ತಾವು ಸಂಪೂರ್ಣವಾಗಿ ನಂಬಿರುವ, ನಿರಂತರವಾಗಿ ಆರಾಧಿಸುವ, ಪರಮಾತ್ಮ ಎಂಬ ಪರವಸ್ತುವಿನ ಬಗ್ಗೆ ಸತತ ಚಿಂತನೆ ಮತ್ತು ಅದನ್ನು ಮತ್ತಷ್ಟು ಅರಿತುಕೊಳ್ಳುವ ಪ್ರಯತ್ನ, - ಇದು - ನಾವು ಜ್ಞಾನಿಗಳೆಂದು ಕರೆಯುವ ಎಲ್ಲರ ಅನೂಚಾನವಾದ ಕಾರ್ಯ. ಆ ಪರವಸ್ತುವಿನ ಬಗ್ಗೆ ಹೆಚ್ಚು ಚಿಂತಿಸಿದಷ್ಟೂ ಅದು ಮತ್ತಷ್ಟು ಚಿಂತನೆಗೆ ಎಡೆಮಾಡುತ್ತದೆ. ಕೊನೆಯಾಗದ ಚಿಂತನೆ. ಪ್ರಶ್ನೆಗಳ ಸರಪಳಿ. ಅಂಥ ಸಂಧರ್ಭಗಳಲ್ಲಿ ಮನಸ್ಸಿನಲ್ಲಿ ಮೂಡುವುದು ‘ನಾ ನಿನ್ನ ಅರಿಯಲಾರೆ ಸ್ವಾಮಿ’ ಎಂಬ ಶರಣಾಗತಿಯ ಭಾವ. ಆ ಭಾವನೆಯನ್ನು ಬಿಂಬಿಸುವ ಕನಕದಾಸರ ಕೃತಿಯೊಂದನ್ನು ಇಂದು ಪ್ರಸ್ತುತ ಪಡಿಸುತ್ತಿದ್ದೇವೆ. ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’.
ತತ್ವಶಾಸ್ತ್ರದಲ್ಲಿ ಮಾಯೆ ಎಂಬ ಪದಕ್ಕೆ ಜಗತ್ತು, ಪ್ರಕೃತಿ, ಸಂಸಾರ, ಪ್ರಕೃತಿಗೆ ಅಭಿಮಾನಿಯಾದ ಲಕ್ಷ್ಮೀದೇವಿ, ಅಜ್ಞಾನ ಮುಂತಾದ ಅನೇಕ ಅರ್ಥಗಳಿವೆ. ಮಾಯೆ ಈ ಜಗತ್ತಿನ ಸೃಷ್ಟಿಗೆ ಪರಮಾತ್ಮ ಉಪಯೋಗಿಸಿರುವ ಮೂಲ ವಸ್ತು. ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ತಾನು ಅಣುವಾಗಿ ಜಗತ್ತಿನ ಕಣಕಣದಲ್ಲಿ ತೂರಿರುವವನೂ ಹೌದು, ಬೃಹತ್ತಾಗಿ ಇಡೀ ಜಗತ್ತನ್ನು ಆವರಿಸಿರುವವನೂ ಹೌದು. ಹಾಗಾಗಿ ಕನಕದಾಸರ ಗೀತೆಯ ಪಲ್ಲವಿ ‘ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ’ ಎನ್ನುವುದು ಒಂದು ಪ್ರಶ್ನೆಯಂತೆ ಕಂಡರೂ ಅದು ಪ್ರಶ್ನೆಯಲ್ಲ, ಅದೊಂದು ಹೇಳಿಕೆ. ನಂತರದ ಸಾಲುಗಳು ಕೂಡ ಹಾಗೆಯೇ. ಪರಮಾತ್ಮ ದೇಹವನ್ನು ಒಳಗಿನಿಂದ ಧರಿಸಿ, ಹೊರಗಿನಿಂದ ಆವರಿಸಿದ್ದಾನೆ. ಆದ್ದರಿಂದಲೇ ದಾಸರು ಮುಂದೆ ‘ನೀ ದೇಹದೊಳಗೋ ನಿನ್ನೊಳು ದೇಹವೋ’ ಎಂದಿದ್ದಾರೆ.
ಇದೇ ಭಾವನೆಯನ್ನು ಮುಂದುವರಿಸುತ್ತ ಮುಂದಿನ ಚರಣಗಳಲ್ಲಿ, ನಾವು ನೋಡಿ, ಕೇಳಿ, ಅನುಭವಿಸಿರುವ ರೂಪಕಗಳ ಮೂಲಕ ದಾಸರು ನಮಗೆ ತಮ್ಮ ಚಿಂತನೆಯನ್ನು ವಿಶದಪಡಿಸುತ್ತಾರೆ. ‘ಬಯಲು ಆಲಯದೊಳಗೋ ಆಲಯವು ಬಯಲೊಳಗೋ’ ಸಾಲನ್ನು ನೋಡಿ. ಬಯಲು ಎನ್ನುವ ಶಬ್ದಕ್ಕೆ, ಭೂಮಿ ಮತ್ತು ಆಕಾಶ ಎಂಬ ಎರಡೂ ಅರ್ಥವಿದೆ. ಆಲಯ ಬಯಲೊಳಗೆ ಎಂದರೆ ಮನಸ್ಸಿನಲ್ಲಿ ಒಂದು ಸ್ಪಷ್ಟ ಚಿತ್ರ ತಕ್ಷಣ ಮೂಡುತ್ತದೆ. ಬಯಲು ಆಲಯದೊಳಗೆ ಎಂದರೆ ? ಈಗ ಬಯಲು ಎಂದರೆ ಆಕಾಶ ಅಥವಾ ಇಂಗ್ಲಿಷ್ ನಲ್ಲಿ ನಾವು ಕರೆಯುವ ಸ್ಪೇಸ್ ಎಂದು ಚಿಂತಿಸೋಣ. ಆ ಬಯಲು ಅಥವಾ ಸ್ಪೇಸ್ ಎನ್ನುವುದು ಆಲಯವನ್ನು ಆವರಿಸಿಕೊಂಡಿದೆ. ಅಷ್ಟೇ ಅಲ್ಲ, ಆಲಯದ ಒಳಗೆ ನಾವು ಖಾಲಿಜಾಗವೆಂದು ಕರೆಯುತ್ತೇವಲ್ಲ ಅಲ್ಲಿಯೂ ತುಂಬಿಕೊಂಡಿದೆ ಅಲ್ಲವೇ ? ಆದ್ದರಿಂದ ಬಯಲು ಆಲಯದೊಳಗೂ ಹೌದು, ಆಲಯ ಬಯಲೊಳಗೂ ಹೌದು. ಈ ಒಳಗೆ, ಹೊರಗೆ, ಆಲಯ, ಬಯಲು ಎಲ್ಲವೂ ಅವನ್ನು ಕಾಣುವ ಕಣ್ಣು ಎಂಬ ಇಂದ್ರಿಯ ಇದ್ದು ಆ ಇಂದ್ರಿಯಕ್ಕೆ ಅನುಭವಿಸುವ ಶಕ್ತಿ ಇದ್ದರೆ ತಾನೇ ? ಆದ್ದರಿಂದ ನಂತರದಲ್ಲಿ ದಾಸರು ‘ಬಯಲು ಆಲಯವೆರಡು ನಯನದೊಳಗೋ’ ? ಎಂದರು. ಮುಂದೆ ಮತ್ತಷ್ಟು ಗೊಂದಲ. ‘ನಯನ ಬುದ್ಧಿಯೊಳಗೋ, ಬುದ್ಧಿ ನಯನದೊಳಗೋ?’ ಬುದ್ಧಿ ನೋಡೆಂದುದನ್ನು ಕಣ್ಣು ನೋಡಿತೋ ? ಅಥವಾ ನಾವು ನೋಡುವ ರೀತಿಯಿಂದ, ನೋಡಿದ ವಸ್ತುವಿನಿಂದ, ಬುದ್ಧಿ ಪ್ರಚೋದಿತವಾಯಿತೋ ? ಏನೇ ಇರಲಿ, ಒಟ್ಟಿನಲ್ಲಿ ಬಯಲು, ಆಲಯ ಎರಡರಲ್ಲೂ ಇರುವವ ನೀನು, ಕಣ್ಣು ಎಂಬ ಇಂದ್ರಿಯ ಕೊಟ್ಟವನು ನೀನು, ಆ ಇಂದ್ರಿಯಕ್ಕೆ ಏನನ್ನಾದರೂ ಕಂಡು ಅನುಭವಿಸುವ ಶಕ್ತಿ ಕೊಟ್ಟವ ನೀನು, ಆ ಅನುಭವವನ್ನು ಆಸ್ವಾದಿಸುವ ಬುದ್ಧಿ ಕೊಟ್ಟವ ನೀನು. ಸ್ವಾಮೀ, ಎಲ್ಲವೂ ನಿನ್ನೊಳಗೆ ಎಂದು ‘ನಯನ ಬುದ್ಧಿಗಳೆರಡೂ ನಿನ್ನೊಳಗೋ’ ಎಂದುಬಿಟ್ಟರು ಕನಕದಾಸರು.
ಹೀಗೆಯೇ ಉಳಿದ ಚರಣಗಳ ವಿವರಣೆ ಸಹ. ಸವಿ ಸಕ್ಕರೆಯೊಳಗೋ ಸಕ್ಕರೆ ಸವಿಯೊಳಗೋ? ಎರಡೂ ನಾಲಗೆಯೊಳಗೋ ? ಕುಸುಮ ಗಂಧದೊಳಗೋ, ಗಂಧ ಕುಸುಮದೊಳಗೋ ಎರಡೂ ನಮಗಿರುವ ಘ್ರಾಣದ ಅಂದರೆ ವಾಸನೆಯನ್ನು ಅನುಭವಿಸುವ ಶಕ್ತಿಯೊಳಗೋ? ಇತ್ಯಾದಿ ಇತ್ಯಾದಿ ತಮ್ಮ ಚಿಂತನೆಯನ್ನು ಪ್ರಶ್ನೆಯ ರೂಪದಲ್ಲಿ ಪದ್ಯವಾಗಿ ರಚಿಸಿ ಕೇಳಿದವರನ್ನು ಸಹ ಚಿಂತನೆಗೆ ಹಚ್ಚಿದರು. ಸವಿ ಸಕ್ಕರೆಯೊಳಗೆ ಸರಿ. ಆದರೆ ಸಕ್ಕರೆ ಸವಿಯೊಳಗೆ ಎಂದರೆ ? ನಾವು ಏನೆಲ್ಲವನ್ನು ಸವಿ ಎಂದು ಸೂಚಿಸುತ್ತೇವೋ ಅದರಲ್ಲಿ ಸಕ್ಕರೆಯೂ ಒಂದಲ್ಲವೇ ? ಹಾಗಾಗಿ ಸಕ್ಕರೆ ಸವಿಯೊಳಗೂ ಹೌದು. ಮತ್ತೆ, ಸವಿ, ಸಕ್ಕರೆ ಎರಡೂ ನಾಲಗೆಯೊಳಗೆ. ಹೀಗೆಯೇ ಮೊದಲ ಚರಣದ ಭಾವನೆಯನ್ನೇ ಬಿಂಬಿಸುವ ಮುಂದಿನಸಾಲುಗಳನ್ನು ತಮ್ಮ ಚಿಂತನೆಗೆ ಬಿಟ್ಟು ನಾನು ಮುಂದೆ ಸಾಗುತ್ತೇನೆ.
‘ವಿಜಾನತಾ ಅವಿಜ್ಞಾತಂ ಅವಿಜ್ಞಾತಾ ವಿಜಾನತಾಂ’ ಎನ್ನುವುದು ಸಂಸ್ಕೃತದ ಒಂದು ಉಕ್ತಿ. ಪರಮಾತ್ಮ ಅಥವಾ ಪರವಸ್ತುವಿನ ಬಗ್ಗೆ ತಿಳಿದಿದ್ದೇನೆ ಎನ್ನುವವನಿಗೆ ಏನೂ ತಿಳಿದಿಲ್ಲ, ತಾನು ತಿಳಿದಿಲ್ಲ ಎನ್ನುವವನು ತಿಳಿದಿದ್ದಾನೆ - ಎಂದು ಇದರ ಅರ್ಥ. ಇದನ್ನು ನಮಗೆ ವಿವರಿಸುವಂತೆ, ಕೊನೆಯಲ್ಲಿ ನಮ್ರವಾಗಿ ‘ಅಸಮಭವ ಕಾಗಿನೆಲೆಯಾದಿ ಕೇಶವರಾಯ, ಉಸುರಲೆನ್ನಳವಲ್ಲ ನಿನ್ನೊಳಗೋ ’ - ಎಂದರೆ - ‘ನಿನಗೆ ಸಮವೆಂಬುದು ಮತ್ತೊಂದಿಲ್ಲದ ಕಾಗಿನೆಲೆಯ ಕೇಶವರಾಯನೇ, ನಿನ್ನನ್ನು ವಿವರಿಸುವುದು ಅಥವಾ ತಿಳಿಸಿಕೊಡುವುದು - ಎನ್ನಳವಲ್ಲ - ಎಂದರೆ ನನ್ನ ಕೈಗೆಟಕುವ ಕಾರ್ಯವಲ್ಲ ಸ್ವಾಮೀ ನಿನ್ನನ್ನು ತಿಳಿಸಿಕೊಡುವ ಸಾಮರ್ಥ್ಯವಿರುವವನು ನೀನೊಬ್ಬನೇ ’. ಎನ್ನುತ್ತಾ ತಮ್ಮ ರಚನೆಯನ್ನು ಕೊನೆಯಾಗಿಸಿದರು ಕನಕದಾಸರು. ಜ್ಞಾನಿಗಳು ಅವರು. ತಮಗೆ ತಿಳಿದಿಲ್ಲವೆಂದು ಹೇಳಿ ಎಲ್ಲ ಅವನಿಗೆ ಬಿಟ್ಟು ಸುಮ್ಮನಾದರು. ಅಜ್ಞಾನಿ ನಾನು ಅವರ ಪ್ರಶ್ನೆಗಳಿಗೆ ವಿವರಣೆಕೊಡಲು ಪ್ರಯತ್ನಪಡುತ್ತಿದ್ದೇನೆ. ವಿಪರ್ಯಾಸವಲ್ಲವೇ ? ಇಷ್ಟುಸಾಕೆಂದು ಹೇಳುತ್ತಾ ನನ್ನ ದಡ್ಡತನವನ್ನು ಕೃಷ್ಣಾರ್ಪಣ ಎನ್ನುತ್ತೇನೆ.