ಬುತ್ತಿಯ ಕಟ್ಟೋ, ಮನುಜ ,
ಬುತ್ತಿಯ ಕಟ್ಟೋ
ಬುತ್ತಿಯನು ಕಟ್ಟಿದರೆ
ಎತ್ತಲಾದರುಣ್ಣಬಹುದು
ಧರ್ಮವೆಂಬ ಮಡಿಕೆಯಲ್ಲಿ
ನಿರ್ಮಲಮನಗಂಗೆ ತುಂಬಿ
ಸುಮ್ಮಾನದುರಿಯ ಹಚ್ಚಿ
ಒಮ್ಮನಕ್ಕಿ ಅನ್ನ ಬಾಗಿ
ಅರಿವು ಎಂಬ ಅರಿವೆ ಹಾಸಿ
ಹರಿವಿಹಾರ ಮೊಸರ ತಳಿದು
ಪರಮವೈರಾಗ್ಯದಿಂದ
ಸಿರಿಹರಿಗೆ ಅರ್ಪಿತವೆಂದು ||
ಕರ್ತೃ ಪುರಂದರವಿಠಲನ
ತತ್ವವೆಂಬ ಬುತ್ತಿಯನ್ನು
ಹತ್ತಿರ ತಂದಿಟ್ಟುಕೊಂಡು
ನಿತ್ಯ ಉಂಡು ತೃಪ್ತಿಪಡಿರೋ ||
ಬುತ್ತಿ ಎಂದರೆ ಪ್ರಯಾಣಕಾಲದ ಉಪಯೋಗಕ್ಕಾಗಿ ಕಟ್ಟಿದ ಆಹಾರದ ಗಂಟು ಮತ್ತು ಬಹಳಕಾಲದ ಸಂಗ್ರಹ ಎಂಬ ಎರಡೂ ಅರ್ಥಗಳುಂಟು. ಇದರಲ್ಲೊಂದನ್ನು ಮತ್ತೊಂದಕ್ಕೆ ರೂಪಕವಾಗಿಸಿ ಆಕರ್ಷಕವಾದ ಒಂದು ತತ್ವಬೋಧಕ ರಚನೆಯಾಗಿಸಿದ್ದಾರೆ ಶ್ರೀ ಪುರಂದರದಾಸರು. ನಮ್ಮ ಇಂದಿನ ಕೊಡುಗೆ, ಬುತ್ತಿಯ ಕಟ್ಟೋ, ಮನುಜ , ಬುತ್ತಿಯ ಕಟ್ಟೋ.
ಗೀತೆಯ ಪಲ್ಲವಿ ಹೇಳುತ್ತದೆ, ‘ಬುತ್ತಿಯ ಕಟ್ಟೋ ಮನುಜಾ, ಬುತ್ತಿಯನ್ನು ಕಟ್ಟಿದರೆ ಎತ್ತಲಾದಾರುಣ್ಣಬಹುದು’ - ಪ್ರಯಾಣಕಾಲದಲ್ಲಿ ಆಹಾರದ ಗಂಟೊಂದು ಜತೆಯಲ್ಲಿದ್ದರೆ ಎಲ್ಲಿ ಯಾವಾಗ ಹಸಿವಾದರೂ ಅಲ್ಲಿ ಅದು ಉಪಯೋಗಕ್ಕೆ ಬಂದೀತು. ಅತ್ತಿತ್ತ ಅಂಗಡಿ, ಹೋಟಲು ಹುಡುಕಬೇಕಿಲ್ಲ. ಹಾಗೆಯೇ ತಾವು ಸೂಚಿಸುತ್ತಿರುವ ಬುತ್ತಿ ಕಟ್ಟಿಟ್ಟಿದ್ದರೆ - ಒಂದು ಜನ್ಮದಲ್ಲಿನ ಜನನ ಮರಣಗಳ ನಡುವಿನ ಪ್ರಯಾಣದಲ್ಲಿ ಅಷ್ಟೇ ಅಲ್ಲದೆ, ನಾವೆಲ್ಲರೂ ನಿರಂತರವಾಗಿ ನಡೆಸುತ್ತಿರುವ ಜೀವಚಕ್ರದ ಅಸಂಖ್ಯಾತ ಜನ್ಮಗಳ ಪ್ರಯಾಣದಲ್ಲಿ ಕೂಡ ಎಲ್ಲಿಯಾದರೂ ಉಪಯೋಗಕ್ಕೆ ಬಂದೇ ಬರುತ್ತದೆಂದು ತಿಳಿಸುತ್ತಿದ್ದಾರೆ ದಾಸರು. ಆ ಬುತ್ತಿ ಏನು, ಹೇಗೆ ಎಂಬುದನ್ನು ಮುಂದಿನ ಚರಣಗಳಲ್ಲಿ ವಿಶದಪಡಿಸುತ್ತಾರೆ.
ಧರ್ಮವೆಂಬ ಮಡಿಕೆಯಲ್ಲಿ, ನಿರ್ಮಲಮನಗಂಗೆ ತುಂಬಿ, ಸುಮ್ಮಾನದುರಿಯ ಹಚ್ಚಿ, ಒಮ್ಮನಕ್ಕಿ ಅನ್ನ ಬಾಗಿ, ಅರಿವು ಎಂಬ ಅರಿವೆ ಹಾಸಿ, ಹರಿವಿಹಾರ ಮೊಸರ ತಳಿದು
ಪರಮವೈರಾಗ್ಯದಿಂದ, ಸಿರಿಹರಿಗೆ ಅರ್ಪಿತವೆಂದು - ಬುತ್ತಿಯಕಟ್ಟೋ ಮನುಜ. ಮಡಿಕೆ ಎನ್ನುವುದು ಈ ದೇಹ, ದಾಸರು ಹೇಳಿದ್ದು ಧರ್ಮವೆಂಬ ಮಡಿಕೆ. ಅಂದರೆ ಧರ್ಮಕ್ಕೆ ಅನುಸಾರವಾಗಿ ನಡೆದುಕೊಳ್ಳುವ ದೇಹದಲ್ಲಿ, ನಿರ್ಮಲವಾದ, ಕಶ್ಮಲವಿಲ್ಲದ ಮನಸ್ಸು ಎಂಬ ಗಂಗೆ, ಅಂದರೆ ನೀರನ್ನು ತುಂಬಿ, ಸುಮ್ಮಾನದ ಉರಿಯ ಹಚ್ಚಿ, - ಮಾನ ಎಂದರೆ ಅಹಂಕಾರ. ಆ ಸುಮ್ಮಾನವೆಂಬ ಅಹಂಕಾರವನ್ನು ಉರುವಲಾಗಿ ಉರಿಸಿ ಭಸ್ಮಮಾಡಿ, ಒಮ್ಮನವೆಂಬ ಅಕ್ಕಿ, ಎಂದರೆ ಸ್ಥಿರಗೊಂಡಿರುವ, ಅತ್ತಿತ್ತ ಅಲುಗದ, ಒಂದೇ ಮನವೆಂಬ ಅಕ್ಕಿಯನ್ನು ಬೇಯಿಸಿ. ಆಯಿತೇ ? ಈಗ ಅಡಿಗೆ ಹೇಳಿಕೊಡುವ ವಿಡಿಯೋಗಳಲ್ಲಿ ಹೇಳುತ್ತಾರಲ್ಲಾ ಹಾಗೆ ಈ ಪಕ್ವವಾದ ಮನವೆಂಬ ಅನ್ನವನ್ನು ಒಂದು ಪಕ್ಕಕ್ಕಿಡಿ.
ಇದೀಗ ತಿಳಿಸಿದ, ಅನ್ನ ಬೇಯಿಸುವ ಸಮಯದಲ್ಲಿ ಗಳಿಸಿದ ಅರಿವು ಅಥವಾ ಜ್ಞಾನವೇನಿದೆ ಆ ಜ್ಞಾನವೆಂಬ ಅರಿವೆಯನ್ನು ಹಾಸಿ, ಪಕ್ಕಕ್ಕಿಟ್ಟಿದ್ದ ಪಕ್ವವಾದ ಮನವೆಂಬ ಆನ್ನವನ್ನು ಈಗ ‘ಹರಿವಿಹಾರ’ ಎಂದರೆ ಹರಿಚಿಂತನೆ ಎಂಬ ಮೊಸರಿನೊಡನೆ ಸೇರಿಸಿ ಕಲಸಿ ಕಟ್ಟಿ. ಈಗ ಈ ಬುತ್ತಿಯನ್ನು ಇದು ಯಾವುದೂ ನಾನು ಮಾಡಿದ್ದಲ್ಲ, ನನ್ನಿಂದ ಮಾಡಿಸಿದವ ನೀನು ಎಂಬ ವೈರಾಗ್ಯಭಾವದಿಂದ ಶ್ರೀ ಹರಿಗೆ ಅರ್ಪಣೆ ಮಾಡಿ, ಆ ಹರಿತತ್ವ ವೆಂಬ ಪ್ರಸಾದದ ಬುತ್ತಿಯನ್ನು ಹತ್ತಿರವಿಟ್ಟುಕೊಂಡು, ನಿತ್ಯ ಉಂಡು, ತೃಪ್ತಿಪಡೆಯಿರೋ ಎಂದರು ದಾಸರು.
ಈ ಹರಿತತ್ವ ವೆಂಬ ಬುತ್ತಿ ಇದೆಯಲ್ಲಾ ಅದು , ಈ ಜನ್ಮಕ್ಕಷ್ಟೇ ಅಲ್ಲ, ಮುಂದೆಬರುವ ಜನ್ಮ ಜನ್ಮಗಳಲ್ಲೂ ಉಪಯೋಗವಾಗಬಹುದು. ಗೀತೋಪದೇಶದ ಸಮಯದಲ್ಲಿ ಅರ್ಜುನನಿಗೆ ಒಂದು ಅನುಮಾನಬಂತು ಅವನು ಕೃಷ್ಣನನ್ನು ಕೇಳಿದ, ನಿನ್ನನ್ನು ತಿಳಿಯಲು ಪ್ರಯತ್ನಪಡುತ್ತಿರುವನೊಬ್ಬ ಯಾವುದೇ ಕಾರಣದಿಂದ ಅರ್ಧದಲ್ಲಿ ಅದನ್ನು ಕೈಬಿಟ್ಟರೆ ಅವನು ಅದುವರೆಗೆ ಮಾಡಿದ್ದೆಲ್ಲಾ ವ್ಯರ್ಥವಲ್ಲವೇ ? ಅದಕ್ಕೆ ಕೃಷ್ಣನ ಉತ್ತರ ಆರನೇ ಅಧ್ಯಾಯದ ೪೦ ರಿಂದ ೪೫ ರ ವರೆಗಿನ ಶ್ಲೋಕಗಳು. ಅಂಥ ಯೋಗಿಗೆ, ಅವನು ಗಳಿಸಿದ ಜ್ಞಾನಕ್ಕೆ, ನಾಶವಿಲ್ಲ. ಒಂದು ಜನ್ಮದಲ್ಲಿ ಜ್ಞಾನದ ಗಳಿಕೆ ಎಲ್ಲಿಗೆ ಕೊನೆಯಾಗಿತ್ತೋ ಅಲ್ಲಿಂದ ಮುಂದಕ್ಕೆ ಮುಂದಿನ ಜನ್ಮಗಳಲ್ಲಿ ಜ್ಞಾನ ಸಂಪಾದನೆ ಪ್ರಾರಂಭ. ಆದ್ದರಿದಲೇ ದಾಸರೆಂದರು ‘ಕರ್ತೃ ಪುರಂದರ ವಿಠಲನ ತತ್ವ’ ವೆಂಬ ಬುತ್ತಿಯ ಕಟ್ಟೋ ಮನುಜ, ಒಂದುವೇಳೆ ಯಾವುದೇ ಕಾರಣದಿಂದ ಸಧ್ಯದ ಜನ್ಮದಲ್ಲಿ ಅದರ ಉಪಯೋಗ ಆಗದಿದ್ದರೂ ಮುಂದೆ ‘ಎತ್ತಲಾದರೂ ಉಣ್ಣಬಹುದು’. ಯಾವ ಜನ್ಮದಲ್ಲಾದರೂ ಉಪಯೋಗಕ್ಕೆ ಬಂದೀತು.
ಪದಸಂಯೋಜನೆಯಲ್ಲಿ ಸರಳವಾದ, ಆದರೆ ಬಹಳ ಗಹನವಾದ ರಚನೆ. ಒಮ್ಮೆಗೇ ಗ್ರಹಿಸಲು ಕೊಂಚ ಕಷ್ಟವಾಗಬಹುದು. ಆದರೆ ದಾಸರ ಸಲಹೆಯಂತೆ ಈ ಬುತ್ತಿಯನ್ನು ಪಕ್ಕದಲ್ಲಿಟ್ಟುಕೊಂಡು ಆಗಾಗ ಮೆಲುಕುಹಾಕುತ್ತಿದ್ದರೆ ಸಾರ ಮನಸ್ಸಿಗೆ ತಟ್ಟುತ್ತದೆಂದು ತಿಳಿಸುತ್ತಾ ಇಂದಿನ ಮಾತು ಕೃಷ್ಣಾರ್ಪಣ ಮಾಡುತ್ತೇನೆ.
No comments:
Post a Comment