ಪಾಲಿಸೆ ಪದುಮಾಲಯೇ
ಇಂದಿರೆ ತಾಯೆ, ನೀನೆ ಗತಿ
ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿ ನಂದಗೋಕುಲ
ಬಾಲೆಯರ ಮೋಹಿಸುತ ಅಸುರರ ಕಾಲನೆನಿಸಿದ ಬಾಲಕನ ಪ್ರಿಯೆ
ಅನ್ಯರ ನೆನೆಯಲೊಲ್ಲೆ, ನಿನ್ನಯ ಪಾದವನ್ನೇ ನಂಬಿದೆ ನೀ ಬಲ್ಲೆ
ತಡ ಮಾಡದೆಲೆ
ಚಿನ್ನ ಕರೆಯಲು ಘನ್ನ ಮಹಿಮನು ಉನ್ನತದ ರೂಪಿನಲಿ ಗುಣ ಸಂ-
ಪನ್ನ ರಕ್ಕಸರನ್ನು ಸೀಳಿದ ಪನ್ನಗಾದ್ರಿ ನಿವಾಸ ಹರಿಪ್ರಿಯೆ
ಅಜ ಮನಸಿಜ ಜನನಿ ಅಂಬುಜಾ ಪಾಣಿ
ಭುಜಗ ಸನ್ನಿಭ ವೇಣಿ ನಿತ್ಯ ಕಲ್ಯಾಣಿ
ಕುಜನ ಮರ್ದನ ವಿಜಯ ವಿಠಲನ ಭಜಿಸಿ ಪಾಡುವ ಭಕ್ತ ಕೂಟವ
ನಿಜದಿ ಸಲಹುವನೆಂಬ ಬಿರುದುಳ್ಳ ವಿಜಯ ಸಾರಥಿ ವಿಶ್ವಮ್ಬರ ಪ್ರಿಯೆ
ತಮ್ಮ ಸಪ್ನದಲ್ಲಿ ಶ್ರೀ ಪುರಂದರದಾಸರನ್ನು ಕಂಡು ಅವರಿಂದ ಪ್ರೇರೇಪಿತರಾಗಿ ದಾಸಪಂಥವನ್ನು ಹಿಡಿದು ಹರಿದಾಸರಾದರೆಂದು ಹೇಳಲಾಗುವ, ಮತ್ತು ಆ ಕಾರಣದಿಂದಲೇ ಪುರಂದರ ದಾಸರ ಆಧ್ಯಾತ್ಮಿಕ ಶಿಷ್ಯರೆಂದೆನಿಸಿಕೊಂಡ ವಿಜಯದಾಸರ ರಚನೆಗಳು ಸಾವಿರಾರು ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಮಹಾಲಕ್ಷ್ಮಿಯ ಕೃಪೆಗಾಗಿ ಪ್ರಾರ್ಥಿಸುವ ರಚನೆಗಳು ಅನೇಕ ಇವೆ. ಆ ರೀತಿಯ ಒಂದು ಜನಪ್ರಿಯ ರಚನೆ ನಮ್ಮ ದಾಸ ಸಾಹಿತ್ಯ ಸಿರಿಯ ಇಂದಿನ ಕೊಡುಗೆ, ‘ಪಾಲಿಸೆ ಪದುಮಾಲಯೇ’.
ಪಾಲಿಸೆ ಪದುಮಾಲಯೇ, ನೀನೇ ಗತಿಯೇ ಎಂಬ ಪಲ್ಲವಿಯಿಂದ ಗೀತೆಯನ್ನು ಪ್ರಾರಂಭಿಸಿದ್ದಾರೆ ವಿಜಯದಾಸರು. ಪದುಮಾಲಯೇ ಎಂದರೆ ಪದ್ಮವನ್ನು, ಕಮಲ ಪುಷ್ಪವನ್ನು ಆಲಯವಾಗಿ ಅಂದರೆ ನಿವಾಸವಾಗಿ ಉಳ್ಳವಳು. ಕಾಂಸೋಸ್ಥಿತಾ, ಹಿರಣ್ಯಪ್ರಾಕಾರಾಮಾರ್ದ್ರಂ, ಜ್ವಲಂತೀಮ್ ತೃಪ್ತಾಮ್ ತರ್ಪಯಂತೀಮ್ ಪದ್ಮೇಸ್ಥಿತಾಮ್ ಪದ್ಮವರ್ಣಾಮ್ ಮುಂತಾಗಿ ಶ್ರೀ ಸೂಕ್ತ ಲಕ್ಷ್ಮೀದೇವಿಯನ್ನು ವರ್ಣಿಸುತ್ತದೆ. ಪದ್ಮವರ್ಣದವಳು, ಪದ್ಮದಲ್ಲಿ ಉಪಸ್ಥಿತಳಾದವಳು ಎಂದು ಅರ್ಥ. ಚತುರ್ಭುಜ ನಾರಾಯಣನ ಒಂದು ಕೈಯಲ್ಲಿ ಇರುವುದು ಮುಕ್ತಿಸಂಕೇತವಾದ ಪದ್ಮ. ಆ ಪದ್ಮದಲ್ಲಿ ವಾಸವಿರುವವಳು, ಲಕ್ಷ್ಮೀದೇವಿ. ಅಲ್ಲಿ ಉಪಸ್ಥಿತಳೆಂದರೆ ಆ ಜಾಗ ಅವಳ ಹಿಡಿತದಲ್ಲಿ ಎಂದಾಯಿತಲ್ಲವೇ ? ಅಂದರೆ ನಮಗೆ ಬೇಕಾದ ಮುಕ್ತಿ ಮಹಾಲಕ್ಷ್ಮಿಯ ಹಿಡಿತದಲ್ಲಿದೆ. ಆ ಮುಕ್ತಿಯ ಸ್ಥಾನ ನಮಗೆ ಬೇಕಾದರೆ ಅದರ ಒಡತಿ ನಮಗೆ ಒಲಿಯಬೇಕು. ಇದು ಪಾಲಿಸೆ ಪದುಮಾಲಯೇ, ನೀನೆ ಗತಿಯೇ, ಎಂಬ ಸಾಲಿನಲ್ಲಿ ಅಡಗಿರುವ ವಿಜಯದಾಸರ ಚಿಂತನೆ.
ಮುಂದಿನ ಚರಣಗಳೆಲ್ಲ ಬಹಳವೇ ಸರಳ. ಒಂದು,
ಗೋಪಿಯರೊಡನೆ ಕ್ರೀಡಿಸಿ, ಅಸುರರನ್ನು ಸಂಹರಿಸಿದ
ಕೃಷ್ಣಾವತಾರದ ವರ್ಣನೆ - ‘ಅಸುರರ ಕಾಲನೆನಿಸಿದ
ಬಾಲಕನ ಪ್ರಿಯೆ’ ಎಂದಿದ್ದಾರೆ ದಾಸರು. ಮತ್ತೊಂದು
ನರಸಿಂಹಾವತಾರದ ವರ್ಣನೆ. ಚಿನ್ನ ಅಥವಾ ಚಿಣ್ಣ
ಎಂದರೆ ಬಾಲಕ, ಪ್ರಹ್ಲಾದ. ಅವನು ಕರೆದಾಗ ಬಂದು
ರಕ್ಕಸನನ್ನು - ಹಿರಣ್ಯಕಶಿಪುವನ್ನು ಸೀಳಿದ, ಪನ್ನಗಾದ್ರಿ
ನಿವಾಸ ಎಂದರೆ ತಿರುಪತಿಯ ಶ್ರೀನಿವಾಸ. ಪನ್ನಗ
ಎಂದರೆ ಸರ್ಪ, ಶೇಷ. ಆದ್ರಿ ಎಂದರೆ ಪರ್ವತ. ಪನ್ನಗಾದ್ರಿ
ಎನ್ನುವುದು ಶೇಷಾಚಲ ಅಂದರೆ ತಿರುಪತಿ. ಇಲ್ಲಿ,
ಶೇಷಾಚಲ ವಾಸನಾದ ಶ್ರೀಹರಿಯ ಪ್ರಿಯೆ ಎಂದು
ಲಕ್ಷ್ಮಿಯನ್ನು ಸಂಭೋದಿಸುತ್ತಿದ್ದಾರೆ ದಾಸರು.
ಇನ್ನು ಮುಂದೆ ಅಜ ಮನಸಿಜ ಜನನೀ. ಅಜ ಮನಸಿಜ
ಎಂದರೆ ಅಜನ ಮನಸ್ಸಿನಿಂದ ಜನಿಸಿದವ ಅಂದರೆ
ವಿಷ್ಣುವಿನ ಪುತ್ರ ಮನ್ಮಥ. ಅವನಿಗೆ ಜನನಿ ಲಕ್ಷ್ಮೀದೇವಿ.
ನಂತರ ಭುಜಗ ಸನ್ನಿಭ ವೇಣಿ. ಭುಜಗ ಸನ್ನಿಭ ಎಂದರೆ
ಸರ್ಪದಂತೆ ಇರುವ, ‘ವೇಣಿ’ ಎಂದರೆ ಜಡೆಯುಳ್ಳವಳು
ಎಂದರ್ಥ. ಮುಂದಿನ ಪದಗಳೆಲ್ಲಾ ಶ್ರೀಹರಿಯ
ವಿಶೇಷಣಗಳು. ವಿಜಯ ಸಾರಥಿ ಅಂದರೆ ಅರ್ಜುನನ
ಸಾರಥಿಯಾದ, ಕುಜನ ಮರ್ದನ - ದುಷ್ಟ ಶಿಕ್ಷಕ ನಾದ,
ತನ್ನನ್ನು ಭಜಿಸುವ ಭಕ್ತರನ್ನು ಸಲಹುವ, ವಿಶ್ವಂಭರನ
ಪ್ರಿಯೆ, ವಿಶ್ವವನ್ನು ಭರಿಸಿರುವವ ವಿಶ್ವಂಭರ, ಆತನ
ಪ್ರಿಯೆ, ನೀ ಪಾಲಿಸೆ ಪದುಮಾಲಯೇ ಎನ್ನುತ್ತಾ
ವಿಜಯದಾಸರು ತಮ್ಮ ಲಕ್ಷ್ಮಿಯ ಸ್ತುತಿಯನ್ನು
ಮುಗಿಸುತ್ತಿದ್ದಾರೆಂದು ತಿಳಿಸುತ್ತಾ ಕೃಷ್ಣಾರ್ಪಣ ಎನ್ನುತ್ತೇನೆ.
No comments:
Post a Comment