Saturday, November 28, 2026

ಕೈಲಾಸವಾಸ ಗೌರೀಶ ಈಶಾ

 ಕೈಲಾಸವಾಸ ಗೌರೀಶ ಈಶಾ || ಪ ||

ತೈಲಧಾರೆಯಂತೆ ಮನಸು ಕೊಡು ಹರಿಯಲಿ || ಅ.ಪ ||


ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ

ಮಹಿಯೊಳಗೆ ಚರಿಸಿದೆನೊ ಮಹದೇವನೇ

ಅಹಿ ಭೂಷಣನೆಯೆನ್ನ ಅವಗುಣಗಳೆಣಿಸದಲೆ 

ವಿಹಿತಧರ್ಮದಲಿ ವಿಷ್ಣು ಭಕುತಿಯ ಕೊಡು ಶಂಭೋ || ೧ ||


ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ

ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ

ದನುಜಗಜ ಮದಹಾರಿ ದಂಡಪ್ರಣಾಮವಮಾಳ್ಪೆ

ಮಣಿಸೋ ಈ ಶಿರವ ಸಜ್ಜನರ ಸಿರಿ ಚರಣದಲಿ || ೨ ||


ಭಾಗೀರಥೀಧರನೇ ಭಯವ ಪರಿಹರಿಸಯ್ಯ ಲೇ

ಸಾಗಿ ಒಲಿದು ಸಂತತ ಶರ್ವ ದೇವಾ

ಭಾಗವತ ಜನಪ್ರೀಯ ವಿಜಯ ವಿಟ್ಠಲನಂಘ್ರಿ

ಜಾಗುಮಾಡದೆ ಭಜಿಪ ಭಾಗ್ಯವನೆ ಕೊಡು ಶಂಭೋ


ಶ್ರೀ ವಿಜಯದಾಸರು ಮಧ್ವ ಪರಂಪರೆಯನ್ನು ಅನುಸರಿಸಿದವರು. ಅವರ ತತ್ವದ ಪ್ರಕಾರ ಶ್ರೀಹರಿಯನ್ನು ತಲುಪಬೇಕಾದರೆ  ನಾವು ಅವನ  ಪರಿವಾರದೇವತೆಗಳು ಮತ್ತು ಮುಖ್ಯಪ್ರಾಣನ ಮೂಲಕವೇ ಹೋಗಬೇಕಾದದ್ದು. ಆದ್ದರಿಂದ, ಮನಸ್ಸನ್ನು ಅತ್ತಿತ್ತ ಅಲುಗದಂತೆ ನಿಗ್ರಹಿಸಿ ಶ್ರೀಹರಿಯಲ್ಲಿ ಲೀನವಾಗುವಂತೆ ಅನುಗ್ರಹಿಸಬೇಕೆಂದು, ಪರಿವಾರದೇವತೆಗಳಲ್ಲಿ ಒಬ್ಬನಾದ ಶಿವನನ್ನು ಈ ಗೀತೆಯ ಮೂಲಕ ಕೇಳಿಕೊಳ್ಳುತ್ತಿದ್ದಾರೆ ಶ್ರೀ ವಿಜಯದಾಸರು.


‘ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ’ ಎಂದು ಶಿವನನ್ನು ಬೇಡುತ್ತಾರೆ ಶ್ರೀ ವಿಜಯದಾಸರು. ಕೆಳಗೆ ಬಿದ್ದೊಡನೆ ಅತ್ತಿತ್ತ ಸಿಡಿದು ಹೋಗುವ ನೀರಿನದೋ ಹಾಲಿನದೋ ಧಾರೆಯಂತಲ್ಲ. ಅತ್ತಿತ್ತ ಸಿಡಿಯದೇ ಒಂದೇ ಸಮನೆ ಬೀಳುವ ತೈಲಧಾರೆಯಂತೆ. ಯಾವ ತೈಲ? ಸಾಧನೆ ಎಂಬ ಗಾಣದಲ್ಲಿ ಚೆನ್ನಾಗಿ ಅರೆಯಲ್ಪಟ್ಟು ಹೊರಬಿದ್ದ ನಮ್ಮ ಭಕ್ತಿ ಎಂಬ ತೈಲ. ಅದು ಮಂದವಾಗಿ ಒಂದೇ ಹದದಲ್ಲಿ ಸುರಿದು ಭಗವಂತನಲ್ಲಿ ಲೀನವಾಗಲಿ ಎಂಬ ಬೇಡಿಕೆ ದಾಸರದು. 


ಮೊದಲ ಚರಣ ‘ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ  ಮಹಿಯೊಳಗೆ ಚರಿಸಿದೆನೋ ಮಹದೇವನೇ, ಅಹಿ ಭೂಷಣನೆಯೆನ್ನ ಅವಗುಣಗಳೆಣಿಸದಲೆ ವಿಹಿತಧರ್ಮದಲಿ ವಿಷ್ಣು ಭಕುತಿಯ ಕೊಡು’ 


ಅಹೋರಾತ್ರಿಯಲಿ ಎಂದರೆ ಹಗಲು ರಾತ್ರಿ, ನಾನು ಮಹಿಯೊಳಗೆ ಅಂದರೆ ಈ ಭೂಮಿಯಲ್ಲಿ ಅನುಚರಾಗ್ರಣಿಯಾಗಿ ಎಂದರೆ ಹಿಂಬಾಲಕರಿಗೆ  ಮುಖಂಡನಾಗಿ ಚರಿಸಿದೆ ಎಂದರೆ ಅಲೆದಾಡಿದೆ. ಹಿಂಬಾಲಕರು ಯಾರು? ನನ್ನ ಎಲ್ಲ ಅವಗುಣಗಳು. ಅವುಗಳನ್ನು ಬಿಡದೆ ಸದಾ ಹಿಂದಿಟ್ಟುಕೊಂಡೇ ಅಲೆದಾಡಿದ್ದೇನೆ. ‘ಅಹಿಭೂಷಣನೇ’ ಎಂದರೆ ಸರ್ಪಗಳಿಂದ ಅಲಂಕೃತನಾದವನೇ, ನನ್ನ ಅವಗುಣಗಳನ್ನು ಮನ್ನಿಸಿ, ಇನ್ನು ಮುಂದಾದರೂ  ವಿಷ್ಣುಭಕ್ತಿಯಲ್ಲಿ ಮನಸ್ಸು ತೊಡಗುವಂತೆ ಮಾಡು ಎಂದು ದಾಸರ ಬೇಡಿಕೆ. 


ಇಲ್ಲಿ ಶಿವನನ್ನು ಅಹಿಭೂಷಣ ಎಂದು ಸಂಭೋಧಿಸಿದ್ದಾರೆ ದಾಸರು. ಅಹಿ ಎಂದರೆ ಸರ್ಪ. ಸರ್ಪಗಳು ನಮ್ಮ ಮೈ ಮನಸ್ಸುಗಳಲ್ಲಿ ಹರಿದಾಡುವ ಕಾಮನೆಗಳ ಸಂಕೇತ. ಅಂಥ  ಸರ್ಪಗಳನ್ನು, ಅಂದರೆ ಕಾಮನೆಗಳನ್ನು ಕಟ್ಟಿಹಾಕಿರುವವನು ಶಿವ. ಅವನು ತನ್ನ ಮೈಯಲ್ಲಿ ಕಟ್ಟಿಕೊಂಡಿರುವ ಸರ್ಪಗಳು ಕಾಮನೆಗಳ ವಿರುದ್ಧ ಶಿವನ ವಿಜಯದ ಸಂಕೇತ. ಅವೇ ಅವನ ಆಭರಣಗಳು. ನಾವು ದೇವತೆಗಳನ್ನು ಯಾವ ರೂಪದಲ್ಲಿ ಚಿಂತನೆಮಾಡುತ್ತೇವೆಯೋ ಆ ರೂಪದ ಗುಣಗಳು ನಮಗೆ ಕೊಂಚವಾದರೂ ಲಭ್ಯವಾಗುತ್ತವೆಂಬುದು ಒಂದು ನಂಬಿಕೆ. ಆದ್ದರಿಂದ ನನಗೂ ಆ ನಿನ್ನ ಇಂದ್ರಿಯ ನಿಗ್ರಹ ಗುಣ ಲಭಿಸಲೆಂದು ದಾಸರು ಇಲ್ಲಿ ಶಿವನನ್ನು ‘ಅಹಿಭೂಷಣ’ ಎಂದು ಸಂಬೋಧಿಸಿದ್ದಾರೆ. 


ಎರಡನೇ ಚರಣದಲ್ಲಿ ‘ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೇ’ ಎನ್ನುತ್ತಾ, ಶಿವನನ್ನೂ ಸಹ ನಮ್ಮ  ತಪ್ಪಿನ ಭಾಗವನ್ನಾಗಿಸಿದ್ದಾರೆ ದಾಸರು. ನಮ್ಮ ಕರ್ಮಗಳೆಲ್ಲಕ್ಕೂ, ಅವು ಸತ್ಕರ್ಮಗಳಾಗಲೀ, ದುಷ್ಕರ್ಮಗಳಾಗಲೀ, ಶ್ರೀಹರಿಯೇ ಪ್ರೇರಣೆ ಎಂಬುದು ನಮ್ಮ ನಂಬಿಕೆ. ನಮಗೆ ಶ್ರೀಹರಿಯ ಪ್ರೇರಣೆ ಅವನ ಪರಿಚಾರಕರ ಮೂಲಕ. ಆದ್ದರಿಂದ ಶಿವನಿಗೆ ‘ನಾ ನಡೆಸಿದ ಜೀವನ ನಿನ್ನ ಪ್ರೇರಣೆಯಿಂದಲೇ ಆದದ್ದು’ ಎನ್ನುತ್ತಾರೆ ದಾಸರು. ಆದರೆ ಇದರ ಹಿಂದಿನ ಭಾವ ‘ನಿನ್ನಿಂದಾಗಿ ನಾನು ತಪ್ಪುಮಾಡಿದೆ’ ಎನ್ನುವುದಲ್ಲ. ‘ನಿನ್ನ ಪ್ರೇರಣೆಯಿಲ್ಲದೆ ನನ್ನಿಂದ ಏನೂ ಸಾಗದು‘ ಎಂದು. ದಾನವರೆಂಬ ಮದಗಜಗಳನ್ನು  ಮಣಿಸುವ ನೀನು, ‘ಅನಲಾಕ್ಷ’, ಎಂದರೆ ಬೆಂಕಿಯ ಕಣ್ಣುಳ್ಳವನೇ, ನನ್ನ ದುರ್ಗುಣಗಳನ್ನು ಸುಟ್ಟು, ಶಿರವನ್ನು ಅಂದರೆ ಬುದ್ಧಿಯನ್ನು ಮಣಿಸಿ ಸಜ್ಜನರ ಚರಣದಲ್ಲಿರಿಸು ಎನ್ನುತ್ತದೆ ಎರಡನೇ ಚರಣ. 


ಕೊನೆಯಚರಣದಲ್ಲಿ ‘ಭಾಗೀರಥಿಧರನೇ’ ಅಂದರೆ ‘ಗಂಗಾಧರನೇ’,  ‘ಶರ್ವ ದೇವಾ’,  ಶರ್ವ ಎಂದರೆ ಮಂಗಳವಾದದ್ದು, ಆದ್ದರಿಂದ ಮಂಗಳಕರ ದೇವನಾದ ನೀನು, ‘ಲೇಸಾಗಿ ಒಲಿದು’ ಎಂದರೆ ನನಗೆ ಚೆನ್ನಾಗಿ ಒಲಿದು, ನನ್ನ  ಭವಭಯವನ್ನು ನಿವಾರಿಸು ಎಂದು ಬೇಡುತ್ತಾರೆ ದಾಸರು. ಜತೆಗೆ  ‘ಜಾಗು ಮಾಡದೆ’ ಎಂದರೆ ಉದಾಸೀನತೆಗೆ ಎಡೆಗೊಡದಂತೆ, ಸಂತತವಾಗಿ ವಿಜಯ ವಿಠಲನ ಪಾದಭಜಿಸುವಂತ ಭಾಗ್ಯವ ನೀಡಯ್ಯಾ ಎನ್ನುತ್ತಾ ಕೊನೆಯಲ್ಲಿ ಶಿವನನ್ನು ಮತ್ತೊಮ್ಮೆ ಶಂಭೋ ಎಂದು ಸಂಬೋಧಿಸಿದ್ದಾರೆ. ಶಂ ಎಂದರೆ  ಮಂಗಳ. ಭು ಎಂದರೆ ಮೂಲ ಅಥವಾ ಉಗಮ.  ಹಾಗಾಗಿ ‘ಶಂಭು’ ಎನ್ನುವುದು ಎಲ್ಲರೀತಿಯ ಮಂಗಳಕ್ಕೂ ಉಗಮ ಅಥವಾ ನಾಂದಿ. ಆದ್ದರಿಂದ ಮಂಗಳಕರನಾದ ನಿನ್ನ ಮೂಲಕ ನನ್ನ ಅವಗುಣಗಳು ಕಳೆದು ಹರಿಯಲ್ಲಿ ಮನಸ್ಸು ಲೀನವಾಗಿ, ಮಂಗಳವಾಗಲಿ ಎಂಬ ಭಾವದೊಂದಿಗೆ ತಮ್ಮ ರಚನೆಯನ್ನು ದಾಸರು ಮುಗಿಸಿದ್ದಾರೆ ಎಂಬಲ್ಲಿಗೆ ಕೃಷ್ಣಾರ್ಪಣ ಎನ್ನುತ್ತೇನೆ.


Saturday, November 21, 2026

ಇಕ್ಕಲಾರೆ ಕೈ ಎಂಜಲು

 ಇಕ್ಕಲಾರೆ ಕೈ ಎಂಜಲು ಚಿಕ್ಕ

ಮಕ್ಕಳು ಅಳುತಾರೆ ಹೋಗೋ ದಾಸಯ್ಯ


ಮನೆಯ ಸಾರಿಸುತೇನೆ ಮಡಕೆ ತೊಳೆಯತೇನೆ 

ಮನೆಯೊಳಗ್ಯಾರಿಲ್ಲ ಹೋಗೊ ದಾಸಯ್ಯ

ತನಯರು ಅಳುತಾರೆ ನಿನದೇನು ಕಾಟವೋ 

ಚಣಮಾತ್ರ ನಿಲ್ಲದೆ ಹೋಗೊ ದಾಸಯ್ಯ



ಅಟ್ಟದ ಮೇಲಿನ ಅಕ್ಕಿ ತೆಗೆಯಬೇಕು

ಹೊಟ್ಟೆ ನೋಯುತಲಿದೆ ಹೋಗೊ ದಾಸಯ್ಯ

ಮುಟ್ಟುವಂತಿಲ್ಲವೋ  ಮನೆಯೊಳಗಾರಿಲ್ಲ

ನಿಷ್ಠೂರ ಮಾಡದೆ ಹೋಗೊ ದಾಸಯ್ಯ



ವೀಸದ ಕಾಸಿಗೆ ದವಸವ ನಾ ತಂದೆ

ಕೂಸಿಗೆ ಸಾಲದು ಹೋಗೊ ದಾಸಯ್ಯ

ಆಸೆಕಾರ ನಾನು ದೋಷಹಾರಿ ನೀನು

ಶೇಷಾಚಲವಾಸ ಪುರಂದವಿಠಲ


ikkalAre kai enjalu chikka 

makkaLu aLutAre hOgO dAsayyA


maneya sArisutEne maDake toLeyutEne maneyoLagyArilla hOgO dAsayya tanayaru aLutAre ninadEnu kATavo kshaNamaatra nillade hOgO dAsayya


aTTada mElina akki tegeya bEku 

hoTTe nOyutalide, hOgO dAsayya 

muTTAgi iddEne maneyoLagArilla 

nishTUra mADade hOgO dAsayya 

vIsada kAsige davasava nA tande 

kUsige sAladu, hOgO dAsayya 

AsekAra nInu, dOshakAri nAnu 

ShEshAchalavAsa purandara viTTala 



ತಮ್ಮ ದೈನಂದಿನ ಸಂಚಾರದ ಸಮಯದಲ್ಲಿ ತಾವು ಕಂಡ ದೃಶ್ಯಗಳನ್ನು ಮತ್ತು ತಮಗಾದ ಅನುಭವಗಳನ್ನು, ನಮಗೆ ನೀತಿ ಪಾಠಹೇಳಲು ಮತ್ತು ಗಹನವಾದ ತತ್ವಗಳನ್ನು ಸರಳವಾಗಿ ವಿವರಿಸಲು ಉಪಯೋಗಿಸಿಕೊಂಡರು ಶ್ರೀ ಪುರಂದರದಾಸರು. ಎಲ್ಲರೂ ಪ್ರತಿನಿತ್ಯ ಕಾಣುವ ದೃಶ್ಯಗಳನ್ನು ಉಲ್ಲೇಖಿಸಿದ್ದರಿಂದ ಅವು ಕೇಳಿದವರನ್ನು ತಟ್ಟನೆ ಆಕರ್ಷಿಸಿ, ಕೇಳುವವರು ಗೀತೆಯ ಸಾಹಿತ್ಯದ ಕಡೆ ಗಮನ ಕೊಡುವಂತೆ ಮಾಡಿದವು.


‘ಇಕ್ಕಲಾರೆ ಕೈ ಎಂಜಲು ಚಿಕ್ಕಮಕ್ಕಳು ಅಳುತಾರೆ ಹೋಗೋ ದಾಸಯ್ಯ’ ಎಂಬ ಪಲ್ಲವಿಯನ್ನು ಕೇಳಿದಕೂಡಲೇ ಗೀತೆಯ ಸಂಧರ್ಭ ಮನಸ್ಸಿಗೆ ವಿಶದವಾಗುತ್ತದೆ. ಭಿಕ್ಷೆಬೇಡಲು ದಾಸಯ್ಯ ಮನೆಯ ಮುಂದೆಬಂದಿದ್ದಾನೆ. ಮನೆಯಾಕೆಗೆ ಭಿಕ್ಷೆನೀಡುವ ಮನಸ್ಸಿಲ್ಲ. ಆದರೆ ಅದನ್ನು ಹೇಳಲಾಗದು. ಆಕೆ ‘ಕೈ ಎಂಜಲಾಗಿದೆ, ಹೊಟ್ಟೆ ನೋಯುತ್ತಿದೆ, ಮಕ್ಕಳು ಅಳುತ್ತಿದ್ದಾರೆ’, ಮುಂತಾದ ಕಾರಣಗಳನ್ನು ತಿಳಿಸುವ ರೀತಿಯಿಂದಲೇ ಅವೆಲ್ಲ ಕಳ್ಳನೆಪಗಳೆಂಬ ಅನುಮಾನವೂ ಬರುತ್ತದೆ. ದಾಸಯ್ಯ, ಭಿಕ್ಷೆಯ ಹುಡುಗ, ವಾರಾನ್ನದ ಹುಡುಗ, ಇವರೆಲ್ಲಾ ಈಗಿನ ನಮ್ಮ ಜೀವನದಲ್ಲಿ ಇಲ್ಲವಾಗಿದ್ದಾರೆ. ಆದರೆ ನಮ್ಮ ಕಾಲದಲ್ಲಿಯೇ  ಕೆಲವು ದಶಕಗಳ ಹಿಂದೆ ಇವರನ್ನೆಲ್ಲಾ ದಿನ ನಿತ್ಯವೂ ಕಾಣುತ್ತಿದ್ದುದುಂಟು. ಅನೇಕ ಗೃಹಸ್ಥರು ಇವರುಗಳಿಗೆ ಆಧಾರವಾಗಿದ್ದದ್ದು ಉಂಟು. ಅದನ್ನು ಕಂಡಿದ್ದವರಿಗೆ ಈ ಗೀತೆಯ ಚಿತ್ರ ತಟ್ಟನೆ ಕಣ್ಣಮುಂದೆ ಮೂಡುತ್ತದೆ. 


ಮುಂದಿನ ಚರಣಗಳಲ್ಲಿ ಮನೆ ಸಾರಿಸುತ್ತೇನೆ, ಪಾತ್ರೆ ತೊಳೆಯುತ್ತಿದ್ದೇನೆ, ಅಕ್ಕಿ ಅಟ್ಟದಮೇಲಿದೆ, ಮನೆಯಲ್ಲಿ ಒಬ್ಬಳೇ ಇದ್ದೇನೆ, ಮುಂತಾದ ಅನೇಕ ಪಿಳ್ಳೆ ನೆವಗಳು ಒಂದರ ಹಿಂದೊಂದು ಬಂದು ಏನಾದರೂ ಮಾಡಿ ದಾಸಯ್ಯನನ್ನು ಮನೆಯಬಾಗಿಲಿನಿಂದ ಮುಂದಕ್ಕೆ ಸಾಗಹಾಕುವ ಪ್ರಯತ್ನವನ್ನು ತೋರಿಸುತ್ತವೆ. ಈ ಪದ್ಯವನ್ನು ಬಿಡಿಸಿ ವಿವರಿಸುವ ಅಗತ್ಯವೇ ಇಲ್ಲ. 


ಆದರೆ ಚಿಂತಕರು ಕೆಲವರು ಪದ್ಯದ ಹಿಂದೆ ಕೊಂಚ ಗಹನವಾದ ವಿಚಾರಗಳು ಇರಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ.  ದಾಸಯ್ಯನನ್ನು ಭಗವಂತನೆಂದು ಮತ್ತು ಮನೆಯಾಕೆಯನ್ನು ಸಾಧಾರಣ ಜೀವನೆಂದು ಪರಿಗಣಿಸಿದರೆ ಗೀತೆ ಹೇಗೆ ಕಂಡೀತು ನೋಡಿ.  ಭಗವಂತ ಬಂದು ಭಕ್ತಿಯ ಕಾಣಿಕೆ ಕೇಳುತ್ತಿದ್ದಾನೆ. ಆದರೆ ನಾವು ಅದನ್ನು ಕೊಡಲಾರೆವು. ಏಕೆಂದರೆ ನಮ್ಮ ಅಂತರಂಗ ಶುದ್ಧವಿಲ್ಲ. ಅದನ್ನು ‘ಕೈ ಎಂಜಲು’ ಎಂಬ ಪದ ಬಳಕೆಯಿಂದ ಸೂಚಿಸಿದ್ದಾರೆ ದಾಸರು. 


ಜತೆಗೆ ‘ಮಕ್ಕಳು ಅಳುತಾರೆ’. ಯಾರು ಅಳುವ ಮಕ್ಕಳು?  ನಮ್ಮ ಇಂದ್ರಿಯಗಳೇ ! ಭಗವಂತನಿಗೆ ನೀಡಬೇಕಾದ ಭಕ್ತಿ ಮೂಡಬೇಕಾದರೆ ಇಂದ್ರಿಯಗಳನ್ನು ವಿಷಯಾಸಕ್ತಿಯಿಂದ ದೂರವಿರಿಸಬೇಕಾಗುತ್ತದೆ. ಹಾಗೆ ಮಾಡಿದಾಗ ಅವು ಅಳುತ್ತವೆ. ಆದ್ದರಿಂದ ಇಂದ್ರಿಯಗಳು ಹತೋಟಿಯಲ್ಲಿಲ್ಲ, ಅಂತರಂಗ ಶುದ್ಧವಿಲ್ಲ, ಭಕ್ತಿಮೂಡದು, ಮುಂದೆಸಾಗು ಎನ್ನುತ್ತದೆ ಜೀವ ಭಗವಂತನಿಗೆ ! 


ಮುಂದೆ, ದಾಸಯ್ಯನಿಗೆ ಭಿಕ್ಷೆಕೊಡಲು, ಅಟ್ಟದ ಮೇಲಿನ ಅಕ್ಕಿ ತೆಗೆಯಬೇಕು. ಅಂದರೆ, ನಮ್ಮ ಕೈಗೆ ಎಟುಕದ ಎತ್ತರದಲ್ಲಿರುವ ಜ್ಞಾನವನ್ನು ಎಟುಕಿಸಿಕೊಳ್ಳಬೇಕು.ಅದೂ ನಮ್ಮಿಂದ ಆಗದು. ಆದ್ದರಿಂದ ಮುಂದೆಹೋಗು. ಒಟ್ಟಿನ ಭಾವ, ಭಗವಂತನನ್ನು ನಿಲ್ಲಿಸಿ, ಭಕ್ತಿಯನ್ನು ನೀಡಲು ನಾವು ತಯಾರಿಲ್ಲ. ಎರಡನೇ ಚರಣದಲ್ಲಿ  ‘ಮುಟ್ಟುವಂತಿಲ್ಲವೋ  ಮನೆಯೊಳಗಾರಿಲ್ಲ’ ಎಂಬ ಪದಗಳ ಬದಲಾಗಿ  ‘ಮುಟ್ಟಾಗಿ ಇದ್ದೇನೆ ಮನೆಯೊಳಗ್ಯಾರಿಲ್ಲ’ ಎಂಬ ಬಳಕೆಯೂ ಇದೆ. ಒಟ್ಟಿನಲ್ಲಿ ನಾವು ಶುದ್ಧವಿಲ್ಲ ಎಂಬ  ಅರ್ಥ. 


ಭಕ್ತಿ, ಜ್ಞಾನ ಪೂರ್ವಕವಾಗಿ ನಮ್ಮನ್ನು ಭಗವಂತನಿಗೆ ಸಮರ್ಪಿಸಿಕೊಳ್ಳದೆ  ಸಣ್ಣದಾಗಿ  ಒಂದೆರಡು ನಮಸ್ಕಾರವೋ, ಎಂಥದೋ ಒಂದು ಪೂಜೆಯೋ ಮಾಡಿ ಭಗವಂತನಿಂದ ಏನಾದರೂ ಪಡೆಯುವ ಪ್ರಯತ್ನ ನಮ್ಮದು. ಆದ್ದರಿಂದ ‘ಆಸೆಕಾರ’ ನಾನು. ಆದರೆ ನೀನು ‘ದೋಷಹಾರಿ’. ನಮ್ಮ ದೋಷಗಳನ್ನೆಲ್ಲ ಪರಿಹರಿಸುವವನು. ಆದ್ದರಿಂದ ನನ್ನ ದೋಷಗಳನ್ನು ಪರಿಹರಿಸಿ, ನನ್ನಲ್ಲಿರುವ ಅಲ್ಪ ಭಕ್ತಿಯನ್ನೇ ಸ್ವೀಕರಿಸಿ ಉದ್ಧಾರಮಾಡು ಎಂದು ಶೇಷಾಚಲವಾಸ ಪುರಂದರವಿಠಲನಲ್ಲಿ ನಮ್ಮೆಲ್ಲರ ಪರವಾಗಿ ಪುರಂದರ ದಾಸರ ಬೇಡಿಕೆ ಎಂದು ತಿಳಿಸುತ್ತಾ, ಇಂದಿನ ಮಾತು ಕೃಷ್ಣಾರ್ಪಣ.


Friday, November 13, 2026

ಈ ಸಮಯ ಕಲ್ಲ ದಿನ್ನೆಲ್ಲಿ ಕಾಯೊ

 ಈ ಸಮಯ ಕಲ್ಲ ದಿನ್ನೆಲ್ಲಿ ಕಾಯೊ 

ದೋಷರಹಿತ ವಸುದೇವ ನೀ  ಕಾಯೊಕೃಷ್ಣ  ||


ನಿನ್ನಂಘ್ರಿಯನು ಭಜಿಸಿದವರ ಬಾಳ್ವೆಯ ಕಾಯೋ 

ಎನ್ನ ಸತಿ ಸುತರು ನಿನ್ನವರೆ  ಕಾಯೋ 

ನೀನಲ್ಲದನ್ಯರನು ಕಾಣೆ ಕವಳಿಯ ಕಾಯೋ

ಮುನ್ನ ಸ್ಥಿರವಾಗಿ ನೀನೆಂಬೆ ಕಾಯೋ  


ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೋ 

ದುರಿತ ದುಷ್ಕರ್ಮ ಮುಂಚೆಲ್ಲ ಕಾಯೋ 

ಕರೆಕರೆಯ ಸಂಸಾರ ಕಷ್ಟ ಕಡಲಿಯ ಕಾಯೋ 

ದುರಿತ ಭವ ಶರಧಿಗೆ ತಾರ ಕಾಯೋ 


ವಿವಿಧ ಪಾಪಂಗಳಿಗೆ ಪದವು ಉದ್ದ ನೀ ಕಾಯೋ 

ಭವಸಾಗರದೊಳೀಸೆಂಬೆಕಾಯೋ 

ದಿವಿಜೇಂದ್ರ ಕೃಷ್ಣ ಕೈಪಿಡಿದು ಒಲಿದು ಕಾಯೋ 

ನವ ಮುಕ್ತಿ ಪುರಂದರ ವಿಠಲ ನೀ ಬಿಡದೆ ಕಾಯೋ


ಮಾನವಜನ್ಮದ ಸ್ವಭಾವದೋಷಗಳು, ದುರ್ಬುದ್ಧಿ, ದುರವಸ್ಥೆಗಳೆಲ್ಲವೂ ಎಲ್ಲರಲ್ಲೂ ಇರುತ್ತವೆಂಬುದನ್ನು ಬಲ್ಲ ಶ್ರೀ ಪುರಂದರದಾಸರು ತಮ್ಮನ್ನು  ಅವುಗಳಿಂದ ಹೊರಪಡಿಸಿಕೊಂಡಿಲ್ಲ. ನಾವು ಎಲ್ಲರೂ ದೋಷಸಹಿತರೇ. ದೋಷರಹಿತನೆಂದರೆ ಆ ಪುರಂದರವಿಠಲನೊಬ್ಬನೇ. ಆದ್ದರಿಂದ ದೋಷರಹಿತನಾದ ನೀನು ನಮ್ಮ ದೋಷಗಳನ್ನು ಮನ್ನಿಸಿ, ಮುಂದೆ ದೋಷಗಳಾಗದಂತೆ  ಕಾಪಾಡೆಂದು ದಾಸರು ಅವನಲ್ಲಿ ಬೇಡುತ್ತಿದ್ದಾರೆ, ತಮ್ಮ ಈ ಗೀತೆಯ ಮೂಲಕ. ಇಂದಿನ ಪ್ರಸ್ತುತಿ ‘ಈ ಸಮಯಕಲ್ಲದಿನ್ನೆಲ್ಲಿ ಕಾಯೋ”. 


ಈ ಸಮಯ ಕಲ್ಲ ದಿನ್ನೆಲ್ಲಿ ಕಾಯೊ, ದೋಷರಹಿತ ವಸುದೇವ, ನೀ ಕಾಯೊಕೃಷ್ಣ. ವಸುದೇವ ಕೃಷ್ಣ ನೀ ಕಾಯೋ ಎನ್ನುತ್ತಾರೆ ದಾಸರು. ಆ ವಸುದೇವ ಕೃಷ್ಣನ ಕೆಲಸವೇ ಕಾಯುವುದು. ಗೋಪಾಲ ಅವನು. ಅಂದರೆ, ದನ ಕಾಯುವವನು. ಹುಲ್ಲು ಮೇಯುತ್ತಾ ಅಡ್ಡಾಡುವ ದನಗಳು ಒಮ್ಮೊಮ್ಮೆ ತಿಳಿಯದೆ ಯಾರದೋ ಹೊಲಕ್ಕೋ ಗದ್ದೆಗೋ ಬಾಯಿಹಾಕಿ ಅವರಿಂದ ಪೆಟ್ಟುತಿನ್ನುತ್ತವೆ. ಅಥವಾ ಹಾಗೆಯೇ ಅಡ್ಡಾಡುತ್ತಾ ಕಾಡಿನೊಳಗೆ ಹೊಕ್ಕು ಹುಲಿಯಬಾಯಿಗೋ, ಚಿರತೆಯ ಬಾಯಿಗೋ ಬೀಳುತ್ತವೆ. ಹಾಗಾಗದಂತೆ ಕಾಯುವವನು ಗೋಪಾಲ.  ದನಗಳು ತಿಳಿಯದೆ ದಾರಿತಪ್ಪಿ ತೊಂದರೆಗೊಳಗಾಗುತ್ತವೆ. ನಾವು ಜನಗಳು ತಿಳಿದಿದ್ದೂ  ಸರಿದಾರಿಬಿಟ್ಟು ಅಡ್ಡದಾರಿ ಹಿಡಿಯುತ್ತೇವೆ. ತೊಂದರೆಗೆ  ಸಿಲುಕುತ್ತೇವೆ. ಆದ್ದರಿಂದ ನಮ್ಮನ್ನೂ ನೀ ಕಾಯೋ ಎನ್ನುತ್ತಾರೆ ದಾಸರು. ಜತೆಗೆ ‘ಈ ಸಮಯಕಲ್ಲದೆ ಇನ್ನೆಲ್ಲಿ’ ಎನ್ನುತ್ತಾರೆ. ಯಾಕೆಂದರೆ ನಮಗೆ ಮಾಡಬಾರದ್ದನ್ನು ಮಾಡಲು ಆಗ ಈಗ ಎಂಬುದಿಲ್ಲ. ತಪ್ಪು ಮಾಡಲು ನಾವು ಸದಾ ತಯಾರು. ಆದ್ದರಿಂದ ಈ ಸಮಯಕಲ್ಲದೆ ಇನ್ನೆಲ್ಲಿ, ಇನ್ನು ಯಾವಾಗ ? ಈಗಲೇ ಕಾಯಪ್ಪಾ ಎಂದರು ದಾಸರು. 


ನಿನ್ನಂಘ್ರಿಯನು ಭಜಿಸಿದವರ ಬಾಳ್ವೆಯ ಕಾಯೋ, ಎನ್ನ ಸತಿ ಸುತರು ನಿನ್ನವರೆ  ಕಾಯೋ.  ಎನ್ನುತ್ತದೆ ಎರಡನೆಯ ಚರಣ. ನಿನ್ನಂಘ್ರಿಯನು ಭಜಿಸಿದವರ ಎಂದರೆ ನಿನ್ನ ಪಾದಭಜನೆ ಮಾಡಿದವರನ್ನು ಕಾಯಿ. ಸರಿ. ಭಜಿಸದೆ ಬಿಟ್ಟವರನ್ನು ಏನುಮಾಡುವುದು. ಚಿಂತೆಬೇಡ. ನೀವು ಅವನನ್ನು ನಂಬಿದವರೋ, ನಂಬದವರೋ, ಭಜಿಸುವವರೋ  ಬಿಟ್ಟವರೋ, ಅವನು ನೋಡುವುದಿಲ್ಲ. ಎಲ್ಲರನ್ನೂ ಕಾಯುವುದು ಅವನ ಕೆಲಸ. ಎಂದಿದ್ದರು ಶ್ರೀ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಒಂದು ಉಪನ್ಯಾಸದಲ್ಲಿ. ಅವನ ಕೆಲಸ ಅವನು ಮಾಡಿಯೇ ಮಾಡುತ್ತಾನೆ. ನಾವು ಬೇಡುವುದು, ಭಜಿಸುವುದು ನಮ್ಮ ಭಕ್ತಿಯನ್ನು, ದೈನ್ಯತೆಯನ್ನು ತೋರುವುದಕ್ಕಷ್ಟೇ. ಆದ್ದರಿಂದ ನಾವು, ಸತಿ ಸುತರು ಮತ್ತು  ‘ಕವಳಿ’, ಎಲ್ಲವನು ಕಾಯೋ. ‘ಕವಳಿ’ ಎಂದರೆ ಗುಂಪು. ನಮ್ಮೆಲ್ಲರನ್ನೂ ಕಾಯೋ ಎಂದರು ದಾಸರು. 


ಮುಂದಿನ ಚರಣ ‘ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೋ. 

ದುರಿತ ದುಷ್ಕರ್ಮ ಮುಂಚೆಲ್ಲ ಕಾಯೋ, ಕರೆಕರೆಯ ಸಂಸಾರ ಕಷ್ಟ ಕಡಲಿಯ ಕಾಯೋ.’  ಕೆಟ್ಟ ಕರ್ಮಗಳಿಗೆ ಕೈಹಾಕದಂತೆ, ಸಂಸಾರ ಸಾಗರದಲ್ಲಿ ಮುಳುಗಿಹೋಗದಂತೆ ಕಾಯೋ ಎಂದು ಬೇಡುತ್ತಾರೆ  ದಾಸರು. ಆದರೆ ಎಲ್ಲಕ್ಕಿಂತ ಮುಂಚೆ ‘ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೋ’ ಎಂದರು.  ಪರಸ್ತ್ರೀಯರಿಗೋಸ್ಕರ ಮನಸ್ಸು ಕಾತರಿಸುತ್ತದಂತೆ. ಅರಿಷಡ್ವರ್ಗಗಳಲ್ಲಿ  ಅತ್ಯಧಿಕ ಕಂಟಕಪ್ರಾಯವಾದದ್ದು ಕಾಮ ಎನ್ನುತ್ತಾನೆ ಕೃಷ್ಣ ಭಗವದ್ಗೀತೆಯಲ್ಲಿ. ‘ಅವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ ಕಾಮರೂಪೇಣ ಕೌನ್ತೇಯ ದುಷ್ಟೂರೇಣಾನಲೇನಚ’ ಎಂದ, ನಮ್ಮನ್ನು ಕಾಯಬೇಕಾದ ಕೃಷ್ಣ.  ಕೊನೆಯಿಲ್ಲದ ಈ ಕಾಮವೆಂಬುದು ಜ್ಞಾನಿಗಳಿಗೂ ಚಿರಶತ್ರು. ಅದು ‘ಅನಲ’ ಅಂದರೆ ಬೆಂಕಿಯಂತೆ, ಉರುವಲು ಸುರಿದಷ್ಟೂ ಹೆಚ್ಚು ಉರಿಯುತ್ತದೆ  ಎಂದ ಅವನು. ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ, ಚಿನ್ನದಾತುರಕಿಂತ ಗಂಡು ಹೆಣ್ಣೊಲವು ಎಂದಿದ್ದಾರೆ ಶ್ರೀ ಡಿ ವಿ ಜಿ ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ. ಅಂದರೆ ಸ್ತ್ರೀ ಪುರುಷರ ಪರಸ್ಪರ ಆಕರ್ಷಣೆ ಬಹಳ ಬಲವಾದದ್ದು. ಎಂಥವರನ್ನೂ ಎಚ್ಚರತಪ್ಪಿಸುವಂಥದ್ದು, ಹಾಗಾಗಿ ‘ಪರವೆಣ್ಣುಗಳಿಗಾಗಿ ಎನ್ನ ಮನಸು ಕಾತರಿಸದಂತೆ ನನ್ನನು ಕಾಯೋ’ ಎಂದು ಕೃಷ್ಣನನ್ನು ಬೇಡುತ್ತಿದ್ದಾರೆ ದಾಸರು. ಮತ್ತೆ ಮಿಕ್ಕ ಎಲ್ಲ ದುಷ್ಕರ್ಮ ಗಳಿಂದ ಬಿಡಿಸಿ ಈ ಸಂಸಾರ ಸಾಗರದಿಂದ ಪಾರುಮಾಡಯ್ಯಾ ಎಂದೂ  ಬೇಡುತ್ತಾರೆ. ಇಲ್ಲಿ ಕೃಷ್ಣನನ್ನು ಭವ ಶರಧಿಗೆ ತಾರ ಎಂದು ಸಂಭೋದಿಸಿದ್ದಾರೆ. ತಾರ ಎಂದರೆ ಅಂಬಿಗ, ಸಾಗರವನ್ನು  ದಾಟಿಸುವವನು. 


ಕೊನೆಯ ಚರಣದಲ್ಲಿ  ‘ವಿವಿಧ ಪಾಪಂಗಳಿಗೆ ಪದವು ಉದ್ದ ನೀ ಕಾಯೋ’ ಎನ್ನುತ್ತಾರೆ. ಅಂದರೆ ನನ್ನ ಪಾಪಗಳೇನೇ ಇರಲಿ ಅವೆಲ್ಲಕ್ಕಿಂತ ನಿನ್ನ ಪಾದ ಉದ್ದ. ಅಂದರೆ ನಿನ್ನ ಪಾದಭಜನೆಯಿಂದ ನಿವಾರಣೆಯಾಗದಿರುವ ಪಾಪವಿಲ್ಲ. ದಿವಿಜೇಂದ್ರ ಕೃಷ್ಣ ನೀ ಕಾಯೋ. ಎಂದರೆ ಎಲ್ಲ ದೇವತೆಗಳಿಗೂ ದೊರೆ ನೀನು. ನೀ ಕೈಬಿಟ್ಟರೆ ಮತ್ಯಾರೂ ಹಿಡಿಯುವವರಿಲ್ಲ. ಆದ್ದರಿಂದ ನೀನೆ ನನ್ನ ಕಾಯಬೇಕು ಎಂದರು ಪುರಂದರದಾಸರು. ಕೊನೆಯಲ್ಲಿ ‘ನವಮುಕ್ತಿ ಪುರಂದರವಿಠಲ’ ಎಂದು ತಮ್ಮ ಆರಾಧ್ಯದೇವನನ್ನು ಸಂಭೋದಿಸಿದ್ದಾರೆ. ಅಂದರೆ ನವವಿಧಭಕ್ತಿಯಿಂದ ಆರಾಧಿಸಿದರೆ ಮುಕ್ತಿ ನೀಡುವವ ನೀನು, ಪುರಂದರವಿಠಲ, ನೀ ಬಿಡದೆ ಕಾಯೋ ಎಂದು ಬೇಡುತ್ತಾ ತಮ್ಮ  ಗೀತೆಯನ್ನು ದಾಸರು ಮುಗಿಸಿದರೆಂಬಲ್ಲಿಗೆ ಇಂದಿನ ವಿವರಣೆ ಕೃಷ್ಣಾರ್ಪಣ.


Saturday, November 7, 2026

ರಾಮ ಎಂಬುವ ಎರಡು ಅಕ್ಷರದ ಮಹಿಮೆ

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ।

ಪಾಮರರು ತಾವೇನು ಬಲ್ಲರಯ್ಯ 


ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ।

ಆ ಅಸ್ಥಿತಗತವಾದ ಅತಿ ಪಾಪವನ್ನು ॥

ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ।

ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ॥


ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು ।

ಒತ್ತಿ ಒಳ ಪೊಗದಂತೆ ಕವಾಟವಾಗಿ ॥

ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ।

ಭಕ್ತವರ ಹನುಮಂತನೊಬ್ಬ ತಾ ಬಲ್ಲ ॥


ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ।

ಪರಮ ವೇದಗಳೆಲ್ಲ ಪೊಗಳುತಿಹವು ॥

ಸಿರಿಯರಸ ಶ್ರೀಪುರಂದರವಿಠಲನ ನಾಮವನು ।

ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ



ರಾಮ ಎಂಬ ಎರಡಕ್ಷರದ ಮಹಿಮೆಯನ್ನು ಪಾಮರರು ಅಂದರೆ ಜನಸಾಮಾನ್ಯರು ಏನು  ಬಲ್ಲರು ? ಅದನ್ನು ಮುನಿ ವಾಲ್ಮೀಕಿ ಬಲ್ಲ, ರಾಮ ಬಂಟ ಹನುಮಂತ ಬಲ್ಲ, ವಿಷ್ಣು ಭಕ್ತ ಕಾಶಿ ವಿಶ್ವನಾಥ ಬಲ್ಲ. ಎನ್ನುತ್ತಾರೆ ದಾಸವರೇಣ್ಯ ಪುರಂದರದಾಸರು. ನಮ್ಮನ್ನು ಪಾಪರಹಿತರನ್ನಾಗಿಸಿ, ಮುಂದೆ  ಹಾಗೆಯೇ ಇರಿಸುವ ಅದರ ಮಹಿಮೆಯನ್ನು ಬಣ್ಣಿಸುತ್ತಾರೆ.  ಕೇಳಿ ಗೀತೆ ‘ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ’ 


ಈ ಗೀತೆಯ ಮೂಲಕ ರಾಮನಾಮದ ಮಹಿಮೆಯನ್ನು ನಮಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ ಪುರಂದರ ದಾಸರು. ಎರಡಕ್ಷರದ ರಾಮ ಎಂಬ ಪದದಲ್ಲಿ ರ ಎನ್ನುವುದು ಸಂಸ್ಕೃತದ ರಮಯತೆ ಎಂಬ ಪದದ ಸಂಕ್ಷಿಪ್ತ ರೂಪ. ಆನಂದಿಸುವುದು ಎಂದು ಇದರ ಅರ್ಥ. ಮ ಎನ್ನುವುದು ‘ಮತಿ’ ಪದದ ಸಂಕ್ಷಿಪ್ತ ರೂಪ. ಬುದ್ಧಿ ಅಥವಾ ಜ್ಞಾನ ಎಂದು ಅದರ ಅರ್ಥ. ಹಾಗಾಗಿ ರಾಮ ಎಂಬ ಪದಕ್ಕೆ  ‘ಜ್ಞಾನಾನಂದ ಸ್ವರೂಪ’ ಎಂಬ ಅರ್ಥ ಸಲ್ಲುತ್ತದೆ. ಶ್ರೀ ವಾದಿರಾಜರು ರಾಮನನ್ನು ‘ನೃಣಾ ಹೃದಭಿರಾಮ’  ಎಂದಿದ್ದಾರೆ.  ಅಂದರೆ ತಾನು ಆನಂದಸ್ವರೂಪ ಅಷ್ಟೇಅಲ್ಲ, ಜನರೆಲ್ಲರ ಹೃದಯದಲ್ಲಿ ಆನಂದವನ್ನು ಮೂಡಿಸುವವನು ಎಂದು ಅರ್ಥ.  


ಮೊದಲ  ಚರಣದಲ್ಲಿ ‘ರಾ’ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆ ಅಸ್ತಿಗತವಾದ ಪಾಪವನು  ಮಾಯ ಮಾಡಿ, ಮಹರಾಯ, ಮುಕ್ತಿ ಕೊಡುವ ದಾಯವನು, ವಾಲ್ಮೀಕಿ ಬಲ್ಲ’ ಎಂದರು ದಾಸರು. ನಮ್ಮ ಪಾಪಗಳು ನಮ್ಮ ರಕ್ತ ಮಾಂಸಗಳ ತಡೆಯನ್ನು ದಾಟಿ ಮೂಳೆಗಳೊಳಗೆ ಸೇರಿಕೊಂಡಿದ್ದರೂ ಅದನ್ನು ನಿವಾರಿಸುತ್ತದಂತೆ ರಾಮನಾಮ. ಹೆದ್ದಾರಿ ಕೊಲೆಗಾರ, ದರೋಡೆಕೋರನಾಗಿದ್ದ ರತ್ನಾಕರ ಎಂಬಾತ, ನಾರದರ ಬುದ್ಧಿವಾದ ಕೇಳಿ, ಬರಿಯ ‘ರಾಮ’ ಎಂಬ ಎರಡಕ್ಷರದ ಜಪದಿಂದ, ತನ್ನ ಪಾಪಗಳನ್ನು ಕಳೆದುಕೊಂಡು ವಾಲ್ಮೀಕಿ ಮಹರ್ಷಿಯಾದನಂತೆ. ಅದರಿಂದ ಪಾಪಗಳನ್ನು ಕಳೆದುಕೊಳ್ಳುವ ದಾಯವನ್ನು ಅಥವಾ ಉಪಾಯವನ್ನು ವಾಲ್ಮೀಕಿ ಬಲ್ಲ ಎನ್ನುತ್ತಾರೆ  ದಾಸರು. 


ಮತ್ತೆ ಮ ಎಂದೆನಲು, ಹೊರಬಿದ್ದ ಪಾಪಗಳು ಒತ್ತಿ ಒಳ ಪೊಗದಂತೆ ಕವಾಟವಾಗಿ, ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ, ಹನುಮಂತನೊಬ್ಬ ತಾ ಬಲ್ಲ ಎಂದರು. ಪಾಪಗಳನ್ನು ನಿವಾರಿಸಿಕೊಂಡವರು ಮತ್ತೆ ಪಾಪಗಳಿಸದಂತೆ ರಕ್ಷಿಸುತ್ತದಂತೆ ರಾಮ ನಾಮ. ಹಾಗೆ ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ, ಹನುಮಂತನೊಬ್ಬ ತಾ ಬಲ್ಲ ಎನ್ನುತ್ತಾರೆ  ದಾಸರು. ಸದಾ ರಾಮನಾಮ ಜಪಿಸುತ್ತ, ಆ ಜಪದಿಂದ ತನ್ನ ಬೇರೆ ಎಲ್ಲಾ  ಸಾಮರ್ಥ್ಯಗಳನ್ನಷ್ಟೇ ಅಲ್ಲದೆ, ದೈವ ಲೀಲೆಯಿಂದ, ರಾಮನೊಡನೆಯೇ ಯುದ್ಧಮಾಡುವ ಸಂಧರ್ಭ ಬಂದಾಗ ರಾಮನ ಬಾಣಗಳನ್ನೇ ತಡೆಯುವ ಶಕ್ತಿ ಪಡೆದುಕೊಂಡಿದ್ದ ಹನುಮಂತನಲ್ಲದೆ ಮತ್ಯಾರು ತಿಳಿಯಬೇಕು ಆ ರಾಮನಾಮದ ಪರಿಯನ್ನು ? 



ಕೊನೆಯ ಚರಣ ‘ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ಪರಮ ವೇದಗಳೆಲ್ಲ ಪೊಗಳುತಿಹವು, ಸಿರಿಯರಸ ಶ್ರೀಪುರಂದರವಿಠಲನ ನಾಮವನು ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ’. ತ್ರಿವಿಕ್ರಮ ರೂಪದಲ್ಲಿ ಬ್ರಹ್ಮಾಂಡವನ್ನು ಭೇಧಿಸಿದ ವಿಷ್ಣುವಿನ ಹೆಬ್ಬೆರೆಳಿನ ಸಂಪರ್ಕದಿಂದ  ತಾನು ಪವಿತ್ರವಾಗಿ, ತನ್ನ ಸಂಪರ್ಕಕ್ಕೆ ಬಂದದ್ದೆಲ್ಲವನ್ನೂ  ಪವಿತ್ರಗೊಳಿಸುವ ಶಕ್ತಿ ಪಡೆದು ಭೂಮಿಗಿಳಿದಳು ಗಂಗೆ. ಗಂಗೆಯ ತಟದಲ್ಲಿದ್ದ  ಕಾಶಿ ಪುಣ್ಯಭೂಮಿಯಾಯಿತು. ಇದೆಲ್ಲವನ್ನೂ ಬಲ್ಲವನಾಗಿದ್ದ  ಮಹಾ ವಿಷ್ಣುಭಕ್ತ ವಿಶ್ವನಾಥ  ತಾನು ಕಾಶಿಯಲ್ಲಿ ನೆಲಸಿದ್ದಲ್ಲದೆ , ಪುರಂದರ ವಿಠಲನನ್ನೂ ತನ್ನೊಡನೆ ಬಿಂದು ಮಾಧವನ ರೂಪದಲ್ಲಿ ಕಾಶಿಯಲ್ಲಿ ಇರಿಸಿಕೊಂಡ ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದ್ದಾರೆನ್ನುವಲ್ಲಿಗೆ  ಇಂದಿನ ಮಾತು ಕೃಷ್ಣಾರ್ಪಣ.