ಈ ಸಮಯ ಕಲ್ಲ ದಿನ್ನೆಲ್ಲಿ ಕಾಯೊ
ದೋಷರಹಿತ ವಸುದೇವ ನೀ ಕಾಯೊಕೃಷ್ಣ ||
ನಿನ್ನಂಘ್ರಿಯನು ಭಜಿಸಿದವರ ಬಾಳ್ವೆಯ ಕಾಯೋ
ಎನ್ನ ಸತಿ ಸುತರು ನಿನ್ನವರೆ ಕಾಯೋ
ನೀನಲ್ಲದನ್ಯರನು ಕಾಣೆ ಕವಳಿಯ ಕಾಯೋ
ಮುನ್ನ ಸ್ಥಿರವಾಗಿ ನೀನೆಂಬೆ ಕಾಯೋ
ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೋ
ದುರಿತ ದುಷ್ಕರ್ಮ ಮುಂಚೆಲ್ಲ ಕಾಯೋ
ಕರೆಕರೆಯ ಸಂಸಾರ ಕಷ್ಟ ಕಡಲಿಯ ಕಾಯೋ
ದುರಿತ ಭವ ಶರಧಿಗೆ ತಾರ ಕಾಯೋ
ವಿವಿಧ ಪಾಪಂಗಳಿಗೆ ಪದವು ಉದ್ದ ನೀ ಕಾಯೋ
ಭವಸಾಗರದೊಳೀಸೆಂಬೆಕಾಯೋ
ದಿವಿಜೇಂದ್ರ ಕೃಷ್ಣ ಕೈಪಿಡಿದು ಒಲಿದು ಕಾಯೋ
ನವ ಮುಕ್ತಿ ಪುರಂದರ ವಿಠಲ ನೀ ಬಿಡದೆ ಕಾಯೋ
ಮಾನವಜನ್ಮದ ಸ್ವಭಾವದೋಷಗಳು, ದುರ್ಬುದ್ಧಿ, ದುರವಸ್ಥೆಗಳೆಲ್ಲವೂ ಎಲ್ಲರಲ್ಲೂ ಇರುತ್ತವೆಂಬುದನ್ನು ಬಲ್ಲ ಶ್ರೀ ಪುರಂದರದಾಸರು ತಮ್ಮನ್ನು ಅವುಗಳಿಂದ ಹೊರಪಡಿಸಿಕೊಂಡಿಲ್ಲ. ನಾವು ಎಲ್ಲರೂ ದೋಷಸಹಿತರೇ. ದೋಷರಹಿತನೆಂದರೆ ಆ ಪುರಂದರವಿಠಲನೊಬ್ಬನೇ. ಆದ್ದರಿಂದ ದೋಷರಹಿತನಾದ ನೀನು ನಮ್ಮ ದೋಷಗಳನ್ನು ಮನ್ನಿಸಿ, ಮುಂದೆ ದೋಷಗಳಾಗದಂತೆ ಕಾಪಾಡೆಂದು ದಾಸರು ಅವನಲ್ಲಿ ಬೇಡುತ್ತಿದ್ದಾರೆ, ತಮ್ಮ ಈ ಗೀತೆಯ ಮೂಲಕ. ಇಂದಿನ ಪ್ರಸ್ತುತಿ ‘ಈ ಸಮಯಕಲ್ಲದಿನ್ನೆಲ್ಲಿ ಕಾಯೋ”.
ಈ ಸಮಯ ಕಲ್ಲ ದಿನ್ನೆಲ್ಲಿ ಕಾಯೊ, ದೋಷರಹಿತ ವಸುದೇವ, ನೀ ಕಾಯೊಕೃಷ್ಣ. ವಸುದೇವ ಕೃಷ್ಣ ನೀ ಕಾಯೋ ಎನ್ನುತ್ತಾರೆ ದಾಸರು. ಆ ವಸುದೇವ ಕೃಷ್ಣನ ಕೆಲಸವೇ ಕಾಯುವುದು. ಗೋಪಾಲ ಅವನು. ಅಂದರೆ, ದನ ಕಾಯುವವನು. ಹುಲ್ಲು ಮೇಯುತ್ತಾ ಅಡ್ಡಾಡುವ ದನಗಳು ಒಮ್ಮೊಮ್ಮೆ ತಿಳಿಯದೆ ಯಾರದೋ ಹೊಲಕ್ಕೋ ಗದ್ದೆಗೋ ಬಾಯಿಹಾಕಿ ಅವರಿಂದ ಪೆಟ್ಟುತಿನ್ನುತ್ತವೆ. ಅಥವಾ ಹಾಗೆಯೇ ಅಡ್ಡಾಡುತ್ತಾ ಕಾಡಿನೊಳಗೆ ಹೊಕ್ಕು ಹುಲಿಯಬಾಯಿಗೋ, ಚಿರತೆಯ ಬಾಯಿಗೋ ಬೀಳುತ್ತವೆ. ಹಾಗಾಗದಂತೆ ಕಾಯುವವನು ಗೋಪಾಲ. ದನಗಳು ತಿಳಿಯದೆ ದಾರಿತಪ್ಪಿ ತೊಂದರೆಗೊಳಗಾಗುತ್ತವೆ. ನಾವು ಜನಗಳು ತಿಳಿದಿದ್ದೂ ಸರಿದಾರಿಬಿಟ್ಟು ಅಡ್ಡದಾರಿ ಹಿಡಿಯುತ್ತೇವೆ. ತೊಂದರೆಗೆ ಸಿಲುಕುತ್ತೇವೆ. ಆದ್ದರಿಂದ ನಮ್ಮನ್ನೂ ನೀ ಕಾಯೋ ಎನ್ನುತ್ತಾರೆ ದಾಸರು. ಜತೆಗೆ ‘ಈ ಸಮಯಕಲ್ಲದೆ ಇನ್ನೆಲ್ಲಿ’ ಎನ್ನುತ್ತಾರೆ. ಯಾಕೆಂದರೆ ನಮಗೆ ಮಾಡಬಾರದ್ದನ್ನು ಮಾಡಲು ಆಗ ಈಗ ಎಂಬುದಿಲ್ಲ. ತಪ್ಪು ಮಾಡಲು ನಾವು ಸದಾ ತಯಾರು. ಆದ್ದರಿಂದ ಈ ಸಮಯಕಲ್ಲದೆ ಇನ್ನೆಲ್ಲಿ, ಇನ್ನು ಯಾವಾಗ ? ಈಗಲೇ ಕಾಯಪ್ಪಾ ಎಂದರು ದಾಸರು.
ನಿನ್ನಂಘ್ರಿಯನು ಭಜಿಸಿದವರ ಬಾಳ್ವೆಯ ಕಾಯೋ, ಎನ್ನ ಸತಿ ಸುತರು ನಿನ್ನವರೆ ಕಾಯೋ. ಎನ್ನುತ್ತದೆ ಎರಡನೆಯ ಚರಣ. ನಿನ್ನಂಘ್ರಿಯನು ಭಜಿಸಿದವರ ಎಂದರೆ ನಿನ್ನ ಪಾದಭಜನೆ ಮಾಡಿದವರನ್ನು ಕಾಯಿ. ಸರಿ. ಭಜಿಸದೆ ಬಿಟ್ಟವರನ್ನು ಏನುಮಾಡುವುದು. ಚಿಂತೆಬೇಡ. ನೀವು ಅವನನ್ನು ನಂಬಿದವರೋ, ನಂಬದವರೋ, ಭಜಿಸುವವರೋ ಬಿಟ್ಟವರೋ, ಅವನು ನೋಡುವುದಿಲ್ಲ. ಎಲ್ಲರನ್ನೂ ಕಾಯುವುದು ಅವನ ಕೆಲಸ. ಎಂದಿದ್ದರು ಶ್ರೀ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಒಂದು ಉಪನ್ಯಾಸದಲ್ಲಿ. ಅವನ ಕೆಲಸ ಅವನು ಮಾಡಿಯೇ ಮಾಡುತ್ತಾನೆ. ನಾವು ಬೇಡುವುದು, ಭಜಿಸುವುದು ನಮ್ಮ ಭಕ್ತಿಯನ್ನು, ದೈನ್ಯತೆಯನ್ನು ತೋರುವುದಕ್ಕಷ್ಟೇ. ಆದ್ದರಿಂದ ನಾವು, ಸತಿ ಸುತರು ಮತ್ತು ‘ಕವಳಿ’, ಎಲ್ಲವನು ಕಾಯೋ. ‘ಕವಳಿ’ ಎಂದರೆ ಗುಂಪು. ನಮ್ಮೆಲ್ಲರನ್ನೂ ಕಾಯೋ ಎಂದರು ದಾಸರು.
ಮುಂದಿನ ಚರಣ ‘ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೋ.
ದುರಿತ ದುಷ್ಕರ್ಮ ಮುಂಚೆಲ್ಲ ಕಾಯೋ, ಕರೆಕರೆಯ ಸಂಸಾರ ಕಷ್ಟ ಕಡಲಿಯ ಕಾಯೋ.’ ಕೆಟ್ಟ ಕರ್ಮಗಳಿಗೆ ಕೈಹಾಕದಂತೆ, ಸಂಸಾರ ಸಾಗರದಲ್ಲಿ ಮುಳುಗಿಹೋಗದಂತೆ ಕಾಯೋ ಎಂದು ಬೇಡುತ್ತಾರೆ ದಾಸರು. ಆದರೆ ಎಲ್ಲಕ್ಕಿಂತ ಮುಂಚೆ ‘ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೋ’ ಎಂದರು. ಪರಸ್ತ್ರೀಯರಿಗೋಸ್ಕರ ಮನಸ್ಸು ಕಾತರಿಸುತ್ತದಂತೆ. ಅರಿಷಡ್ವರ್ಗಗಳಲ್ಲಿ ಅತ್ಯಧಿಕ ಕಂಟಕಪ್ರಾಯವಾದದ್ದು ಕಾಮ ಎನ್ನುತ್ತಾನೆ ಕೃಷ್ಣ ಭಗವದ್ಗೀತೆಯಲ್ಲಿ. ‘ಅವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ ಕಾಮರೂಪೇಣ ಕೌನ್ತೇಯ ದುಷ್ಟೂರೇಣಾನಲೇನಚ’ ಎಂದ, ನಮ್ಮನ್ನು ಕಾಯಬೇಕಾದ ಕೃಷ್ಣ. ಕೊನೆಯಿಲ್ಲದ ಈ ಕಾಮವೆಂಬುದು ಜ್ಞಾನಿಗಳಿಗೂ ಚಿರಶತ್ರು. ಅದು ‘ಅನಲ’ ಅಂದರೆ ಬೆಂಕಿಯಂತೆ, ಉರುವಲು ಸುರಿದಷ್ಟೂ ಹೆಚ್ಚು ಉರಿಯುತ್ತದೆ ಎಂದ ಅವನು. ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ, ಚಿನ್ನದಾತುರಕಿಂತ ಗಂಡು ಹೆಣ್ಣೊಲವು ಎಂದಿದ್ದಾರೆ ಶ್ರೀ ಡಿ ವಿ ಜಿ ಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ. ಅಂದರೆ ಸ್ತ್ರೀ ಪುರುಷರ ಪರಸ್ಪರ ಆಕರ್ಷಣೆ ಬಹಳ ಬಲವಾದದ್ದು. ಎಂಥವರನ್ನೂ ಎಚ್ಚರತಪ್ಪಿಸುವಂಥದ್ದು, ಹಾಗಾಗಿ ‘ಪರವೆಣ್ಣುಗಳಿಗಾಗಿ ಎನ್ನ ಮನಸು ಕಾತರಿಸದಂತೆ ನನ್ನನು ಕಾಯೋ’ ಎಂದು ಕೃಷ್ಣನನ್ನು ಬೇಡುತ್ತಿದ್ದಾರೆ ದಾಸರು. ಮತ್ತೆ ಮಿಕ್ಕ ಎಲ್ಲ ದುಷ್ಕರ್ಮ ಗಳಿಂದ ಬಿಡಿಸಿ ಈ ಸಂಸಾರ ಸಾಗರದಿಂದ ಪಾರುಮಾಡಯ್ಯಾ ಎಂದೂ ಬೇಡುತ್ತಾರೆ. ಇಲ್ಲಿ ಕೃಷ್ಣನನ್ನು ಭವ ಶರಧಿಗೆ ತಾರ ಎಂದು ಸಂಭೋದಿಸಿದ್ದಾರೆ. ತಾರ ಎಂದರೆ ಅಂಬಿಗ, ಸಾಗರವನ್ನು ದಾಟಿಸುವವನು.
ಕೊನೆಯ ಚರಣದಲ್ಲಿ ‘ವಿವಿಧ ಪಾಪಂಗಳಿಗೆ ಪದವು ಉದ್ದ ನೀ ಕಾಯೋ’ ಎನ್ನುತ್ತಾರೆ. ಅಂದರೆ ನನ್ನ ಪಾಪಗಳೇನೇ ಇರಲಿ ಅವೆಲ್ಲಕ್ಕಿಂತ ನಿನ್ನ ಪಾದ ಉದ್ದ. ಅಂದರೆ ನಿನ್ನ ಪಾದಭಜನೆಯಿಂದ ನಿವಾರಣೆಯಾಗದಿರುವ ಪಾಪವಿಲ್ಲ. ದಿವಿಜೇಂದ್ರ ಕೃಷ್ಣ ನೀ ಕಾಯೋ. ಎಂದರೆ ಎಲ್ಲ ದೇವತೆಗಳಿಗೂ ದೊರೆ ನೀನು. ನೀ ಕೈಬಿಟ್ಟರೆ ಮತ್ಯಾರೂ ಹಿಡಿಯುವವರಿಲ್ಲ. ಆದ್ದರಿಂದ ನೀನೆ ನನ್ನ ಕಾಯಬೇಕು ಎಂದರು ಪುರಂದರದಾಸರು. ಕೊನೆಯಲ್ಲಿ ‘ನವಮುಕ್ತಿ ಪುರಂದರವಿಠಲ’ ಎಂದು ತಮ್ಮ ಆರಾಧ್ಯದೇವನನ್ನು ಸಂಭೋದಿಸಿದ್ದಾರೆ. ಅಂದರೆ ನವವಿಧಭಕ್ತಿಯಿಂದ ಆರಾಧಿಸಿದರೆ ಮುಕ್ತಿ ನೀಡುವವ ನೀನು, ಪುರಂದರವಿಠಲ, ನೀ ಬಿಡದೆ ಕಾಯೋ ಎಂದು ಬೇಡುತ್ತಾ ತಮ್ಮ ಗೀತೆಯನ್ನು ದಾಸರು ಮುಗಿಸಿದರೆಂಬಲ್ಲಿಗೆ ಇಂದಿನ ವಿವರಣೆ ಕೃಷ್ಣಾರ್ಪಣ.
No comments:
Post a Comment