Saturday, October 10, 2026

ಕೊಡುಬೇಗ ದಿವ್ಯಮತಿ




ಕೊಡು ಬೇಗ ದಿವ್ಯಮತಿ ಸರಸ್ವತಿ


ಮೃಡ ಹರಿಹಯ ಮುಖರೊಡೆಯಳೆ ನಿನ್ನಯ

ಅಡಿಗೆರಗುವೆ ಅಮ್ಮ ಬ್ರಹ್ಮನ ರಾಣಿ                 


ಇಂದಿರಾ ರಮಣನ ಹಿರಿಯ ಸೊಸೆಯು ನೀನು 

ಬಂದೆನ್ನ ವದನದಿ ನಿಂದು ನಾಮವ ನುಡಿಸೆ      


ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದರಾಣಿ

ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ    


ಪತಿತ ಪಾವನೆ ನೀ ಗತಿಯೆಂದು ನಂಬಿದೆ

ಸತತ ಪುರಂದರ ವಿಠಲನ ತೋರೆ


ಶ್ರೀ ಪುರಂದರದಾಸರ ರಚನೆಗಳು ಎಲ್ಲವೂ ಪುರಂದವಿಠಲನನ್ನು ಉದ್ದೇಶಿಸಿ ರಚಿಸಿರುವುದೇ ಆಗಿವೆ. ಆದರೆ ದಾಸರು ಮಧ್ವಪೀಳಿಗೆಯ ಯತಿಗಳಾದ ವ್ಯಾಸರಾಜರ ಶಿಷ್ಯರಾದ್ದರಿಂದ, ಆ ಸಂಪ್ರದಾಯವನ್ನು ಅರಿತವರಾದ್ದರಿಂದ, ಅವರು ಕೆಳಗಿನ ಮೆಟ್ಟಲುಗಳಲ್ಲಿ ಇರುವ ಇತರ ದೇವತೆಗಳನ್ನು ಬಿಡುವಂತಿಲ್ಲ. ನಾವು ಆ ಮೆಟ್ಟಲುಗಳ ಮೂಲಕವೇ ಶ್ರೀ ಹರಿಯನ್ನು ತಲುಪಬೇಕಾದ್ದು. ಆದ್ದರಿಂದ ತಾರತಮ್ಯ ಪದ್ಧತಿಗೆ ತಕ್ಕಂತೆ ಲಕ್ಷ್ಮಿ, ವಾಯು, ಸರಸ್ವತಿ, ರುದ್ರದೇವರು  ಮುಂತಾದವರನ್ನು ಸ್ತುತಿಸುವ ಅನೇಕ ಗೀತೆಗಳು ಪುರಂದರದಾಸರಿಂದ ರಚಿತವಾಗಿವೆ.

ಕೊಡುಬೇಗ ದಿವ್ಯಮತಿ ಎಂದು ಬೇಡಿದರು ದಾಸರು. ದಿವ್ಯಮತಿ ಎಂದರೆ ಬಹಳ ಉತ್ತಮವಾದ, ಶ್ರೇಷ್ಠವಾದ ಮತಿ. ಬುದ್ಧಿ. ಯಾವ ರೀತಿಯ ಬುದ್ಧಿ ಶ್ರೇಷ್ಠ? ಇಹದಲ್ಲಿ ಉತ್ತಮ ಜೀವನಕ್ಕೂ ಪರದಲ್ಲಿ ಉತ್ತಮಗತಿಗೂ ಸಹಾಯಕವಾಗುವಂಥ ಬುದ್ಧಿ ಶ್ರೇಷ್ಠವಾದದ್ದು. ‘ದಿವ್ಯಮತಿ’. ಇಂಥ ಮತಿ ನಮ್ಮದಾಗಲೆಂದು ತಾಯಿ ಸರಸ್ವತಿಯಲ್ಲಿ ನಮ್ಮ ಬೇಡಿಕೆ.  


ಮುಂದಿನ ಚರಣಗಳಲ್ಲಿ ಸರಸ್ವತಿಯ ಸ್ತುತಿ. ‘ಮೃಡ, ಹರಿಹಯ ಮುಖರೊಡೆಯಳೇ, ಬ್ರಹ್ಮನ ರಾಣಿ’ ಎಂದಿದೆ ಮೊದಲ ಚರಣ.  ಮೃಡ ಎಂದರೆ ಶಿವ, ಹರಿಹಯ ಎಂದರೆ ಇಂದ್ರ. ಇಲ್ಲಿ ಹರಿ ಎಂದರೆ ಹಳದಿ ಮತ್ತು ಹಸಿರು ಮಿಶ್ರಿತವಾದ ಬಣ್ಣ. ಇಂದ್ರನ ಕುದುರೆ ಆ ರೀತಿಯ ಬಣ್ಣವಂತೆ. ಆ ಬಣ್ಣದ ಕುದುರೆ ‘ಹರಿಹಯ’. ಅಂಥ ಕುದುರೆಯನ್ನು ಉಳ್ಳವನೂ ಹರಿಹಯ.    ಮೃಡ, ಹರಿಹಯ ಮುಖ ರೊಡೆಯಳೇ ಎಂದರೆ ಶಿವ, ಇಂದ್ರ ಮೊದಲುಗೊಂಡು ಮತ್ತೆಲ್ಲ ದೇವತೆಗಳ ಒಡೆಯಳೇ ಎಂಬ ಅರ್ಥ.  ತಾರತಮ್ಯ ಕಕ್ಷೆಯಲ್ಲಿ ಸರಸ್ವತಿಗಿಂತ ಮೇಲಿನವರು ಬ್ರಹ್ಮ, ಲಕ್ಷ್ಮಿ, ನಾರಾಯಣ ಮೂವರು ಮಾತ್ರ. ಆದ್ದರಿಂದ ಸರಸ್ವತಿಗಿಂತ ಒಂದು ಮೆಟ್ಟಲು ಕೆಳಗೆ ಇರುವ ಶಿವ, ಇಂದ್ರರಿಂದ ಮೊದಲಾಗಿ ಎಲ್ಲರಿಗೂ ಅವಳು ಒಡತಿ. ನಿನ್ನಯ ಅಡಿಗೆರಗುವೆ ಬ್ರಹ್ಮನ ರಾಣಿ ಎಂದು ಮೊದಲ ಚರಣ ಮುಗಿಯುತ್ತದೆ. 


ಮುಂದಿನ ಚರಣದಲ್ಲಿ ‘ಇಂದಿರಾ ರಮಣನ ಹಿರಿಯ ಸೊಸೆ’ ಎಂದಿದೆ. ಇಂದಿರಾ ರಮಣನ ಮೊದಲ ಪುತ್ರ ಬ್ರಹ್ಮ.   ಕಾಮದೇವ, ಪ್ರದ್ಯುಮ್ನ, ಲವ, ಕುಶ ಎಲ್ಲರೂ ನಂತರದವರು. ಆದ್ದರಿಂದ ಬ್ರಹ್ಮನ ಪತ್ನಿ ಹಿರಿಯ ಸೊಸೆ. ‘ಬಂದೆನ್ನ  ವದನದಿ ನಿಂದು ನಾಮವ ನುಡಿಸೆ’ ಎಂದು ಬೇಡುತ್ತಾರೆ ಪುರಂದರ ದಾಸರು. ಸರಸ್ವತಿ ವಾಗ್ದೇವಿ. ಅವಳ ಕೃಪೆಯಿಲ್ಲದೆ ಒಂದಕ್ಷರವೂ ನಮ್ಮ ನಾಲಿಗೆಯಿಂದ ಹೊರಡದು. ಆದ್ದರಿಂದ ನೀನು ನನ್ನ ನಾಲಿಗೆಯಲ್ಲಿದ್ದು ಹರಿನಾಮವನ್ನು ಹೇಳಿಸು ಎಂಬ ಪ್ರಾರ್ಥನೆ. ಅಖಿಲ ವಿದ್ಯಾಭಿಮಾನಿ, ಅಜನ ಎಂದರೆ ಬ್ರಹ್ಮನ ಪಟ್ಟದ ರಾಣಿ, ಸುಜನ ಶಿರೋಮಣಿ, ಪಾಲಿಸು. ಸುಜನ ಎಂದರೆ ಸಾತ್ವಿಕ ಜನ. ಸರಸ್ವತಿ ಸತ್ವಗುಣ ಸಂಪನ್ನವಾದವಳು. ಅವಳ ಶ್ವೇತವರ್ಣದ ಪೀತಾಂಬರ ಸತ್ವಗುಣದ ಸಂಕೇತ. ಆದ್ದರಿಂದ ಅವಳು ಸುಜನ ಶಿರೋಮಣಿ. 


ಪತಿತಪಾವನೆ, ಅಂದರೆ ಕೆಳಗೆ ಬಿದ್ದವರನ್ನು ಮೇಲೆತ್ತಿ ಉದ್ಧರಿಸುವ ಪಾವನೆ, ನೀನೇ ಗತಿ.  ಸದಾ ಪುರಂದರ ವಿಠಲನ ಸ್ಮರಣೆ ನಮ್ಮಲ್ಲಿರುವಂತೆ ಮಾಡೆಂದು ಬೇಡುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದ್ದಾರೆ. ಮಂಗಳಕರವಾದ ಈ ದಸರೆಯ ಸಮಯದಲ್ಲಿ ಸರಸ್ವತಿಯಸ್ಮರಣೆಯಿಂದ ನಮ್ಮೆಲ್ಲರ ಜೀವಗಳೂ ಉದ್ಧಾರವಾಗಲೆಂದು ಬೇಡುತ್ತಾ ಆಕೆ ಆಡಿಸಿರುವ ನನ್ನ ಮಾತುಗಳು ಕೃಷ್ಣಾರ್ಪಣವಾಗಲಿ ಎಂದು ಬೇಡುತ್ತೇನೆ.


No comments: