Saturday, October 3, 2026

ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ

 ‘ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ’

ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ                             ।।ಪ॥ 

ಆನೆ ಕುದುರೆ ಒಂಟೆ ಲೊಳಲೊಟ್ಟೆ ಬಹು 

ಸೇನೆ ಭಂಡಾರವು ಲೊಳಲೊಟ್ಟೆ 

ಮಾನಿನಿಯರ ಸಂಗ ಲೊಳಲೊಟ್ಟೆ ದೊಡ್ಡ 

ಕ್ಷೋಣಿಶನೆಂಬುದು ಲೊಳಲೊಟ್ಟೆ                             ।।೧।।


ಮುತ್ತು ಮಾಣಿಕ್ಯ ಲೊಳಲೊಟ್ಟೆ , ಚಿನ್ನ 

ಛತ್ರ ಚಾಮರ ಧ್ವಜ ಲೊಳಲೊಟ್ಟೆ 

ಸುತ್ತಗಲ ಕೋಟೆಕೊತ್ತ ಲೊಳಲೊಟ್ಟೆ 

ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ                       ।।೨।।


ಕಂಟಕರೆಂಬೋರು ಲೊಳಲೊಟ್ಟೆ ನಿನ್ನ 

ನಂಟರು ಇಷ್ಟರು ಲೊಳಲೊಟ್ಟೆ 

ಉಂಟಾದ ಗುಣನಿಧಿ ಪುರಂದರವಿಠಲನ  

ಬಂಟನಾಗದವ ಲೊಳಲೊಟ್ಟೆ  ಲೊಳಲೊಟ್ಟೆ


ಜೊಳ್ಳು, ತಿರುಳಿಲ್ಲದ್ದು, ಸಾರವಿಲ್ಲದ್ದು ಮುಂತಾದ ಅರ್ಥನೀಡುವ

ಆಡುಮಾತಿನ ಪದ, ಲೊಳಲೊಟ್ಟೆ.  ಕೊಂಚ ವಿಸ್ತರಿಸಿದರೆ 

ಈ ಪದಕ್ಕೆ ಅರ್ಥವಿಲ್ಲದ್ದು, ಉಪಯೋಗಕ್ಕೆ ಬಾರದ್ದು, ವ್ಯರ್ಥ,

ಮುಂತಾಗಿ ಇನ್ನೂ ಅನೇಕ ಅರ್ಥಗಳನ್ನು ಕೊಡಬಹುದು.  ಈ ಸಂಸಾರವೆನ್ನುವುದು ಕ್ಷಣಿಕ ಅಥವಾ ನಶ್ವರ, ಯಾವುದಕ್ಕೂ

ಅರ್ಥವಿಲ್ಲ, ಇತ್ಯಾದಿ ವೈರಾಗ್ಯ ಪ್ರಧಾನ ಭಾವಗಳನ್ನು

ಬಿಂಬಿಸುವ ಶ್ರೀ ಪುರಂದರ ದಾಸರ ರಚನೆ ‘ಲೊಳಲೊಟ್ಟೆ

ಎಲ್ಲ ಲೊಳಲೊಟ್ಟೆ’. 


‘ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ’ ಎಂದು ಪ್ರಾರಂಭವಾಗುವ

ಈ ಗೀತೆಯಲ್ಲಿನ  ‘ಲೊಳಲೊಟ್ಟೆ’ ಎಂಬ ಒಂದು ಪದದ

ಹಿಂದಿನ ಭಾವವನ್ನು ತಿಳಿದುಕೊಂಡರೆ ಬಹುಶಃ ನಮ್ಮ

ಅಧ್ಯಾತ್ಮ ಸಂಪ್ರದಾಯದ ಅರ್ಧಭಾಗವನ್ನು ಅರಿತಂತಾಯಿತು.

ಇದೇ ಗೀತೆಯ ಕೊನೆಯ ಚರಣದ ಕೊನೆಯ ಸಾಲಾದ

‘ಪುರಂದರ ವಿಠಲನ ಬಂಟನಾಗದವ ಲೊಳಲೊಟ್ಟೆ’ ಎಂಬ

ಸಾಲಿನ ಅರ್ಥವನ್ನು ಅರಿತರೆ, ನಮ್ಮ ತಿಳುವಳಿಕೆ

ಪೂರ್ಣವಾಯಿತು. ಬಹಳ ಸುಲಭವಾದ

ಸಾಮಾನ್ಯ ಬಳಕೆಯ ಪದಗಳನ್ನುಪಯೋಗಿಸಿ ನಮ್ಮ

ಅಧ್ಯಾತ್ಮದ ಸ್ವರೂಪವನ್ನು ತಿಳಿಸುವ ಪುರಂದರದಾಸರ

ಅಮೋಘವಾದ ಕೌಶಲ್ಯವನ್ನು ಬಿಂಬಿಸುವ ಗೀತೆ ಇದು. 

ಯಾವುದೇ ರೀತಿಯ ಸಾಂಸಾರಿಕ ಮೋಹಕ್ಕೆಒಳಗಾಗದೆ,

ಎಲ್ಲವೂ ನಶ್ವರವೆಂಬುದನ್ನು ಅರಿತುಕೊಂಡು, ಪರಮಾತ್ಮನ

ಪಾದವೊಂದೇ ದಾರಿ ಎಂದು ನಂಬಿಕೊಂಡು  ಜೀವನವನ್ನು

ಸಾಗಿಸಿ ಮುಗಿಸಬೇಕೆಂಬುದು ಈ ಗೀತೆಯ ಸಂದೇಶ. ಆ

ಮೋಹಗಳನ್ನು ವಿಶದ ಪಡಿಸುವುದಕ್ಕೋಸ್ಕರ  ಆನೆ,

ಕುದುರೆ, ಹೆಣ್ಣು - ಹೊನ್ನು - ಮಣ್ಣು, ಕೋಟೆ, ಕೊತ್ತಲ,

ನೆಂಟರು, ಇಷ್ಟರು, ಶತ್ರುಗಳು, ಮುಂತಾದ ಸಾಂಸಾರಿಕ

ಜೀವನವನ್ನು ಸೂಚಿಸುವ ಸಮಸ್ತ ಪದಗಳನ್ನು

ಉಪಯೋಗಿಸಿ ಎಲ್ಲ ‘ಲೊಳಲೊಟ್ಟೆ’ ಎಂದಿದ್ದಾರೆ ದಾಸರು.

ರತ್ನವ್ಯಾಪಾರಿ ಶ್ರೀನಿವಾಸ ನಾಯಕರು ತಮ್ಮ ವೈಭೋಗದ

ಜೀವನವನ್ನು ತ್ಯಜಿಸಿ ಪುರಂದರದಾಸರಾದ ಸಮಯದಲ್ಲಿ

ಈ ಗೀತೆಯ ರಚನೆಯಾಯಿತೆಂಬುವುದು ಒಂದು

ಅಭಿಪ್ರಾಯ. ದಾಸರು ಹಾದಿಯಲ್ಲಿ ನಡೆದುಹೋಗುತ್ತಿದ್ದಾಗ

ಅವರನ್ನು ಪಕ್ಕಕ್ಕೆ ಒತ್ತರಿಸಿ ಸಾಗಿದ ಮಹಾರಾಜರ

ವೈಭವಯುಕ್ತ ಪರಿವಾರವನ್ನು ಕಂಡು ರಚಿತವಾದ 

ಗೀತೆ ಇದು ಎಂಬುದು ಮತ್ತೊಂದು ಅಭಿಪ್ರಾಯ. ಈ

ಅಭಿಪ್ರಾಯಗಳು ಏನೇ ಇರಲಿ ಅದು ನಮಗೆ ಪ್ರಸ್ತುತವಲ್ಲ.

ನಮಗೆ ಬೇಕಾದ್ದು ಗೀತೆಯ ಭಾವ. ದಾಸರು ತಮ್ಮ

ವಿಚಾರವನ್ನು ಜನರಿಗೆ ಅತ್ಯಂತ ಸರಳವಾಗಿ, ಸಮರ್ಥವಾಗಿ

ವಿವರಿಸಿರುವ ರಚನೆಗಳಲ್ಲಿ ಇದು ಒಂದು ಎಂಬುದು ಖಚಿತ.

‘ಯೇ ಹಿ ಸಂಸ್ಪರ್ಶಜಾಃ ಭೋಗಃ ದುಃಖಯೋನಯ ಏವತೇ

ಅದ್ಯಂತವಂತಃ ಕೌನ್ತೇಯ ನ ತೇಷು ರಮತೇ ಬುಧಃ’ ಎಂಬುದು

ಗೀತೆಯ ಒಂದು ವಾಕ್ಯ. ಐಹಿಕವಾದ, ವಿಷಯಗಳಮೇಲಿನ

ಆಸೆಯಿಂದ ಪಡೆದುಕೊಂಡ  ಅನುಭೋಗ, ಅಸ್ತಿ

ಐಶ್ವರ್ಯಗಳು ದುಃಖಕ್ಕೆ ಎಡೆಮಾಡುವವು. ಇಂದು

ಬಂದು ನಾಳೆ ಇಲ್ಲವಾಗುವವು. ವಿವೇಕಿಯಾದವನು

ಈ ಬಂಧನಗಳನ್ನು ದೂರೀಕರಿಸುತ್ತಾನೆ - ಅಂದರೆ 

ಎಲ್ಲವೂ ‘ಲೊಳಲೊಟ್ಟೆ’ ಎಂಬುದನ್ನು ಅರಿತಿರುತ್ತಾನೆ 

ಎನ್ನುತ್ತಾನೆ  ಶ್ರೀ ಕೃಷ್ಣ. 

ಎಲ್ಲ ಲೊಳಲೊಟ್ಟೆ ಎನ್ನುವಾಗ ನಮ್ಮ ಭಾವನವರ

ಮಾತೊಂದು ನೆನಪಿಗೆ ಬರುತ್ತದೆ. ನಿತ್ಯ ಸ್ನಾನಮಾಡಿ

ದೇವರ ದೀಪ ಹಚ್ಚಿದನಂತರ, ದೇವಸ್ಥಾನದಿಂದ ಪ್ರಸಾದವೆಂದು

ಕೊಂಡುಬಂದ ನಾಲ್ಕು ಮಂತ್ರಾಕ್ಷತೆಯ ಕಾಳುಗಳನ್ನು ತಮ್ಮ

ತಲೆಯಮೇಲೆ ಹಾಕಿಕೊಳ್ಳುವುದು ಅವರ ಪದ್ಧತಿ. ಒಮ್ಮೆ

ಅವರ ತಲೆಯಮೇಲಿನ ಕಾಳುಗಳನ್ನು ಕಂಡ ಅವರ

ಕಚೇರಿಯ ಸಹಾಯಕ, ಅದು ಮಂತ್ರಾಕ್ಷತೆಯೆಂದು

ತಿಳಿಯದೆ ‘ಸಾರ್ ನಿಮ್ಮ ತಲೆಯಮೇಲೆ ಏನೋ ಕಸ ಬಿದ್ದಿದೆ’

ಎಂದನಂತೆ. “ಅದು ಕಸವಲ್ಲ, ಅದನ್ನು ಬಿಟ್ಟು ಉಳಿದದ್ದೆಲ್ಲಾ ಕಸ”

ಅಂತ ಅವನಿಗೆ ಹೇಳಿದೆ, ಎಂದರು ನನ್ನ ಭಾವನವರು.

ಇದು ಲೊಳಲೊಟ್ಟೆ ಗೀತೆಯ ಸಾರಾಂಶ. ಹಾಗೆ ಪುರಂದರ

ವಿಠಲನ ಸಾನ್ನಿಧ್ಯ, ಅವನ ಚಿಂತನೆ, ಪ್ರಸಾದವನ್ನುಳಿದು

ಮಿಕ್ಕದ್ದೆಲ್ಲ ಲೊಳಲೊಟ್ಟೆ, ಪುರಂದರವಿಠಲನ ಬಂಟನಾಗದವ

ಲೊಳಲೊಟ್ಟೆ ಎಂಬ ದಾಸರ ಮಾತು  ಸದಾ ನಮ್ಮ

ತಲೆಯಲ್ಲಿರಲೆಂದು ಆಶಿಸುತ್ತಾ ಇಂದಿನ ನನ್ನ ಮಾತನ್ನು

ಕೃಷ್ಣಾರ್ಪಣ ಮಾಡುತ್ತೇನೆ.