Saturday, June 20, 2026

ಏನು ಸುಖವೊ ರಂಗ

 ಆಚಾರ್ಯ ಮಧ್ವರು ಸಂಸ್ಕೃತದಲ್ಲಿ ರಚಿಸಿದ  ‘ದ್ವಾದಶ ಸ್ತೋತ್ರಗಳು’ ಎನ್ನುವ ಹನ್ನೆರಡು ಸ್ತೋತ್ರಗಳು ಹರಿದಾಸ ಸಾಹಿತ್ಯ ಸೃಷ್ಟಿಗೆ ನಾಂದಿಹಾಡಿದವು ಎನ್ನುವುದು ಒಂದು ಅಭಿಪ್ರಾಯ. ಅನೇಕ ತಲೆಮಾರುಗಳ ನಂತರ ಅದೇ ಪೀಳಿಗೆಯಲ್ಲಿ  ಪೀಠಾಧಿಪತಿಗಳಾದ ಶ್ರೀ ವ್ಯಾಸತೀರ್ಥರು ಆ ಚಟುವಟಿಕೆಯನ್ನು ಮುಂದುವರೆಸಿ, ಕನ್ನಡದಲ್ಲಿ ಅನೇಕ ಗೀತೆಗಳನ್ನು ರಚಿಸಿ, ಹರಿದಾಸ ಸಾಹಿತ್ಯಕ್ಕೆ ಬುನಾದಿ ಹಾಕಿದರು. ಹರಿದಾಸ ಶ್ರೇಷ್ಠರಾದ  ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರಿಗೆ ಗುರುಗಳೂ ಆಗಿದ್ದ ಶ್ರೀ ವ್ಯಾಸತೀರ್ಥರ  ಒಂದು ಲಯಬದ್ಧವಾದ  ಸುಂದರ ರಚನೆಯನ್ನು ಇಂದು ಪ್ರಸ್ತುತಪಡಿಸುತ್ತಿದ್ದೇವೆ. ಕೇಳಿ, ಗೀತೆ, ‘ಏನು ಸುಖವೊ ರಂಗ ಎಂಥ ಸುಖವೊ’

ಈಗ ನೀವು ಕೇಳಿದ ‘ಏನು ಸುಖವೊ ರಂಗ’ ಗೀತೆಯ ರಾಗ ಭೀಮ್ ಪಲಾಸ್, ಆದಿತಾಳ.     ‘ನಿನ್ನ ಧ್ಯಾನವಮಾಳ್ಪ ಸಜ್ಜನರ ಸಂಗ ಏನುಸುಖವೋ ರಂಗ’ ಎನ್ನುತ್ತದೆ  ಗೀತೆಯ ಪಲ್ಲವಿ.  ಹರಿಸೇವೆಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಎಂದು ಎರಡುವಿಧ. ಏಕಾಂತ ಆರಾಧನೆ ಎನ್ನುವುದು ವ್ಯಷ್ಟಿಸೇವೆ. ಇತರರ ಜತೆಗೂಡಿ ಮಾಡುವ ಸೇವೆ ಸಮಷ್ಟಿಸೇವೆ. ತಾನು ಇತರರನ್ನು ಉತ್ತೇಜಿಸಿ, ಮತ್ತು ಇತರರಿಂದ ತಾನು ಉತ್ತೇಜನಗೊಂಡು ಹರಿಸೇವೆಯಲ್ಲಿ ತೊಡಗುವುದು - ಉತ್ತಮ ದರ್ಜೆಯ ಸೇವೆ ಎನ್ನುವುದು ಒಂದು ಭಾವನೆ. ಆ ಭಾವನೆಗೆ ಒತ್ತುಕೊಡುವ  ಗೀತೆ ಇದು. 


ಕೇಳಿದ ಗೀತೆ,  ಶೃತಿ ಮತ್ತು ಲಯಬದ್ಧ ವಾಗಿದ್ದರೆ ಕಿವಿಗೆ ಇಂಪಾಗಿದ್ದು ಮನಸ್ಸಿನ ಮೇಲೆ ಅದರ  ಪರಿಣಾಮ ಇಮ್ಮಡಿಯಾಗುತ್ತದೆ. ಅದರಿಂದಲೇ  ತಾಳ ತಂಬೂರಿಗಳು ಹರಿದಾಸರ ಚಿಹ್ನೆಗಳಾದವು. ‘ತಂಬೂರಿ ಮೀಟಿ ಹಾಡುತ್ತಾ ಭಕ್ತಿಪರವಶರಾಗಿ ಕಣ್ಣಿನಿಂದ ಆನಂದಬಾಷ್ಪ ಸುರಿಸುತ್ತಾ ಕುಣಿದಾಡುವರ ಸಂಗ’ ಅದೆಂಥ ಸುಖ ಎಂದು ಉದ್ಗರಿಸುತ್ತದೆ ಮೊದಲ ಚರಣ. ಅಂಬಕ ದ್ವಯ ಎಂದರೆ ಎರಡು ಕಣ್ಣುಗಳು.  


ಹರಿದಾಸರ ಕೀರ್ತನೆಗಳು ಎಲ್ಲರ ನಾಲಗೆಯಿಂದಲೂ ಹೊರಹೊಮ್ಮಬೇಕು, ಭಕ್ತಿ ಭಾವನೆ ಹರಡಿ ಹೃದ್ಗತವಾಗಬೇಕು. ಆದ್ದರಿಂದಲೇ ಯಾರು ಏನೆಂದುಕೊಂಡಾರು ಎಂಬ ಚಿಂತೆ ಬಿಟ್ಟು, ಅರ್ಥಾತ್, ಲಜ್ಜೆ ಬಿಟ್ಟು, ದಾಸರು ಕಾಲಿಗೆ ಗೆಜ್ಜೆ ಕಟ್ಟಿ ಬೀದಿ ಬೀದಿಯಲ್ಲಿ ಹಾಡುತ್ತಾ, ಕುಣಿಯುತ್ತಾ  ನಡೆದರು. ಅವರನ್ನು ಕಂಡು ‘ಗೆಜ್ಜೆ ಕಾಲಿಗೆ ಕಟ್ಟಿ ಲಜ್ಜೆ ಬಿಟ್ಟು ಹರಿನಾಮ ಭಜನೆ ಮಾಡುತ ಅಘವರ್ಜಿತ ರಾಗಿಹರ ಸಂಗ ಏನುಸುಖವೋ’ ಎಂದರು ವ್ಯಾಸತೀರ್ಥರು. ಅಘ ಎಂದರೆ ಪಾಪ. ‘ಅಘ ವರ್ಜಿತ’ ರೆಂದರೆ ತಮ್ಮ ಪಾಪಗಳನ್ನು ನಾಮ ಸಂಕೀರ್ತನೆಯ ಮೂಲಕ ದೂರಗೊಳಿಸಿದವರು.  


ನಂತರದ ಚರಣದಲ್ಲಿನ  ‘ತುಚ್ಛವಿಷಯವ ತೊರೆದು ನಿಶ್ಚಲ ಭಕುತಿಯಿಂದ’ - ಅಚ್ಯುತ ಅನಂತನ ಪಾದವ ಮೆಚ್ಚಿಸುವುದು - ಇದು  ಹರಿಭಕ್ತರೆಲ್ಲರ ಅಪೇಕ್ಷೆ. ಆದರೆ ಅದನ್ನು ಅನುಷ್ಠಾನಕ್ಕೆ ತರುವುದು ಸುಲಭಸಾಧ್ಯವಲ್ಲವೆಂಬುದು ಪ್ರಯತ್ನಿಸಿದವರೆಲ್ಲರೂ ತಿಳಿದಿರುವ ಸಂಗತಿ. ಹಾಗೆ ನಿಶ್ಚಲ ಭಕುತಿಯನ್ನು ಅನುಷ್ಠಾನಕ್ಕೆ ತಂದವರ ಸಂಗ ಸಿಕ್ಕಿದರೆ ? ಏನು ಸುಖವೋ ರಂಗ ಅಲ್ಲವೇ ! 

ಪೀಠಾಧಿಪತಿಗಳೆಂದರೆ ಒಂದು ಧರ್ಮದ ಅನುಯಾಯಿಗಳ ಶ್ರೇಣಿಬದ್ಧವಾದ ವ್ಯವಸ್ಥೆಯಲ್ಲಿ ಅತ್ಯುನ್ನತ  ಸ್ಥಾನ ಹೊಂದಿರುವವರು. ಅಂಥ ವ್ಯಕ್ತಿಯೊಬ್ಬರು ತಮಗಿಂತ ಕೆಳಗಿನ ಸ್ಥರದಲ್ಲಿರುವ ‘ಹರಿದಾಸರ ಸಂಗಕ್ಕೆ ಹಾತೊರೆಯುವೆ’ ಎಂದು ಸಾರುವ ಇಂಥ ಗೀತೆಯನ್ನು ರಚಿಸಿದ್ದಾರೆಂದರೆ ವ್ಯಾಸತೀರ್ಥರ ವಿಶಾಲ ಹೃದಯ ಮತ್ತು ಅವರಿಗೆ ದಾಸಪಂಥದಮೇಲಿರುವ ಅಭಿಮಾನ  ಎಷ್ಟೆಂದು ತಿಳಿದುಬರುತ್ತದೆ. 


ಜೀವನದಲ್ಲಿ ಶಿಷ್ಟರಾಗಿದ್ದುಕೊಂಡು, ಹರಿ ಸಂಕೀರ್ತನೆಯಮೂಲಕ  ಶ್ರೀ ಕೃಷ್ಣನಿಗೆ ಪ್ರಿಯರಾಗಿರುವವರ ಸಂಗವನ್ನಾಶಿಸುವ ವ್ಯಾಸರಾಯರ ಈ  ಗೀತೆಯ ಭಾವ ಎಲ್ಲರ ಮನದೊಳಗೆ ಹೊಗಲಿ, ನಾಲಗೆಗಳಲ್ಲಿ ಹರಿನಾಮ ಹರಿದಾಡುತ್ತಾ, ಆ ಮೂಲಕ  ಶ್ರೀ ಕೃಷ್ಣನಿಗೆ ಇಷ್ಟರಾಗುವ ಭಾಗ್ಯ ಎಲ್ಲರಿಗೂ ಲಭ್ಯವಾಗಲೆಂದು ಹಾರೈಸುತ್ತಾ, ಕೃಷ್ಣಾರ್ಪಣ ಎನ್ನುತ್ತೇನೆ. 


No comments: