ಲಿಂಗ ಭಂಗವಿಲ್ಲದೆ ಮುಕ್ತಿಯಿಲ್ಲ
ರಂಗನಿಲ್ಲದಿರೆ ಲಿಂಗ ಭಂಗವಿಲ್ಲ,
ಮಂಗ ಕೈಪಿಡಿಯದಿರೆ ರಂಗನಿಲ್ಲ
ಬರಿಯ ಭಂಗವೇ ಬದುಕು
ಸ್ವಾಂಗ ಅಂಗ ಸಂಗ ವಿರುವಾಗ
ಕೊಂಗು ಮಾಡದೆ ಮಂಗನ ಭಜಿಸಿ
ಒಳಕಂಗಳಿಂದ ಕಂಡುಕೊಳ್ಳುವುದು
ಅಂತರಂಗದಲಿ ಬಿಂಬರೂಪಿಯನು.
(ನಮ್ಮ ಈ ಪ್ರಾಕೃತ ದೇಹದೊಂದಿಗೆ ‘ಲಿಂಗದೇಹ’ ಎಂಬ, ನಮ್ಮ
ತಿಳುವಳಿಕೆಗೆ ಎಟುಕದ ದೇಹ ಒಂದಿದೆ ಎಂಬುದು ನಮ್ಮ ನಂಬಿಕೆ.
ಸಾವಿರಾರು ಜನ್ಮಗಳಲ್ಲಿ ಸಾವಿರಾರು ದೇಹಗಳ ಬದಲಾವಣೆ ಆದರೂ
ಸಹ ಆತ್ಮದೊಂದಿಗೆ ಇರುವ ಲಿಂಗದೇಹಮಾತ್ರ ನಾಶವಾಗದೆ
ಉಳಿದಿರುತ್ತದೆ ಎಂದು ಅಭಿಪ್ರಾಯ. ಜೀವನು ಮುಕ್ತಿಯೋಗ್ಯನಾದಾಗ
ಪರಮಾತ್ಮನು ಲಿಂಗದೇಹವನ್ನು ನಾಶಮಾಡಿ ಆತ್ಮವನ್ನು
ಮುಕ್ತಿಗೊಳಿಸುತ್ತಾನೆ. ಆ ಕಾರ್ಯ ಶ್ರೀಹರಿಯಿಂದ ಮಾತ್ರ ಸಾಧ್ಯ
ಎಂಬುದು ಮಧ್ವಮತದ ಪ್ರತಿಪಾದನೆ. ಹಾಗಾಗಿ ಲಿಂಗಭಂಗವಾಗದೆ
ಮುಕ್ತಿಯಿಲ್ಲ, ರಂಗನಿಲ್ಲದೆ ಲಿಂಗ ಭಂಗವಿಲ್ಲ.
ಶ್ರೀಹರಿಯ ಕೃಪೆ ನಮಗೆ ಬೇಕಾದರೆ ನಾವು ಮುಖ್ಯಪ್ರಾಣದೇವರ
ಕೈಹಿಡಿದೇ ಅವನತ್ತ ಸಾಗಬೇಕೆಂಬುದು ಮತ್ತೊಂದು ನಂಬಿಕೆ. ಹನುಮ,
ಭೀಮ, ಮಧ್ವ ಮೂರೂ ಮುಖ್ಯಪ್ರಾಣದೇವರ ಅವತಾರಗಳು.
ಆದ್ದರಿಂದ ಮಂಗಕೈಪಿಡಿಯದಿದ್ದರೆ ರಂಗನಿಲ್ಲ. ಬದುಕಿಗೆ
ಬೆಲೆಯಿಲ್ಲದೆ ಭಂಗವಾಯಿತು.
ಮಾನವಜನ್ಮ ದೊರಕಿ, ಅಂಗಾಂಗಗಳು, ಮನಸ್ಸು, ಬುದ್ಧಿ
ಕೆಲಸಮಾಡುತ್ತಿರುವಾಗ ತಲೆಹರಟೆ ಮಾಡುತ್ತಾ ಅತ್ತಿತ್ತ ಅಲೆಯುವುದು
ಬಿಟ್ಟು, ಹನುಮಂತನ ಆರಾಧನೆಮಾಡಿ, ಆ ಮೂಲಕ ಶ್ರೀಹರಿಯ
ಸಾಕ್ಷಾತ್ಕಾರ ಪಡೆದು ಕೃತಾರ್ಥರಾಗಿ ಎನ್ನುವುದು ಎರಡನೇ ಚರಣದ
ಅರ್ಥ. ‘ಬಿಂಬರೂಪ’ ಎನ್ನುವುದು ನಮ್ಮ ಹೃದಯದಲ್ಲೇ ಇರುವ,
ನಮ್ಮರೂಪವನ್ನೇ ಹೊಂದಿರುವ, ಶ್ರೀಹರಿಯ ಉಪಸ್ಥಿತಿ.)
No comments:
Post a Comment