ನಮ್ಮ ದಾಸಸಾಹಿತ್ಯ ಸಿರಿ ಮಾಲಿಕೆಯ ಹತ್ತೊಂಭತ್ತನಯ ಗೀತೆ, ಭಗವಂತನ ಉಪಾಸನೆಯನ್ನು ಅತ್ಯಂತ ಸುಲಭವಾಗಿಸುವ ಶ್ರೀ ಪುರಂದರದಾಸರ ರಚನೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ, ‘ಭಕ್ತಿಯಿಂದ ನೀನೇನು ಕೊಟ್ಟರೂ ಸ್ವೀಕರಿಸಿ ಸಂತೃಪ್ತನಾಗುತ್ತೇನೆ’. ಇಲ್ಲಿ ದಾಸರು ಹೇಳುತ್ತಾರೆ ‘ಭಕ್ತಿಯಿಂದ ಅವನನ್ನು ನೆನೆದರೆ ಸಾಕು ಅವನು ಸಂತೃಪ್ತನಾಗುತ್ತಾನೆ’.
ಕರ್ಮ ಬಂಧನ ಛೇದನ ರಘು
ರಾಮನ ನಾಮ ನೀ ನೆನೆ ಮನವೇ
ಮಂತ್ರವನರಿಯೆನು ತಂತ್ರವನರಿಯೆ ಜಗ
ದಂತ್ರವನರಿಯೆನೆಂದೆನಬೇಡ
ತಂತ್ರ ಸ್ವತಂತ್ರನ ಪರಮ ಪವಿತ್ರನ
ಅಂತರಂಗದಿ ನೀ ನೆನೆಮನವೇ
ಕಲಿಯುಗದೊಳು ಹರಿನಾಮವ ನೆನೆದರೆ
ಕುಲಕೋಟಿಗಳು ಉದ್ಧರಿಸುವುವು
ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ
ಜಲಜನಾಭನ ನೀ ನೆನೆ ಮನವೇ
ವದನದಿ ನಾರಾಯಣನೆಂಬ ನಾಮವು
ಮುದದಿಂದಲಿ ನೆನೆ ಬಿಡಬೇಡ
ಪದುಮನಾಭ ಶ್ರೀ ಪುರಂದರ ವಿಠಲನ
ಸದಾಕಾಲದಿ ನೀ ನೆನೆ ಮನವೇ
ಮುಂದಿನ ಚರಣಗಳೆಲ್ಲಾ ಬಹಳವೇ ಸರಳ. ಮೊದಲ ಚರಣದಲ್ಲಿ ಬರುವ ‘ಜಗದಂತ್ರ’ ಎಂದರೆ ಜಗತ್ತಿನ ಅಂತರಂಗ. ಮುಂದೆ ಬರುವ ‘ತಂತ್ರ ಸ್ವತಂತ್ರ’ ಎಂದರೆ ಭಗವಂತ ಯಾವುದೇ ತಂತ್ರ ಅಥವಾ ಯುಕ್ತಿಗೆ ಬಲಿಯಾಗುವವನಲ್ಲ ಎಂದು. ಅವನು ಸಿಕ್ಕಬೇಕಾದರೆ ಅದು ಅಂತರಂಗದ ಆರಾಧನೆಯಿಂದ ಮಾತ್ರ. ಎನ್ನುತ್ತಾರೆ ದಾಸರು.
ಕಲಿಯುಗ, ಭಗವದಾರಾಧನೆಯನ್ನು ಅತ್ಯಂತ ಸುಲಭವಾಗಿಸಿದೆ. ಹಿಂದಿನ ಯುಗಗಳಲ್ಲಿ ಪರಮಾತ್ಮನನ್ನು ಒಲಿಸಿಕೊಳ್ಳಲು ತಪಸ್ಸು, ಯಜ್ಞ, ಯಾಗಗಳ ಮೂಲಕ ಅವನನ್ನು ಆರಾಧಿಸಬೇಕಿತ್ತು. ಆದರೆ ನಿಷ್ಠೆ, ನಂಬಿಕೆಗಳು ಇಳಿಮುಖವಾಗಿರುವ ಕಲಿಯುಗದಲ್ಲಿ ಅವನು ಅದು ಯಾವುದನ್ನೂ ಆಶಿಸುವುದಿಲ್ಲ. ಈಗ ಅವನು ‘ಸುಲಲಿತ ಭಕ್ತಿಗೆ ಸುಲಭ’. ಅವನ ನಾಮಸ್ಮರಣೆಯಷ್ಟೇ ಸಾಕು.
ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ ಎಂದರಲ್ಲವೇ ದಾಸರು. ಅದನ್ನೇ ಈಗ ಅವರು ಮತ್ತೆ ಹೇಳುತ್ತಿರುವುದು. ‘ವದನದಿ ನಾರಾಯಣನೆಂಬ ನಾಮವಿರಲಿ, ಪದುಮನಾಭನ ನೆನಪು ಸದಾ ಇರಲಿ’ ಅಷ್ಟುಸಾಕು ಎನ್ನುತ್ತಾ ತಮ್ಮ ರಚನೆಯನ್ನು ದಾಸರು ಮುಗಿಸಿದ್ದಾರೆ ಎಂದು ತಿಳಿಸಿ ಇಂದಿನ ಕೊಡುಗೆಯನ್ನು ಕೃಷ್ಣಾರ್ಪಣಗೊಳಿಸುತ್ತೇನೆ.
No comments:
Post a Comment