Sunday, January 8, 2017

 ದಂತ ಚಿಕಿತ್ಸೆ ಹಾಗೂ ಸ್ಮಶಾನ  ವೈರಾಗ್ಯ

ಹಲ್ಲು ನೋವೆಂದು ಚಿಕಿತ್ಸೆಗೆ ಬಂದಿದ್ದ ಮನುಷ್ಯನಿಗೆ ಅರಿವಳಿಕೆಗಯ  ಇಂಜಕ್ಷನ್ ಚುಚ್ಚಿ ನನ್ನ ಕೆಲಸಕ್ಕೆ ಅನುವಾಗುತ್ತಿದ್ದೆ. ನೋವು ನಿಂತ ಕೂಡಲೇ ಆತನ ಭಯನಿವಾರಣೆಯಾಗಿ ಮಾತು ಪ್ರಾರಂಭವಾಯಿತು.

"ಅಬ್ಬಾ ಮೂರುದಿನ ನೋವುಸಹಿಸಿ ಸಹಿಸಿ ಸಾಕಾಯಿತು ಡಾಕ್ಟ್ರೇ. ಮತ್ತೊಮ್ಮೆ ಈ ತಾಪತ್ರಯಬೇಡ ಎಲ್ಲಾ ಹಲ್ಲುಗಳನ್ನೂ ಸರಿಮಾಡಿಬಿಡಿ. ಮತ್ಯಾವುದಾದರೂ ಹಲ್ಲು ಹುಳುಕಾಗಿದೆಯೇ ? "

"ಇನ್ನೂ ಐದಾರುಹಲ್ಲು ಹಾಳಾಗಿವೆ. ಈಗಲೇ ಚಿಕಿತ್ಸೆಮಾಡಿದರೆ ಮುಂದೆ ತೊಂದರೆಯಾಗದು "

"ಏನು ? ಐದಾರೆ ?" ಆತ ಹೌಹಾರಿದ .

"ಹೌದು. ಹುಡುಕಿದರೆ ಇನ್ನೂ ಒಂದೆರಡು ಸಿಕ್ಕಾವು "

"ಎಲ್ಲಾ ಸರಿಮಾಡಿಬಿಡಿ ಡಾಕ್ಟ್ರೇ . ಅದೇನೇನು ಮಾಡಬೇಕೋ ಮಾಡಿಬಿಡಿ "

"ಒಂದು ದಿನದಲ್ಲಿ ಆಗುವ ಕೆಲಸವಲ್ಲ, ಸುಮಾರುಬಾರಿ ಬರಬೇಕಾಗಬಹುದು "

"ಸರಿ ಬರುತ್ತೇನೆ ಬಿಡಿ. ನನಗೆ ಈಗಲೇ ಎಲ್ಲಕ್ಕೂ ಅಪ್ಪಾಯಿಂಟ್ಮೆಂಟ್ ಕೊಟ್ಟುಬಿಡಿ. ಎಲ್ಲಾ ಸರಿಯಾಗಿಬಿಡಲಿ."

"ಮತ್ತು ಫೀ ಸಹ ಸಾಕಷ್ಟಾಗಬಹುದು "

"ಅಂದರೆ "

"ಬಹುಶಃ ಹತ್ತು ಹದಿನೈದು ಸಾವಿರ "

"ಹಣ ಎಷ್ಟಾದರೂ ಚಿಂತೆಯಿಲ್ಲ . ಎಲ್ಲ ಸರಿಯಾದರೆ ಸಾಕು . ಮತ್ತೊಮ್ಮೆ ಈ ತೊಂದರೆ ಬೇಡ."

"ಆಯಿತು. ಇಂದಿನ ಕೆಲಸಮುಗಿಯಲಿ"

"ಮತ್ತೆ ಉಳಿದಹಲ್ಲುಗಳನ್ನೆಲ್ಲಾ ಒಮ್ಮೆ ಕ್ಲೀನ್ ಮಾಡಿಬಿಡಿ ಡಾಕ್ಟ್ರೇ. ಅದಕ್ಕೂ ಅಪಾಯಿಂಟ್ಮೆಂಟ್ ಕೊಟ್ಬಿಡಿ "

"ಆಯಿತು"

"ಹಾಗೆ ಈ ಎರಡುಹಲ್ಲು ಕಿತ್ತಿದ್ದು ಖಾಲಿ ಜಾಗ ಇದೆಯಲ್ಲಾ ಅಲ್ಲಿ ಹಲ್ಲು ಕಟ್ಟಲಾಗುತ್ತದೆಯೇ  ?"

"ಆಗುತ್ತೆ"

"ಹಾಗಿದ್ದರೆ ಅದನ್ನೂ ಮಾಡಿಬಿಡಿ "

ನನಗೆ ಈ ಮಾತುಕತೆ ಹೊಸದೇನಲ್ಲ. ಹತ್ತರಲ್ಲಿ ಎಂಟುಜನ ಒಮ್ಮೆ ಹಲ್ಲುನೋವಿನ ಚಿಕಿತ್ಸೆಗೆಂದು ಬಂದವರು ಮತ್ತೆಲ್ಲವನ್ನೂ ಸರಿಮಾಡಿಸಿಕೊಳ್ಳುವ ಇರಾದೆ ತೋರಿಸುತ್ತಾರೆ. ಹಲ್ಲು ನೋವಿನ ಭಾದೆ ಕಡಿಮೆಯೇನಲ್ಲ. ಮತ್ತೊಮ್ಮೆ ಬೇಡವೆನ್ನಿಸುವುದು  ಸಹಜವೇ.

ನಾನು ಚಿಕಿತ್ಸೆ ಮುಗಿಸಿದೆ. ಆತ ಮೇಲೆದ್ದ .

"ಈಗಲೇ ಉಳಿದ ಎಲ್ಲಾ ಚಿಕಿತ್ಸೆಗೂ ಅಪ್ಪಾಯಿಂಟ್ಮೆಂಟ್  ಕೊಟ್ಬಿಡಿ ಡಾಕ್ಟ್ರೇ "

"ಸರಿ ನಾಡಿದ್ದು ಸಂಜೆ ಐದಕ್ಕೆ ಬನ್ನಿ . ಉಳಿದ ಕೆಲಸ ಶುರುಮಾಡೋಣ "

ಈ ಮಾತುಕತೆಯಾಗಿ ಆರುತಿಂಗಳಾಯಿತು. ಮನುಷ್ಯ ಪತ್ತೆಯಿಲ್ಲ. ಇನ್ನೆರಡು ವರ್ಷದನಂತರ ಮತ್ತೊಂದು ಹಲ್ಲು ಬಾಧೆಯಾದಾಗ ಬಂದೇಬರುತ್ತಾನೆ ಆತ. ಮತ್ತೆ ಇದೇ ಸಂಭಾಷಣೆ. ಮೊದಲೇ ಹೇಳಿದಂತೆ ನನಗೆ ಇದು ಹೊಸದಲ್ಲ. ನಾನು ಈ ಕೆಲಸ ಶುರುಮಾಡಿ ನಲವತ್ತು ವರುಷ ಆಗುತ್ತಾ ಬಂತು. ಈ ಮಾತುಕತೆ ನೂರಾರು ಜನರೊಡನೆ ಆಗಿದೆ. ಅದು ನಮ್ಮ ಡೆಂಟಲ್ ಛೇರಿನ ಪ್ರಭಾವ !"

ಸ್ಮಶಾನದಲ್ಲಿ ಸಂಭಂದಿಯೋ ಸ್ನೇಹಿತನದೋ ದಹನಕ್ಕೆಂದು ಹೋದ ಮನುಷ್ಯನಿಗೆ ಜೀವದ ಅಂತ್ಯ ಕಂಡಂತೆ  "ಈ ಜೀವನ  ಇಷ್ಟೆಯೇ " ಅನಿಸುತ್ತದಂತೆ.  ತನ್ನ  ಅಹಂ, ಆಸೆ, ಕಾಮ, ಕ್ರೋಧಗಳನ್ನೆಲಾ ತೊರೆದು, ಅಷ್ಟೇ ಏಕೆ, ಈ ಜೀವನ ದಿಂದಲೇ ಮುಕ್ತನಾಗಬೇಕೆಂಬ ವೈರಾಗ್ಯ ಕಾಣಿಸಿಕೊಳ್ಳುತ್ತದಂತೆ. ಅದಕ್ಕೆ "ಸ್ಮಶಾನ ವೈರಾಗ್ಯ "ವೆನ್ನುತ್ತಾರಂತೆ. ಮರಣ ಕಾರ್ಯ ಮುಗಿಸಿ ಹೊರಕ್ಕೆ ಬಂದಂತೆ ವೈರಾಗ್ಯ ತಲೆಯಿಂದ ಹೊರಹೊಕ್ಕು ಎಲ್ಲ ಮನುಷ್ಯಗುಣಗಳು (ಅವಗುಣಗಳು) ಮತ್ತೆ ತುಂಬಿಕೊಳ್ಳುತ್ತವಂತೆ. ನಾಯಿಬಾಲ ಡೊಂಕೇ!

ಹಲ್ಲುಗಳನ್ನೆಲ್ಲಾ ಒಮ್ಮೆ ಸರಿಪಡಿಸಿಕೊಂಡುಬಿಡಬೇಕೆಂಬ ಆಶಯ  ಸ್ಮಶಾನ ವೈರಾಗ್ಯದಂತೆಯೇ  !





No comments: