Saturday, November 7, 2026

ರಾಮ ಎಂಬುವ ಎರಡು ಅಕ್ಷರದ ಮಹಿಮೆ

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ।

ಪಾಮರರು ತಾವೇನು ಬಲ್ಲರಯ್ಯ 


ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ।

ಆ ಅಸ್ಥಿತಗತವಾದ ಅತಿ ಪಾಪವನ್ನು ॥

ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ।

ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ॥


ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು ।

ಒತ್ತಿ ಒಳ ಪೊಗದಂತೆ ಕವಾಟವಾಗಿ ॥

ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ।

ಭಕ್ತವರ ಹನುಮಂತನೊಬ್ಬ ತಾ ಬಲ್ಲ ॥


ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ।

ಪರಮ ವೇದಗಳೆಲ್ಲ ಪೊಗಳುತಿಹವು ॥

ಸಿರಿಯರಸ ಶ್ರೀಪುರಂದರವಿಠಲನ ನಾಮವನು ।

ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ



ರಾಮ ಎಂಬ ಎರಡಕ್ಷರದ ಮಹಿಮೆಯನ್ನು ಪಾಮರರು ಅಂದರೆ ಜನಸಾಮಾನ್ಯರು ಏನು  ಬಲ್ಲರು ? ಅದನ್ನು ಮುನಿ ವಾಲ್ಮೀಕಿ ಬಲ್ಲ, ರಾಮ ಬಂಟ ಹನುಮಂತ ಬಲ್ಲ, ವಿಷ್ಣು ಭಕ್ತ ಕಾಶಿ ವಿಶ್ವನಾಥ ಬಲ್ಲ. ಎನ್ನುತ್ತಾರೆ ದಾಸವರೇಣ್ಯ ಪುರಂದರದಾಸರು. ನಮ್ಮನ್ನು ಪಾಪರಹಿತರನ್ನಾಗಿಸಿ, ಮುಂದೆ  ಹಾಗೆಯೇ ಇರಿಸುವ ಅದರ ಮಹಿಮೆಯನ್ನು ಬಣ್ಣಿಸುತ್ತಾರೆ.  ಕೇಳಿ ಗೀತೆ ‘ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ’ 


ಈ ಗೀತೆಯ ಮೂಲಕ ರಾಮನಾಮದ ಮಹಿಮೆಯನ್ನು ನಮಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ ಪುರಂದರ ದಾಸರು. ಎರಡಕ್ಷರದ ರಾಮ ಎಂಬ ಪದದಲ್ಲಿ ರ ಎನ್ನುವುದು ಸಂಸ್ಕೃತದ ರಮಯತೆ ಎಂಬ ಪದದ ಸಂಕ್ಷಿಪ್ತ ರೂಪ. ಆನಂದಿಸುವುದು ಎಂದು ಇದರ ಅರ್ಥ. ಮ ಎನ್ನುವುದು ‘ಮತಿ’ ಪದದ ಸಂಕ್ಷಿಪ್ತ ರೂಪ. ಬುದ್ಧಿ ಅಥವಾ ಜ್ಞಾನ ಎಂದು ಅದರ ಅರ್ಥ. ಹಾಗಾಗಿ ರಾಮ ಎಂಬ ಪದಕ್ಕೆ  ‘ಜ್ಞಾನಾನಂದ ಸ್ವರೂಪ’ ಎಂಬ ಅರ್ಥ ಸಲ್ಲುತ್ತದೆ. ಶ್ರೀ ವಾದಿರಾಜರು ರಾಮನನ್ನು ‘ನೃಣಾ ಹೃದಭಿರಾಮ’  ಎಂದಿದ್ದಾರೆ.  ಅಂದರೆ ತಾನು ಆನಂದಸ್ವರೂಪ ಅಷ್ಟೇಅಲ್ಲ, ಜನರೆಲ್ಲರ ಹೃದಯದಲ್ಲಿ ಆನಂದವನ್ನು ಮೂಡಿಸುವವನು ಎಂದು ಅರ್ಥ.  


ಮೊದಲ  ಚರಣದಲ್ಲಿ ‘ರಾ’ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆ ಅಸ್ತಿಗತವಾದ ಪಾಪವನು  ಮಾಯ ಮಾಡಿ, ಮಹರಾಯ, ಮುಕ್ತಿ ಕೊಡುವ ದಾಯವನು, ವಾಲ್ಮೀಕಿ ಬಲ್ಲ’ ಎಂದರು ದಾಸರು. ನಮ್ಮ ಪಾಪಗಳು ನಮ್ಮ ರಕ್ತ ಮಾಂಸಗಳ ತಡೆಯನ್ನು ದಾಟಿ ಮೂಳೆಗಳೊಳಗೆ ಸೇರಿಕೊಂಡಿದ್ದರೂ ಅದನ್ನು ನಿವಾರಿಸುತ್ತದಂತೆ ರಾಮನಾಮ. ಹೆದ್ದಾರಿ ಕೊಲೆಗಾರ, ದರೋಡೆಕೋರನಾಗಿದ್ದ ರತ್ನಾಕರ ಎಂಬಾತ, ನಾರದರ ಬುದ್ಧಿವಾದ ಕೇಳಿ, ಬರಿಯ ‘ರಾಮ’ ಎಂಬ ಎರಡಕ್ಷರದ ಜಪದಿಂದ, ತನ್ನ ಪಾಪಗಳನ್ನು ಕಳೆದುಕೊಂಡು ವಾಲ್ಮೀಕಿ ಮಹರ್ಷಿಯಾದನಂತೆ. ಅದರಿಂದ ಪಾಪಗಳನ್ನು ಕಳೆದುಕೊಳ್ಳುವ ದಾಯವನ್ನು ಅಥವಾ ಉಪಾಯವನ್ನು ವಾಲ್ಮೀಕಿ ಬಲ್ಲ ಎನ್ನುತ್ತಾರೆ  ದಾಸರು. 


ಮತ್ತೆ ಮ ಎಂದೆನಲು, ಹೊರಬಿದ್ದ ಪಾಪಗಳು ಒತ್ತಿ ಒಳ ಪೊಗದಂತೆ ಕವಾಟವಾಗಿ, ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ, ಹನುಮಂತನೊಬ್ಬ ತಾ ಬಲ್ಲ ಎಂದರು. ಪಾಪಗಳನ್ನು ನಿವಾರಿಸಿಕೊಂಡವರು ಮತ್ತೆ ಪಾಪಗಳಿಸದಂತೆ ರಕ್ಷಿಸುತ್ತದಂತೆ ರಾಮ ನಾಮ. ಹಾಗೆ ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ, ಹನುಮಂತನೊಬ್ಬ ತಾ ಬಲ್ಲ ಎನ್ನುತ್ತಾರೆ  ದಾಸರು. ಸದಾ ರಾಮನಾಮ ಜಪಿಸುತ್ತ, ಆ ಜಪದಿಂದ ತನ್ನ ಬೇರೆ ಎಲ್ಲಾ  ಸಾಮರ್ಥ್ಯಗಳನ್ನಷ್ಟೇ ಅಲ್ಲದೆ, ದೈವ ಲೀಲೆಯಿಂದ, ರಾಮನೊಡನೆಯೇ ಯುದ್ಧಮಾಡುವ ಸಂಧರ್ಭ ಬಂದಾಗ ರಾಮನ ಬಾಣಗಳನ್ನೇ ತಡೆಯುವ ಶಕ್ತಿ ಪಡೆದುಕೊಂಡಿದ್ದ ಹನುಮಂತನಲ್ಲದೆ ಮತ್ಯಾರು ತಿಳಿಯಬೇಕು ಆ ರಾಮನಾಮದ ಪರಿಯನ್ನು ? 



ಕೊನೆಯ ಚರಣ ‘ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ಪರಮ ವೇದಗಳೆಲ್ಲ ಪೊಗಳುತಿಹವು, ಸಿರಿಯರಸ ಶ್ರೀಪುರಂದರವಿಠಲನ ನಾಮವನು ಸಿರಿ ಕಾಶಿಯೊಳಗಿಪ್ಪ ಶಿವನು ತಾ ಬಲ್ಲ’. ತ್ರಿವಿಕ್ರಮ ರೂಪದಲ್ಲಿ ಬ್ರಹ್ಮಾಂಡವನ್ನು ಭೇಧಿಸಿದ ವಿಷ್ಣುವಿನ ಹೆಬ್ಬೆರೆಳಿನ ಸಂಪರ್ಕದಿಂದ  ತಾನು ಪವಿತ್ರವಾಗಿ, ತನ್ನ ಸಂಪರ್ಕಕ್ಕೆ ಬಂದದ್ದೆಲ್ಲವನ್ನೂ  ಪವಿತ್ರಗೊಳಿಸುವ ಶಕ್ತಿ ಪಡೆದು ಭೂಮಿಗಿಳಿದಳು ಗಂಗೆ. ಗಂಗೆಯ ತಟದಲ್ಲಿದ್ದ  ಕಾಶಿ ಪುಣ್ಯಭೂಮಿಯಾಯಿತು. ಇದೆಲ್ಲವನ್ನೂ ಬಲ್ಲವನಾಗಿದ್ದ  ಮಹಾ ವಿಷ್ಣುಭಕ್ತ ವಿಶ್ವನಾಥ  ತಾನು ಕಾಶಿಯಲ್ಲಿ ನೆಲಸಿದ್ದಲ್ಲದೆ , ಪುರಂದರ ವಿಠಲನನ್ನೂ ತನ್ನೊಡನೆ ಬಿಂದು ಮಾಧವನ ರೂಪದಲ್ಲಿ ಕಾಶಿಯಲ್ಲಿ ಇರಿಸಿಕೊಂಡ ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದ್ದಾರೆನ್ನುವಲ್ಲಿಗೆ  ಇಂದಿನ ಮಾತು ಕೃಷ್ಣಾರ್ಪಣ.


No comments: