ಜಗದುದ್ಧಾರನ ಆಡಿಸಿದಳೆಶೋದೆ
ಜಗದುದ್ಧಾರನ ಮಗನೆಂದು ತಿಳಿಯುತ
ಸುಗುಣಾಂತರಂಗನ ಆಡಿಸಿದಶೋದೆ
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನಾ ಆಡಿಸಿದಳೆಶೋದೆ
ಅಣೋರಣೀಯನಾ ಮಹತೋಮಹೀಯನಾ
ಅಪ್ರಮೇಯನಾ ಆಡಿಸಿದಳೆಶೋದೆ
ಪರಮಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದೆ
ದಾಸರಪದವೆಂದರೆ ನನ್ನ ಮನದಲ್ಲಿ ತಕ್ಷಣ ಮೂಡುವುದು,
ನಾನು ಚಿಕ್ಕಂದಿನಲ್ಲಿ ಆಕಾಶವಾಣಿಯಲ್ಲಿ ಕೇಳುತ್ತಿದ್ದ ಪುರಂದರ
ದಾಸರ ರಚನೆ ‘ಜಗದೋದ್ಧಾರನಾ’. ಆಗ ಆಕಾಶವಾಣಿಯಲ್ಲಿ
ಕೇಳಿಬರುತ್ತಿದ್ದ ಶ್ರೀ ಬಿ ಎಸ್ ರಾಜಯ್ಯಂಗಾರ್ಯರ ಕಂಚಿನ
ಕಂಠದ ಗಾಯನ ಅದೇಕೋ ನನಗೆ ಬಹಳ ಇಷ್ಟವಾಗಿತ್ತು.
ಯು ಟ್ಯೂಬು , ನೆಟ್ಟು, ಪೆನ್ ಡ್ರೈವು , ಡಿಸ್ಕು ಅಷ್ಟೆಯೇಕೆ ಟೇಪ್
ರೆಕಾರ್ಡರ್ ಸಹ ಕಾಣದಿದ್ದ ನಮ್ಮ ಚಿಕ್ಕಂದಿನಲ್ಲಿ ನನಗೆ ಬೇಕೆನಿಸಿದಾಗ ರಾಜಯ್ಯಂಗಾರ್ಯರ ಗಾಯನ ಸಿಗುತ್ತಿರಲಿಲ್ಲವಾದ್ದರಿಂದ ನಾನು
ನನ್ನ ಸಹೋದರಿ ಬೃಂದಾರಾವ್ ಅವರನ್ನು ಕಾಡಿ ಅವರಿಂದ ಈ
ಗೀತೆಯನ್ನು ಹಾಡಿಸುತ್ತಿದ್ದೆ.
‘ಜಗದೋದ್ಧಾರನಾ ಆಡಿಸಿದಳೆಶೋದ’ ಎಂಬ ಈ ಗೀತೆ ಕೃಷ್ಣನ ಹಿರಿಮೆಯ ವರ್ಣನೆಯ ಜತೆಗೆ ಯೆಶೋದೆಯ ಹಿರಿಮೆಯ ವರ್ಣನೆಯೂ ಹೌದು. ಇಡೀ ಜಗತ್ತನ್ನುಭರಿಸುವ, ಎತ್ತಿ ಹಿಡಿದು ಉದ್ಧರಿಸುವ ಜಗದೋದ್ಧಾರಕ ಅವನು. ಆದರೇನು ? ಆ ತಾಯಿಗೆ ಅವನು ಕಂದನೇ ! ಅವನನ್ನು ಅಂತೆಯೇ ಕಂಡು ಆಡಿಸಿದಳು ಯೆಶೋದೆ. ತಾನು ಸಾಧಾರಣ ಮಗು ಅಲ್ಲವೆಂದು ಆಕೆಗೆ ತಿಳಿಯಪಡಿಸಲೆಂದೇ ಕೃಷ್ಣ ಒಮ್ಮೆ ತನ್ನ ಬಾಯಲ್ಲಿ ಆಕೆಗೆ ಬ್ರಹ್ಮಾಂಡವನ್ನು ತೋರಿಸಿದನಂತೆ. ಆದರೆ ನಮ್ಮ ಮಕ್ಕಳ ಬಾಯಲ್ಲಿ ಮಣ್ಣೋ ಕಲ್ಲೋ ಕಂಡರೆ ನಾವು ಗಾಬರಿಯಾಗುವಂತೆ ಆ ತಾಯಿ ಹೃದಯವೂ ಮಗುವಿನ ಬಾಯಲ್ಲಿ ಇರಬಾರದ್ದು ಏನನ್ನೋ ಕಂಡು ಅವನ ಯೋಗಕ್ಷೇಮದ ಬಗ್ಗೆ ಆತಂಕಕ್ಕೊಳಗಾಯಿತೇ ವಿನಾ ಅದನ್ನು ಭಗವಂತನ ಸಾಕ್ಷಾತ್ಕಾರವೆಂದು ತಿಳಿಯಲಿಲ್ಲ. ಕೃಷ್ಣ ಅವಳಿಗೆ ಪರಮಾತ್ಮನಾಗದೇ ತನ್ನ ಮಗನಾಗಿಯೇ ಉಳಿದ - ಅದರಿಂದಲೇ ದಾಸರು ‘ಜಗದುದ್ಧಾರನ ಮಗನೆಂದು ತಿಳಿಯುತ’ ಎಂದು ಹಾಡಿದರೆಂದು - ತಿಳಿದವರು ಹೇಳುತ್ತಾರೆ.
ಈ ಗೀತೆಯಲ್ಲಿ ಮುಂದೆ ಬರುವ ವಿಶೇಷಣಗಳೆಲ್ಲ ಪರಮಾತ್ಮನ ಸ್ವರೂಪವನ್ನು ತಿಳಿಸುವಂತಹವು. ಮೊದಲಿಗೆ ‘ಸುಗುಣಾಂತರಂಗ’ ಎಂದರು ದಾಸರು. ಸುಗುಣ ಅಂತರಂಗ ಸೇರಿ ‘ಸುಗುಣಾಂತರಂಗ’ ಎಂದರೆ ಸತ್ವಗುಣವೇ ಸ್ವರೂಪವಾದವನು. ನಂತರದ ವಿಶೇಷಣ ‘ನಿಗಮಕೆ ಸಿಲುಕದ ಅಗಣಿತ ಮಹಿಮ’. ನಿಗಮಗಳೆಂದರೆ ವೇದಗಳು. ನಮಗೆ ಪರಮಾತ್ಮನ ಬಗ್ಗೆ ವಿವರ ನೀಡುವ ಸಾಧನಗಳೆಂದರೆ ವೇದಗಳು ಮಾತ್ರ ಎಂದು ಧರ್ಮಶಾಸ್ತ್ರ ಹೇಳುತ್ತದೆ. ಆದರೆ ಆ ವೇದಗಳಿಗೂ ಪೂರ್ಣವಾಗಿ ನಿಲುಕದವನು ಆ ಅಗಣಿತ ಮಹಿಮ, ಕೊನೆಯಿಲ್ಲದ ಮಹಿಮೆಯುಳ್ಳವನು, ಎನ್ನುತ್ತಾರೆ ದಾಸರು.
ಮುಂದಿನ ವಿಶೇಷಣಗಳಾದ ‘ಅಣೋರಣೀಯ’ ಮತ್ತು ‘ಮಹತೋಮಹೀಯ’ ಎರಡೂ ಬಹಳ ವಿಶಿಷ್ಟ. ಅಣು + ರಣ ಸೇರಿ ಅಣೋರಣೀಯ. ಅಣು ಎಂದರೆ ಸೂಕ್ಷ್ಮಾತಿಸೂಕ್ಷ್ಮ. ರಣ ಎಂದರೆ ಕನ್ನಡದಲ್ಲಿ ಯುದ್ಧ ಎನ್ನುವುದೊಂದೇ ಅಲ್ಲದೆ ಸಂತೋಷ, ಅತ್ಯಾನಂದ ಎಂಬ ಅರ್ಥವೂ ಇದೆ. ಆದ್ದರಿಂದ ಅಣೋರಣೀಯ ಎನ್ನುವುದು ಸೂಕ್ಷ್ಮಾತಿಸೂಕ್ಷ್ಮವಾದ ಆನಂದ ಸ್ವರೂಪ. ಮಹತೋಮಹೀಯ ಎನ್ನುವುದನ್ನು ಬೇರ್ಪಡಿಸಿದರೆ, ಮಹತ್ ಮತ್ತು ಮಹೀಯ ಎಂದಾಗುತ್ತದೆ. ಮಹತ್ ಎಂದರೆ ಅತ್ಯಂತ ಹಿರಿದು, ಆಕಾಶದಂತೆ ಅಗಾಧವಾದದ್ದು ಎಂದು ಅರ್ಥ. ಮಹೀಯ ಎಂದರೆ ಸಂಸ್ಕೃತದಲ್ಲಿ ಆನಂದ. ಮಹತೋಮಹೀಯ ಎನ್ನುವುದು ಅತ್ಯಂತ ಹಿರಿದಾದ ಆನಂದ ಸ್ವರೂಪ. ಆದ್ದರಿಂದ ಅಣೋರಣೀಯ - ಮಹತೋಮಹೀಯ ಎನ್ನುವುದು ಅತ್ಯಂತ ಕಿರಿದೂ, ಅತ್ಯಂತ ಹಿರಿದೂ ಆದ ಆನಂದ ಸ್ವರೂಪ. ಅಣುರ್ಬೃಹತ್ ಕೃಶಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ ಎಂಬ ವಿಷ್ಣುಸಹಸ್ರನಾಮದ ವಿರುದ್ಧಾರ್ಥ ವಿಶೇಷಣ ಶ್ಲೋಕದ ಕನ್ನಡ ರೂಪ ಅಣೋರಣೀಯನಾ - ಮಹತೋಮಹೀಯನಾ.
ನಂತರದಲ್ಲಿ ಬರುವ ವಿಶೇಷಣ ‘ಅಪ್ರಮೇಯ’. ‘ಮೇಯ’ ಎಂದರೆ ಅಳತೆಗೆ ಸಿಗುವಂಥದ್ದು. ತಿಳಿಯಲುಸಾಧ್ಯವಾದದ್ದು. ‘ಪ್ರಮೇಯ’ ಎಂದರೆ ಅಗತ್ಯವಾಗಿ ತಿಳಿಯತಕ್ಕದ್ದು, ಅರಿತುಕೊಳ್ಳಲು ಯೋಗ್ಯವಾದದ್ದು. ‘ಅಪ್ರಮೇಯ’ ಎಂದರೆ ಅರಿಯಬೇಕಾದದ್ದು ಆದರೆ ಅರಿಯಲು ಅಸಾಧ್ಯವಾದದ್ದು. ತಿಳಿದುಕೊಳ್ಳಲೇಬೇಕಾದ ಆದರೆ ಪೂರ್ಣವಾಗಿ ತಿಳಿದುಕೊಳ್ಳಲು ಅಸಾಧ್ಯವಾದವನು ಅಪ್ರಮೇಯ. ಈ ಅಪ್ರಮೇಯನ ಬಗ್ಗೆ ಕೊಂಚ ಹೆಚ್ಚಿನ ವಿಚಾರವಿದೆ.
ತಮ್ಮ ಕ್ಷೇತ್ರ ಸಂಚಾರದ ಸಮಯದಲ್ಲಿ ಪುರಂದರದಾಸರು ಬೆಂಗಳೂರು - ಮೈಸೂರು ರಸ್ತೆಯಲ್ಲಿರುವ ಮಳೂರಿಗೆ ಬಂದಿರಬಹುದೆಂದೂ, ಮಳೂರಿನ ಕೃಷ್ಣದೇವಾಲಯದ ಅಂಬೆಗಾಲು ಕೃಷ್ಣನನ್ನು ಕಂಡು ಈ ಗೀತೆಯನ್ನು ರಚಿಸಿರಬಹುದೆಂದೂ ಪ್ರೊ ಎಸ ಕೆ ರಾಮಚಂದ್ರರಾಯರು ಅಭಿಪ್ರಾಯಪಟ್ಟಿದ್ದಾರೆ. ಮಳೂರಿನ ದೇವಾಲಯದ ಬಾಲಕೃಷ್ಣ ಮೂರ್ತಿಗೆ ‘ಅಪ್ರಮೇಯ’ ಎಂದು ಹೆಸರಂತೆ. ಈ ಗೀತೆಯ ಮೂರನೆಯ ಚರಣದಲ್ಲಿ ‘ಅಣೋರಣೀಯನ ಮಹತೋ ಮಹೀಯನಾ’ ಎಂಬ ಸಾಲಿನ ನಂತರ, ಪುರಂದರದಾಸರು ತಮ್ಮ ಎಲ್ಲ ಗೀತೆಗಳಲ್ಲಿಯೂ ಸದಾ ಪಾಲಿಸುವ ತಮ್ಮ ದ್ವಿತೀಯಾಕ್ಷರ ಪ್ರಾಸ, ಅಂದರೆ ಗೀತೆಯ ಎಲ್ಲ ಸಾಲುಗಳ ಎರಡನೇ ಅಕ್ಷರ ಒಂದೇ ಆಗಿರುವುದು, ಈ ಕಟ್ಟುಪಾಡನ್ನು ಕೈಬಿಟ್ಟು ‘ಅಪ್ರಮೇಯ’ ಎಂಬ ಪದ ಬಳಸಿರುವುದು ತಮ್ಮ ಅಭಿಪ್ರಾಯಕ್ಕೆ ಒತ್ತು ಕೊಡುತ್ತದೆಂದು ರಾಮಚಂದ್ರರಾಯರು ಹೇಳುತ್ತಾರೆ.
ಈ ರೀತಿ ಸುಂದರವಾದ ಅನೇಕ ವಿಶೇಷಣಗಳಿಂದ ವಿವರಿಸಲ್ಪಟ್ಟಿರುವ ಪರಮಪುರುಷ, ಪರ ವಾಸುದೇವನನ್ನು, ಆ ಪುರಂದರ ವಿಠಲನನ್ನು, ತನ್ನ ಮಗನೆಂದೇ ನಂಬಿ ಆಡಿಸಿದಳು ಆ ಭಾಗ್ಯವಂತೆ ತಾಯಿ ಯೆಶೋದೆ ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಕೊನೆಗಾಣಿಸಿದ್ದಾರೆಂದು ತಿಳಿಸುತ್ತಾ ಇಂದಿನ ನನ್ನ ಮಾತನ್ನು ಕೃಷ್ಣಾರ್ಪಣ ಮಾಡುತ್ತೇನೆ.
No comments:
Post a Comment