Friday, July 31, 2026

‘ನಿನ್ನ ಪೂಜೆಯೋ ರಾಮ ನಿನ್ನ ಪೂಜೆಯೋ’

 


ನಿನ್ನ ಪೂಜೆಯೋ ರಾಮ ನಿನ್ನ ಪೂಜೆಯೋ 

ನಿನ್ನ ಪೂಜೆ ಹೊರತಿಲ್ಲ ನನ್ನ ವ್ಯಾಪಾರವೆಲ್ಲ 


ಸ್ನಾನ ಸಂಧ್ಯಾವಂದನೆ ಹೋಮ ಮೌನ ಜಪ ಸದ್ಗ್ರಂಥ 

ವ್ಯಾಖ್ಯಾನ ಯಜ್ಞಸಾಧನ ಸಂಪಾದನ ಅಧ್ಯಯನ 

ನಾನಾ ರಸ ನೈವೇದ್ಯ ಭೋಜನ ತಾಂಬೂಲ ಚರ್ವಣ 

ಮಾನಿನಿ ಮೊದಲಾದ ಚಂದನ ಗಾನದ ಭೋಗಗಳೆಲ್ಲ 


ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಗಳಿಗೆ 

ಸರ್ವಚೇಷ್ಟಪ್ರದನಾದ ಪ್ರಾಣಗೆ ನಿರ್ವಾಹಕನಾಗಿ 

ಸರ್ವಜೀವರ ಕೈಯಿಂದ ಸರ್ವಜ್ಞಾನ ಕರ್ಮಗಳನು 

ಸರ್ವದಾ ಮಾಡಿಸಿ ಅವರ ಸರ್ವಶುಭಭೋಕ್ತನಹೆ 


ಅಂಗಾಂಗಗಳಲ್ಲಿ ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿ 

ಉಂಗುಷ್ಠದಿ ಲೋಕಪಾವನೆ ಗಂಗಾದೇವಿಯು 

ಹಿಂಗದೆ ನಿನ್ನಲ್ಲಿರಲು ತುಂಗಗುಣ ಪರಿಪೂರ್ಣ 

ರಂಗವಿಠಲ ನೆಲೆಯಾಗಿ ಮಂಗಳಾಂಗನೆ ಮನ್ನಿಸುವೆಯೋ


‘ಪ್ರಾತಃ ಪ್ರಭೃತಿ ಸಾಯಾಂತಂ ಸಾಯಾದಿ ಪ್ರಾತರಂತತಃ ಯತ್ಕರೋಮಿ ಜಗನ್ನಾಥ ತದಸ್ತು ತವ ಪೂಜನಂ ಎನ್ನುತ್ತದೆ ಸಂಸ್ಕೃತದ ಉಕ್ತಿಯೊಂದು.  ಬೆಳಗಿನಿಂದ ಸಂಜೆಯವರೆಗೆ ಮತ್ತೆ ಸಂಜೆಯಿಂದ ಬೆಳಗಿನವರೆಗೂ ಅದೇನೇನು ಕೆಲಸ ಕಾರ್ಯಗಳು ನನ್ನಿಂದ ನಡೆಯುತ್ತವೆಯೋ ಅದೆಲ್ಲವೂ, ನಿನ್ನ ಪೂಜೆಯಾಗಲಿ ಜಗನ್ನಾಥ ಎಂದು ಈ ಮಾತಿನ ಅರ್ಥ. ಈ ಭಾವನೆಯನ್ನು ಪಲ್ಲವಿಯಾಗಿಸಿ  ಒಂದು ಸುಂದರವಾದ  ಗೀತೆರಚಿಸಿದ್ದಾರೆ ಶ್ರೀ ಶ್ರೀಪಾದರಾಜರು.

‘ನಿನ್ನ ಪೂಜೆಯೋ ರಾಮ ನಿನ್ನ ಪೂಜೆಯೋ, ನಿನ್ನ ಪೂಜೆ ಹೊರತಿಲ್ಲ ನನ್ನ ವ್ಯಾಪಾರವೆಲ್ಲ’ - ನಿನ್ನ  ಪೂಜೆ ಬೇರೆಯಲ್ಲ, ನನ್ನ ಇತರ ವ್ಯಾಪಾರ ಬೇರೆಯಲ್ಲ, ಇದು ಗೀತೆಯ ಪಲ್ಲವಿ. ಇಲ್ಲಿ ವ್ಯಾಪಾರವೆಂದರೆ ಹಣ ಹೂಡಿ ಮಾಡುವ ಮಾರಾಟದ, ವ್ಯವಹಾರವಲ್ಲ, ನಾವು ದಿನದಲ್ಲಿ ಏನೇನು ಚಟುವಟಿಕೆಗಳನ್ನು ನಡೆಸುತ್ತೇವೋ ಅದೆಲ್ಲಕ್ಕೂ ವ್ಯಾಪಾರವೆಂದೇ ಹೆಸರು. ಆದ್ದರಿಂದ ಮೊದಲನೆಯ ಚರಣದಲ್ಲಿ ದಾಸರು ಪಟ್ಟಿ ಮಾಡಿರುವ ಸ್ನಾನ ಸಂಧ್ಯಾವಂದನೆಯಿಂದ ಮೊದಲಾಗಿ ಗಾನ, ಭೋಗಗಳೆಲ್ಲ, ಮತ್ತೆ ಅದಕ್ಕೆ ಹೊರತಾಗಿ ದಿನವಿಡೀ ನಾವು ಮತ್ತೇನೇನು ಕೆಲಸ ಕಾರ್ಯ ನಡೆಸುತ್ತೇವೆಯೋ ಅದೆಲ್ಲವನ್ನೂ, ಅವು   ಶ್ರೀರಾಮನ ಪೂಜೆ ಎಂಬ ಅನುಸಂಧಾನದಿಂದ ಮಾಡಬೇಕೆಂಬುದು  ಶ್ರೀಪಾದರಾಜರ ಇಂಗಿತ. 


ನಾವು ದೇವರ ಪೂಜೆಗೆ ಹೂವು ಹಣ್ಣು  ಕೊಂಡು ತರುವಾಗ ಮಾರಾಟಗಾರನಿಗೆ  ‘ದೇವರ ಪೂಜೆಗೆ ಬೇಕಪ್ಪಾ ಚನ್ನಾಗಿರೋದು ಕೊಡು’ ಎನ್ನುವುದುಂಟಲ್ಲವೇ ? ಪರಮಾತ್ಮನಿಗೆ  ಉತ್ಕೃಷ್ಟವಾದುದನ್ನೇ ಸಲ್ಲಿಸಬೇಕೆಂದು ನಮ್ಮ ಆಶಯ. ಹೌದೇ?  ಹಾಗಾದರೆ, ನಾವು ಮಾಡಿದ್ದೆಲ್ಲಾ ಭಗವಂತನಿಗೆ ಪೂಜೆ ಎಂದಾದರೆ ನಾವು ಮಾಡುವ ಕೆಲಸಗಳೆಲ್ಲವೂ ಉತ್ಕೃಷ್ಟವೇ ಆಗಬೇಕಾಯಿತಲ್ಲವೇ? ಅಯೋಗ್ಯವಾದ, ಕಳಪೆಯಾದ, ಕೆಲಸ ಮಾಡುವಂತಿಲ್ಲವಾಯಿತು. ಅಷ್ಟೇ ಅಲ್ಲದೆ ಇಲ್ಲಿ ಮತ್ತೊಂದು ಸಂಗತಿಯಿದೆ. ನಾವು ಆಡುವ ಮಾತು, ಮಾಡುವ ಕೆಲಸ, ವಿಚಾರಮಾಡುವ ರೀತಿ ಎಲ್ಲವನ್ನೂ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ವಿಂಗಡಿಸಲು ಸಾಧ್ಯ ಎನ್ನುತ್ತಾನೆ ಕೃಷ್ಣ ಗೀತೆಯಲ್ಲಿ. ನಾವು ಮಾಡುವುದೆಲ್ಲಾ ಪೂಜೆಯಾಗಬೇಕಾದರೆ, ನಮ್ಮ ಎಲ್ಲ ರೀತಿ, ನೀತಿ ನಡೆವಳಿಕೆ, ಕೆಲಸ ಕಾರ್ಯಗಳೂ ಸಾತ್ವಿಕವಾಗಬೇಕಾಯಿತಲ್ಲವೇ ? ಹಾಗಾಗಿ  ‘ಎಲ್ಲ ನಿನ್ನ ಪೂಜೆ’ ಎಂದು ನಡೆಸಿದ ವ್ಯಾಪಾರದಿಂದ ಆದ ಲಾಭ, ನಮ್ಮ ಜೀವನದಲ್ಲಿ ಸಾತ್ವಿಕತೆಯ ಅಂಶದ ಏರಿಕೆ !


ಮುಂದಿನ ಚರಣದಲ್ಲಿ ಶ್ರೀಪಾದರಾಜರು ಪರಮಾತ್ಮನ ಗುಣವರ್ಣನೆ ಮಾಡುತ್ತಾರೆ. ‘ಸರ್ವೇಂದ್ರಿಯಗಳಲಿಹ ಶರ್ವಾದಿ ದೇವರ್ಕಗಳಿಗೆ, ಸರ್ವಚೇಷ್ಟಪ್ರದನಾದ ಪ್ರಾಣಗೆ ನಿರ್ವಾಹಕನಾಗಿ’ - ನಮ್ಮ ಪ್ರತಿಯೊಂದು ಅಂಗ, ಇಂದ್ರಿಯಗಳಿಗೂ ಒಬ್ಬ ಅಭಿಮಾನಿ ದೇವತೆ ಅಂದರೆ ‘ಇನ್ ಚಾರ್ಜ್ ದೇವತೆ’ ಇರುತ್ತಾನೆ ಅಥವಾ ಇರುತ್ತಾಳೆಂದು ನಮ್ಮ ನಂಬಿಕೆ. ಮಧ್ವ ಸಿದ್ಧಾಂತದ ಪ್ರಕಾರ ಈ ದೇವತೆಗಳಿಗೆ ತಮ್ಮ ತಮ್ಮ ಕಾರ್ಯಗಳನ್ನು ಮಾಡಲು ಪ್ರಚೋದನೆ ಮತ್ತು  ಅದಕ್ಕೆ ಬೇಕಾದ ಶಕ್ತಿ ನೀಡುವವನು ಅದೇ ದೇಹದಲ್ಲಿ ಅವರೆಲ್ಲರಿಗಿಂತ ಎತ್ತರದ ಸ್ಥಾನದಲ್ಲಿರುವ ಪ್ರಾಣ ದೇವರು. ಆ ಮುಖ್ಯಪ್ರಾಣನಿಗೆ ಚೇತನವಿತ್ತು, ಚಟುವಟಿಕೆಯಲ್ಲಿರಿಸಿ, ಅವನ ಮೂಲಕ, ಸಕಲ ದೇವತೆಗಳನ್ನು ಪ್ರೇರೇಪಿಸಿ, ತನ್ಮೂಲಕ  ಸರ್ವ ಜೀವರ ಎಲ್ಲ ಜ್ಞಾನಕಾರ್ಯಗಳನ್ನು ಮಾಡಿಸಿ, ಅವರಿಗೆ ಶುಭವನ್ನುಂಟುಮಾಡಿ ಆ ಶುಭವನ್ನು ಅನುಭವಿಸುವವನು  ಪರಮಾತ್ಮ ಶ್ರೀ ರಾಮನೆಂದು  ಹೇಳುತ್ತಿದ್ದಾರೆ ಶ್ರೀಪಾದರಾಜರು. ಸಕಲ ಕಾರ್ಯ ಮಾಡಿಸುವವನು ನೀನು, ಅನುಭವಿಸುವವನು ನೀನು, ನಾವು ನಿಮಿತ್ತಮಾತ್ರ ಎಂದು ಇದರ ಹಿಂದಿನ ಅರ್ಥ.  


ಕೊನೆಯ ಚರಣದಲ್ಲಿ  ಪರಮಾತ್ಮನ ಗುಣವರ್ಣನೆ ಮುಂದುವರೆಯುತ್ತದೆ. ‘ಅಂಗಾಂಗಗಳಲ್ಲಿ ಸುರರು ಕಂಗಳಲ್ಲಿ ಭಾಗ್ಯಲಕ್ಷ್ಮಿ’. ಭಗವದ್ಗೀತೆಯ ವಿಶ್ವರೂಪ ದರ್ಶನದಲ್ಲಿ ಅರ್ಜುನ ಕಂಡಿದ್ದು ಅದು. ‘ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾನ್ ತಥಾ ಭೂತ ವಿಶೇಷ ಸಂಘಾನ್’ ಎಂದ ಅರ್ಜುನ. ಅಂದರೆ ಭಗವಂತ ನಿನ್ನಲ್ಲಿ ಸರ್ವದೇವತೆಗಳನ್ನು ಕಾಣುತ್ತಿದ್ದೇನೆ ಎಂದ.  ಮುಂದಿನ ಸಾಲು  ‘ಉಂಗುಷ್ಠದಿ ಲೋಕಪಾವನೆ ಗಂಗಾದೇವಿಯು’ - ಕಾಲಿನ ಹೆಬ್ಬೆರಳಿನಲ್ಲಿ ಗಂಗಾದೇವಿ. ಇದರ ಹಿಂದಿನ ಸಂಗತಿ ಹೀಗೆ.  ವಾಮಾನವತಾರದ ಸಮಯದಲ್ಲಿ ತ್ರಿವಿಕ್ರಮನಾಗಿ ಬೆಳೆದ ಶ್ರೀಹರಿ ಒಂದು ಪಾದದಿಂದ ಭೂಮಿಯನ್ನು ಅಳೆದು, ಅಂತರಿಕ್ಷವನ್ನು ಅಳೆಯಲೆಂದು  ಮತ್ತೊಂದು ಪಾದವನ್ನು ಮೇಲೆತ್ತಿದಾಗ ಅವನ ಹೆಬ್ಬೆರಳಿನ ಉಗುರು ಬ್ರಹ್ಮಾಂಡದ ಕವಚವನ್ನು ಬೇಧಿಸಿ ಆದ  ಬಿರುಕಿನ ಮೂಲಕ ಪರಮಾತ್ಮನ ಉಂಗುಷ್ಟದ ಮೇಲೆ ಹರಿದು ಗಂಗೆ ಬ್ರಹ್ಮಾಂಡದೊಳಕ್ಕೆ ಹರಿದುಬಂದಳಂತೆ. ಇದನ್ನು ಶ್ರೀ ವಾದಿರಾಜರು ತಮ್ಮ ದಶಾವತಾರ ಸ್ತುತಿಯಲ್ಲಿ ‘ಶೃಂಗಾರ ಪಾದ ನಖ ತುಂಗಾಗ್ರ ಭಿನ್ನ ಕನಕಾಂಗಾಂಡ ಪಾತಿ ತಟಿನೀ, ತುಂಗಾತಿ ಮಂಗಲ ತರಂಗಾಭಿಭೂತ ಭಜಕಾಂಗಾಂಗ ವಾಮನನಮಃ’ ಎಂದು ಸುಂದರವಾಗಿ ವರ್ಣಿಸಿದ್ದಾರೆ.  ಹೀಗೆ ಅಂಗಾಂಗ ಗಳಲ್ಲಿ ಸುರರು, ಉಂಗುಷ್ಟದಲ್ಲಿ ಗಂಗೆಯನ್ನುಳ್ಳ  ‘ಮಂಗಳಾಂಗನೇ’ ನಮ್ಮ ವ್ಯಾಪಾರವೆಂಬ ನಿನ್ನ ಪೂಜೆಯಲ್ಲಿ ಕೊಂಚ ಹೆಚ್ಚುಕಡಿಮೆಯಾದರೆ ‘ಮನ್ನಿಸುವೆಯೋ’, ಕ್ಷಮೆ ಇರಲಯ್ಯಾ, ಎನ್ನುತ್ತಾ ಶ್ರೀಪಾದರಾಜರು ತಮ್ಮ ರಚನೆಯನ್ನು ಮುಗಿಸಿದ್ದಾರೆಂಬಲ್ಲಿಗೆ  ಕೃಷ್ಣಾರ್ಪಣ.


No comments: