಹೌದು.  ಸತ್ ಎನ್ನುವುದು ಅವನ ನಾಮ, ಅಸತ್ ಎನ್ನುವುದೂ ಅವನ ನಾಮವೇ.


ಮೊದಲ ಚರಣ ‘ಇಲಿಯು ಒಲೆಯ ಹಚ್ಚೊೋದ  ಕಂಡೆ ಎಂದು ಪ್ರಾರಂಭವಾಗುತ್ತದೆ . ಮನಸ್ಸು ಅಥವಾ ವಿಷಯಾಸಕ್ತಿಯನ್ನು ಇಲ್ಲಿ ಇಲಿ ಎಂದರು. ಆ ವಿಷಯಾಸಕ್ತಿ ಎಂಬ ಇಲಿ ನಮ್ಮ ಜ್ಞಾನೇಂದ್ರಿಯಗಳು ಎಂಬ ಒಲೆಗೆ ಬೆಂಕಿಯಿಟ್ಟಿತು ಅಂದರೆ ಆ ಇಂದ್ರಿಯಗಳು ವಿಷಯಗಳ ಕಡೆಗೆ ಸೆಳೆಯಲ್ಪಟ್ಟವು.  ಮುಂದೆ ‘ಬೆಕ್ಕು ಭಕ್ಕರಿ ಮಾಡೋದ’  ಕಂಡೆ. ಎಂದರೆ ‘ಬುದ್ಧಿ’ಯೆಂಬ ಬೆಕ್ಕು ವಿಷಯಗಳಿಂದ ಆದ ಪ್ರಚೋದನೆಗೆ ಅನುಗುಣವಾಗಿ ಕರ್ಮೇಂದ್ರಿಯಗಳನ್ನು ಪ್ರೇರೇಪಿಸಿ ಕಾರ್ಯನಿರತಗೊಳಿಸಿತು. ಅದನ್ನು, ‘ಭಕ್ಕರಿ ಮಾಡೋದು’ ಎಂದರು.  


ಹಾಗೆಯೇ, ಮುಂದಿನ ಚರಣ ‘ಕಪ್ಪೆ ಪಾತರ ಕುಣಿಯೋದ ಕಂಡೆ’  ಎನ್ನುತ್ತದೆ. ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಕುಪ್ಪಳಿಸುತ್ತಾ ಇರುವ  ಮನವನ್ನು ಕಪ್ಪೆ ಎಂದರು. ಮನಸ್ಸು ಒಂದು ವಿಷಯದಿಂದ ಮತ್ತೊಂದಕ್ಕೆ ಕುಪ್ಪಳಿಸುತ್ತಾ ನೃತ್ಯ ಮಾಡಿತು. ಮುಂದೆ, ‘ಏಡಿ ಮದ್ದಳೆ ಬಾರ್ಸೊದ ಕಂಡೆ’. ಏಡಿಗೆ ಎಂಟುಕಾಲು, ಮತ್ತೆ ಕಾಲಿನಂತೆಯೇ ಕಾಣುವ ಎರಡು ಕೊಂಡಿಗಳು. ಹತ್ತು ಅಂಗಗಳು. ಆದ್ದರಿಂದ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳನ್ನು ಒಟ್ಟು ಸೇರಿಸಿ ಹತ್ತು ಅಂಗಗಳ ಗುಂಪನ್ನು  ಏಡಿ ಎಂದರು. ಈ ಇಂದ್ರಿಯಗಳ ಗುಂಪೆಂಬ ಏಡಿ  ‘ಮದ್ದಲೆ ಬಾರಿಸಿತು’ ಎಂದರೆ  ಕಪ್ಪೆಯ ಅಥವಾ ಮನಸ್ಸಿನ  ಕುಣಿತಕ್ಕೆ ಪ್ರತಿಕ್ರಿಯಿಸಿತು.  


ಹೀಗೆ ವಿಷಯಾಸಕ್ತಿಯನ್ನು ಅನುಸರಿಸುತ್ತಾ  ಮನಸ್ಸಿನ ಎಗರಾಟ, ಅಂಗಗಳ ಕುಣಿದಾಟದಿಂದ ಬಂದ ಕೆಟ್ಟ ಫಲ ಒನಕೆ ಗಾತ್ರದ ಮೆಣಸಿನಕಾಯಿ ಮತ್ತು ತೆಕ್ಕೆ ಗಾತ್ರದ ಮೆಕ್ಕೆ ಕಾಯಿ. ಒಂದು ಖಾರ, ಒಂದು ಕಹಿ.  ವಿಷಯಾಸಕ್ತಿಯನ್ನೇ ಅನುಸರಿಸಿ ಅದಕ್ಕನುಗುಣವಾಗಿ ನಡೆದರೆ, ಸಿಕ್ಕುವುದು ಇಂಥದೇ ಫಲವೆಂಬುದು ಒಟ್ಟು ಎರಡು ಚರಣಗಳ ಭಾವ. ಇದನ್ನು ದಾಸರು ಇನ್ನೂ ಕೆಲವು ರಚನೆಗಳಲ್ಲಿಯೂ ಹೇಳಿದ್ದಾರೆ. 


ಕೊನೆಯ ಚರಣ ‘ಅರಿಶಿನ ಬಿತ್ತೋದು ಕಂಡೆ, ಗಸಗಸೆ ಎಣಿಸೋದ ಕಂಡೆ’. ಅರಿ ಎಂದರೆ ಶತ್ರುಗಳು. ಶಿನ ಎಂದರೆ ಹೊಂದಾಣಿಕೆ. ಅರಿಶಿನ ಬಿತ್ತೋದು ಎಂದರೆ ಮೇಲೆ  ಸೂಚಿಸಿರುವ ಕಾಮ ಕ್ರೋಧ ಮೋಹ ಮುಂತಾದ ಶತೃಗಳೊಡನೆಯೇ ಸಂಭಂದ ಬೆಳಸಿ  ಬಾಳುವುದು. ಹೀಗೆ ಬಾಳುತ್ತಿದ್ದಾಗ ನಮಗೆ ತಿಳಿಯದಂತೆ ಯಾರೋ ಒಬ್ಬ  ‘ಗಸಗಸೆ ಎಣಿಸುತ್ತಿದ್ದ’. ನಮ್ಮ ಜೀವನಕಾಲದ ಸಣ್ಣಸಣ್ಣ ತುಣುಕುಗಳನ್ನು, ಕ್ಷಣಕ್ಷಣಗಳನ್ನು, ಸಣ್ಣ ಸಣ್ಣ ಗಸಗಸೆಕಾಳಿಗೆ ಹೋಲಿಸಿದರು. ಎಣಿಸುತ್ತಿದ್ದದ್ದು ಯಾರು  ?  ನಾವು ಮಾಡುವುದನ್ನೆಲ್ಲಾ ನೋಡುತ್ತಿದ್ದ ಕಾಲರಾಯ, ನಮ್ಮನ್ನು ಎಳೆದೊಯ್ಯುವ ಕಾಲಕ್ಕಾಗಿ ಕಾದು ಅವ ಕ್ಷಣ ಕ್ಷಣ ಎಣಿಸುತ್ತಿದ್ದ.  ಅದರ ಅರಿವಾದಾಗ ಕೊನೆಗಾಲ ಬಂತೆಂದು ಬೆದರಿದ  ಜೀವ ಪರಮಾತ್ಮನ ಪಾದದೆಡೆಗೆ ತಿರುಗಿತು. ಆಗ ಕಂಡದ್ದು - ‘ಪುರಂದರ ವಿಠಲನ ಪಾದವ ಕಂಡೆ, ಪರ್ವತ ಗಡತರ !’      ಇದಕ್ಕೆ,  ಒನಕೆಗಾತ್ರ, ತೆಕ್ಕೆ ಗಾತ್ರದ ಫಲಗಳೆಲ್ಲವನ್ನೂ ಮೀರಿ ಮೇಲಕ್ಕೊಯ್ಯುವ ಪರ್ವತ ಗಾತ್ರದ ಪಾದಗಳು ಎಂಬುದು ಒಂದು ಅರ್ಥವಾದರೆ,  ನಮ್ಮ ಕೈಗೆ ಎಟುಕದ ಪರ್ವತಗಾತ್ರದ ಪಾದಗಳು ಎಂದು ಮತ್ತೊಂದು ಅರ್ಥ.  ಆದ್ದರಿಂದ, ಮನಸ್ಸು, ಇಂದ್ರಿಯಗಳನ್ನು ಬೇಕುಬೇಕಾದಂತೆ ಕುಣಿದಾಡಲು ಬಿಡದೆ, ನಮ್ಮ ಹಿಡಿತದಲ್ಲಿರಿಸಿಕೊಂಡಿದ್ದು, ಜೀವಿತದ ಕೊನೆಯಕ್ಷಣ ಬರುವ ಮೊದಲೇ  ಪುರಂದರವಿಠಲನ ಪಾದವೆಂಬ ಪರ್ವತವನ್ನು ಏರುವ ಪ್ರಯತ್ನವಾಗಲಿ ಎಂಬ ಬುದ್ಧಿವಾದದೊಂದಿಗೆ ದಾಸರು  ಗೀತೆಯನ್ನು ಕೊನೆಯಾಗಿಸಿದರೆಂದು  ತಿಳಿಸಿ, ಕೃಷ್ಣಾರ್ಪಣ ಎನ್ನುತ್ತೇನೆ. 


Friday, May 22, 2026

‘ಡೊಂಕುಬಾಲದ ನಾಯಕರೇ’

 ದಿನದಲ್ಲಿ ಹೆಚ್ಚುಕಾಲ ಭಗವಂತನ ಹಿರಿಮೆಯನ್ನು ಸಾರುತ್ತಾ ಬೀದಿ

ಬೀದಿಗಳಲ್ಲಿ ನಡೆದಾಡುತ್ತಿದ್ದ ದಾಸರು ಪ್ರತಿದಿನ ನೂರಾರು ಬೀದಿ

ನಾಯಿಗಳನ್ನು ಕಾಣುತ್ತಿದ್ದಿರಬಹುದು. ಆ ನಾಯಿಗಳನ್ನು ಕಂಡಾಗ

ಅವರ ಮನದಲ್ಲಿ ಮೂಡಿದ ವಿಚಾರಗಳನ್ನು ಅವರು ತಮ್ಮ ರಚನೆಗಳಿಗೆ

ಬಳಸಿಕೊಂಡರು. ಈ ಹಿಂದೆ ನಾವು ‘ಕುರುಡುನಾಯಿ ತಾ ಸಂತೆಗೆ

ಬಂತಂತೆ’ ಗೀತೆಯನ್ನು ಕೇಳಿದೆವು. ಇಂದು ಕೇಳೋಣ ನಾಯಿಯನ್ನು

ವಸ್ತುವಾಗಿರಿಸಿಕೊಂಡ, ಆದರೆ ಶ್ವಾನ ಸ್ವಭಾವದ ಮಾನವರನ್ನುದ್ದೇಶಿಸಿದ

ಮತ್ತೊಂದು ರಚನೆ ‘ಡೊಂಕು ಬಾಲದ ನಾಯಕರೇ ನೀವೇನೂಟವ

ಮಾಡಿದಿರಿ ?’  ಮಿಶ್ರಕಾಪಿ ರಾಗ, ಆದಿ ತಾಳ. ಗೀತೆಯ ಸಾಹಿತ್ಯ

ಡಿಸ್ಕ್ರಿಪ್ಷನ್ ವಿಭಾಗದಲ್ಲಿ ಲಭ್ಯವಿದೆ. ಈ ವಿವರಣೆಯನ್ನು ಬರೆದಿರಿಸಿರುವ

ನನ್ನ ಬ್ಲಾಗ್ ನ ವಿಳಾಸ ಸಹ ಅಲ್ಲಿಯೇ ಲಭ್ಯವಿದೆ.



‘ಡೊಂಕುಬಾಲದ ನಾಯಕರೇ’ ಎಂದು ನಾಯಿಗಳ

ಹೆಸರುಹೇಳಿ ಡೊಂಕುಸ್ವಭಾವದ ನಮ್ಮನ್ನು ಉದ್ದೇಶಿಸಿದರು

ಪುರಂದರ ದಾಸರು. ಮನುಷ್ಯ ಸ್ವಭಾವ ಸಹಜವಾಗಿಯೇ 

ಡೊಂಕು ಅಥವಾ ಸೊಟ್ಟ. ಹಾಗೆಂದು ಅದು ಸದಾ

ಡೊಂಕೇ ಅಲ್ಲ. ಒಮ್ಮೊಮ್ಮೆ ಮಾನವ ಬಹಳ ಪ್ರಯಾಸಪಟ್ಟು

ಸೊಟ್ಟಗಿರುವ ಸ್ವಭಾವವನ್ನು  ಕಟ್ಟಿ ನೆಟ್ಟಗಾಗಿಸುವ ಪ್ರಯತ್ನ

ಮಾಡುತ್ತಾನೆ. ಆದರೆ ‘ನಾಯಿಯ ಬಾಲಕ್ಕೆ ದೆಬ್ಬೆ ಕಟ್ಟಿದಂತೆ’

ಎಂಬ ಗಾದೆಯಂತೆ ಕಟ್ಟು ಬಿಚ್ಚಿದಾಕ್ಷಣ ಮತ್ತೆ ಸ್ವಭಾವ ಡೊಂಕಾಗಿಬಿಡುತ್ತದೆ. ಆದ್ದರಿಂದಲೇ ದಾಸರು ನಮ್ಮನ್ನು

ಡೊಂಕುಬಾಲದ ನಾಯಕರೇ ಎಂದು ಕರೆದರು.

‘ನೀವೇನೂಟವ ಮಾಡಿದಿರಿ?’ ಎಂದು ಕೇಳಿದರು.

‘ನೀವೇನೂಟವ ಮಾಡಿದಿರಿ’ ಎಂದು ಅವರು ಕೇಳಿದ್ದು

ಅನ್ನವೋ, ಹುಳಿಯೋ ರೊಟ್ಟಿಯೋ ಪಲ್ಯವೋ ಏನು

ತಿಂದಿರಿ ಎಂದಲ್ಲ. ಅವರು ಕೇಳಿದ ಊಟ, ನಮ್ಮ ಕರ್ಮಗಳ 

ಫಲ. ನಿಮ್ಮ ಹಿಂದಿನ ಅನೇಕ ಜನ್ಮಗಳಲ್ಲಿ ಮಾಡಿದ

ಕರ್ಮಗಳ ಫಲವನ್ನು ಈ ಜನ್ಮದಲ್ಲಿ  ಉಣ್ಣುವುದು ಉಂಟಲ್ಲ,

‘ಅದೇನನ್ನು ಉಣ್ಣುತ್ತಿದ್ದೀರಿ’ ಎಂದು ಕೇಳಿದರು.  


ಮುಂದಿನ ಚರಣಗಳಲ್ಲಿ ಬರುವ ಕಣಕ ಕುಟ್ಟುವುದು ಮತ್ತು ಹುಗ್ಗಿ ಬೇಯಿಸುವುದು ನಮ್ಮ ಕರ್ಮಗಳ ಫಲವನ್ನು ನಾವು ಅನುಭವಿಸುವುದಕ್ಕೆ ದಾಸರು ಕೊಟ್ಟಂಥ ರೂಪಕಗಳು. ಬೆಂದದ್ದು, ಬಡಿತ ತಿಂದದ್ದು ಎಲ್ಲವೂ ನಮಗೆ ದಕ್ಕಿದಫಲ. ವಿಧಿ ಕೊಟ್ಟಂಥ ಪೆಟ್ಟುಗಳು. ನಾವು ಈ ಹಿಂದೆ ‘ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ’ ಪದದ ಕೊನೆಯಲ್ಲಿ ‘ಟೊಣಪೆಗಳು’ ಎಂದವಲ್ಲಾ ಅದು. ನಮ್ಮ ಕರ್ಮದ ಫಲವಾಗಿ ಬಿದ್ದ ಪೆಟ್ಟುಗಳನ್ನು ‘ಮಾಡಿದ್ದುಣ್ಣೋ ಮಹರಾಯ’ ಎಂದು ಸುಮ್ಮನೆ ಸಹಿಸಿಕೊಳ್ಳದೆ ಅದರ ಬಗ್ಗೆ ರಾಗ ತೆಗೆಯುತ್ತೇವಲ್ಲಾ, ಅದನ್ನು ತಿಳಿಸುವುದಕ್ಕಾಗಿ ಒನಕೆಲಿ ಬಡಿದರೆ  ‘ಕುಯ್ ಕುಯ್ ರಾಗವ ಮಾಡಿದಿರಿ’ ಎಂದು ಮೂದಲಿಸಿದರು ದಾಸರು.  


ಕೊನೆಯ ಚರಣದಲ್ಲಿ ಬರುವ ‘ಹಿರೇಬೀದಿಯಲಿ ಓಡುವಿರಿ - ಕರೇಬೂದಿಯಲಿ ಹೊರಳುವಿರಿ’ ಎಂಬ ಸಾಲು ಬಹಳ ಅರ್ಥಪೂರ್ಣವಾದದ್ದು. ಹಿರೇಬೀದಿ ಎನ್ನುವುದು ರಾಜಬೀದಿ, ಹೈವೇ ಎನ್ನುತ್ತೇವಲ್ಲಾ ಅದು. ಪರಮಾತ್ಮನ ಕಡೆಗೆ ಸಾಗುವ, ‘ಸತ್ ಚಿಂತನೆ’ ಮತ್ತು ‘ಸತ್ ಸ್ವಭಾವ’ ಎಂಬ ಸತ್ವಗುಣ ಪರಿಪೂರ್ಣವಾದ ರಾಜಬೀದಿ. ಯಾವುದೋ ಪೂರ್ವಜನ್ಮ ಸುಕೃತದಿಂದಲೋ ಸಜ್ಜನರ ಸಂಪರ್ಕದಿಂದಲೋ, ಸ್ವಭಾವ ಬದಲಾವಣೆಯಾಗಿ ಕೊಂಚಕಾಲ ಆ ದಾರಿಯಲ್ಲಿ ಸಾಗಿದೆವು. ಆದರೆ ಸ್ವಲ್ಪಸಮಯದಲ್ಲೇ ಮತ್ತೆ ಹಿಂತಿರುಗಿ ‘ಕರೇ ಬೂದಿಯಲಿ ಹೊರಳಿದೆವು’ . ಕರಿಯಬಣ್ಣ ತಮಸ್ಸಿನ ಪ್ರತೀಕ. ‘ಕರೇಬೂದಿಯಲಿ ಹೊರಳುವಿರಿ’ ಎಂದರೆ ಮತ್ತೆ ಸ್ವಭಾವ ತಮಸ್ಸಿಗೆ ತಿರುಗಿ ಅದರಲ್ಲೇ ಉಳಿಯಿತು ಎಂದು. ಮನುಷ್ಯ ಜನ್ಮದ ಚಂಚಲತೆಯನ್ನು ತೋರುವ ಸಾಲು ಇದು. ಜೀವನದಲ್ಲಿ ಕೊಂಚ ಸಮಯ ಸತ್ ಸ್ವಭಾವ ಕಂಡಿತು ಆದರೆ ಕೊಂಚಕಾಲದಲ್ಲೇ ಮತ್ತೆ ಸ್ವಭಾವ ತಮಸ್ಸಿಗೆ ತಿರುಗಿತು. ಇದು ನಮ್ಮ ಪರಿಸ್ಥಿತಿ. ಎಷ್ಟಾದರೂ ಡೊಂಕು ಬಾಲ ಅಲ್ಲವೇ ? 


ಅದಕ್ಕೆ ಪರಿಹಾರವೇನೆಂದರೆ ಮನಸ್ಸನ್ನು ಪುರಂದರ ವಿಠಲನಲ್ಲಿ ನೆಲೆಯಾಗಿಸುವುದು. ಅದು ಸುಲಭಸಾಧ್ಯವಲ್ಲ. ಹಾಗಾಗಿ ಮನಸ್ಸು ಪುರಂದರವಿಠಲನಲ್ಲಿ ನೆಲೆಯಾಗುವವರೆಗೂ ಹಿರೇಬೀದಿ, ಕರಿಬೂದಿಯೇ ನಿಮ್ಮಗತಿ ಎನ್ನುವುದನ್ನು ಕೊನೆಯ ಚರಣದಲ್ಲಿ ‘ಪುರಂದರ ವಿಟ್ಟಲ ರಾಯನ ಈ ಪರಿ ಮರೆತು ಸದಾ ನೀವು ಚಲಿಸುವಿರಿ’ ಎಂದು ಹಾಡುತ್ತಾ ದಾಸರು ಮುಂದಿನ ಬೀದಿ ಹಿಡಿದು ನಡೆದರೆಂದು ಎಂದುತಿಳಿಸಿ ಇಂದಿನ ನನ್ನ ಮಾತು ಕೃಷ್ಣಾರ್ಪಣವಾಗಲಿ ಎನ್ನುತ್ತೇನೆ.


ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ             

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ                 

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ                 

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರವಿಠ್ಠಲರಾಯನ ಈ ಪರಿ
ಮರೆತು ಸದಾ ನೀವು ಚರಿಸುವಿರಿ