ಆದದ್ದೆಲ್ಲ ಒಳಿತೇ ಆಯಿತು ನಮ್ಮ
ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು
ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ಮಾಚಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರ ವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ
ಗೋಪಾಳ ಬುಟ್ಟಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ
ಆ ಪತ್ನೀಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಯ್ಯ
ತುಳಸೀ ಮಾಲೆ ಹಾಕುವುದಕ್ಕೆ
ಅರಸನೆಂದು ತಿರುಗುತಲಿದ್ದೆ
ಸರಸಿಜಾಕ್ಷ ಶ್ರೀ ಪುರಂದರ ವಿಠಲನು
ತುಳಸಿಮಾಲೆ ಹಾಕಿದನಯ್ಯ
ನವಕೋಟಿ ನಾರಾಯಣ ಶ್ರೀನಿವಾಸ ನಾಯಕರು ಸರ್ವಸ್ವವನ್ನೂ ತ್ಯಜಿಸಿ, ಹರಿದಾಸಪಂಥವನ್ನು ಹಿಡಿದು ಪುರಂದರದಾಸರಾದ ಸಂಗತಿ ಮತ್ತು ಅದರ ಹಿನ್ನೆಲೆ, ನಮ್ಮ ಸಮಕಾಲೀನರೆಲ್ಲರಿಗೂ ತಿಳಿದಿರುವುದೇ. ನಾಯಕರು ದಾಸರಾಗುವಲ್ಲಿ ಅವರ ಪತ್ನಿಯ ಹಿರಿದಾದ ಪಾತ್ರ ಇದ್ದಿರಬೇಕೆಂಬುದು ತಿಳಿದವರ ಅಭಿಪ್ರಾಯ. ಆ ಅಭಿಪ್ರಾಯಕ್ಕೆ ಪುಷ್ಟಿ ಕೊಡುವ ಪುರಂದರದಾಸರ ರಚನೆ ‘ಆದದ್ದೆಲ್ಲಾ ಒಳಿತೇ ಆಯಿತು.’
‘ನವಕೋಟಿ ನಾರಾಯಣ’ ಎನಿಸಿಕೊಂಡಿದ್ದ, ಆದರೆ ಪರಮ ಲೋಭಿಯಾಗಿದ್ದ ಶ್ರೀನಿವಾಸನಾಯಕರ ಮನೆಗೆ ಬ್ರಾಹ್ಮಣನೊಬ್ಬ ಭಿಕ್ಷೆಗೆ ಬಂದಾಗ ಅವನಿಗೆ ಕೊಡಲು ನಾಯಕರ ಪತ್ನಿಯಬಳಿ ಏನೂ ಇಲ್ಲದೆ ಆಕೆ ತನ್ನ ಮೂಗುಬಟ್ಟನ್ನು ಬಿಚ್ಚಿ ಕೊಟ್ಟದ್ದು, ಅದನ್ನು ಬ್ರಾಹ್ಮಣ, ನಾಯಕರ ಬಳಿಯೇ ಅಡವು ಇಡಲು ಒಯ್ದದ್ದು, ನಾಯಕರಿಗೆ ಅನುಮಾನಬಂದು ಅವರು ಮನೆಗೆ ಬಂದು ಪತ್ನಿಯನ್ನು ದಬಾಯಿಸಿಕೇಳಿದ್ದು, ಉತ್ತರ ಕೊಡಲಾಗದ ಪತ್ನಿ ವಿಷಪ್ರಾಶನ ಮಾಡಲೆಂದು ವಿಷದ ಬಟ್ಟಲ್ಲನ್ನೆತ್ತಿಕೊಂಡಾಗ ಆ ಬಟ್ಟಲೊಳಗೆ ಮೂಗುಬಟ್ಟು ಬಿದ್ದದ್ದು, ಆ ಮೂಲಕ ದಾಸರಿಗೆ ಪರಮಾತ್ಮನ ಹಿರಿಮೆಯ ಅರಿವಾಗಿ ಅವರು ಎಲ್ಲವನ್ನೂ ತ್ಯಜಿಸಿ ದಾಸರಾದದ್ದು, ಇದೆಲ್ಲ ನಾವು ಚಿಕ್ಕಂದಿನಲ್ಲಿ ಕೇಳಿ ಕೇಳಿ ಬಾಯಿಪಾಠವಾಗಿದ್ದ ಕಥೆ. ಉಡುಪಿ ಕೃಷ್ಣ ಕನಕದಾಸರಿಗೆ ದರ್ಶನಕೊಡಲು ತಿರುಗಿ, ಗೋಡೆ ಬಿರಿಯಿತೆಂದು ಹೇಳುತ್ತೇವಲ್ಲವೇ, ಹಾಗೆ.
ಆದರೆ ಕರ್ನಾಟಕ ಸಂಗೀತ ಪಿತಾಮಹರೆಂದು ಹೆಸರಾಗಿರುವ ಪುರಂದರ ದಾಸರ ಬಗ್ಗೆ ನಮಗೆ ಖಚಿತವಾಗಿ ತಿಳಿದಿರುವ ಸಂಗತಿಗಳು ಬಹು ಸ್ವಲ್ಪ. ಅಥವಾ ಇಲ್ಲವೇ ಇಲ್ಲ ಎಂದರೂ ಆದೀತು. ದಾಸರು ಇದ್ದರು ಎಂಬುದಕ್ಕೆ ಇರುವ ಪುರಾವೆಯೇ ಅತ್ಯಲ್ಪ. ವಿಜಯನಗರದ ಅರಸರು ಶ್ರೀ ವ್ಯಾಸತೀರ್ಥರಿಗೆ ಬಳುವಳಿಯಾಗಿ ಕೊಟ್ಟ ಕೆಲವು ಗ್ರಾಮಗಳನ್ನು ಅವರು ತಮ್ಮ ಅನೇಕ ಶಿಷ್ಯರಿಗೆ ಹಂಚಿಕೊಟ್ಟರಂತೆ. ಅದರಲ್ಲಿ ಒಂದೆರಡು ಪಾಲು ಪುರಂದರದಾಸ ‘ಜ’ ಎಂದು ಕರೆಸಿಕೊಂಡಿದ್ದ, ಎಂದರೆ ಪುರಂದರದಾಸರೆನ್ನುವವರ ಮಕ್ಕಳು ಎನಿಸಿಕೊಂಡಿದ್ದ ಲಕ್ಷ್ಮಣದಾಸ, ಹೇಬಣದಾಸ ಮುಂತಾದವರಿಗೆ ಸೇರಿತೆನ್ನುವುದು ಒಂದು ಶಾಸನದಲ್ಲಿ ಸೂಚಿತವಾಗಿದೆಯಂತೆ. ಪುರಂದರದಾಸರ ಮಕ್ಕಳು ಎನಿಸಿಕೊಂಡವರು ಇದ್ದುದ್ದರಿಂದ, ದಾಸರು ಕೂಡ ಇದ್ದರೆಂದು ನಾವು ಹೇಳಬಹುದು ಎಂದು ಪ್ರೊ ಎಸ್ ಕೆ ರಾಮಚಂದ್ರರಾಯರು ತಮ್ಮ ‘ಪುರಂದರ ಸಾಹಿತ್ಯ ದರ್ಶನ’ ಪುಸ್ತಕದಲ್ಲಿ ಬರೆದಿದ್ದಾರೆ.
ನಾನು ಮೊದಲು ಹೇಳಿದ ಕಥೆ ನಡೆಯಿತೋ ಬಿಟ್ಟಿತೋ, ಏನೇ ಇರಲಿ, ತಾವು ಹರಿದಾಸರಾಗಿ ಪರಿವರ್ತಿತರಾಗಲು ತಮ್ಮ ಪತ್ನಿ ಕಾರಣಭೂತರೆಂದು ದಾಸರೇ ಹೇಳಿಕೊಂಡು, ಆದದ್ದೆಲ್ಲಾ ಒಳಿತೇ ಆಯಿತು, ಶ್ರೀಧರನ ಸೇವೆಗೆ ಬಳಸಲು ದೊಡ್ಡ ಸಂಪತ್ತಾಯಿತು ಎಂದು ಹಾಡಿದ್ದಾರೆ. ದಾಸರಾಗುವ ಮುಂಚಿನ ತಮ್ಮ ಮನಸ್ಥಿತಿಯನ್ನು ತೋಡಿಕೊಂಡು ತಮ್ಮ ಪತ್ನಿಯ ಪ್ರೇರಣೆಯಿಂದ ದಾಸನಾಗಿ ಉದ್ಧಾರನಾದೆನೆಂಬ ಅರ್ಥಬರುವ ಸಾಲುಗಳನ್ನು ರಚಿಸಿದ್ದಾರೆ. ದಂಡಿಗೆ ಬೆತ್ತವೆಂದರೆ, ಹಾಡಿಕೆಗೆ ಪೂರಕವಾಗಿ ಬಳಸುವ, ಒಂದೇ ತಂತಿಯ, ಬಿದಿರು, ಸೋರೆ ಬುರುಡೆಯ ವಾದ್ಯ. ಗೋಪಾಳಬುಟ್ಟಿ ಎಂದರೆ, ಭಿಕ್ಷೆ ಹಾಕಿಸಿಕೊಳ್ಳಲು ಉಪಯೋಗವಾಗುವ, ಹೆಗಲಿಗೆ ನೇತುಹಾಕಿಕೊಳ್ಳುವ ಜೋಳಿಗೆ.
ಕೋಟ್ಯಾಧೀಶನಾಗಿ ಅಹಂಕಾರಿಯಾಗಿದ್ದ ನಾನು ನನ್ನ ಆಡಂಬರವನ್ನು ಬಿಟ್ಟು ಹರಿದಾಸನಾಗಿ, ಭಿಕಾರಿ ವೇಷ ಧರಿಸುವುದು ಸಾಧ್ಯವಿತ್ತೇ ? ನಾನು ಅದನ್ನು ಧರಿಸುವಂತೆ ಮಾಡಿದ, ಅಂದರೆ ವೈರಾಗ್ಯದೆಡೆಗೆ ನನ್ನ ಮನ ತಿರುಗಲು ಎಡೆಮಾಡಿಕೊಟ್ಟ ಅಥವಾ ಕಾರಣವಾದ ನನ್ನ ಪತ್ನಿಯಂಥವರು ಸಾವಿರ ಸಾವಿರವಾಗಲಿ ಎಂದು ಆಕೆಯನ್ನು ಹೊಗಳಿ ಹಾಡಿರುವ ಗೀತೆ ಇದು.
ಒಳಿತು ಎನ್ನುವ ಕಾರ್ಯಗಳೆಲ್ಲಾ ತಮ್ಮ ಪತ್ನಿಯ ಮೂಲಕ ನಡೆದದ್ದಾದರೂ ಅದು ಪುರಂದರ ವಿಠಲನಚಿತ್ತದಂತೆ ಆದದ್ದು ಎಂಬ ತತ್ವ ವನ್ನು “ಸರಸಿಜಾಕ್ಷ ಶ್ರೀ ಪುರಂದರ ವಿಠಲನು ತುಳಸೀಮಾಲೆ ಹಾಕಿದನಯ್ಯ” ಎಂಬ ಕೊನೆಯ ಸಾಲಿನಲ್ಲಿ ದಾಸರು ಸೂಚಿಸಿದ್ದಾರೆಂದು ತಿಳಿಸುತ್ತಾ ಇಂದಿನ ಮಾತನ್ನು ಕೃಷ್ಣಾರ್ಪಣ ಮಾಡುತ್ತೇನೆ.