Friday, May 22, 2026

‘ಡೊಂಕುಬಾಲದ ನಾಯಕರೇ’

 ದಿನದಲ್ಲಿ ಹೆಚ್ಚುಕಾಲ ಭಗವಂತನ ಹಿರಿಮೆಯನ್ನು ಸಾರುತ್ತಾ ಬೀದಿ

ಬೀದಿಗಳಲ್ಲಿ ನಡೆದಾಡುತ್ತಿದ್ದ ದಾಸರು ಪ್ರತಿದಿನ ನೂರಾರು ಬೀದಿ

ನಾಯಿಗಳನ್ನು ಕಾಣುತ್ತಿದ್ದಿರಬಹುದು. ಆ ನಾಯಿಗಳನ್ನು ಕಂಡಾಗ

ಅವರ ಮನದಲ್ಲಿ ಮೂಡಿದ ವಿಚಾರಗಳನ್ನು ಅವರು ತಮ್ಮ ರಚನೆಗಳಿಗೆ

ಬಳಸಿಕೊಂಡರು. ಈ ಹಿಂದೆ ನಾವು ‘ಕುರುಡುನಾಯಿ ತಾ ಸಂತೆಗೆ

ಬಂತಂತೆ’ ಗೀತೆಯನ್ನು ಕೇಳಿದೆವು. ಇಂದು ಕೇಳೋಣ ನಾಯಿಯನ್ನು

ವಸ್ತುವಾಗಿರಿಸಿಕೊಂಡ, ಆದರೆ ಶ್ವಾನ ಸ್ವಭಾವದ ಮಾನವರನ್ನುದ್ದೇಶಿಸಿದ

ಮತ್ತೊಂದು ರಚನೆ ‘ಡೊಂಕು ಬಾಲದ ನಾಯಕರೇ ನೀವೇನೂಟವ

ಮಾಡಿದಿರಿ ?’  ಮಿಶ್ರಕಾಪಿ ರಾಗ, ಆದಿ ತಾಳ. ಗೀತೆಯ ಸಾಹಿತ್ಯ

ಡಿಸ್ಕ್ರಿಪ್ಷನ್ ವಿಭಾಗದಲ್ಲಿ ಲಭ್ಯವಿದೆ. ಈ ವಿವರಣೆಯನ್ನು ಬರೆದಿರಿಸಿರುವ

ನನ್ನ ಬ್ಲಾಗ್ ನ ವಿಳಾಸ ಸಹ ಅಲ್ಲಿಯೇ ಲಭ್ಯವಿದೆ.



‘ಡೊಂಕುಬಾಲದ ನಾಯಕರೇ’ ಎಂದು ನಾಯಿಗಳ

ಹೆಸರುಹೇಳಿ ಡೊಂಕುಸ್ವಭಾವದ ನಮ್ಮನ್ನು ಉದ್ದೇಶಿಸಿದರು

ಪುರಂದರ ದಾಸರು. ಮನುಷ್ಯ ಸ್ವಭಾವ ಸಹಜವಾಗಿಯೇ 

ಡೊಂಕು ಅಥವಾ ಸೊಟ್ಟ. ಹಾಗೆಂದು ಅದು ಸದಾ

ಡೊಂಕೇ ಅಲ್ಲ. ಒಮ್ಮೊಮ್ಮೆ ಮಾನವ ಬಹಳ ಪ್ರಯಾಸಪಟ್ಟು

ಸೊಟ್ಟಗಿರುವ ಸ್ವಭಾವವನ್ನು  ಕಟ್ಟಿ ನೆಟ್ಟಗಾಗಿಸುವ ಪ್ರಯತ್ನ

ಮಾಡುತ್ತಾನೆ. ಆದರೆ ‘ನಾಯಿಯ ಬಾಲಕ್ಕೆ ದೆಬ್ಬೆ ಕಟ್ಟಿದಂತೆ’

ಎಂಬ ಗಾದೆಯಂತೆ ಕಟ್ಟು ಬಿಚ್ಚಿದಾಕ್ಷಣ ಮತ್ತೆ ಸ್ವಭಾವ ಡೊಂಕಾಗಿಬಿಡುತ್ತದೆ. ಆದ್ದರಿಂದಲೇ ದಾಸರು ನಮ್ಮನ್ನು

ಡೊಂಕುಬಾಲದ ನಾಯಕರೇ ಎಂದು ಕರೆದರು.

‘ನೀವೇನೂಟವ ಮಾಡಿದಿರಿ?’ ಎಂದು ಕೇಳಿದರು.

‘ನೀವೇನೂಟವ ಮಾಡಿದಿರಿ’ ಎಂದು ಅವರು ಕೇಳಿದ್ದು

ಅನ್ನವೋ, ಹುಳಿಯೋ ರೊಟ್ಟಿಯೋ ಪಲ್ಯವೋ ಏನು

ತಿಂದಿರಿ ಎಂದಲ್ಲ. ಅವರು ಕೇಳಿದ ಊಟ, ನಮ್ಮ ಕರ್ಮಗಳ 

ಫಲ. ನಿಮ್ಮ ಹಿಂದಿನ ಅನೇಕ ಜನ್ಮಗಳಲ್ಲಿ ಮಾಡಿದ

ಕರ್ಮಗಳ ಫಲವನ್ನು ಈ ಜನ್ಮದಲ್ಲಿ  ಉಣ್ಣುವುದು ಉಂಟಲ್ಲ,

‘ಅದೇನನ್ನು ಉಣ್ಣುತ್ತಿದ್ದೀರಿ’ ಎಂದು ಕೇಳಿದರು.  


ಮುಂದಿನ ಚರಣಗಳಲ್ಲಿ ಬರುವ ಕಣಕ ಕುಟ್ಟುವುದು ಮತ್ತು ಹುಗ್ಗಿ ಬೇಯಿಸುವುದು ನಮ್ಮ ಕರ್ಮಗಳ ಫಲವನ್ನು ನಾವು ಅನುಭವಿಸುವುದಕ್ಕೆ ದಾಸರು ಕೊಟ್ಟಂಥ ರೂಪಕಗಳು. ಬೆಂದದ್ದು, ಬಡಿತ ತಿಂದದ್ದು ಎಲ್ಲವೂ ನಮಗೆ ದಕ್ಕಿದಫಲ. ವಿಧಿ ಕೊಟ್ಟಂಥ ಪೆಟ್ಟುಗಳು. ನಾವು ಈ ಹಿಂದೆ ‘ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ’ ಪದದ ಕೊನೆಯಲ್ಲಿ ‘ಟೊಣಪೆಗಳು’ ಎಂದವಲ್ಲಾ ಅದು. ನಮ್ಮ ಕರ್ಮದ ಫಲವಾಗಿ ಬಿದ್ದ ಪೆಟ್ಟುಗಳನ್ನು ‘ಮಾಡಿದ್ದುಣ್ಣೋ ಮಹರಾಯ’ ಎಂದು ಸುಮ್ಮನೆ ಸಹಿಸಿಕೊಳ್ಳದೆ ಅದರ ಬಗ್ಗೆ ರಾಗ ತೆಗೆಯುತ್ತೇವಲ್ಲಾ, ಅದನ್ನು ತಿಳಿಸುವುದಕ್ಕಾಗಿ ಒನಕೆಲಿ ಬಡಿದರೆ  ‘ಕುಯ್ ಕುಯ್ ರಾಗವ ಮಾಡಿದಿರಿ’ ಎಂದು ಮೂದಲಿಸಿದರು ದಾಸರು.  


ಕೊನೆಯ ಚರಣದಲ್ಲಿ ಬರುವ ‘ಹಿರೇಬೀದಿಯಲಿ ಓಡುವಿರಿ - ಕರೇಬೂದಿಯಲಿ ಹೊರಳುವಿರಿ’ ಎಂಬ ಸಾಲು ಬಹಳ ಅರ್ಥಪೂರ್ಣವಾದದ್ದು. ಹಿರೇಬೀದಿ ಎನ್ನುವುದು ರಾಜಬೀದಿ, ಹೈವೇ ಎನ್ನುತ್ತೇವಲ್ಲಾ ಅದು. ಪರಮಾತ್ಮನ ಕಡೆಗೆ ಸಾಗುವ, ‘ಸತ್ ಚಿಂತನೆ’ ಮತ್ತು ‘ಸತ್ ಸ್ವಭಾವ’ ಎಂಬ ಸತ್ವಗುಣ ಪರಿಪೂರ್ಣವಾದ ರಾಜಬೀದಿ. ಯಾವುದೋ ಪೂರ್ವಜನ್ಮ ಸುಕೃತದಿಂದಲೋ ಸಜ್ಜನರ ಸಂಪರ್ಕದಿಂದಲೋ, ಸ್ವಭಾವ ಬದಲಾವಣೆಯಾಗಿ ಕೊಂಚಕಾಲ ಆ ದಾರಿಯಲ್ಲಿ ಸಾಗಿದೆವು. ಆದರೆ ಸ್ವಲ್ಪಸಮಯದಲ್ಲೇ ಮತ್ತೆ ಹಿಂತಿರುಗಿ ‘ಕರೇ ಬೂದಿಯಲಿ ಹೊರಳಿದೆವು’ . ಕರಿಯಬಣ್ಣ ತಮಸ್ಸಿನ ಪ್ರತೀಕ. ‘ಕರೇಬೂದಿಯಲಿ ಹೊರಳುವಿರಿ’ ಎಂದರೆ ಮತ್ತೆ ಸ್ವಭಾವ ತಮಸ್ಸಿಗೆ ತಿರುಗಿ ಅದರಲ್ಲೇ ಉಳಿಯಿತು ಎಂದು. ಮನುಷ್ಯ ಜನ್ಮದ ಚಂಚಲತೆಯನ್ನು ತೋರುವ ಸಾಲು ಇದು. ಜೀವನದಲ್ಲಿ ಕೊಂಚ ಸಮಯ ಸತ್ ಸ್ವಭಾವ ಕಂಡಿತು ಆದರೆ ಕೊಂಚಕಾಲದಲ್ಲೇ ಮತ್ತೆ ಸ್ವಭಾವ ತಮಸ್ಸಿಗೆ ತಿರುಗಿತು. ಇದು ನಮ್ಮ ಪರಿಸ್ಥಿತಿ. ಎಷ್ಟಾದರೂ ಡೊಂಕು ಬಾಲ ಅಲ್ಲವೇ ? 


ಅದಕ್ಕೆ ಪರಿಹಾರವೇನೆಂದರೆ ಮನಸ್ಸನ್ನು ಪುರಂದರ ವಿಠಲನಲ್ಲಿ ನೆಲೆಯಾಗಿಸುವುದು. ಅದು ಸುಲಭಸಾಧ್ಯವಲ್ಲ. ಹಾಗಾಗಿ ಮನಸ್ಸು ಪುರಂದರವಿಠಲನಲ್ಲಿ ನೆಲೆಯಾಗುವವರೆಗೂ ಹಿರೇಬೀದಿ, ಕರಿಬೂದಿಯೇ ನಿಮ್ಮಗತಿ ಎನ್ನುವುದನ್ನು ಕೊನೆಯ ಚರಣದಲ್ಲಿ ‘ಪುರಂದರ ವಿಟ್ಟಲ ರಾಯನ ಈ ಪರಿ ಮರೆತು ಸದಾ ನೀವು ಚಲಿಸುವಿರಿ’ ಎಂದು ಹಾಡುತ್ತಾ ದಾಸರು ಮುಂದಿನ ಬೀದಿ ಹಿಡಿದು ನಡೆದರೆಂದು ಎಂದುತಿಳಿಸಿ ಇಂದಿನ ನನ್ನ ಮಾತು ಕೃಷ್ಣಾರ್ಪಣವಾಗಲಿ ಎನ್ನುತ್ತೇನೆ.


ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ             

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ                 

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ                 

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರವಿಠ್ಠಲರಾಯನ ಈ ಪರಿ
ಮರೆತು ಸದಾ ನೀವು ಚರಿಸುವಿರಿ        


No comments: