Saturday, July 18, 2026

ಏನುಮಾಡಿದರೇನು ಹಿಂದಿನ ಕರ್ಮಫಲ

ಶ್ರವಣ, ಕೀರ್ತನ, ಸ್ಮರಣ ಮೊದಲಾಗಿ ಪ್ರಾರಂಭವಾಗುವ  ನವವಿಧ

ಭಕ್ತಿಯಲ್ಲಿ ಕೊನೆಯ ಮೆಟ್ಟಲು ಆತ್ಮ ನಿವೇದನ. ತನ್ನನ್ನು ತಾನು

ಪರಮಾತ್ಮನಿಗೆ ಸಮರ್ಪಿಸುವುದು.  ಅದಕ್ಕೆ ಮುಂಚಿನ ಮೆಟ್ಟಲು 

‘ಸಖ್ಯ’. ಭಗವಂತನನ್ನು ಸಖನಾಗಿ ಕಾಣುವುದು. ಇದು ಅರ್ಜುನ -

ಶ್ರೀಕೃಷ್ಣರ ಸಂಬಂಧದಂತೆ. ಈ ಸ್ಥಿತಿಯಲ್ಲಿ ಭಗವಂತನ ಬಗ್ಗೆ

ತಿಳುವಳಿಕೆಯುಂಟು, ಗೌರವ, ಭಕ್ತಿಯುಂಟು ಆದರೆ ಅದರೊಂದಿಗೆ,

ಗೆಳೆಯನಂತೆ ಸಲಿಗೆಯೂ ಉಂಟು. ಇಂದು ನಾವು ಪ್ರಸ್ತುತಪಡಿಸುತ್ತಿರುವ

ಕೃತಿಯಲ್ಲಿ ಭಗವಂತನೊಡನೆ ಸಖ್ಯನಂತೆ ಸಂಭಾಷಣೆ ನಡೆಸಿದ್ದಾರೆ

ಶ್ರೀ ಪುರಂದರ ದಾಸರು.


‘ಏನುಮಾಡಿದರೇನು ಹಿಂದಿನ ಕರ್ಮಫಲ, ತಾನು ಮಾಡಿದ ಕರ್ಮ

ತನಗಲ್ಲದೆ’ ಎಂದು ದಾಸರು ಕೀರ್ತನೆಯನ್ನು ಪ್ರಾರಂಭಿಸಿದ್ದಾರೆ. 

ನೀವು ಯಾವ ಯಾವ ಪ್ರಾರ್ಥನೆ, ಪೂಜೆ, ವ್ರತ, ಜಪ, ತಪಗಳನ್ನೆಲ್ಲಾ

ಮಾಡಿ ಪುಣ್ಯ ಸಂಪಾದನೆ ಮಾಡಿಕೊಂಡರೂ ಹಿಂದಿನ

ಕರ್ಮಫಲವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಕರ್ಮವನ್ನು

ನೀವು ಅನುಭವಿಸಿಯೇ ಸಿದ್ಧ ಎಂದು ನಮಗೆ ಅರ್ಥಮಾಡಿಸುವ

ಪ್ರಯತ್ನದಲ್ಲಿ ದಾಸರು ಕರ್ಮಫಲ ಸಂಚಯನೆಯೇ  ಇಲ್ಲದ

ಪರಮಾತ್ಮನನ್ನೂ ಎಳೆದು ತಂದಿದ್ದಾರೆ. ಒಬ್ಬ ಸ್ನೇಹಿತನೊಡನೆ

ಲಘುಹಾಸ್ಯದಿಂದ ಮಾತನಾಡುವ ರೀತಿಯಲ್ಲಿ ನಿನ್ನ ಅವತಾರಗಳೆಲ್ಲಾ

ನಿನ್ನ ಕರ್ಮಫಲವಯ್ಯಾ ಎಂದು ಭಗವಂತನಿಗೆ ಹೇಳುತ್ತಿದ್ದಾರೆ. 


ಮೊದಲ ಚರಣದ ಒಂದೊಂದು ಸಾಲಿನಲ್ಲಿ ಮತ್ಸ್ಯ , ಕೂರ್ಮ,

ವರಾಹ, ನರಸಿಂಹ ರೂಪಗಳನ್ನು ಸ್ಮರಿಸಿರುವ ದಾಸರು  ಸಾಮಾನ್ಯವಾಗಿ

ಚಾಲ್ತಿಯಲ್ಲಿರುವ ನರಸಿಂಹನ ಕೋರೆಹಲ್ಲಿನ ಉಗ್ರರೂಪದವನ್ನು 

‘ಪರರಿಗೆ ಬಾಯ್ದೆರೆದು  ಪಲ್ಕಿರಿದರಿಲ್ಲ’ ಎಂದು ಬಣ್ಣಿಸಿ ಇತರರಿಗೆ

ಹಲ್ಲು ಕಾಣಿಸುವಂತೆ  ಬಾಯಿಬಿಟ್ಟು ಹಲ್ಲುಕಿರಿದರೂ ಕರ್ಮ

ಕಳೆಯಲಿಲ್ಲ ಎಂದು ಹಾಸ್ಯಮಾಡಿದ್ದಾರೆ. 


ಮುಂದಿನ ಚರಣ ವಾಮನ, ಪರಶುರಾಮ, ರಾಮ, ಕೃಷ್ಣಾವತಾರಗಳನ್ನು

ಸೂಚಿಸುತ್ತದೆ. ದೇಹವನ್ನು ಹ್ರಸ್ವಮಾಡಿ ಎಂದರೆ ದೇಹವನ್ನು ಕುಗ್ಗಿಸಿ

ಎಂದು. ಇದು ವಾಮನಾವತಾರದ ಯಾಚಕ ರೂಪದ ವರ್ಣನೆ. ಮುಂದೆ

ಪರಶುರಾಮನನ್ನು ದಾಸರು ಕುಲಗೇಡಿ ಎಂದಿದ್ದಾರೆ. ಇಂಥ ರಚನೆ

ಅಥವಾ ವರ್ಣನೆಗೆ ನಿಂದನಾ ಸ್ತುತಿ ಎಂದು ಹೆಸರು. ಇದು

ಭಗವಂತನ ಅವತಾರಗಳ ಭಕ್ತಿಪೂರ್ವಕ ಸ್ಮರಣೆ.  ಆದರೆ ಅವನನ್ನು 

ನಿಂದಿಸುವಂಥ ಸಂಬೋಧನೆ. ಪರಶುರಾಮ ಬ್ರಾಹ್ಮಣನಾಗಿ ಜನಿಸಿ,

ತನ್ನ ವರ್ಣಕ್ಕೆ ವಿರುದ್ಧವಾಗಿ ಕ್ಷತ್ರಿಯರೊಡನೆ ಯುದ್ಧದಲ್ಲಿ ತೊಡಗಿದನಲ್ಲ, 

ಅದರಿಂದ ಅವನನ್ನು  ‘ಕುಲಗೇಡಿ’ ಎಂದರು ದಾಸರು. ಇದ್ದದ್ದನ್ನು

ಇದ್ದಂತೆ ನೇರವಾಗಿ ಹೇಳಿಬಿಡುವ ದಾಸರಿಗೆ ಯಾರ ಮುಲಾಜೂ ಇಲ್ಲ. 


ಕೊನೆಯ ಚರಣದಲ್ಲಿರುವ ‘ಧೀರತನವನು ಬಿಟ್ಟು ದಿಗಂಬರನಾದರೂ ಇಲ್ಲ’

ಎಂಬ ಸಾಲು ಬುದ್ಧಾವತಾರಕ್ಕೆ ಸಂಭಂದ ಪಟ್ಟದ್ದು.  ಬುದ್ಧಾವತಾರ,

ಕೊಂಚ ವಿವಾದಾತ್ಮಕವಾದದ್ದು. ಅದು ವಿಷ್ಣುವಿನ ಅವತಾರವೇ

ಅಲ್ಲವೆಂದು ವಾದಿಸುವ  ಕೆಲವರು  ಅವತಾರಗಳ ಪಟ್ಟಿಯಿಂದ

ಬುದ್ಧಾವತಾರವನ್ನು ಕೈಬಿಟ್ಟಿರುವುದೂ ಉಂಟು. ಆದರೆ ಶ್ರೀ

ವಾದಿರಾಜಸ್ವಾಮಿಗಳು ತಮ್ಮ ದಶಾವತಾರ ಸ್ತುತಿಯಲ್ಲಿ ಬುದ್ಧನನ್ನು

ಸೇರಿಸಿಯೇ ಸ್ತುತಿಸಿರುವುದರಿಂದ ಅದರ ಬಗ್ಗೆ ವಿವಾದಕ್ಕೆ ಎಡೆಯೇ 

ಇಲ್ಲ. ವಿವಾದಕ್ಕೆ ಎಡೆಯಿಲ್ಲವಾದರೂ, ವಿವರಣೆಗೆ ಎಡೆಯುಂಟು,

ಆದರೆ ಇಲ್ಲಿ ಅದು ಪ್ರಸ್ತುತವಲ್ಲವಾದ್ದರಿಂದ ಅದನ್ನು  ಮುಂದೆಲ್ಲಾದರೂ

ಅವಕಾಶಬಂದಾಗ ನೋಡೋಣ. 


ಯಾರುಬಲ್ಲರಯ್ಯಾ ವಿಧಿಯಾಟವನ್ನು ?  ಎನ್ನುತ್ತಾ  ‘ನಿನ್ನನ್ನೂ 

ಆ ವಿಧಿ ಸುಮ್ಮನೆ ಬಿಡಲಿಲ್ಲವಲ್ಲಾ’ ಎಂದು ವಿಧಿನಿಯಾಮಕನಾದ

ಪುರಂದರ ವಿಠಲನಿಗೇ ಹಾಸ್ಯಪೂರ್ವಕವಾದ ಪ್ರಶ್ನೆಹಾಕಿ, 

ಧಾರುಣಿಯಲ್ಲಿ ಅಪ್ರತಿಮನೆಂದು ಅವನನ್ನು ಸ್ತುತಿಸುತ್ತಾ ತಮ್ಮ

ರಚನೆಯನ್ನು ದಾಸರು ಕೊನೆಗಾಣಿಸಿದರೆಂದು ತಿಳಿಸಿ  ನನ್ನ

ವಿವರಣೆಯನ್ನು ಕೃಷ್ಣಾರ್ಪಣ ಎನ್ನುತ್ತೇನೆ. 

No comments: