Saturday, October 17, 2026

ಮುತ್ತು ಬಂದಿದೆ ಕೇರಿಗೆ

 


ಮುತ್ತು ಬಂದಿದೆ ಕೇರಿಗೆ ಜನರು ಕೇಳಿ 

ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ 


ಥಳಥಳಿಸುವ ಮುತ್ತು ಕಮಲ ನೇತ್ರದ ಮುತ್ತು 

ಕಲುಷ ಪರ್ವತಕಿದು ಕುಲಿಷವಾಗಿಪ್ಪಮುತ್ತು 

ಹಲಧರಾನುಜನೆಂಬ ಪವಿತ್ರನಾಮದ ಮುತ್ತು 

ಒಲಿದು ಭಜಿಪರ ಭವತರಿದು ಕಾಯುವಮುತ್ತು 


ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತು 

ಭಂಜಿಸಿದ ಇತರ ಭಯವ ತೋರುವ ಮುತ್ತು 

ಸಂಜೀವರಾಯರ ಹೃದಯದೊಳಗಿನ ಮುತ್ತು 

ಕಂಜಭವಾದಿಗಳು ಶಿರಸಾವಹಿಸುವ ಮುತ್ತು 


ಜ್ಞಾನವೆಂಬೊದಾರದಲ್ಲಿ ಪೋಣಿಸುವಮುತ್ತು  

ಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು 

ಆನಂದತೀರ್ಥರ ಮನದೊಳೊಪ್ಪುವ ಮುತ್ತು 

ಶ್ರೀನಿಧಿ ಆದಿಕೇಶವನೆಂಬೊ ಅಣಿಮುತ್ತು



ಎಲ್ಲ ಸಂತರದು, ದಾಸರದು ಒಂದೇ ವ್ಯಾಪಾರ. ಆದಿಕೇಶವ, ಪುರಂದರವಿಠಲ, ವಿಜಯವಿಠಲ, ಶ್ರೀ ಕೃಷ್ಣ ಮುಂತಾಗಿ ತಮಗೆ ಪ್ರಿಯವಾದ ನಾಮದಿಂದ ತಾವು ಹೆಸರಿಸುವ  ಪರದೇವ, ಪರಮಾತ್ಮನನ್ನು ನಮಗೆ  ಮಾರಾಟಮಾಡುವುದು. ಅವನನ್ನು ಪಾಯಸವೆಂದರು, ಕಲ್ಲುಸಕ್ಕರೆಯೆಂದರು, ಮುತ್ತೆಂದರು, ರತ್ನವೆಂದರು ಒಟ್ಟಿನಲ್ಲಿ ಅವನನ್ನು ನಾವು ಕೊಳ್ಳಬೇಕು, ಕೊಂಡು ಉದ್ಧಾರವಾಗಬೇಕು ಇದು ಅವರ ಇಚ್ಛೆ. ಅಂಥ ಒಂದು ಶ್ರೀ ಕನಕದಾಸರ ಕೃತಿ ನಮ್ಮ ಇಂದಿನ ಪ್ರಸ್ತುತಿ. 



‘ಮುತ್ತು ಬಂದಿದೆ ಕೇರಿಗೆ ಜನರು ಕೇಳಿ, ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ’.  ಭಕ್ತಿಯಿಲ್ಲದವರ ಗೊಡವೆ ನಮಗೆ ಬೇಡ. ಭಕ್ತಿಯುಳ್ಳವರು ಸೆರಗಿನಲ್ಲಿ ಕಟ್ಟಿಕೊಳ್ಳಿ. ಸೆರಗಿನಲ್ಲಿ ಕಟ್ಟಿಕೊಳ್ಳುವುದೇಕೆ ? ಕೊರಳಿನಲ್ಲಿ ಕಟ್ಟಿಕೊಳ್ಳಬಾರದೇ? ಮುತ್ತು ಕೊಂಡು ಡಬ್ಬದಲ್ಲಿ ಹಾಕಿಡಬಾರದೇ? ‘ಸೆರಗು’ ಪದ ಬಳಕೆಗೆ ಇಲ್ಲಿ ಎರಡು ವಿಶೇಷ.  ‘ಸೆರಗೊಡ್ಡಿ ಬೇಡುವುದು’ ಎಂಬ ಬಳಕೆಯುಂಟಲ್ಲವೇ ನಮ್ಮಲ್ಲಿ ? ಏನನ್ನಾದರೂ ಪಡೆದುಕೊಳ್ಳುವಾಗ ‘ಸೆರಗೊಡ್ಡಿ ಪಡೆದುಕೊಳ್ಳುವುದು’ ದೈನ್ಯತೆಯ ಸೂಚಕ. ಆದ್ದರಿಂದ ಕೇಶವನೆಂಬ ಮುತ್ತನ್ನು ಪಡೆದು ಕೊಳ್ಳುವಾಗ ದೈನ್ಯತೆಯಿರಲಿ, ದರ್ಪತೋರಿದವರಿಗೆ ಅವ ದಕ್ಕುವವನಲ್ಲ.  ಎಂಬ ಭಾವ. ಮತ್ತೆ, ಸೆರಗು ಎನ್ನುವುದು ರಕ್ಷಣೆಯ ಸೂಚಕ ಕೂಡ. ಕೆಲವು ಮಕ್ಕಳನ್ನು ನಾವು ‘ಸದಾ ಅಮ್ಮನ ಸೆರಗು ಹಿಡಿದು ಅಥವಾ ಸೆರಗಿನ ಹಿಂದೆ’ ಎಂದು ಬಣ್ಣಿಸುವುದುಂಟಲ್ಲವೇ? ಈಗ ಸೀರೆಯ ಸೆರಗಿಲ್ಲದಿರಬಹುದು ಆದರೆ ಅಮ್ಮನ ದುಪ್ಪಟ್ಟವೋ, ಕುರ್ತಾದ ಚುಂಗೋ ಏನು ಸಿಕ್ಕಿದರೆ ಅದನ್ನು ಹಿಡಿದು ನಿಲ್ಲುತ್ತವೆ  ಮಕ್ಕಳು. ತಮ್ಮ ಗಮನ ಎಲ್ಲೇ ಇರಲಿ ಕೈಯಲ್ಲಿ ಸೆರಗುಬೇಕು. ಮಕ್ಕಳು ಅಮ್ಮನ ಸೆರಗು ಹಿಡಿಯುವುದೇಕೆ? ಆ ಸೆರಗಿನಬಳಿಯೇ ಅಮ್ಮನಿದ್ದಾಳೆಂಬ ನಂಬಿಕೆ. ಹಾಗಾಗಿ ಆ ಸೆರಗಿನಿಂದ ನಾನು ಸುರಕ್ಷಿತ ಎಂಬ ಭಾವನೆ. ಅದೇರೀತಿ ಭಗವಂತನನ್ನು ನಂಬಿಕೊಂಡು ಸೆರಗಿನಲ್ಲಿ ಕಟ್ಟಿಕೊಂಡವರಿಗೆ ಅವನು ತಮ್ಮೊಡನೆಯೇ ಇದ್ದಾನೆ ಮತ್ತು ತಾವು ಅವನಿಂದ ರಕ್ಷಿತರೆಂಬ ಭಾವನೆ. 



ಮುಂದಿನ ಚರಣಗಳಲ್ಲಿ ದಾಸರು ಮುತ್ತನ್ನು ವರ್ಣಿಸುತ್ತಾರೆ. ಮೊದಲನೆಯದಾಗಿ ‘ಥಳಥಳಿಸುವ ಮುತ್ತು’. ‘ಹೊಳೆಯುವಂಥ ಮುತ್ತು’ ಎಂದು ಅದರ ಅರ್ಥ, ಎಲ್ಲರಿಗೂ ಗೊತ್ತು. ‘ಅರ್ಚಿಷ್ಮಾನ್’ ಎನ್ನುವುದು ಭಗವಂತನ ಒಂದು ನಾಮ. ಹೊಳಪಿನಿಂದ ಕೂಡಿರುವವನು ಎಂದು ಅದರ ಅರ್ಥ. ತಾನು ಹೊಳೆಯುವುದಷ್ಟೇ ಅಲ್ಲದೆ ಹೊಳಪಿರುವ ಎಲ್ಲ ವಸ್ತುಗಳಿಗೂ ಆ ಹೊಳೆಯುವಂಥ ಶಕ್ತಿ ನೀಡುವವನು ಎಂದು ಅದರ ಹಿಂದಿನ ಭಾವ. ತಮ್ಮ ದ್ವಾದಶ ಸ್ತೋತ್ರದಲ್ಲಿ ಶ್ರೀ ಮಧ್ವಾಚಾರ್ಯರು ನಾರಾಯಣನ ಕಂಠವನ್ನು ವರ್ಣಿಸುವಾಗ  ‘ಸಂತತಂ ಚಿಂತಯೇತ್ಕಂಠಮ್ ಭಾಸ್ವತ್ ಕೌಸ್ತುಭ ಭಾಸಕಂ’ ಎಂದಿದ್ದಾರೆ. ಅಂದರೆ ಹೊಳೆಯುತ್ತಿರುವ ಕೌಸ್ತುಭರತ್ನಕ್ಕೆ ಹೊಳಪುನೀಡುವ ಕಂಠ ಸದಾ ನಿಮ್ಮ ಚಿಂತನೆಯಲ್ಲಿರಲಿ ಎಂದು ಅರ್ಥ. ಆಭರಣಗಳು ನಮ್ಮ ದೇಹಕ್ಕೆ ಮೆರಗು ನೀಡುತ್ತವೆ ಎಂದು ನಾವು ಆಭರಣವನ್ನು ಧರಿಸುತ್ತೇವೆ. ಪರಮಾತ್ಮನ ದೇಹದಿಂದ, ಅವನ ಕಂಠದಿಂದ, ಅದರ ಬದಿಯಲ್ಲಿರುವ ಕೌಸ್ತುಭ ಮಣಿಗೆ ಮೆರಗು ಬರುತ್ತದೆ. ಇದು ಥಳಥಳಿಸುವ ಮುತ್ತಿಗೆ ವಿವರಣೆ.



ಸರಿ, ಮುಂದೆ ಕಮಲ ನೇತ್ರದ ಮುತ್ತು - ಸುಲಭ.  ‘ಕಲುಷ ಪರ್ವತಕಿದು ಕುಲಿಷವಾಗಿಪ್ಪ ಮುತ್ತು’.  ನಮ್ಮ ಪಾಪದ ಬೆಟ್ಟಕ್ಕೆ  ವಜ್ರಾಯುಧ ಪ್ರದವಾದ ಮುತ್ತು, ಅಂದರೆ ಪಾಪವನ್ನು ಪುಡಿಮಾಡುವ ಮುತ್ತು, ಕೊನೆಗೆ  ಹಲಧರನ ಅನುಜ ಎಂದರೆ ಬಲರಾಮನ ತಮ್ಮನಾದ, ಮತ್ತು ‘ಭಜಿಪರ ಭವ ತರಿದು ಕಾಯುವ ಮುತ್ತು’ ತನ್ನ ಮೊರೆಹೊಕ್ಕವರ ಭವ ಬಂಧನವನ್ನು  ದೂರಮಾಡುವ ಮುತ್ತು. 




ಮುಂದಿನ ಚರಣ ಈ ಮುತ್ತಿನ ಇನ್ನಷ್ಟು ವಿಶೇಷಣಗಳನ್ನು ಹೇಳುತ್ತದೆ. ಯಾವುದಕ್ಕೂ ಅಂಜದ ದುರ್ಜನರಿಗೆ ಅಂಜಿಕೆ ತರಿಸುವ ಮುತ್ತು, ‘ಭಂಜಿಸಿದ ಇತರ ಭಯವ ತೂರುವ ಮುತ್ತು’. ಭಯದಿಂದ ಬದುಕುವ ಸಜ್ಜನರ ಭವ ಭಯವ ಕಿತ್ತೊಗೆಯುವ ಮುತ್ತು. ಸಂಜೀವರಾಯರ ಅಂದರೆ ಮುಖ್ಯಪ್ರಾಣ, ಅಥವಾ ಆಂಜನೇಯನ ಹೃದಯದೊಳಗಿಹ ಮುತ್ತು ಮತ್ತು ಕೊನೆಗೆ ಕಂಜಭವ ಆದಿಗಳು ಅಂದರೆ ಬ್ರಹ್ಮ ಮತ್ತಿತರು  ಎಲ್ಲರೂ ಶಿರಸಾವಹಿಸಿ ಇದರ ಆಜ್ಞೆಯನ್ನು ಪಾಲಿಸುವ ಮುತ್ತು. 



ಮುತ್ತನ್ನು ಕೊಂಡು ಪೋಣಿಸಿ ಧರಿಸಬೇಕು ತಾನೇ? ಆದರೆ ಅದನ್ನು ಪೋಣಿಸಲು ಅಂಥಿಂಥ ದಾರವಾಗದು, ಜ್ಞಾನವೆಂಬ ದಾರದಲ್ಲಿ ಪೋಣಿಸಬೇಕು. ಸದಾ ಮನಸ್ಸಿನಲ್ಲಿಟ್ಟುಕೊಂಡು ಮೆರೆಸಬೇಕು. ಆದ್ದರಿಂದ ‘ಜ್ಞಾನವೆಂಬೊದಾರದಲ್ಲಿ ಪೋಣಿಸುವಮುತ್ತು  

ಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು’ ಎಂಬ  ಸಾಲು.


ಕೊನೆಗೆ ‘ಆನಂದತೀರ್ಥರ ಮನದೊಳೊಪ್ಪುವ ಮುತ್ತು’  ಮಧ್ವ ತತ್ವದ ಪ್ರಕಾರ ಮೊದಲು ಹೇಳಿದ ಸಂಜೀವರಾಯರು ಅಂದರೆ ಮುಖ್ಯಪ್ರ್ರಾಣದೇವರು ಮತ್ತು ಈ ಆನಂದತೀರ್ಥರು ಎಂದರೆ ಶ್ರೀ ಮಧ್ವಾಚಾರ್ಯರು,  ಇಬ್ಬರೂ ಒಂದೇ. ವಾಯುದೇವರ ಎರಡು ರೂಪವಷ್ಟೇ. ಇಂಥ ಶ್ರೇಷ್ಠರು ಸದಾ ತಮ್ಮ ಮನದೊಳಗಿರಿಸಿಕೊಂಡಿರುವ ಆದಿಕೇಶವನೆಂಬ ಮುತ್ತನ್ನು ನೀವೂ  ಧರಿಸಿ ಧನ್ಯರಾಗಿರೆಂದು ಹೇಳುತ್ತಾ ತಮ್ಮ ಗೀತೆಯನ್ನು ಕನಕದಾಸರು ಮುಗಿಸಿದರೆಂಬಲ್ಲಿಗೆ ಇಂದಿನ ವಿವರಣೆ ಕೃಷ್ಣಾರ್ಪಣ.


No comments: