ಪ್ರತಿದಿನವೂ ಹರಿನಾಮ ಸಂಕೀರ್ತನೆ ಮಾಡುತ್ತಾ ಶ್ರೀ ಹರಿಯ ಹಿರಿಮೆಯನ್ನು ಬಣ್ಣಿಸುತ್ತಾ, ನೀತಿ ಪಾಠ ಹೇಳುತ್ತಾ ಊರು ಸುತ್ತುತ್ತಿದ್ದ ಪುರಂದರದಾಸರಿಗೆ, ಜನರ ಗಮನವನ್ನು ತಮ್ಮ ಕಡೆ ಸೆಳೆದಿಡುವ ಸಲುವಾಗಿ ಹೊಸ ಹೊಸ ರೀತಿಯ ಉಪಾಯಗಳನ್ನು ಹೊಂಚುವ ಅಗತ್ಯವಿತ್ತು. ತಮ್ಮ ಗೀತೆಗಳ ಧಾಟಿ, ಪದಗಳ ಬಳಕೆಗಳಲ್ಲಿ ಬದಲಾವಣೆ ಗಳನ್ನು ಮಾಡುತ್ತಾ ಅವರು ಕೇಳುವವರ ಗಮನವನ್ನು ಆಕರ್ಷಿಸಿದರು. ಆ ನಿಟ್ಟಿನಲ್ಲಿ, ಮೊದಲನೋಟಕ್ಕೆ ಅಸಂಭದ್ದವೆನಿಸಿದರೂ, ಒಳಗಿನ ಅರ್ಥಕಂಡಾಗ ‘ಹೌದಲ್ಲವೇ’ ಎನಿಸುವಂಥ ರಚನೆಗಳ ಬಳಕೆ ಅವರ ಒಂದು ಪ್ರಯತ್ನ.
ಗೀತೆಯ ಪಲ್ಲವಿ ನೋಡಿ. “ಸುಳ್ಳು ನಮ್ಮಲಿಲ್ಲವಯ್ಯಾ ಸುಳ್ಳೆನಮ್ಮನಿದೇವರು”. ನಾವು ಸುಳ್ಳರಲ್ಲ, ಸುಳ್ಳನ್ನು ದೇವರೆಂದು ಪೂಜಿಸುವವರು. ಇದು ಮೇಲ್ನೋಟದ ಅರ್ಥ. ಇಂಥ ಪದಜೋಡಣೆಯೇ ದಾಸರ ತಂತ್ರ. ಜನರು ತಮ್ಮ ಮುಂದಿನ ಮಾತಿಗೆ ಆಸಕ್ತಿಯಿಂದ ಕಿವಿಗೊಡುವಂತೆ ಮಾಡುವ ಯತ್ನ. ‘ಸುಳ್ಳು ನಮ್ಮಲಿಲ್ಲವಯ್ಯಾ’ ಎಂಬ ವಾಕ್ಯಕ್ಕೆ ‘ಜಗತ್ ಸತ್ಯ’ ಅಥವಾ ‘ಪರಮಾತ್ಮನ ಸೃಷ್ಟಿ ಸುಳ್ಳಲ್ಲ’ ಎಂಬ ಮಧ್ವಮತಪರವಾದ ಅರ್ಥವನ್ನು ತಿಳಿದವರು ಕೊಟ್ಟಿದ್ದಾರೆ. ಮುಂದೆ ‘ಸುಳ್ಳೇ ನಮ್ಮನಿ ದೇವರು’. ಇದರ ಅರ್ಥ, ಹೇಳುವ ರೀತಿಯನ್ನು ಅನುಸರಿಸುತ್ತದೆ. ಪರಮಾತ್ಮನ ಇರುವಿಕೆಯ ಅರಿವು ನಮಗೆ ಆಗುವ ವರೆಗೂ ನಮ್ಮ ಪಾಲಿಗೆ ಅವನಿಲ್ಲ. ಸುಳ್ಳೆ. ನಮ್ಮನಿ ದೇವರು. ಆದರೆ ಜ್ಞಾನಪ್ರಾಪ್ತಿಯಾಗಿ ಅವನ ಇರುವಿನ ಅರಿವು ನಮಗಾದರೆ ಅವನು ಸದಾ ನಮ್ಮೊಡನೆಯೇ ಇರುವವ. ಸುಳ್ಳೇ ? ನಮ್ಮನಿ ದೇವರು? ಎಲ್ಲಾದರೂ ಉಂಟೇ ಎನ್ನುವ ಧಾಟಿ. ಆದ್ದರಿಂದ ಅವನು ಇರುವುದೂ ಹೌದು, ಇಲ್ಲವೂ ಹೌದು. ಸತ್ ಎನ್ನುವುದು ಅವನ ನಾಮ, ಅಸತ್ ಎನ್ನುವುದೂ ಅವನ ನಾಮವೇ.
ಮೊದಲ ಚರಣ ‘ಇಲಿಯು ಒಲೆಯ ಹಚ್ಚೊೋದ ಕಂಡೆ ಎಂದು ಪ್ರಾರಂಭವಾಗುತ್ತದೆ . ಮನಸ್ಸು ಅಥವಾ ವಿಷಯಾಸಕ್ತಿಯನ್ನು ಇಲ್ಲಿ ಇಲಿ ಎಂದರು. ಆ ವಿಷಯಾಸಕ್ತಿ ಎಂಬ ಇಲಿ ನಮ್ಮ ಜ್ಞಾನೇಂದ್ರಿಯಗಳು ಎಂಬ ಒಲೆಗೆ ಬೆಂಕಿಯಿಟ್ಟಿತು ಅಂದರೆ ಆ ಇಂದ್ರಿಯಗಳು ವಿಷಯಗಳ ಕಡೆಗೆ ಸೆಳೆಯಲ್ಪಟ್ಟವು. ಮುಂದೆ ‘ಬೆಕ್ಕು ಭಕ್ಕರಿ ಮಾಡೋದ’ ಕಂಡೆ. ಎಂದರೆ ‘ಬುದ್ಧಿ’ಯೆಂಬ ಬೆಕ್ಕು ವಿಷಯಗಳಿಂದ ಆದ ಪ್ರಚೋದನೆಗೆ ಅನುಗುಣವಾಗಿ ಕರ್ಮೇಂದ್ರಿಯಗಳನ್ನು ಪ್ರೇರೇಪಿಸಿ ಕಾರ್ಯನಿರತಗೊಳಿಸಿತು. ಅದನ್ನು, ‘ಭಕ್ಕರಿ ಮಾಡೋದು’ ಎಂದರು.
ಹಾಗೆಯೇ, ಮುಂದಿನ ಚರಣ ‘ಕಪ್ಪೆ ಪಾತರ ಕುಣಿಯೋದ ಕಂಡೆ’ ಎನ್ನುತ್ತದೆ. ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಕುಪ್ಪಳಿಸುತ್ತಾ ಇರುವ ಮನವನ್ನು ಕಪ್ಪೆ ಎಂದರು. ಮನಸ್ಸು ಒಂದು ವಿಷಯದಿಂದ ಮತ್ತೊಂದಕ್ಕೆ ಕುಪ್ಪಳಿಸುತ್ತಾ ನೃತ್ಯ ಮಾಡಿತು. ಮುಂದೆ, ‘ಏಡಿ ಮದ್ದಳೆ ಬಾರ್ಸೊದ ಕಂಡೆ’. ಏಡಿಗೆ ಎಂಟುಕಾಲು, ಮತ್ತೆ ಕಾಲಿನಂತೆಯೇ ಕಾಣುವ ಎರಡು ಕೊಂಡಿಗಳು. ಹತ್ತು ಅಂಗಗಳು. ಆದ್ದರಿಂದ ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳನ್ನು ಒಟ್ಟು ಸೇರಿಸಿ ಹತ್ತು ಅಂಗಗಳ ಗುಂಪನ್ನು ಏಡಿ ಎಂದರು. ಈ ಇಂದ್ರಿಯಗಳ ಗುಂಪೆಂಬ ಏಡಿ ‘ಮದ್ದಲೆ ಬಾರಿಸಿತು’ ಎಂದರೆ ಕಪ್ಪೆಯ ಅಥವಾ ಮನಸ್ಸಿನ ಕುಣಿತಕ್ಕೆ ಪ್ರತಿಕ್ರಿಯಿಸಿತು.
ಹೀಗೆ ವಿಷಯಾಸಕ್ತಿಯನ್ನು ಅನುಸರಿಸುತ್ತಾ ಮನಸ್ಸಿನ ಎಗರಾಟ, ಅಂಗಗಳ ಕುಣಿದಾಟದಿಂದ ಬಂದ ಕೆಟ್ಟ ಫಲ ಒನಕೆ ಗಾತ್ರದ ಮೆಣಸಿನಕಾಯಿ ಮತ್ತು ತೆಕ್ಕೆ ಗಾತ್ರದ ಮೆಕ್ಕೆ ಕಾಯಿ. ಒಂದು ಖಾರ, ಒಂದು ಕಹಿ. ವಿಷಯಾಸಕ್ತಿಯನ್ನೇ ಅನುಸರಿಸಿ ಅದಕ್ಕನುಗುಣವಾಗಿ ನಡೆದರೆ, ಸಿಕ್ಕುವುದು ಇಂಥದೇ ಫಲವೆಂಬುದು ಒಟ್ಟು ಎರಡು ಚರಣಗಳ ಭಾವ. ಇದನ್ನು ದಾಸರು ಇನ್ನೂ ಕೆಲವು ರಚನೆಗಳಲ್ಲಿಯೂ ಹೇಳಿದ್ದಾರೆ.
ಕೊನೆಯ ಚರಣ ‘ಅರಿಶಿನ ಬಿತ್ತೋದು ಕಂಡೆ, ಗಸಗಸೆ ಎಣಿಸೋದ ಕಂಡೆ’. ಅರಿ ಎಂದರೆ ಶತ್ರುಗಳು. ಶಿನ ಎಂದರೆ ಹೊಂದಾಣಿಕೆ. ಅರಿಶಿನ ಬಿತ್ತೋದು ಎಂದರೆ ಮೇಲೆ ಸೂಚಿಸಿರುವ ಕಾಮ ಕ್ರೋಧ ಮೋಹ ಮುಂತಾದ ಶತೃಗಳೊಡನೆಯೇ ಸಂಭಂದ ಬೆಳಸಿ ಬಾಳುವುದು. ಹೀಗೆ ಬಾಳುತ್ತಿದ್ದಾಗ ನಮಗೆ ತಿಳಿಯದಂತೆ ಯಾರೋ ಒಬ್ಬ ‘ಗಸಗಸೆ ಎಣಿಸುತ್ತಿದ್ದ’. ನಮ್ಮ ಜೀವನಕಾಲದ ಸಣ್ಣಸಣ್ಣ ತುಣುಕುಗಳನ್ನು, ಕ್ಷಣಕ್ಷಣಗಳನ್ನು, ಸಣ್ಣ ಸಣ್ಣ ಗಸಗಸೆಕಾಳಿಗೆ ಹೋಲಿಸಿದರು. ಎಣಿಸುತ್ತಿದ್ದದ್ದು ಯಾರು ? ನಾವು ಮಾಡುವುದನ್ನೆಲ್ಲಾ ನೋಡುತ್ತಿದ್ದ ಕಾಲರಾಯ, ನಮ್ಮನ್ನು ಎಳೆದೊಯ್ಯುವ ಕಾಲಕ್ಕಾಗಿ ಕಾದು ಅವ ಕ್ಷಣ ಕ್ಷಣ ಎಣಿಸುತ್ತಿದ್ದ. ಅದರ ಅರಿವಾದಾಗ ಕೊನೆಗಾಲ ಬಂತೆಂದು ಬೆದರಿದ ಜೀವ ಪರಮಾತ್ಮನ ಪಾದದೆಡೆಗೆ ತಿರುಗಿತು. ಆಗ ಕಂಡದ್ದು - ‘ಪುರಂದರ ವಿಠಲನ ಪಾದವ ಕಂಡೆ, ಪರ್ವತ ಗಡತರ !’ ಇದಕ್ಕೆ, ಒನಕೆಗಾತ್ರ, ತೆಕ್ಕೆ ಗಾತ್ರದ ಫಲಗಳೆಲ್ಲವನ್ನೂ ಮೀರಿ ಮೇಲಕ್ಕೊಯ್ಯುವ ಪರ್ವತ ಗಾತ್ರದ ಪಾದಗಳು ಎಂಬುದು ಒಂದು ಅರ್ಥವಾದರೆ, ನಮ್ಮ ಕೈಗೆ ಎಟುಕದ ಪರ್ವತಗಾತ್ರದ ಪಾದಗಳು ಎಂದು ಮತ್ತೊಂದು ಅರ್ಥ. ಆದ್ದರಿಂದ, ಮನಸ್ಸು, ಇಂದ್ರಿಯಗಳನ್ನು ಬೇಕುಬೇಕಾದಂತೆ ಕುಣಿದಾಡಲು ಬಿಡದೆ, ನಮ್ಮ ಹಿಡಿತದಲ್ಲಿರಿಸಿಕೊಂಡಿದ್ದು, ಜೀವಿತದ ಕೊನೆಯಕ್ಷಣ ಬರುವ ಮೊದಲೇ ಪುರಂದರವಿಠಲನ ಪಾದವೆಂಬ ಪರ್ವತವನ್ನು ಏರುವ ಪ್ರಯತ್ನವಾಗಲಿ ಎಂಬ ಬುದ್ಧಿವಾದದೊಂದಿಗೆ ದಾಸರು ಗೀತೆಯನ್ನು ಕೊನೆಯಾಗಿಸಿದರೆಂದು ತಿಳಿಸಿ, ಕೃಷ್ಣಾರ್ಪಣ ಎನ್ನುತ್ತೇನೆ.
No comments:
Post a Comment