ಶ್ರೀ ಪುರಂದರದಾಸರ ಆಧ್ಯಾತ್ಮಿಕ ಚಿಂತನೆಯ ಮೇಲೆ ಅವರ ಗುರುಗಳಾದ ವ್ಯಾಸತೀರ್ಥರ ಪ್ರಭಾವವನ್ನು, ಅಂದರೆ ಮಧ್ವ ಸಂಪ್ರದಾಯದ ಪ್ರಭಾವವನ್ನು, ಎತ್ತಿತೋರಿಸುವಂಥ ಗೀತೆಯೊಂದನ್ನು ಇಂದು ಪ್ರಚುರಪಡಿಸುತ್ತಿದ್ದೇವೆ. ಗೂಢಾರ್ಥದ ಕೃತಿಯಾದರೂ ಕೆಲವೇ ಸಾಲುಗಳಲ್ಲಿ ಆತ್ಮ, ಪರಮಾತ್ಮ, ಜನ್ಮ, ಪುನರ್ಜನ್ಮ, ಸಂಸಾರ, ಮುಕ್ತಿಗಳ ಬಗ್ಗೆ ಚೊಕ್ಕವಾಗಿ ತಿಳಿಸಿಕೊಡುವ ಸಾಹಿತ್ಯ.
‘ಎರಡು ಒಂದಾಗದು ರಂಗ, ಎರಡೂ ಒಂದಾಗದು ಎಂದೆಂದಿಗೂ’. ಏನು ಇವೆರಡು ? ಒಂದಾಗದಿರುವುದು? ಎಂದೆಂದಿಗೂ ಎಂಬ ಒತ್ತು ಏಕೆ ? ಒಂದಾಗದಿರುವ ಎರಡು ಯಾವುವೆಂದರೆ ಜೀವಾತ್ಮ ಮತ್ತು ಪರಮಾತ್ಮ. ಜೀವಾತ್ಮವು ತನ್ನ ಮಾಯೆಯ ಆವರಣವನ್ನು ಕಳಚಿಕೊಂಡು ಮುಕ್ತಿಪಡೆದಮೇಲೆ ಪರಮಾತ್ಮದೊಂದಿಗೆ ಒಂದಾಗುತ್ತದೆ ಎನ್ನುವುದು ಅದ್ವೈತ ತತ್ವ. ಆದರೆ, ಜೀವಾತ್ಮ ಎನ್ನುವುದು ಎಂದಿಗೂ, ಯಾವ ಪರಿಸ್ಥಿತಿಯಲ್ಲೂ ಪರಮಾತ್ಮನೊಡನೆ ಒಂದಾಗದು ಎನ್ನುವುದು ದ್ವೈತ ಅಥವಾ ಮಧ್ವ ಸಿದ್ಧಾಂತದ ಪ್ರತಿಪಾದನೆ. ಅದರಿಂದಲೇ ಇಲ್ಲಿ ‘ಒಂದಾಗದು ಎಂದೆಂದಿಗೂ’ ಎಂಬ ಪದಪ್ರಯೋಗ. ಸಾಮಾನ್ಯವಾಗಿ ದಾಸರು ಇಂಥ ತತ್ವಗಳ ಸಂಧಿಗ್ದದಲ್ಲಿ ಸಿಕ್ಕಿಕೊಳ್ಳುವರಲ್ಲ. ಅವರದು ಭಕ್ತಿಪಂಥ. ವೇದ, ಶಾಸ್ತ್ರ, ತತ್ವಗಳ ಗೊಂದಲ ಅವರಿಗೆ ಬೇಡ. ಆದರೆ ಅವರ ಕೆಲವು ಕೃತಿಗಳಲ್ಲಿ ತತ್ವಪ್ರತಿಪಾದನೆ ಕಾಣಬರುತ್ತದೆ. ಇದು ಅವುಗಳಲ್ಲಿ ಒಂದು.
ಮುಂದಿನ ಚರಣದ ಮೊದಲ ಸಾಲು ‘ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು ಒಂದೇ ಗೂಡಿನಲ್ಲಿ ಇರುತಿಹವು’. ಈ ಜಗತ್ತು ಅಥವಾ ಸಂಸಾರವನ್ನು ದಾಸರು ‘ವೃಕ್ಷ’ ಎಂದು ಕರೆದರು. ಈ ಜಗತ್ತೆಂಬ ವೃಕ್ಷದಲ್ಲಿ ಒಂದು ಗೂಡು, ಅದು, ನಮ್ಮ ಶರೀರವೆಂಬ ಗೂಡು. ಒಂದೇ ಗೂಡಿನಲ್ಲಿರುವ, ಎಂದರೆ, ಆ ಶರೀರದಲ್ಲಿರುವ ಎರಡು ಪಕ್ಷಿಗಳು, ಜೀವಾತ್ಮ ಮತ್ತು ಪರಮಾತ್ಮ. ಶ್ರೀ ಕೃಷ್ಣಪರಮಾತ್ಮ ಸಹ ಜಗತ್ತನ್ನು ‘ವೃಕ್ಷ’ ಎಂದಿದ್ದಾನೆ. ಭಗವದ್ಗೀತೆಯ ಹದಿನೈದನೇ ಅಧ್ಯಾಯದ ಮೊದಲ ಶ್ಲೋಕ, ‘ಊರ್ಧ್ವಮೂಲಮಧಃಶಾಖಮಶ್ವತ್ಥಮ್ ಪ್ರಾಹುರವ್ಯಯಮ್/ ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್’ ಎನ್ನುತ್ತದೆ. ಇಲ್ಲಿ ಈ ಜಗತ್ತು ಅಥವಾ ಸಂಸಾರವನ್ನು ಕೃಷ್ಣ ಅಶ್ವತ್ಥ ವೃಕ್ಷಕ್ಕೆ ಹೋಲಿಸಿದ್ದಾನೆ. ವೃಕ್ಷ ಹೌದು, ಆದರೆ ಅದು ತಲೆಕೆಳಗಾಗಿರುವ ವೃಕ್ಷ. ಅದರ ಬೇರು ಮೇಲೆ - ಬೀಳಲು, ಎಲೆ, ರೆಂಬೆ, ಕೊಂಬೆಗಳು ಕೆಳಗೆ. ಇದು ಕೊಂಚ ನೆನಪಿನಲ್ಲಿರಲಿ. ಗೀತೆಯ ಮುಂದಿನ ಸಾಲು ‘ಒಂದು ಪಕ್ಷಿ ಫಲಂಗಳನುಂಬುದು ಒಂದು ಫಲಂಗಳನುಣ್ಣದು ರಂಗ’ ಎನ್ನುತ್ತದೆ. ಶರೀರವೆಂಬ ಗೂಡಿನಲ್ಲಿರುವ ಜೀವಾತ್ಮವೆನ್ನುವ ಪಕ್ಷಿ ಕರ್ಮಮಾಡಿ ತನ್ನ ಕರ್ಮಗಳ ಫಲವನ್ನು ತಾನು ಉಣ್ಣುವುದು. ಅದೇ ಗೂಡಿನಲ್ಲಿರುವ ಪರಮಾತ್ಮನೆನ್ನುವ ಪಕ್ಷಿಗೆ ಕರ್ಮಉಂಟು, ಫಲದ ಜಂಜಾಟವಿಲ್ಲ. ಆದ್ದರಿಂದ ಒಂದು ಫಲಂಗಳನುಣ್ಣದು.
ಅಲ್ಲಿಂದ ಮುಂದೆ, ‘ಹಲವು ಕೊಂಬೆಗಳಿಗೆ ಒಂದು ಹಾರಿತು / ಒಂದು ಹಲವು ಕೊಂಬೆಗಳಿಗೆ ಹಾರಲರಿಯದು’. ತಲೆಕೆಳಗಾದ ಸಂಸಾರ ವೃಕ್ಷವೆಂದೆವಲ್ಲಾ ಅದರ ಬೀಳಲು, ರೆಂಬೆ, ಕೊಂಬೆಗಳೇ ನಮ್ಮ ಸಂಸಾರ ಬಂಧನಗಳು. ಜನ್ಮ, ಪುನರ್ಜನ್ಮಗಳು. ಜೀವಾತ್ಮ ಹಲವು ಕೊಂಬೆಗಳಿಗೆ ಅಂದರೆ ಒಂದು ಜನ್ಮದಿಂದ ಮತ್ತೊಂದಕ್ಕೆ ಜಿಗಿಯುತ್ತಲೇ ಇರುತ್ತಾನೆ. ಪರಮಾತ್ಮನಿಗೆ ಹೀಗೆ ಹಾರಾಡುವ ಕಾಟವಿಲ್ಲ. ಅದು ಹಾರುವ ಅವಶ್ಯಕತೆಯಿಲ್ಲದ್ದು. ಅದರಿಂದಲೇ ಅದು ಹಾರಲರಿಯದು. ಮುಂದೆ ದಾಸರೆನ್ನುತ್ತಾರೆ ‘ಹಲವನೆಲ್ಲವನು ಒಂದು ಬಲ್ಲುದು / ಒಂದು ಹಲವನೆಲ್ಲವ ಅರಿಯದು ರಂಗ’. ಪರಮಾತ್ಮ ಜ್ಞಾನ ಸ್ವರೂಪ. ಅವನು ಎಲ್ಲವನ್ನೂ ಬಲ್ಲವನು. ಜೀವಾತ್ಮನೆಂಬ ಪಕ್ಷಿಗೆ ಅಲ್ಪಜ್ಞಾನ ಅಥವಾ ಜ್ಞಾನವಿಲ್ಲ.
ಮುಂದಿನ ಚರಣ ‘ನೂರೆಂಟು ಕೊಂಬೆಗಳಿಗೆ ಹಾರಿತು / ಅದು ಹಾರಿ ಹಾರಿ ಮೇಲಕ್ಕೇರಿ ಮೀರಿತು.’ ಒಂದುವೇಳೆ ಆ ಜೀವಾತ್ಮನೆಂಬ ಪಕ್ಷಿ ತನ್ನ ಸಾಧನಾ ಶರೀರವನ್ನು ಸದುಪಯೋಗಪಡಿಸಿಕೊಂಡು ಸತ್ಕರ್ಮಗಳಲ್ಲಿ, ಸಾಧನೆಯಲ್ಲಿ ತೊಡಗಿದ್ದರೆ, ಅದು ಕೆಳಗಿನ ಕೊಂಬೆಗಳಿಂದ ಪ್ರಾರಂಭಿಸಿ ಹಾರುತ್ತಾ ಹಾರುತ್ತಾ ಮೇಲಿನ ಕೊಂಬೆಗಳನ್ನು ಅಂದರೆ ಉತ್ತಮ ಜನ್ಮಗಳನ್ನು ಪಡೆಯುತ್ತಾ ಸಾಗುತ್ತದೆ. ಹಾಗೆಯೇ ಹಾರಿ ಹಾರಿ ಕೊಂಬೆಗಳನ್ನು ಮೀರಿ, ಅಂದರೆ ಜನ್ಮ ಪುನರ್ಜನ್ಮಗಳನ್ನು ನಿವಾರಿಸಿಕೊಂಡು, ಮೇಲಿರುವ ಬೇರನ್ನು ಅಂದರೆ ಜಗತ್ತಿಗೆ ಆಧಾರವೆನಿಸಿದ ಪರಮಾತ್ಮನನ್ನು ತಲುಪುತ್ತದೆ.
ಈ ರೀತಿಯಲ್ಲಿ ಜೀವಾತ್ಮನೆಂಬ ಪಕ್ಷಿ, ಕೊಂಬೆಗಳನ್ನೆಲ್ಲ ಮೀರಿ, ಮೇಲಕ್ಕೆ ಹಾರಿ ‘ನಿಮ್ಮನ್ನು ಸೇರಿ ಸುಖಿಯಾಗಿ ನಿಂತಿತು ರಂಗ’ ಎನ್ನುತ್ತಾರೆ ದಾಸರು. ಹಾರಾಟವನ್ನು ಮೀರಿ ಬೇರನ್ನು ಸೇರಿ ಬಿಡುಗಡೆ ಪಡೆಯಿತಲ್ಲಾ ಪಕ್ಷಿ, ಅದನ್ನೇ ಮುಕ್ತಿ ಅಥವಾ ಮೋಕ್ಷ ಎನ್ನುವುದು. ಅಲ್ಲಿಂದ ಮುಂದಕ್ಕೆ ಹಾರಾಟವೂ ಇಲ್ಲ, ಓಡಾಟವೂ ಇಲ್ಲ. ಆದ್ದರಿಂದಲೇ ದಾಸರು ‘ನಿಮ್ಮನ್ನು ಸೇರಿ ಸುಖಿಯಾಗಿ ನಿಂತಿತು ರಂಗ ’ ಎಂದು ತಮ್ಮ ಗೀತೆಯನ್ನು ಮುಗಿಸಿದರು ಎನ್ನುವುದನ್ನು ತಿಳಿಸಿ ಇಂದಿನ ವಿವರಣೆಯನ್ನು ಕೃಷ್ಣಾರ್ಪಣ ಎನ್ನುತ್ತೇನೆ.